ಸಾಸಾರಾಂ (ಬಿಹಾರ) : ಚುನಾವಣಾ ಆಯೋಗವು ಬಿಜೆಪಿ ಜೊತೆ ಸೇರಿಕೊಂಡು ಷಡ್ಯಂತ್ರ ರೂಪಿಸುವ ಮೂಲಕ ಚುನಾವಣೆಗಳನ್ನೇ ಕದಿಯುವ ಕೆಲಸ ಮಾಡುತ್ತಿದೆ. ಈ ವಿಷಯ ಇದೀಗ ಇಡೀ ದೇಶದ ಗಮನಕ್ಕೆ ಬಂದಿದೆ. ಆದರೆ ಬಿಹಾರ ಚುನಾವಣೆಯನ್ನು ಕದಿಯುವ ಈ ‘ಹೊಸ ಸಂಚು’ ಯಶಸ್ವಿಯಾಗಲು ಇಂಡಿಯಾ ಮೈತ್ರಿಕೂಟದ ಪಕ್ಷಗಳು ಬಿಡುವುದಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎಚ್ಚರಿಸಿದ್ದಾರೆ. ಜೊತೆಗೆ ಕರ್ನಾಟಕದ ಮಹದೇವಪುರ, ಕೇರಳ, ಮಹಾರಾಷ್ಟ್ರ ಸೇರಿದಂತೆ ಹಲವು ಕಡೆ ಮತಗಳವಿನ ಮೂಲಕ ಬಿಜೆಪಿ ಚುನಾವಣೆಯಲ್ಲಿ ಗೆಲುವು ಸಾಧಿಸಿದೆ ಎಂದು ತಮ್ಮ ಆರೋಪವನ್ನು ಪುನರುಚ್ಚರಿಸಿದ್ದಾರೆ.
ಬಿಹಾರದಲ್ಲಿ ಚುನಾವಣಾ ಆಯೋಗ ಹಮ್ಮಿಕೊಂಡಿರುವ ವಿಶೇಷ ಮತಪಟ್ಟಿ ಪರಿಷ್ಕರಣೆ ಖಂಡಿಸಿ ಕಾಂಗ್ರೆಸ್ ಹಮ್ಮಿಕೊಂಡಿದ್ದ 20 ಜಿಲ್ಲೆಗಳಲ್ಲಿ ಹಾದು ಹೋಗುವ, 1300 ಕಿ.ಮೀ ದೂರದ ‘ಮತ ಅಧಿಕಾರ ಯಾತ್ರೆ’ಗೆ ಭಾನುವಾರ ಇಲ್ಲಿ ಚಾಲನೆ ನೀಡಿ ಮಾತನಾಡಿದ ರಾಹುಲ್ ಗಾಂಧಿ, ಚುನಾವಣಾ ಆಯೋಗ ಮತ್ತು ಬಿಜೆಪಿ ವಿರುದ್ಧ ಗಂಭೀರ ಆರೋಪಗಳನ್ನು ಹೊರಿಸುವುದರ ಜೊತೆಗೆ ತೀವ್ರ ವಾಗ್ದಾಳಿ ನಡೆಸಿದರು.
ಚುನಾವಣೆ ಕಳವು:
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ‘ದೇಶಾದ್ಯಂತ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಗಳಲ್ಲೇ ಕಳವು ಮಾಡಲಾಗುತ್ತಿದೆ. ಇದೀಗ ವಿಶೇಷ ಮತಪಟ್ಟಿ ಪರಿಷ್ಕರಣೆ ಮೂಲಕ ಬಿಹಾರದಲ್ಲೂ ಅದನ್ನೇ ನಡೆಸುವ ಸಂಚು ರೂಪಿಸಲಾಗಿದೆ. ಇಲ್ಲಿ ಮತದಾರರ ಪಟ್ಟಿಯಿಂದ ಹೆಸರು ಅಳಿಸುವ ಮತ್ತು ಸೇರಿಸುವ ಕೆಲಸ ನಡೆಯುತ್ತಿದೆ. ನಾವು ಇದನ್ನು ಪ್ರಶ್ನಿಸಿದರೆ ಚುನಾವಣಾ ಆಯೋಗ ನನ್ನ ಬಳಿ ಅಫಿಡವಿಟ್ ಕೇಳುತ್ತದೆ. ಆದರೆ ಇಂಥದ್ದೇ ಆರೋಪ ಮಾಡುವ ಬಿಜೆಪಿ ನಾಯಕರ ಬಳಿ ಅದು ಇಂಥ ಯಾವುದೇ ದಾಖಲೆಗಳನ್ನು ಕೇಳುವುದಿಲ್ಲ ಎಂದು ಆರೋಪಿಸಿದರು.
