ರಾಜ್‌ಗಢದ ರಾಜರಿಗೆ ಅಂತಿಮ‘ ದಿಗ್ವಿಜಯ’ ಸಾಧ್ಯವೇ?

KannadaprabhaNewsNetwork |  
Published : May 07, 2024, 01:10 AM ISTUpdated : May 07, 2024, 04:52 AM IST
 ರಾಜ್‌ಗಢ ಕ್ಷೇತ್ರ | Kannada Prabha

ಸಾರಾಂಶ

ಮಧ್ಯಪ್ರದೇಶದಲ್ಲಿ ಹಿರಿಯ ಕಾಂಗ್ರೆಸ್‌ ನಾಯಕ ದಿಗ್ವಿಜಯ್‌ ಸಿಂಗ್‌ ಅವರ ತವರು ಕ್ಷೇತ್ರ ರಾಜ್‌ಗಢ ಇಬ್ಬರು ಘಟಾನುಘಟಿ ನಾಯಕರ ಹಣಾಹಣಿಗೆ ಸಾಕ್ಷಿಯಾಗುತ್ತಿದೆ.

ಮಧ್ಯಪ್ರದೇಶದಲ್ಲಿ ಹಿರಿಯ ಕಾಂಗ್ರೆಸ್‌ ನಾಯಕ ದಿಗ್ವಿಜಯ್‌ ಸಿಂಗ್‌ ಅವರ ತವರು ಕ್ಷೇತ್ರ ರಾಜ್‌ಗಢ ಇಂದು ಇಬ್ಬರು ಘಟಾನುಘಟಿ ನಾಯಕರ ಹಣಾಹಣಿಗೆ ಸಾಕ್ಷಿಯಾಗುತ್ತಿದೆ. ಎರಡು ಬಾರಿಯಿಂದ ಕೈ ತಪ್ಪಿರುವ ಕ್ಷೇತ್ರವನ್ನು ಮರಳಿ ತೆಕ್ಕೆಗೆ ತೆಗೆದುಕೊಳ್ಳಲು ಸ್ವತಃ ದಿಗ್ವಿಜಯ್‌ ಸಿಂಗ್‌ ಕಾಂಗ್ರೆಸ್‌ ಪರವಾಗಿ ಕಣಕ್ಕಿಳಿದಿದ್ದರೆ ಬಿಜೆಪಿ ತನ್ನ ಹಾಲಿ ಸಂಸದ ರೊಡ್ಮಲ್‌ ನಾಗರ್‌ಗೆ ಮತ್ತೊಮ್ಮೆ ಟಿಕೆಟ್‌ ನೀಡಿ ಹ್ಯಾಟ್ರಿಕ್‌ ಕನಸು ಕಾಣುತ್ತಿದೆ.

ದಿಗ್ವಿಜಯ್‌ ಬಲಾಬಲ ಹೇಗಿದೆ?

