ಬಿ.ವೈ.ವಿಜಯೇಂದ್ರ ಸೂಕ್ತ ಎಂದೇ ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದೇವೆ : ರಾಧಾ ಮೋಹನ್‌ ದಾಸ್‌

KannadaprabhaNewsNetwork | Updated : Dec 08 2024, 05:11 AM IST

ಸಾರಾಂಶ

ಪಕ್ಷದ ಪರಿಷ್ಠರಿಗೆ ಬಿ.ವೈ.ವಿಜಯೇಂದ್ರ ಅವರನ್ನೇ ರಾಜ್ಯಾಧ್ಯಕ್ಷರನ್ನಾಗಿ ಮಾಡುವುದು ಈಗಿನ ಔಚಿತ್ಯ ಎನಿಸಿದೆ. ಹೀಗಾಗಿ ಅವರನ್ನೇ ರಾಜ್ಯಾಧ್ಯಕ್ಷರಾಗಿ ನೇಮಿಸಿದ್ದಾರೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ರಾಧಾ ಮೋಹನ್‌ ದಾಸ್‌ ಹೇಳಿದ್ದಾರೆ.   

 ಬೆಂಗಳೂರು : ಪಕ್ಷದ ಪರಿಷ್ಠರಿಗೆ ಬಿ.ವೈ.ವಿಜಯೇಂದ್ರ ಅವರನ್ನೇ ರಾಜ್ಯಾಧ್ಯಕ್ಷರನ್ನಾಗಿ ಮಾಡುವುದು ಈಗಿನ ಔಚಿತ್ಯ ಎನಿಸಿದೆ. ಹೀಗಾಗಿ ಅವರನ್ನೇ ರಾಜ್ಯಾಧ್ಯಕ್ಷರಾಗಿ ನೇಮಿಸಿದ್ದಾರೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ರಾಧಾ ಮೋಹನ್‌ ದಾಸ್‌ ಹೇಳಿದ್ದಾರೆ. ಈ ಮೂಲಕ ವಿಜಯೇಂದ್ರ ನೇಮಕವನ್ನು ಪ್ರಶ್ನಿಸುತ್ತಿರುವ ಶಾಸಕ ಯತ್ನಾಳ್‌ ಅವರಿಗೆ ಪರೋಕ್ಷವಾಗಿ ಟಾಂಗ್‌ ನೀಡಿದ್ದಾರೆ.

ಶನಿವಾರ ಕೋರ್‌ ಕಮಿಟಿ ಸಭೆ ಬಳಿಕ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಯಾವ ಸಮಯಕ್ಕೆ ಯಾವ ನಾಯಕರು ಉತ್ತಮವೋ ಅವರು ಇರುತ್ತಾರೆ. ಪ್ರಸ್ತುತ ವಿಜಯೇಂದ್ರ ಸೂಕ್ತ ಎನಿಸಿದೆ. ವರಿಷ್ಠರಿಗೆ ಈ ಸಂದರ್ಭದಲ್ಲಿ ವಿಜಯೇಂದ್ರರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡುವುದು ಔಚಿತ್ಯ ಎನಿಸಿದೆ. ಹೀಗಾಗಿ ಅವರನ್ನೇ ರಾಜ್ಯಾಧ್ಯಕ್ಷರಾಗಿ ಮಾಡಿದ್ದಾರೆ. ಕಾಲಕ್ಕೆ ತಕ್ಕಂತೆ ಎಲ್ಲವೂ ತೀರ್ಮಾನ ಆಗಲಿದೆ ಎಂದರು.

ಬಿಜೆಪಿಯಲ್ಲಿ ತಂಡ ಇಲ್ಲ:

ರಾಜ್ಯದಲ್ಲಿ ಬಿ.ವೈ.ವಿಜಯೇಂದ್ರ ಮತ್ತು ಬಸನಗೌಡ ಯತ್ನಾಳ್‌ ಎಂಬ ತಂಡಗಳು ಇಲ್ಲ. ಆದರೆ, ಪಕ್ಷದೊಳಗಿನ ವಿದ್ಯಮಾನಗಳನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಈಗಾಗಲೇ ಯತ್ನಾಳ್‌ಗೆ ಶೋಕಾಸ್‌ ನೋಟಿಸ್‌ ನೀಡಲಾಗಿದೆ. ಅವರಿಂದ ಉತ್ತರ ಬಂದ ಬಳಿಕ ಮುಂದಿನ ಕ್ರಮದ ಬಗ್ಗೆ ತೀರ್ಮಾನಿಸುವುದಾಗಿ ಹೇಳಿದರು.

ನಮ್ಮದು ಶಿಸ್ತಿನ ಪಕ್ಷ. ಕರ್ನಾಟಕದಲ್ಲಿ 71 ಲಕ್ಷ ಕಾರ್ಯಕರ್ತರು ಇದ್ದಾರೆ. ಎಲ್ಲರ ವ್ಯಕ್ತಿತ್ವ ಬೇರೆ ಇರುತ್ತದೆ. ಯಾರ ವ್ಯಕ್ತಿತ್ವ ಸರಿ ಎಂಬುದಕ್ಕೆ ಕಾಲವೇ ಸರಿಯಾದ ಉತ್ತರ ನೀಡಲಿದೆ ಎಂದು ಯತ್ನಾಳ್‌ ಬಹಿರಂಗ ಹೇಳಿಕೆಗಳ ಕುರಿತ ಪ್ರಶ್ನೆಗೆ ರಾಧಾ ಮೋಹನ್‌ ದಾಸ್ ಉತ್ತರಿಸಿದರು.

ಕೋರ್‌ ಕಮಿಟಿ ಸಭೆಯಲ್ಲಿ ರಾಜ್ಯದಲ್ಲಿ ಪಕ್ಷ ಸಂಘಟನೆ, ಮುಂಬರುವ ಪಂಚಾಯಿತಿ ಚುನಾವಣೆ ಸೇರಿ ಹಲವು ವಿಚಾರಗಳ ಬಗ್ಗೆ ಚರ್ಚಿಸಲಾಗಿದೆ.

- ರಾಧಾ ಮೋಹನ್‌ ದಾಸ್‌ , ರಾಜ್ಯ ಬಿಜೆಪಿ ಉಸ್ತುವಾರಿ

Share this article