ಬಡವರಿಗಿರೋದು ಕೇವಲ ಮತದಾನದ ಹಕ್ಕಷ್ಟೇ. ಇದೀಗ ಅದನ್ನೂ ಕಿತ್ತುಕೊಳ್ಳುವ ಪ್ರಯತ್ನ ಸಫಲವಾಗಲು ನಾವು ಬಿಡಲ್ಲ . ಮತಗಳವು ಕುರಿತು ಈಗಾಗಲೇ ಎಲ್ಲವನ್ನೂ ಬಯಲು ಮಾಡಿದ್ದೇನೆ. ನಮ್ಮದು ಸಂವಿಧಾನವನ್ನು ಉಳಿಸುವ ಹೋರಾಟ ಎಂದ ರಾಹುಲ್, ಇಡೀ ದೇಶದಲ್ಲಿ ಆರೆಸ್ಸೆಸ್ ಮತ್ತು ಬಿಜೆಪಿ ಸಂವಿಧಾನವನ್ನು ನಾಶಮಾಡಲು ಪ್ರಯತ್ನಿಸುತ್ತಿದೆ ಎಂದು ಕಿಡಿಕಾರಿದರು.
ಕರ್ನಾಟಕ, ಮಹಾರಾಷ್ಟ್ರ ವಿಚಾರ ಪ್ರಸ್ತಾಪ:
ಪ್ರತಿ ಚುನಾವಣೆಯನ್ನೂ ಬಿಜೆಪಿ ಗೆಲ್ಲುತ್ತದೆ. ಮಹಾರಾಷ್ಟ್ರದಲ್ಲಿ ಜನಾಭಿಪ್ರಾಯ ಕಾಂಗ್ರೆಸ್ ಮೈತ್ರಿಕೂಟದ ಪರವಾಗಿತ್ತು. ಅಲ್ಲದೆ, ಲೋಕಸಭಾ ಚುನಾವಣೆಯಲ್ಲೂ ನಮ್ಮ ಮೈತ್ರಿಕೂಟ ಹೆಚ್ಚಿನ ಸ್ಥಾನ ಗೆದ್ದಿತ್ತು. ಆದರೆ, ಅದಾಗಿ ನಾಲ್ಕು ತಿಂಗಳ ಬಳಿಕ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿತು. ಯಾಕೆಂದರೆ ಅಲ್ಲಿ 1 ಕೋಟಿ ಮತದಾರರನ್ನು ಹೊಸದಾಗಿ ಸೇರ್ಪಡೆ ಮಾಡಲಾಗಿತ್ತು. ಎಲ್ಲೆಲ್ಲಿ ಈ ರೀತಿ ಮತದಾರರನ್ನು ಸೇರ್ಪಡೆ ಮಾಡಲಾಗಿದೆಯೋ ಅಲ್ಲೆಲ್ಲ ಬಿಜೆಪಿಯೇ ಗೆದ್ದಿದೆ ಎಂದರು.
ಇದೇ ವೇಳೆ ಕರ್ನಾಟಕದ ಮಹದೇವಪುರ ಕ್ಷೇತ್ರದ ವಿಚಾರ ಪ್ರಸ್ತಾಪಿಸಿದ ಅವರು, ವಿಧಾನಸಭಾ ಕ್ಷೇತ್ರವೊಂದರಲ್ಲಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಮತಗಳನ್ನು ಕಳವು ಮಾಡಲಾಗಿದೆ. ಆ ಕ್ಷೇತ್ರದ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿ ಗೆದ್ದಿದೆ. ಈ ಬಗ್ಗೆ ನಾನು ಆರೋಪ ಮಾಡಿದ್ದಕ್ಕೆ ಆಯೋಗ ನನ್ನ ಬಳಿ ಅಫಿಡವಿಟ್ ಕೇಳಿತು ಎಂದು ತಿಳಿಸಿದರು.
