;Resize=(412,232))
ಸೂರತ್ : ‘ಕರ್ನಾಟಕದ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನರಲ್ಲಿ ತೀವ್ರ ಆಕ್ರೋಶವಿತ್ತು. ಹಾಗಾಗಿ ಮುಖ್ಯಮಂತ್ರಿಯನ್ನೇ ಬದಲಾವಣೆ ಮಾಡಬೇಕಾಯಿತು’ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಟೀಕಿಸಿದ್ದಾರೆ.
ಈ ಮೂಲಕ ಇತ್ತೀಚೆಗೆ ಸಿದ್ದರಾಮಯ್ಯನವರನ್ನು ಕೆಳಗಿಳಿಸಿ, ಡಿ.ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಿದ್ದನ್ನು ಪರೋಕ್ಷವಾಗಿ ಕುಟುಕಿದ್ದಾರೆ.
ಗುಜರಾತ್‌ನ ಸೂರತ್‌ನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಕಾಂಗ್ರೆಸ್ ಅವ್ಯವಸ್ಥೆ ಮತ್ತು ಅನಿಶ್ಚಿತತೆಯನ್ನು ಹರಡುವ ಮೂಲಕ ತನಗೆ ಅವಕಾಶಗಳನ್ನು ಹುಡುಕುತ್ತಿದೆ. ಆದರೆ ಜನರು ಅದಕ್ಕೆ ಸೂಕ್ತ ಉತ್ತರವನ್ನು ನೀಡುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳ ಜನ ಅತೃಪ್ತರಾಗಿದ್ದಾರೆ. ಕರ್ನಾಟಕದ ಜನರಲ್ಲಿ ಕಾಂಗ್ರೆಸ್ ಸರ್ಕಾರದ ಬಗ್ಗೆ ಅಪಾರ ಆಕ್ರೋಶವಿದೆ. ಅದಕ್ಕಾಗಿಯೇ ಪಕ್ಷವು ಅಲ್ಲಿ ತನ್ನ ಮುಖ್ಯಮಂತ್ರಿಯನ್ನು ಬದಲಾಯಿಸಬೇಕಾಯಿತು’ ಎಂದು ಕುಟುಕಿದರು.
‘ಗುಜರಾತ್‌ನ ಜನರು ಕಾಂಗ್ರೆಸ್ ಅನ್ನು ಅಂಚಿಗೆ ತಳ್ಳಿದ್ದಾರೆ. ಕಾಂಗ್ರೆಸ್ ಸರ್ಕಾರಗಳು ಇರುವ ಕಡೆಗಳಲ್ಲಿಯೂ, ಪಕ್ಷದ ದುರಾಡಳಿತದಿಂದ ಸಾರ್ವಜನಿಕರು ಬೇಸತ್ತಿದ್ದಾರೆ. ಇತ್ತೀಚೆಗೆ, ಹಿಮಾಚಲ ಪ್ರದೇಶದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ನಡೆದವು. ಅಲ್ಲಿ ಕಾಂಗ್ರೆಸ್ ಸರ್ಕಾರವಿದ್ದರೂ, ಪಕ್ಷ ಹೀನಾಯ ಸೋಲನ್ನು ಅನುಭವಿಸಿತು. ಅಲ್ಲಿನ ಜನ ಕಾಂಗ್ರೆಸ್‌ನ ದುರಾಡಳಿತವನ್ನು ತಿರಸ್ಕರಿಸಿದ್ದಾರೆ. ಇದಕ್ಕೂ ಮುನ್ನ, ಹರ್ಯಾಣದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋತಿತ್ತು. ಪಂಜಾಬ್ ಜನರು ಕೂಡ ಪಕ್ಷಕ್ಕೆ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ. ಗೊಂದಲದ ನಡುವೆ ಅವಕಾಶಗಳನ್ನು ಹುಡುಕುವ ಕಾಂಗ್ರೆಸ್ ಪಕ್ಷದ ರಾಜಕೀಯ ಕೆಲಸ ಮಾಡುವುದಿಲ್ಲ. ಇದಕ್ಕಾಗಿಯೇ ದೇಶ ಬಿಜೆಪಿ ಮತ್ತು ಅದರ ಅಭಿವೃದ್ಧಿ ಉಪಕ್ರಮಗಳ ಮೇಲೆ ನಂಬಿಕೆ ಇಡುತ್ತದೆ. ಜನರು ಪದೇ ಪದೇ ಬಿಜೆಪಿಗೆ ಜನಾದೇಶವನ್ನು ನೀಡುತ್ತಾರೆ ಎಂದು ಮೋದಿ ಕಿಡಿ ಕಾರಿದರು
ವಿದೇಶಗಳಲ್ಲೂ ಬಂಗಾಳದ್ದೇ ಮಾತು:
. ನಾನು ಇತ್ತೀಚೆಗೆ 5 ದೇಶಗಳ ಪ್ರವಾಸದಲ್ಲಿದ್ದೆ. ಅಲ್ಲಿಯೂ ಮಾತು ಬಂಗಾಳದ ಬಗ್ಗೆಯೇ ಇತ್ತು. ಎಲ್ಲರೂ ಬಂಗಾಳದ ಬಗ್ಗೆ ಚರ್ಚಿಸುತ್ತಿದ್ದರು. ಬಂಗಾಳ, ಅಸ್ಸಾಂ ಮತ್ತು ಪುದುಚೇರಿಯಲ್ಲಿ ನಡೆದ ಚುನಾವಣೆಗಳಲ್ಲಿ ಬಿಜೆಪಿ ಮತ್ತು ಎನ್‌ಡಿಎ ಭಾರಿ ಜನಾದೇಶವನ್ನು ಪಡೆದಿವೆ’ ಎಂದು ಹರ್ಷಿಸಿದರು.