ಪ್ರಬಲ ನಾಯಕನಾಗಿ ಹೊರಹೊಮ್ಮಿದ ರಾಹುಲ್‌

Published : Jun 05, 2024, 08:51 AM IST
rahul gandhi

ಸಾರಾಂಶ

ಗಾಂಧಿ ಕುಟುಂಬದ ಕುಡಿ ರಾಹುಲ್‌ ಗಾಂಧಿ ಈ ಬಾರಿಯ ಲೋಕಸಭೆ ಚುನಾವಣೆ ಮೂಲಕ ಪ್ರಬಲ ರಾಜಕೀಯ ನಾಯಕನಾಗಿ ಹೊರಹೊಮ್ಮುವಲ್ಲಿ ಯಶಸ್ವಿಯಾಗಿದ್ದಾರೆ.

ಗಾಂಧಿ ಕುಟುಂಬದ ಕುಡಿ ರಾಹುಲ್‌ ಗಾಂಧಿ ಈ ಬಾರಿಯ ಲೋಕಸಭೆ ಚುನಾವಣೆ ಮೂಲಕ ಪ್ರಬಲ ರಾಜಕೀಯ ನಾಯಕನಾಗಿ ಹೊರಹೊಮ್ಮುವಲ್ಲಿ ಯಶಸ್ವಿಯಾಗಿದ್ದಾರೆ. 20 ವರ್ಷಗಳಿಂದ ಸಂಸದನಾಗಿದ್ದರೂ ತಾಯಿ ಸೋನಿಯಾ ಗಾಂಧಿಗೆ ಸಮರ್ಥ ಉತ್ತರಾಧಿಕಾರಿಯಾಗುವ ಲಕ್ಷಣಗಳನ್ನು ತೋರದಿದ್ದ ರಾಹುಲ್‌ ಗಾಂಧಿ, ಕಳೆದ ಎರಡು ಅವಧಿಯಲ್ಲಿ ಸೋತು ಸುಣ್ಣವಾಗಿದ್ದ ಕಾಂಗ್ರೆಸ್‌ ಪಕ್ಷವನ್ನು ಈ ಬಾರಿಯ ಚುನಾವಣೆಯಲ್ಲಿ ಎತ್ತಿ ನಿಲ್ಲಿಸಿದ್ದಾರೆ.

ಲೋಕಸಭೆ ಚುನಾವಣೆಗೂ ಮುನ್ನ ರಾಹುಲ್‌ ದೇಶದ ಉದ್ದಗಲಕ್ಕೂ ಪಾದಯಾತ್ರೆ ನಡೆಸಿದ್ದರು. ಅದು ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಸಾಕಷ್ಟು ಲಾಭ ತಂದುಕೊಟ್ಟಿದೆ ಹಾಗೂ ವೈಯಕ್ತಿಕವಾಗಿ ರಾಹುಲ್‌ ಇಮೇಜ್‌ ವೃದ್ಧಿಗೆ ಕೊಡುಗೆ ನೀಡಿದೆ. ಸ್ವತಃ ರಾಹುಲ್‌ ತಾವು ಸ್ಪರ್ಧಿಸಿದ ವಯನಾಡು ಮತ್ತು ರಾಯ್‌ಬರೇಲಿ ಎರಡೂ ಕ್ಷೇತ್ರಗಳಲ್ಲಿ ಗೆದ್ದಿದ್ದಾರೆ. ಇದು ಅವರ ಹುಮ್ಮಸ್ಸನ್ನು ದ್ವಿಗುಣಗೊಳಿಸಿದೆ. ‘ಕಾಂಗ್ರೆಸ್‌ ಪಕ್ಷದವರು ರಾಹುಲ್‌ರನ್ನು ಲಾಂಚ್‌ ಮಾಡಲು ಪ್ರತಿ ಬಾರಿ ಯತ್ನಿಸಿ ವಿಫಲರಾಗುತ್ತಾರೆ’ ಎಂಬ ಬಿಜೆಪಿಗರ ಟೀಕೆ ಹುಸಿಯಾಗಿದೆ.