16 ದಿನ ಬಿಹಾರದ 20 ಜಿಲ್ಲೆಗಳಲ್ಲಿ
ಸಂಚರಿಸಲಿರುವ ಮಹಾ ಯಾತ್ರೆ
ಬಿಹಾರ ವಿಧಾನಸಭಾ ಚುನಾವಣೆಗೆ ಕೇವಲ ಮೂರು ತಿಂಗಳಿದೆ ಎನ್ನುವಾಗ ಕಾಂಗ್ರೆಸ್, ಆರ್‌ಜೆಡಿ ಮತ್ತಿತರ ಪಕ್ಷಗಳ ಮಹಾಘಟಬಂಧನ್ ಸಸಾರಾಂನಿಂದ 16 ದಿನಗಳ ‘ಮತದಾರರ ಅಧಿಕಾರ ಯಾತ್ರೆ’ಗೆ ಚಾಲನೆ ನೀಡಿದೆ. ಈ ಯಾತ್ರೆ ಪಟನಾದಲ್ಲಿ ಸೆ.1ರಂದು ಸಮಾವೇಶಗೊಳ್ಳುವ ಮೂಲಕ ಅಂತ್ಯಗೊಳ್ಳಲಿದೆ. ರಾಹುಲ್ ಗಾಂಧಿ ಮಾತ್ರವಲ್ಲದೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್, ಬಿಹಾರದ ಪ್ರತಿಪಕ್ಷ ನಾಯಕ ತೇಜಸ್ವಿ ಯಾದವ್, ವಿಕಾಸಶೀಲ್ ಇನ್ಸಾನ್ ಪಕ್ಷದ ಮುಖೇಶ್ ಸಹಾನಿ, ಸಿಪಿಎಂ ಲಿಬರೇಷನ್‌ನ ಪ್ರಧಾನ ಕಾರ್ಯದರ್ಶಿ ದೀಪಾಂಕರ್ ಭಟ್ಟಾಚಾರ್ಯ, ಸಿಪಿಐ(ಎಂ)ನ ಸುಭಾಂಶಿನಿ ಅಲಿ, ಸಿಪಿಐನ ಸಂತೋಷ್ ಕುಮಾರ್ ಮತ್ತಿತರರು ಇದ್ದರು.
ರಾಗಾ ಹೇಳಿದ್ದೇನು?
- ಬಡವರಿಗೆ ಇರೋದು ಕೇವಲ ಮತ ಹಕ್ಕು. ಅದನ್ನೂ ಕಿತ್ತುಕೊಳ್ಳುವ ಯತ್ನ ನಡೆಯುತ್ತಿದೆ. ನಾವು ಬಿಡಲ್ಲ.