ರಾಜವಂಶಸ್ಥ ದಿಗ್ವಿಜಯ್‌ ಸಿಂಗ್‌ 1969ರಲ್ಲಿ ರಾಜಕಾರಣ ಪ್ರವೇಶಿಸಿದಾಗಿನಿಂದಲೂ ಇದೇ ಕ್ಷೇತ್ರದಲ್ಲಿ ಮೇಲೆರುತ್ತಾ ಬಂದಿದ್ದಾರೆ. ಅದರಲ್ಲೂ 1984ರಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಮೊದಲ ಬಾರಿ ರಾಷ್ಟ್ರ ರಾಜಕಾರಣವನ್ನು ಪ್ರವೇಶಿಸಿದ್ದರು. ಬಳಿಕ 1989ರಲ್ಲಿ ಸೋತರೂ 1991ರಲ್ಲಿ ಮತ್ತೊಮ್ಮೆ ಗೆಲುವನ್ನು ಸಾಧಿಸಿದರು. ನಂತರ 1993ರಲ್ಲಿ ಅವರಿಗೆ ಮಧ್ಯಪ್ರದೇಶದ ಮುಖ್ಯಮಂತ್ರಿ ಆಗುವ ಯೋಗ ಒಲಿದ ಹಿನ್ನೆಲೆಯಲ್ಲಿ ತಮ್ಮ ಲಕ್ಷ್ಮಣ್‌ ಸಿಂಗ್‌ಗೆ ಕ್ಷೇತ್ರವನ್ನು ಬಿಟ್ಟುಕೊಟ್ಟರು. ಲಕ್ಷ್ಮಣ್‌ ನಂತರ ಸತತವಾಗಿ 5 ಚುನಾವಣೆಯಲ್ಲಿ ಗೆಲುವನ್ನು ಸಾಧಿಸಿ ದಾಖಲೆ ಬರೆದಿದ್ದರು. ಆದರೆ 2014 ಮತ್ತು 2019ರಲ್ಲಿ ಅಭ್ಯರ್ಥಿಯನ್ನು ಬದಲಿಸಿದ ಪರಿಣಾಮ ಕಾಂಗ್ರೆಸ್‌ ಪಕ್ಷ ಕ್ಷೇತ್ರವನ್ನು ಕಳೆದುಕೊಂಡಿತ್ತು. ಈಗ ಮತ್ತೊಮ್ಮೆ ಕಾಂಗ್ರೆಸ್‌ ಪಕ್ಷಕ್ಕೆ ರಾಜ್ಯದಲ್ಲಿ ಸಂದಿಗ್ಧ ಪರಿಸ್ಥಿತಿ ಇರುವ ಸನ್ನಿವೇಶದಲ್ಲಿ ಸ್ವತಃ ದಿಗ್ವಿಜಯ್‌ ಸಿಂಗ್‌ ಅಖಾಡಕ್ಕಿಳಿದಿದ್ದು, ಗೆಲುವಿನೊಂದಿಗೆ ಚುನಾವಣಾ ರಾಜಕಾರಣಕ್ಕೆ ವಿದಾಯ ಹೇಳುವ ಹುಮ್ಮಸ್ಸಿನಲ್ಲಿದ್ದಾರೆ. ಇವರ ಪರವಾಗಿ ರಾಘೋಗಢದ ಶಾಸಕರಾಗಿರುವ ಪುತ್ರ ಜೈವರ್ಧನ್‌ ಸಿಂಗ್‌ ನೇತೃತ್ವ ವಹಿಸಿಕೊಂಡು ಅಬ್ಬರದ ಪ್ರಚಾರ ನಡೆಸಿ ಮತಯಾಚನೆ ಮಾಡಿದ್ದಾರೆ. ಪ್ರಸ್ತುತ ಚುನಾವಣೆಯಲ್ಲಿ ಗೆದ್ದು ಕಳೆದ ಬಾರಿ 3.56 ಲಕ್ಷ ಮತಗಳ ಅಂತರದಿಂದ ಕಂಡಿದ್ದ ಸೋಲಿಗೆ ಬಿಜೆಪಿ ವಿರುದ್ಧ ಸೇಡು ತೀರಿಸಿಕೊಳ್ಳಲು ದಿಗ್ವಿಜಯ್‌ ಅವರಿಗೆ ಸಾಧ್ಯವಾಗುವುದೇ ಎಂಬುದನ್ನು ಇಂದು ಮತದಾರರು ನಿರ್ಧರಿಸಲಿದ್ದಾರೆ.

ಹ್ಯಾಟ್ರಿಕ್ ಸಾಧನೆಯತ್ತ ಬಿಜೆಪಿ:

ದಿಗ್ವಿಜಯ್‌ ಕುಟುಂಬದ ತೆಕ್ಕೆಯಿಂದ ಕಸಿದುಕೊಂಡ ಬಳಿಕ ಕ್ಷೇತ್ರದಲ್ಲಿ ಬಿಜೆಪಿ ಪ್ರಬಲವಾಗಿದೆ. ರಾಜ್‌ಗಢದ 8 ವಿಧಾನಸಭಾ ಕ್ಷೇತ್ರಗಳ ಪೈಕಿ ದಿಗ್ಗಿ ಪುತ್ರರೊಬ್ಬರನ್ನು ಬಿಟ್ಟು 7 ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರೇ ಇದ್ದಾರೆ. ಇದರ ಜೊತೆಗೆ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವವಾಗಿ ಗೆಲುವು ಸಾಧಿಸಿರುವುದು ಬಿಜೆಪಿ ಕಾರ್ಯಕರ್ತರ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಸ್ಥಳೀಯರ ವಿರೋಧದ ನಡುವೆಯೂ ಹಾಲಿ ಸಂಸದ ರೊಡ್ಮಲ್‌ ನಾಗರ್‌ ಅವರಿಗೆ ಮೂರನೇ ಬಾರಿ ಉಮೇದುವಾರಿಕೆ ಸಲ್ಲಿಸಲು ಅವಕಾಶ ನೀಡಿದ್ದಾರೆ. ಜೊತೆಗೆ ಅಮಿತ್‌ ಶಾ ಅವರೂ ಕೂಡ ಅಬ್ಬರದ ಪ್ರಚಾರ ನಡೆಸಿ ಉರ್ದು ಶಾಯಿರಿಯನ್ನು ಉದ್ಗರಿಸುತ್ತಾ, ‘ಪ್ರಿಯತಮನ ಅಂತಿಮಯಾತ್ರೆ ನಡೆಯುತ್ತಿದೆ. ಅದು ಇನ್ನಷ್ಟು ಅದ್ಧೂರಿಯಾಗಿ ನಡೆಯಲಿ’ ಎಂದು ಹೇಳಿ ಹಿರಿಯ ನಾಯಕ ದಿಗ್ವಿಜಯ್ ಸಿಂಗ್‌ರನ್ನು ಭಾರೀ ಅಂತರದಿಂದ ಸೋಲಿಸುವ ಮೂಲಕ ಅತ್ಯುತ್ತಮ ರೀತಿಯಲ್ಲಿ ಅವರ ಚುನಾವಣಾ ರಾಜಕಾರಣಕ್ಕೆ ವಿದಾಯ ನೀಡಬೇಕೆಂದು ವ್ಯಂಗ್ಯ ಮಾಡಿ ಜನರನ್ನು ಭಾವನಾತ್ಮಕವಾಗಿ ಸೆಳೆದಿರುವುದು ಇಂದಿನ ಮತದಾನದಲ್ಲಿ ಭಾರೀ ಮಟ್ಟದ ಪರಿಣಾಮ ಬೀರುವ ಸಾಧ್ಯತೆಯಿದೆ.

