ಪ್ರಧಾನಿ ಮೋದಿ ವಿಶ್ವವೇ ಮೆಚ್ಚುವಂತಹ ಉತ್ತಮ ಆಡಳಿತ ನಡೆಸಿದ್ದಾರೆ. ನೆರೆಹೊರೆ ರಾಷ್ಟ್ರಗಳು ಭಾರತ ಕಂಡರೇ ಭಯ ಪಡುವಂತ ಸನ್ನಿವೇಶವನ್ನು ಸೃಷ್ಟಿ ಮಾಡಿದ್ದಾರೆ.
ಮಳವಳ್ಳಿ : ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಹೊಂದಾಣಿಕೆ ಕರ್ನಾಟಕ ರಾಜ್ಯಕ್ಕೆ ದೊಡ್ಡ ಶಕ್ತಿ ಬಂದಂತಾಗಿದೆ ಎಂದು ರಾಜ್ಯಸಭಾ ಸದಸ್ಯ, ಚಿತ್ರನಟ ಜಗ್ಗೇಶ್ ಹೇಳಿದರು.
ಪಟ್ಟಣದ ಶಾಂತಿ ಸಮುದಾಯ ಭವನದ ಆವರಣದಲ್ಲಿ ಜೆಡಿಎಸ್- ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಪರ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿ, ದೇಶದ ಸದೃಢತೆಗಾಗಿ ಮೋದಿ ಅವರಿಗೆ ಶಕ್ತಿ ತುಂಬಲು ಮೈತ್ರಿ ಅಭ್ಯರ್ಥಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಲೋಕಸಭಾ ಚುನಾವಣೆಯಲ್ಲಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಪ್ರಧಾನಿ ಮೋದಿ ವಿಶ್ವವೇ ಮೆಚ್ಚುವಂತಹ ಉತ್ತಮ ಆಡಳಿತ ನಡೆಸಿದ್ದಾರೆ. ನೆರೆಹೊರೆ ರಾಷ್ಟ್ರಗಳು ಭಾರತ ಕಂಡರೇ ಭಯ ಪಡುವಂತ ಸನ್ನಿವೇಶವನ್ನು ಸೃಷ್ಟಿ ಮಾಡಿದ್ದಾರೆ. ಆದ್ದರಿಂದ ಚುನಾವಣೆ ಸಂದರ್ಭದಲ್ಲಿ ಹಣದ ಆಮಿಷಗಳಿಗೆ ಬಲಿಯಾಗದೇ ಯೋಗ್ಯ ವ್ಯಕ್ತಿಗೆ ಮತ ಹಾಕಬೇಕು ಎಂದು ಕೋರಿದರು.
ಒಕ್ಕಲಿಗ ಸಮುದಾಯದಲ್ಲಿ ಮೊಟ್ಟ ಮೊದಲ ಬಾರಿಗೆ ಎಚ್.ಡಿ.ದೇವೇಗೌಡರು ಪ್ರಧಾನಿಯಾಗಿ ದೇಶಕ್ಕೆ ಹಲವು ಕೊಡುಗೆ ನೀಡಿದ್ದರು. ಅವರ ಪುತ್ರ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದು, ಹೆಚ್ಚಿನ ಮತವನ್ನು ಕೊಟ್ಟು ಗೆಲ್ಲಿಸಿ ಕೇಂದ್ರ ಸಚಿವರಾನ್ನಾಗಿ ಕಾಣಬೇಕೆಂದು ಕೋರಿದರು.
ಹೃದಯವಂತರನ್ನು ಕೈ ಹಿಡಿಯಲಿದ್ದಾರೆ:
ಜೆಡಿಎಸ್ ಯುವಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡಿ, ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳ ಕಾರ್ಯಕರ್ತರು ರಾಷ್ಟ್ರ ಹಾಗೂ ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಗಳಿಗೆ ಮತ ನೀಡಿ 28 ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳು ಗೆಲ್ಲಿಸಲು ಶ್ರಮವಹಿಸಬೇಕು ಎಂದರು.
ಮಂಡ್ಯಕ್ಕೆ ಹೃದಯದಲ್ಲಿ ಸ್ಥಾನ ಕೊಟ್ಟಿರುವ ಎಚ್.ಡಿ.ಕುಮಾರಸ್ವಾಮಿ ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ ಸಾವಿರಾರು ಹೃದಯಗಳನ್ನು ಶಸ್ತ್ರ ಚಿಕಿತ್ಸೆ ಮೂಲಕ ಪ್ರಾಣ ಉಳಿಸಿದ ಡಾ.ಸಿ.ಎನ್.ಮಂಜುನಾಥ್ ಸ್ಪರ್ಧಿಸಿದ್ದಾರೆ. ಅಲ್ಲಿ ವಿದ್ಯಾವಂತರ ವಿರುದ್ಧ ದುಷ್ಟರು ಮತ್ತು ಮಂಡ್ಯದಲ್ಲಿ ಹೃದಯವಂತರ ವಿರುದ್ಧ ಹಣವಂತರು ಸ್ಪರ್ಧೆ ಮಾಡಿದ್ದಾರೆ. ಇಬ್ಬರು ಹೃದಯವಂತರನ್ನು ಮತದಾರರು ಕೈ ಹಿಡಿಯಲಿದ್ದಾರೆ ಎಂದು ಭವಿಷ್ಯ ನುಡಿದರು.