- ಮತಗಳವು ಕುರಿತು ಎಲ್ಲವನ್ನೂ ನಾನು ಬಯಲು ಮಾಡಿದ್ದೇನೆ. ಸಂವಿಧಾನ ಉಳಿಸಲು ನಮ್ಮ ಹೋರಾಟ
- ಮಹಾರಾಷ್ಟ್ರದಲ್ಲಿ ಜನಾಭಿಪ್ರಾಯ ಕಾಂಗ್ರೆಸ್ ಮೈತ್ರಿಕೂಟದ ಪರವಾಗಿತ್ತು. ಆದರೆ ಅಲ್ಲಿ ಬಿಜೆಪಿ ಗೆದ್ದಿತು
- ಕರ್ನಾಟಕದ ಮಹದೇವಪುರ ಕ್ಷೇತ್ರದಲ್ಲಿ 1 ಲಕ್ಷಕ್ಕೂ ಹೆಚ್ಚು ಮತಗಳನ್ನು ಕಳವು ಮಾಡಿ ಬಿಜೆಪಿ ಗೆದ್ದಿದೆ
- ದೇಶಾದ್ಯಂತ ವಿಧಾನಸಭೆ, ಲೋಕಸಭೆ ಚುನಾವಣೆಗಳಲ್ಲಿ ಮತಗಳನ್ನು ಕಳವು ಮಾಡಲಾಗುತ್ತಿದೆ
- ವಿಶೇಷ ಮತಪಟ್ಟಿ ಪರಿಷ್ಕರಣೆ ಮೂಲಕ ಬಿಹಾರದಲ್ಲೂ ಅದನ್ನೇ ನಡೆಸಲು ಸಂಚು ರೂಪಿಸಿದ್ದಾರೆ
---
ಆರೋಪಕ್ಕೆ ದಾಖಲೆ ಕೊಡಿ, ಇಲ್ಲವೇ ಕ್ಷಮೆ ಯಾಚಿಸಿ: ಆಯೋಗ
ನವದೆಹಲಿ
ಕರ್ನಾಟಕದ ಮಹದೇವಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯೂ ಸೇರಿದಂತೆ ಕಳೆದ ಲೋಕಸಭಾ ಚುನಾವಣೆ ವೇಳೆ ದೇಶವ್ಯಾಪಿ ಭಾರೀ ಮತ ಕಳವು ಆಗಿದೆ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಕ್ಕೆ ತಿರುಗೇಟು ನೀಡಿರುವ ಕೇಂದ್ರ ಚುನಾವಣಾ ಆಯೋಗ, ನಿಮ್ಮ ಆರೋಪಗಳಿಗೆ 7 ದಿನದಲ್ಲಿ ಸೂಕ್ತ ದಾಖಲೆ ನೀಡಿ ಇಲ್ಲವೇ ದೇಶದ ಕ್ಷಮೆಯಾಚಿಸಿ ಎಂದು ಸೂಚಿಸಿದೆ. ಆರೋಪ ಸಾಬೀತಿನ ದಾಖಲೆ ಸಲ್ಲಿಸದೇ ಹೋದಲ್ಲಿ ಆರೋಪಗಳನ್ನು ಆಧಾರರಹಿತ ಎಂದು ಪರಿಗಣಿಸಲಾಗುವುದು ಎಂದೂ ಸ್ಪಷ್ಟಪಡಿಸಿದೆ.
ಜೊತೆಗೆ, ಒಂದೇ ಸುಳ್ಳನ್ನು ಪದೇ ಪದೇ ಹೇಳಿದಾಕ್ಷಣ ಅದು ಸತ್ಯವಾಗದು. ಸೂರ್ಯ ಪೂರ್ವದಲ್ಲೇ ಹುಟ್ಟುತ್ತಾನೆ. ಯಾರೋ ಹೇಳಿದರೆಂದು ಅವನು ಬೇರೆಲ್ಲೂ ಹುಟ್ಟುವುದಿಲ್ಲ. ಡಬಲ್ ವೋಟಿಂಗ್ ಅಥವಾ ಮತ ಕಳವಿನಂತಹ ಆರೋಪಗಳಿಂದ ಮತದಾರನಾಗಲಿ, ಚುನಾವಣಾ ಆಯೋಗವಾಗಲೀ ಹೆದರಿಕೊಂಡಿಲ್ಲ. ನಾವು ಮತದಾರರ ಜೊತೆ ಬಂಡೆಯಂತೆ ನಿಂತಿದ್ದೇವೆ ಎಂದು ಆಯೋಗ ರಾಹುಲ್ ಹೇಳಿಕೆಯನ್ನು ಸ್ಪಷ್ಟವಾಗಿ ತಳ್ಳಿಹಾಕಿದೆ.
