ವಾರಾಣಸಿ : ವಾರಾಣಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಸಂಜೆ 6 ಕಿ.ಮೀ. ಭರ್ಜರಿ ರೋಡ್‌ಶೋ ನಡೆಸಿದರು. ಮಂಗಳವಾರ ಅವರು ವಾರಾಣಸಿ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದು, ಅದಕ್ಕಿಂತ 1 ದಿನ ಮುಂಚಿತವಾಗಿ ರೋಡ್ ಶೋ ಕೈಗೊಂಡು ಗಮನ ಸೆಳೆದರು.
ರೋಡ್ ಶೋ ಆರಂಭಿಸುವ ಮುನ್ನ ಇಲ್ಲಿನ ಲಂಕಾ ಪ್ರದೇಶದ ಮಾಳವೀಯ ಚೌರಾಹಾದಲ್ಲಿ, ಕೇಸರಿ ಅಂಗಿ ಹಾಗೂ ಬಿಳಿ ಜಾಕೆಟ್ ಧರಿಸಿದ್ದ ಮೋದಿ ಅವರು ಖ್ಯಾತ ಶಿಕ್ಷಣ ತಜ್ಞ ಮತ್ತು ಸಮಾಜ ಸುಧಾರಕ ಮದನ್ ಮೋಹನ್ ಮಾಳವೀಯ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ನಂತರ ಸಂತ ರವಿದಾಸ್ ಗೇಟ್, ಅಸ್ಸಿ, ಶಿವಲಾ, ಸೋನಾರ್‌ಪುರ, ಜಂಗಮವಾಡಿ ಮತ್ತು ಗದೌಲಿಯಾ ಚೌಕ್ ಮೂಲಕ ಸಾಗಿ ಕಾಶಿ ವಿಶ್ವನಾಥ ಮಂದಿರದವರೆಗೆ ರೋಡ್ ಶೋ ನಡೆಸಿದರು. ಅವರಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಾಥ್ ನೀಡಿದರು.
ಶೋ ಉದ್ದಕ್ಕೂ 5,000 ಕ್ಕೂ ಹೆಚ್ಚು ‘ಮಾತೃಶಕ್ತಿ’ಗಳು (ಮಹಿಳೆಯರು) ಕೇಸರಿ ಉಡುಪಿನಲ್ಲಿ ಮೋದಿಯವರ ವಾಹನದ ಮುಂದೆ ಸಾಗಿ ಗಮನ ಸೆಳೆದರು. ಮುಸ್ಲಿಂ ಸಮುದಾಯದವರೂ ರಸ್ತೆಯ ಇಕ್ಕೆಲಗಳಲ್ಲಿ ನಿಂತು ಪುಷ್ಪವೃಷ್ಟಿಗರೆದರು. ರೋಡ್ ಶೋ ವೇಳೆ, ಮೋದಿ ಅವರು ರಸ್ತೆ ಪಕ್ಕ ಕಿಕ್ಕಿರಿದು ನಿಂತಿದ್ದ ಜನರತ್ತ ಕೈಬೀಸಿದರು. ತಾವು ಮುಖಪರಿಚಯ ಹೊಂದಿದ್ದ ಕೆಲವರನ್ನು ದೂರದಿಂದಲೇ ನೋಡಿ ನಮಸ್ಕಾರ ಮಾಡಿದರು ಹಾಗೂ ಕೈಬೀಸಿದರು. ಶೋ ಉದ್ದಕ್ಕೂ ಮೋದಿ ಪರ ಜೈಕಾರಗಳ ಮಳೆ ಕೇಳಿಬಂತು. ರಸ್ತೆಗಳು ಬಿಜೆಪಿ ಬಾವುಟ, ಹೂವುಗಳಿಂದ ಅಲಂಕೃತವಾಗಿ ಕೇಸರಿಮಯವಾಗಿದ್ದವು.
ಲೋಕಸಭೆ ಚುನಾವಣೆಯ 7ನೇ ಮತ್ತು ಕೊನೆಯ ಹಂತದಲ್ಲಿ ಜೂನ್ 1ರಂದು ಕಾಶಿಯಲ್ಲಿ ಮತದಾನ ನಡೆಯಲಿದೆ. ಇಲ್ಲಿಂದ ಪ್ರಧಾನಿ ಸತತ 3ನೇ ಸಲ ಸ್ಪರ್ಧಿಸುತ್ತಿದ್ದಾರೆ.