ಡಿಕೆಶಿಯಿಂದ ಸಿಎಂ ಸಿದ್ದರಾಮಯ್ಯ ಕೊಂಚ ಹುಷಾರಾಗಿರಬೇಕು ಎಂದು ಮಾಜಿ ಸಚಿವ ಹಾಗೂ ಸುರಪುರ ವಿಧಾನಸಭೆ ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿ ನರಸಿಂಹ ನಾಯಕ (ರಾಜೂಗೌಡ) ವ್ಯಂಗ್ಯವಾಡಿದರು.
ಯಾದಗಿರಿ : ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸಿಡಿ ಮಾಡುವುದರಲ್ಲಿ ಪ್ರವೀಣರು. ಸಿಎಂ ಸಿದ್ದರಾಮಯ್ಯ ಕುರ್ಚಿ ಮೇಲೆ ಕಣ್ಣಿಟ್ಟಿರುವ ಡಿಕೆಶಿ, ಇದೇ ಲೋಕಸಭೆ ಚುನಾವಣೆ ಮುಗಿದ ನಂತರ ಸಿಎಂ ಕೆಳಗಿಳಿಸಲು ಸಿದ್ದರಾಮಯ್ಯನವರ ಅಥವಾ ಯತೀಂದ್ರ ಸಿದ್ದರಾಮಯ್ಯನವರ ಸಿಡಿಯನ್ನೂ ಬಿಡಬಹುದು. ಹೀಗಾಗಿ, ಡಿಕೆಶಿಯಿಂದ ಸಿಎಂ ಸಿದ್ದರಾಮಯ್ಯ ಕೊಂಚ ಹುಷಾರಾಗಿರಬೇಕು ಎಂದು ಮಾಜಿ ಸಚಿವ ಹಾಗೂ ಸುರಪುರ ವಿಧಾನಸಭೆ ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿ ನರಸಿಂಹ ನಾಯಕ (ರಾಜೂಗೌಡ) ವ್ಯಂಗ್ಯವಾಡಿದರು.
ಹುಣಸಗಿ ಪಟ್ಟಣದಲ್ಲಿ ಗುರುವಾರ ಸಂಜೆ ನಡೆದ ಬಿಜೆಪಿ ಪ್ರಚಾರದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯಗೆ ರಾಜೂಗೌಡ ಅಥವಾ ಬಿಜೆಪಿ ಕುತ್ತು ಅಲ್ಲ. ಡಿ.ಕೆ.ಶಿವಕುಮಾರ್ ಅವರೇ ಸಿದ್ದರಾಮಯ್ಯಗೆ ಕುತ್ತು ತರುತ್ತಾರೆ. ಸಿಎಂ ಸಿದ್ದು ಇಂತವರನ್ನು ಪಕ್ಕದಲ್ಲಿ ಕರೆದುಕೊಂಡು ಓಡಾಡಬಾರದು. ರಮೇಶ ಜಾರಕಿಹೊಳಿ ಓಡಾಡಿಯೇ ಅವರ ಸಿಡಿ ಮಾಡಿ ಮನೆಗೆ ಕಳುಹಿಸಿದರು. ಡಿಕೆಶಿ ಬಂದಿರುವುದು ಸಿದ್ದರಾಮಯ್ಯಗೆ ಒಳ್ಳೇದಾಗಲ್ಲ ಎಂದು ರಾಜೂಗೌಡ ವ್ಯಂಗ್ಯವಾಡಿದರು.
ಲೋಕಸಭೆ ಚುನಾವಣೆ ಮುಗಿದ ಮೇಲೆ ಸಿದ್ದರಾಮಯ್ಯನವರದ್ದೇ ಸಿಡಿ ಬಿಡಬಹುದು. ಇಲ್ಲವೆಂದರೆ ಯತೀಂದ್ರ ಅವರದ್ದು ಯಾವುದಾದರೂ ಸಿಡಿ ಬಿಡುತ್ತಾರೆ. ಆದ್ದರಿಂದ ಸಿದ್ದರಾಮಯ್ಯನವರು ಹುಷಾರಾಗಿರಿ. ಡಿ.ಕೆ. ಶಿವಕುಮಾರ್‌ಗೆ ಮುಖ್ಯಮಂತ್ರಿ ಖುರ್ಚಿ ಮೇಲೆ ಮೊದಲಿನಿಂದಲೇ ಆಸೆಯಿದೆ. ಅದಕ್ಕಾಗಿ ಅವರು ಏನು ಬೇಕಾದರೂ ಮಾಡಬಹುದು ಎಂದು ಮಾತಿನಲ್ಲಿ ಕುಟುಕಿದರು.