ಜೊತೆಗೆ ಯಾವುದೇ ಕ್ಷೇತ್ರವೊಂದರ ಮತದಾರನಲ್ಲದ ವ್ಯಕ್ತಿ ಆರೋಪ ಮಾಡಿದಾಗ, ಈ ಕುರಿತಂತೆ ಆತ ಅಫಿಡವಿಟ್ ಸಲ್ಲಿಸಬೇಕು ಎಂದು ಚುನಾವಣಾ ನಿಯಮಗಳಲ್ಲಿದೆ ಎಂದು ಆಯೋಗವನ್ನು ಪ್ರಶ್ನಿಸಿದ್ದ ರಾಹುಲ್‌ಗೆ ಪರೋಕ್ಷವಾಗಿ ಉತ್ತರ ನೀಡಿದೆ. ಅಲ್ಲದೆ ಕೆಲ ರಾಜಕೀಯ ಪಕ್ಷಗಳು ಇತ್ತೀಚೆಗೆ ಕಾನೂನು ಬಾಹಿರವಾಗಿ ಮತದಾರರ ಪಟ್ಟಿ ಪ್ರದರ್ಶಿಸಿವೆ ಎಂದು ರಾಹುಲ್ ಗಾಂಧಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ.
ಈ ನಡುವೆ ಆಯೋಗದ ಪತ್ರಿಕಾಗೋಷ್ಠಿ ಬಳಿಕ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ, ತನಗೆ ನೆರವು ನೀಡುತ್ತಿರುವ ಆಯೋಗದ ವಿರುದ್ಧ ಯಾರೂ ಕ್ರಮ ಕೈಗೊಳ್ಳಬಾರದು ಎಂದೇ 2023ರಲ್ಲಿ ಬಿಜೆಪಿ ಸರ್ಕಾರ ಚುನಾವಣಾ ನಿಯಮಗಳಿಗೆ ತಿದ್ದುಪಡಿ ತಂದಿದೆ ಎಂದು ಆರೋಪಿಸಿದರು. ಜೊತೆಗೆ ಚುನಾವಣಾ ಪ್ರಕ್ರಿಯೆಗಳ ಸಿಸಿಟೀವಿ ನಿಯಮಗಳಿಗೆ ತಿದ್ದುಪಡಿ ಮಾಡಿದ್ದಾದರೂ ಏಕೆ ಎಂದು ಪ್ರಶ್ನಿಸಿದರು.
ತಿರುಗೇಟು:
ಕಳೆದ ಕೆಲ ದಿನಗಳಿಂದ ರಾಹುಲ್ ಗಾಂಧಿ ಮಾಡುತ್ತಿದ್ದ ಆರೋಪಗಳಿಗೆ ಎಳೆಎಳೆಯಾಗಿ ತಿರುಗೇಟು ನೀಡಿದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್, ‘ಮತಪಟ್ಟಿಯಲ್ಲಿನ ಲೋಪದೋಷ ಸರಿಪಡಿಸಲು ಆಯೋಗ ವಿಶೇಷ ಮತಪಟ್ಟಿ ಪರಿಷ್ಕರಣೆ ನಡೆಸುತ್ತಿದೆ. ಈ ಹಿಂದೆಯೂ ದೇಶಾದ್ಯಂತ ಇಂತಹ 10 ಪರಿಷ್ಕರಣೆ ನಡೆದಿವೆ. ಆದರೂ ಇದೀಗ ರಾಜಕೀಯ ಉದ್ದೇಶಕ್ಕಾಗಿ ಚುನಾವಣಾ ಆಯೋಗದ ಹೆಗಲಿನ ಮೇಲೆ ಬಂದೂಕಿಟ್ಟು ಗುಂಡು ಹಾರಿಸುವ ಕೆಲಸ ನಡೆಯುತ್ತಿದೆ. ಸಾಂವಿಧಾನಿಕ ಸಂಸ್ಥೆಯ ಮೇಲೆ ಮತಗಳ್ಳತನದ ಆರೋಪ ಮಾಡಲಾಗುತ್ತಿದೆ. ಮತಗಳವು ಮತ್ತು ಡಬಲ್ ವೋಟಿಂಗ್ ಎಂಬ ಆರೋಪಗಳೇ ಸುಳ್ಳು’ ಎಂದು ಹೇಳಿದ್ದಾರೆ.