ಮಂಡ್ಯ ಜಿಲ್ಲೆಯ ಜನರು ಭಾವನಾತ್ಮಕ ಜೀವಿಗಳು. ಪ್ರೀತಿಸಿದರೇ ಎತ್ತಿ ಮೆರೆಸುತ್ತಾರೆ. ಮೆರೆದರೆ ತುಳಿಯುತ್ತಾರೆ. ಶಾಸಕ ಪಿ.ಎಂ ನರೇಂದ್ರಸ್ವಾಮಿ ಸೇರಿ ಕಾಂಗ್ರೆಸ್ ನಾಯಕರು ತಂದೆ ವಿರುದ್ಧ ಲಘುವಾಗಿ ಮಾತನಾಡಿದ್ದಾರೆ. ಇದನ್ನು ನಿಲ್ಲಿಸದಿದ್ದರೆ ಜನರೇ ಬುದ್ಧಿ ಕಲಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು.
ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ಪಕ್ಷೇತರವಾಗಿ ಗೆದ್ದಿದ್ದ ನರೇಂದ್ರಸ್ವಾಮಿರನ್ನು ಮಂತ್ರಿ ಮಾಡಿದ ಯಡಿಯೂರಪ್ಪನವರ ವಿರುದ್ಧವೇ ತೊಡೆ ತಟ್ಟಿದ್ದರು. ಶಾಸಕ ಸ್ಥಾನ ಕಳೆದುಕೊಂಡಿದ್ದ ವೇಳೆ ಮಾಜಿ ಪ್ರಧಾನಿ ದೇವೇಗೌಡರು ಶಾಸಕ ಸ್ಥಾನದ ಭಿಕ್ಷೆ ಕೊಟ್ಟಿರುವುದನ್ನು ಮರೆಯಬಾರದೆಂದು ಹೇಳಿದರು.
ಮಾಜಿ ಶಾಸಕ ಡಾ.ಕೆ.ಆನ್ನದಾನಿ ಮಾತನಾಡಿ, ಎಚ್.ಡಿ.ಕುಮಾರಸ್ವಾಮಿ ಜಿಲ್ಲೆಗೆ ಕೊಡುಗೆ ಏನು ಎನ್ನುವ ಪ್ರಶ್ನೆಗೆ ನಾನೇ ಉತ್ತರ ನೀಡುತ್ತೇನೆ. ಮೈತ್ರಿ ಅಭ್ಯರ್ಥಿಗೆ ಮತ ಹಾಕಬೇಡಿ ಎಂದು ದಲಿತ ಮುಖಂಡರೊಬ್ಬರು ಹೇಳಿಕೆ ನೀಡಿದ್ದಾರೆ. ಆದರೆ, ಡಾ. ಬಿ.ಆರ್.ಅಂಬೇಡ್ಕರ್ ಅವರನ್ನು ಅವಮಾನಿಸಿರುವುದು ಕಾಂಗ್ರೆಸ್ ಪಕ್ಷ. ದಲಿತರ ಮತಕೇಳುವ ನೈತಿಕತೆ ಕಾಂಗ್ರೆಸ್‌ಗಿಲ್ಲ ಎಂದು ಕಿಡಿಕಾರಿದರು.
ಸಂವಿಧಾನವನ್ನು ಬದಲಾಯಿಸುವ ತಾಕತ್ತು ಯಾರಿಗೂ ಇಲ್ಲ. ದಲಿತರು, ಹಿಂದುಳಿದವರು ಹಾಗೂ ಮುಸ್ಲಿಂ ಸಮುದಾಯ ಮೈತ್ರಿ ಅಭ್ಯರ್ಥಿ ಕುಮಾರಸ್ವಾಮಿ ಅವರಿಗೆ ಮತ ನೀಡುವುದರ ಮೂಲಕ ಗೆಲ್ಲಿಸಲಿದ್ದಾರೆ ಎಂದು ಭವಿಷ್ಯ ನುಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಚುನಾವಣಾ ಪ್ರಭಾರಿ ಸುನೀಲ್ ಸುಬ್ರಹ್ಮಣ್ಯಂ, ಮಾಜಿ ಸಚಿವರಾದ ಕೆ.ಸಿ.ನಾರಾಯಣಗೌಡ, ಡಿ.ಸಿ.ತಮ್ಮಣ್ಣ, ಮಾಜಿ ಶಾಸಕ ಸುರೇಶ್ ಗೌಡ, ಮುಖಂಡರಾದ ಮುನಿರಾಜು, ಸಿ.ಪಿ.ಉಮೇಶ್, ಅಶೋಕ್ ಜಯರಾಮು, ನೆಲ್ಲಿಗೆರೆ ಬಾಲು, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಎಸ್.ಇಂದ್ರೇಶ್, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಡಿ.ರಮೇಶ್, ಯುವ ಘಟಕದ ಅಧ್ಯಕ್ಷ ಬಿ.ರವಿ ಕಂಸಾಗರ, ಮುಖಂಡರಾದ ಎಚ್.ಆರ್.ಅಶೋಕ್ ಕುಮಾರ್, ಯಮದೂರು ಸಿದ್ದರಾಜು, ವಿ.ಎಂ.ವಿಶ್ವನಾಥ್, ಶಕುಂತಲಾ ಮಲ್ಲಿಕ್ ಇದ್ದರು.