ವಯನಾಡು ಲೋಕಸಭಾ ರೇಸಲ್ಲಿ ರಾಹುಲ್‌ ಗಾಂಧಿ ಮುಂಚೂಣಿ

KannadaprabhaNewsNetwork |  
Published : Apr 09, 2024, 12:52 AM ISTUpdated : Apr 09, 2024, 03:33 AM IST
Rahul Gandhi

ಸಾರಾಂಶ

2019ರ ಲೋಕಸಭಾ ಚುನಾವಣೆ ವೇಳೆ ಉತ್ತರಪ್ರದೇಶದ ಅಮೇಠಿಯಲ್ಲಿ ಸೋಲಿನ ಸಾಧ್ಯತೆ ಊಹಿಸಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹುಡುಕಿಕೊಂಡ ಮತ್ತೊಂದು ಕ್ಷೇತ್ರ ಕೇರಳದ ವಯನಾಡು. ಊಹೆ ಸುಳ್ಳಾಗಲಿಲ್ಲ.

 ವಯನಾಡು:  2019ರ ಲೋಕಸಭಾ ಚುನಾವಣೆ ವೇಳೆ ಉತ್ತರಪ್ರದೇಶದ ಅಮೇಠಿಯಲ್ಲಿ ಸೋಲಿನ ಸಾಧ್ಯತೆ ಊಹಿಸಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹುಡುಕಿಕೊಂಡ ಮತ್ತೊಂದು ಕ್ಷೇತ್ರ ಕೇರಳದ ವಯನಾಡು. ಊಹೆ ಸುಳ್ಳಾಗಲಿಲ್ಲ. ಅಮೇಠಿಯಲ್ಲಿ ರಾಹುಲ್‌ಗೆ ಬಿಜೆಪಿಯ ಸ್ಮೃತಿ ಇರಾನಿ ವಿರುದ್ಧ 50000ಕ್ಕೂ ಹೆಚ್ಚು ಮತಗಳ ಅಂತರದ ಸೋಲಾದರೆ, ವಯನಾಡಿನಲ್ಲಿ 4.50 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದರು.ಅದಾದ 5 ವರ್ಷದಲ್ಲಿ ರಾಹುಲ್‌ ಗಾಂಧಿ, ಮೋದಿ ಸಮುದಾಯ ಟೀಕಿಸಿದ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿ ಲೋಕಸಭಾ ಸದಸ್ಯತ್ವವನ್ನೂ ಕಳೆದುಕೊಳ್ಳುವಂತಾಗಿತ್ತು. ಆದರೆ ಪ್ರಕರಣದಲ್ಲಿ ಮೇಲ್ಮನವಿ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಅವರ ಲೋಕಸಭಾ ಸ್ಥಾನ ಮರಳಿಸಲಾಗಿತ್ತು.

ಅಂಥ ಹೊತ್ತಲ್ಲೇ ಮತ್ತೆ ಲೋಕಸಭಾ ಚುನಾವಣೆ ಎದುರಾಗಿದೆ. ರಾಹುಲ್‌ ಮತ್ತೆ ಕಣಕ್ಕೆ ಇಳಿದಿದ್ದಾರೆ. ಮೇಲ್ನೋಟಕ್ಕೆ ಎದುರಾಳಿಗಳಿಗಿಂತ ರಾಹುಲ್‌ ಸಾಕಷ್ಟು ಮುನ್ನಡೆಯಲಿದ್ದಾರೆ.