ಬಿಹಾರದ ಸಸರಾಂನಲ್ಲಿ ‘ಮತ ಅಧಿಕಾರ್ ಯಾತ್ರೆ’ಗೆ ಕಾಂಗ್ರೆಸ್ ಚಾಲನೆ ನೀಡಿದ ಬೆನ್ನಲ್ಲೇ ದೆಹಲಿಯಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿದ ಜ್ಞಾನೇಶ್ ಕುಮಾರ್, ‘ಚುನಾವಣೆ ಕುರಿತು ಪ್ರಶ್ನಿಸಲು 45 ದಿನಗಳ ಕಾಲಾವಕಾಶವಿರುತ್ತದೆ. ಆದರೂ ಆಗ ಈ ಕುರಿತು ಪ್ರಶ್ನಿಸದೆ ಇದೀಗ ಮತಕಳವಿನ ಆರೋಪ ಮಾಡುತ್ತಿರುವುದು ಸಂವಿಧಾನಕ್ಕೆ ಮಾಡಿದ ಅಪಮಾನ. ಇಂಥ ಆರೋಪಗಳ ಹಿಂದಿನ ಉದ್ದೇಶವಾದರೂ ಏನು? ಸುಮಾರು ಒಂದು ಕೋಟಿಗೂ ಹೆಚ್ಚು ಸಿಬ್ಬಂದಿ ಚುನಾವಣಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇಂಥ ಪಾರದರ್ಶಕ ಪ್ರಕ್ರಿಯೆಯಲ್ಲಿ ಮತಗಳವು ನಡೆಯಲು ಸಾಧ್ಯವೇ’ ಎಂದು ಪ್ರಶ್ನಿಸಿದರು.
ಇನ್ನೂ 15 ದಿನ ಟೈಂ ಇದೆ:
ಕೆಲ ಪಕ್ಷಗಳು ಮತ್ತು ಅದರ ನಾಯಕರು ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಕುರಿತು ತಪ್ಪು ಮಾಹಿತಿ ಹರಡುತ್ತಿರುವುದು ಕಳವಳದ ವಿಚಾರ. ಒಬ್ಬನೇ ಮತದಾರನ ಹೆಸರು ಹಲವು ಕಡೆ ಇದೆ ಎಂದ ಮಾತ್ರಕ್ಕೆ ಆತ ಹಲವು ಕಡೆ ಮತದಾನ ಮಾಡಿದ್ದಾನೆ ಎಂದಲ್ಲ. ಇಂಥ ಲೋಪಗಳನ್ನು ಪರಿಷ್ಕರಣೆ ಮೂಲಕ ಮಾತ್ರವೇ ಸರಿಪಡಿಸಲು ಸಾಧ್ಯ. ಇನ್ನೂ 15 ದಿನದ ಕಾಲಾವಕಾಶವಿದೆ. ಮತದಾರರ ಕರಡು ಪಟ್ಟಿ ಕುರಿತು ಯಾವುದೇ ಆಕ್ಷೇಪಣೆಗಳಿದ್ದರೆ ಎಲ್ಲಾ ರಾಜಕೀಯ ಪಕ್ಷಗಳು ಆಕ್ಷೇಪ ಅಥವಾ ತಿದ್ದುಪಡಿಗೆ ಮುಂದೆ ಬರಬೇಕು ಎಂದು ಆಯೋಗ ಆಗ್ರಹಿಸುತ್ತದೆ’ ಎಂದು ಇದೇ ವೇಳೆ ಹೇಳಿದರು.
ತಾರತಮ್ಯ ಇಲ್ಲ:
ಚುನಾವಣಾ ಆಯೋಗಕ್ಕೆ ಅಧಿಕಾರದಲ್ಲಿರುವರು, ಪ್ರತಿಪಕ್ಷದಲ್ಲಿರುವವರು ಎಂಬ ಭೇದಭಾವ ಇಲ್ಲ. ನಾವು ಪಕ್ಷಗಳ ನಡುವೆ ಯಾವುದೇ ತಾರತಮ್ಯ ಮಾಡುವುದಿಲ್ಲ. ನಮಗೆ ಎಲ್ಲಾ ಪಕ್ಷಗಳೂ ಒಂದೇ ಎಂದರು.