- ಕಾಲ್ನಡಿಗೆಯೋ? ಧರಣಿಯೋ? ಇಂದು ನಿರ್ಧಾರ- ಚು. ಆಯೋಗ ವಿರುದ್ಧ ಕರ್ನಾಟಕದಿಂದ ಸಮರ
ಜು.23: ಕರ್ನಾಟಕದ ಕ್ಷೇತ್ರವೊಂದರಲ್ಲಿ ‘ಮತಗಳ್ಳತನ’ ನಡೆದಿದೆ ಎಂದು ಕಳೆದ ವಾರ ಗಂಭೀರ ಆರೋಪ ಮಾಡಿದ್ದ ರಾಹುಲ್ ಗಾಂಧಿ
ಜು.24: ಚುನಾವಣಾ ಆಯೋಗ ಕೂಡ ಮತಗಳ್ಳತನದಲ್ಲಿ ಶಾಮೀಲಾಗಿದ್ದು, ಶೇ.100ರಷ್ಟು ದಾಖಲೆ ಇವೆ ಎಂದು ಪುನರುಚ್ಚರಿಸಿದ್ದ ರಾಹುಲ್ಜು.24: ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಈ ರೀತಿ ಆಗಿದೆ ಎಂಬುದರ ಬಗ್ಗೆ ತನಿಖೆ ನಡೆಸಿರುವುದಾಗಿ ಹೇಳಿಕೊಂಡಿದ್ದ ಡಿಸಿಎಂ ಡಿಕೆಶಿ
ಜು.25: ರಾಹುಲ್ ಗಾಂಧಿ ಹೇಳಿಕೆಯನ್ನು ಬೆಂಬಲಿಸಿ ಮಾತನಾಡಿದ್ದ ರಾಜ್ಯದ ಹಲವು ಸಚಿವರು ಹಾಗೂ ಕಾಂಗ್ರೆಸ್ಸಿನ ಶಾಸಕರು
‘ಭಾರತದಲ್ಲಿ ಚುನಾವಣೆಯನ್ನೇ ಕದಿಯಲಾಗುತ್ತಿದೆ. ಕರ್ನಾಟಕದ ಲೋಕಸಭಾ ಕ್ಷೇತ್ರವೊಂದರಲ್ಲಿ ಮತಗಳ್ಳತನ ನಡೆದಿದೆ’ ಎಂದು ಆರೋಪಿಸಿದ್ದ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಇದರ ವಿರುದ್ಧದ ಹೋರಾಟಕ್ಕೆ ರಾಜಧಾನಿ ಬೆಂಗಳೂರಿನಿಂದಲೇ ಚಾಲನೆ ನೀಡಲಿದ್ದಾರೆ.
ಮಹಾರಾಷ್ಟ್ರದಲ್ಲೂ ರಾಹುಲ್ ಗಾಂಧಿ ‘ಮತಗಳ್ಳತನ’ ಆರೋಪ ಮಾಡಿದ್ದರು. ಆದರೆ ಅವರೇ ಹೋರಾಟಕ್ಕೆ ಧುಮುಕಿರಲಿಲ್ಲ. ಇದೀಗ ಕರ್ನಾಟಕ ಮೂಲಕ ಹೋರಾಟ ಸಂಘಟಿಸಲು ಮುಂದಾಗಿದ್ದಾರೆ ಎಂದು ಹೇಳಲಾಗಿದೆ.
ಈ ಪ್ರತಿಭಟನೆ ಯಶಸ್ವಿಗೊಳಿಸುವ ಸಂಬಂಧ ಚರ್ಚಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಬುಧವಾರ ಸಂಜೆ 4.30ಕ್ಕೆ ಕ್ವೀನ್ಸ್ ರಸ್ತೆಯ ಪಕ್ಷದ ಕಚೇರಿಯಲ್ಲಿ ಬೆಂಗಳೂರು ನಗರದ 5 ಡಿಸಿಸಿ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ದಕ್ಷಿಣ (ರಾಮನಗರ), ಮಂಡ್ಯ ಜಿಲ್ಲೆಗಳ ಮುಖಂಡರುಗಳ ಸಭೆ ಕರೆದಿದ್ದಾರೆ.