ಬಿಜೆಪಿ ವಿರುದ್ಧದ ಇಂಡಿಯಾ ಮೈತ್ರಿಕೂಟಕ್ಕೆ ಪ್ರಬಲ ನಾಯಕನಾಗುವ ಸುಳಿವನ್ನೂ ರಾಹುಲ್‌ ಈ ಬಾರಿಯ ಚುನಾವಣೆ ಮೂಲಕ ನೀಡಿದ್ದಾರೆ. ಅಲ್ಲದೆ, ಬಿಜೆಪಿಯ ನರೇಂದ್ರ ಮೋದಿ ಮತ್ತು ಅಮಿತ್‌ ಶಾ ಅವರಿಗೆ ಪೈಪೋಟಿ ನೀಡುವಂತೆ ಪಕ್ಷವನ್ನು ಮತ್ತೆ ಸಂಘಟಿಸುವ ಶಕ್ತಿ ತಮ್ಮಲ್ಲಿದೆ ಎಂಬ ಸುಳಿವನ್ನೂ ನೀಡಿದ್ದಾರೆ.

2014ರ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಹೀನಾಯವಾಗಿ ಸೋತ ಬಳಿಕ ಮತ್ತೆ ಅದು ಸದ್ಯಕ್ಕೆ ತಲೆಯೆತ್ತಲು ಸಾಧ್ಯವಿಲ್ಲ ಎಂಬ ವಿಶ್ಲೇಷಣೆಗಳು ಕೇಳಿಬಂದಿದ್ದವು. 2019ರ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಭರ್ಜರಿ ಬಹುಮತದೊಂದಿಗೆ ಪುನರಾಯ್ಕೆ ಆದ ಬಳಿಕ ಬಿಜೆಪಿಯನ್ನು ಇನ್ನು 40 ವರ್ಷಗಳ ಕಾಲ ಯಾರೂ ಎದುರಿಸಲು ಸಾಧ್ಯವಿಲ್ಲ ಎಂಬ ಮಾತುಗಳೂ ಕೇಳಿಬಂದಿದ್ದವು. ಅದಕ್ಕೆ ತಕ್ಕಂತೆ ಬಿಜೆಪಿ ಕೂಡ ‘ಕಾಂಗ್ರೆಸ್‌ ಮುಕ್ತ ಭಾರತ’ ಮಾಡುತ್ತೇವೆ ಎಂದು ಪ್ರಚಾರ ಮಾಡುತ್ತಿತ್ತು. ಇನ್ನೊಂದೆಡೆ, ರಾಹುಲ್‌ ದುರ್ಬಲ ನಾಯಕ, ಅವರೊಬ್ಬ ‘ಪಪ್ಪು’ ಎಂಬ ಪ್ರಚಾರ ನಡೆಯುತ್ತಿತ್ತು. ಅದೆಲ್ಲವನ್ನೂ ಮೀರಿ ಕಾಂಗ್ರೆಸ್ ಪಕ್ಷಕ್ಕೆ ಮರುಜೀವ ನೀಡುವಲ್ಲಿ ರಾಹುಲ್‌ ಯಶಸ್ವಿಯಾಗಿದ್ದಾರೆ.

2014ರ ಲೋಕಸಭೆ ಚುನಾವಣೆ ಸೋಲಿನ ಬಳಿಕ ಕಾಂಗ್ರೆಸ್‌ ಪಕ್ಷ ಅನೇಕ ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲೂ ಧೂಳೀಪಟವಾಗಿತ್ತು. ಇತ್ತೀಚೆಗೆ ಅದು ಕರ್ನಾಟಕ, ತೆಲಂಗಾಣ, ಹಿಮಾಚಲಪ್ರದೇಶ ಮುಂತಾದ ರಾಜ್ಯಗಳಲ್ಲಿ ಪುನಃ ಗೆದ್ದಿದೆ. ಆ ಗೆಲುವುಗಳಲ್ಲೂ ರಾಹುಲ್‌ ಪಾತ್ರವಿದೆ. ಅದು ಅವರ ನಾಯಕತ್ವಕ್ಕೆ ಇನ್ನಷ್ಟು ಬಲ ತುಂಬಿದೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಉ.ಕ.ಅಭಿವೃದ್ಧಿ ಕೈ ಸರ್ಕಾರ ಬದ್ಧ : ಸಿಎಂ
ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!