ಸ್ಪರ್ಧೆ ಹೇಗೆ?

ರಾಜ್‌ಗಢಕ್ಕೆ ರಾಜವಂಶಸ್ಥ ದಿಗ್ವಿಜಯ್‌ ಸಿಂಗ್‌ ಮರಳಿ ಬಂದಿದ್ದರೂ ಇಲ್ಲಿ ಕಾಂಗ್ರೆಸ್‌ ತನ್ನ ಕಾರ್ಯಕರ್ತರ ಪಡೆಯನ್ನೇ ಕಳೆದುಕೊಂಡಿರುವುದು ಪಕ್ಷಕ್ಕೆ ಮುಳುವಾಗುವ ಸಾಧ್ಯತೆಯಿದೆ. ಸ್ವತಃ ದಿಗ್ಗಿ ಸೋದರ ಸತತ ಐದು ಬಾರಿಯ ಸಂಸದ ಲಕ್ಷ್ಮಣ್‌ ಅವರ ನಿಕಟವರ್ತಿಗಳೇ ಇತ್ತೀಚೆಗೆ ಬಿಜೆಪಿ ಸೇರಿರುವುದು ಕಾಂಗ್ರೆಸ್‌ಗೆ ನುಂಗಲಾರದ ತುತ್ತಾಗಿದೆ. ಆದಾಗ್ಯೂ ದಿಗ್ವಿಜಯ್‌ ಸಿಂಗ್‌ ಕ್ಷೇತ್ರದಲ್ಲಿ ತಮ್ಮ ಕೊನೆಯ ಚುನಾವಣೆ ಎಂದು ಹೇಳಿಕೊಂಡು ಮತಯಾಚನೆ ಮಾಡಿರುವುದಕ್ಕೆ ಜನತೆ ಮನವೊಲಿಯಬಹುದು. ಇತ್ತ ಬಿಜೆಪಿ ಒಳೇಟುಗಳು ಹೆಚ್ಚಿದ್ದು, ಸ್ಥಳೀಯ ಕಾರ್ಯಕರ್ತರ ವಿರೋಧದ ನಡುವೆಯೂ ಹಾಲಿ ಸಂಸದರಿಗೆ ಮತ್ತೊಮ್ಮೆ ಟಿಕೆಟ್‌ ನೀಡಿರುವುದು ಬಿಜೆಪಿಯ ಹ್ಯಾಟ್ರಿಕ್‌ ಕನಸಿಗೆ ಧಕ್ಕೆ ಉಂಟು ಮಾಡಬಹುದು. ಆದರೆ ಮೋದಿ ಅಲೆ ರಾಜ್ಯದಲ್ಲಿ ಹೆಚ್ಚಿದ್ದು, ಆ ನಿಟ್ಟಿನಲ್ಲಿ ಕ್ಷೇತ್ರದ ಜನತೆ ಅಭ್ಯರ್ಥಿಯನ್ನು ಗಮನಿಸದೆ ಪಕ್ಷಕ್ಕೆ ಮತ ಹಾಕಿ ರೊಡ್ಮಲ್‌ರನ್ನು ಗೆಲ್ಲಿಸುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.

ಸ್ಟಾರ್‌ ಕ್ಷೇತ್ರ: ರಾಜ್‌ಗಢ

ರಾಜ್ಯ: ಮಧ್ಯಪ್ರದೇಶ

ಮತದಾನದ ದಿನ: ಮೇ 7

ವಿಧಾನಸಭಾ ಕ್ಷೇತ್ರಗಳು: 8  

ಪ್ರಮುಖ ಅಭ್ಯರ್ಥಿಗಳು:

ಬಿಜೆಪಿ - ರೊಡ್ಮಲ್‌ ನಾಗರ್‌

ಕಾಂಗ್ರೆಸ್‌ - ದಿಗ್ವಿಜಯ್‌ ಸಿಂಗ್‌

ಬಿಎಸ್‌ಪಿ - ಡಾ. ರಾಜೇಂದ್ರ ಸೂರ್ಯವಂಶಿ

2019ರ ಫಲಿತಾಂಶ:

ಗೆಲುವು: ರೊಡ್ಮಲ್‌ ನಾಗರ್‌ - ಬಿಜೆಪಿ

ಸೋಲು: ಮೋನಾ ಸಸ್ತಾನಿ - ಕಾಂಗ್ರೆಸ್‌

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ವೈದ್ಯಕೀಯ ಪರಿಹಾರ ನಿಧಿ ಹಣಕ್ಕೆ ಬೆಂಗಳೂರು ಪಾಲಿಕೆ ತಡೆ