ಕ್ಷೇತ್ರ ಹೇಗಿದೆ?: ವಯನಾಡು ಕ್ಷೇತ್ರವು, ವಯನಾಡು, ಕಲ್ಲಿಕೋಟೆ ಮತ್ತು ಮಲಪ್ಪುರಂ ಜಿಲ್ಲೆಯ ವ್ಯಾಪ್ತಿಯ ಭಾಗಗಳನ್ನು ಒಳಗೊಂಡಿದೆ. 2009ರಲ್ಲಿ ಕ್ಷೇತ್ರ ರಚನೆ ಆದಾಗಿನಿಂದಲೂ ಇದು ಕಾಂಗ್ರೆಸ್‌ ಭದ್ರ ಕೋಟೆ. ಕ್ಷೇತ್ರದಲ್ಲಿನ ಕಾಂಗ್ರೆಸ್ ಕಾರ್ಯಕರ್ತರ ಪಡೆ, ಕ್ಷೇತ್ರದ ಒಟ್ಟುಮತದಾರರ ಪೈಕಿ ಶೇ.40ರಷ್ಟು ಮುಸ್ಲಿಮರು ಮತ್ತು ಶೇ.20ರಷ್ಟಿರುವ ಕ್ರೈಸ್ತರು ರಾಹುಲ್‌ಗೆ ಕಳೆದ ಬಾರಿ ದೊಡ್ಡ ಗೆಲುವು ತಂದುಕೊಟ್ಟಿದ್ದರು. ಈ ಬಾರಿಯೂ ಅದು ಬದಲಾಗುವ ಲಕ್ಷಣಗಳಿಲ್ಲ.

ಮೈತ್ರಿಕೂಟದ ಸೆಣಸು: ಕಳೆದ ಬಾರಿ ರಾಹುಲ್‌ ಗಾಂಧಿ, ಸಿಪಿಐನ ಪಿ.ಪಿ.ಸುನೀರ್‌ ವಿರುದ್ಧ ಗೆಲುವು ಸಾಧಿಸಿದ್ದರು. ಆದರೆ ಈ ಬಾರಿ ಕಾಂಗ್ರೆಸ್‌ ಮತ್ತು ಸಿಪಿಐ ಎರಡೂ ಇಂಡಿಯಾ ಮೈತ್ರಿಕೂಟದ ಭಾಗವಾಗಿದ್ದರೂ ಇಲ್ಲಿ ಪರಸ್ಪರ ಸ್ಪರ್ಧಿಸುತ್ತಿವೆ. ಸಿಪಿಐ ಅಭ್ಯರ್ಥಿಯಾಗಿ ಪಕ್ಷದ ಹಿರಿಯ ನಾಯಕ ಡಿ.ರಾಜಾ ಅವರ ಪತ್ನಿ ಆ್ಯನ್ನಿ ರಾಜಾ ಕಣಕ್ಕೆ ಇಳಿದಿದ್ದಾರೆ. ಕಳೆದ ಬಾರಿ ಸಿಪಿಐ ಅಭ್ಯರ್ಥಿ 2.7 ಲಕ್ಷ ಮತ ಪಡೆದಿದ್ದರೆ ರಾಹುಲ್‌ ಗಾಂಧಿ 7 ಲಕ್ಷ ಮತ ಪಡೆದಿದ್ದರು.

ಸುರೇಂದ್ರನ್‌ ಸ್ಪರ್ಧೆ: ಬಿಜೆಪಿಯಿಂದ ಪಕ್ಷದ ರಾಜ್ಯಾಧ್ಯಕ್ಷ ಸುರೇಂದ್ರನ್‌ ಕಣಕ್ಕೆ ಇಳಿದಿದ್ದಾರೆ. ಕಾಂಗ್ರೆಸ್‌- ಸಿಪಿಐ ಸೆಣಸಿನಲ್ಲಿ ಗೆಲುವಿನ ಹುಡುಕಾಟವನ್ನು ಸುರೇಂದ್ರನ್‌ ನಡೆಸಿದ್ದಾರೆ.

ಪ್ರಮುಖ ಅಭ್ಯರ್ಥಿಗಳು: ರಾಹುಲ್‌ ಗಾಂಧಿ, ಆ್ಯನ್ನಿ ರಾಜಾ, ಸುರೇಂದ್ರನ್‌

PREV

Recommended Stories

ರಾಹುಲ್‌ ವಿರುದ್ಧ 5ಕ್ಕೆ ಬಿಜೆಪಿ ಧರಣಿ : ಬಿವೈವಿ
ಸಂಘರ್ಷ ಬಿಟ್ಟು ಒಳಮೀಸಲು ಜಾರಿ : ಪರಂ ನೇತೃತ್ವದ ಸಭೆ