ಸಿ.ಟಿ.ರವಿ-ಹೆಬ್ಬಾಳ್ಕರ್‌ ಅವಾಚ್ಯ ಶಬ್ದ ಪ್ರಕರಣ : ಸಿಐಡಿ ತನಿಖೆಗೆ ಆಕ್ಷೇಪ ಎತ್ತಿದ್ದ ಹೊರಟ್ಟಿಗೆ ಪರಂ ತಿರುಗೇಟು

KannadaprabhaNewsNetwork | Updated : Jan 13 2025, 04:30 AM IST

ಸಾರಾಂಶ

‘ವಿಧಾನ ಪರಿಷತ್‌ ಸದಸ್ಯ ಸಿ.ಟಿ.ರವಿ ಅವರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ವಿರುದ್ಧ ಅವಾಚ್ಯ ಶಬ್ದ ಬಳಸಿದ್ದಾರೆ ಎಂಬ ಪ್ರಕರಣದಲ್ಲಿ ಅನಗತ್ಯ ಗೊಂದಲ ಉಂಟಾಗುತ್ತಿದ್ದರಿಂದ ಸತ್ಯಾಸತ್ಯತೆ ಪತ್ತೆ ಹಚ್ಚಲು ತನಿಖೆಯನ್ನು ಸಿಐಡಿಗೆ ಕೊಟ್ಟಿದ್ದೇವೆ.

 ಬೆಂಗಳೂರು : ‘ವಿಧಾನ ಪರಿಷತ್‌ ಸದಸ್ಯ ಸಿ.ಟಿ.ರವಿ ಅವರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ವಿರುದ್ಧ ಅವಾಚ್ಯ ಶಬ್ದ ಬಳಸಿದ್ದಾರೆ ಎಂಬ ಪ್ರಕರಣದಲ್ಲಿ ಅನಗತ್ಯ ಗೊಂದಲ ಉಂಟಾಗುತ್ತಿದ್ದರಿಂದ ಸತ್ಯಾಸತ್ಯತೆ ಪತ್ತೆ ಹಚ್ಚಲು ತನಿಖೆಯನ್ನು ಸಿಐಡಿಗೆ ಕೊಟ್ಟಿದ್ದೇವೆ. ಇದರಿಂದ ಸಾಂವಿಧಾನಿಕ ಸಂಘರ್ಷ ಆಗುವುದಿಲ್ಲ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಪ್ರತಿಕ್ರಿಯಿಸಿದ್ದಾರೆ. ಈ ಮೂಲಕ ಸಿಐಡಿ ತನಿಖೆಯಿಂದ ಸಾಂವಿಧಾನಿಕ ಸಂಘರ್ಷ ಆಗಬಹುದು ಎಂದು ಆಕ್ಷೇಪಿಸಿದ್ದ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಪರೋಕ್ಷ ತಿರುಗೇಟು ನೀಡಿದ್ದಾರೆ.

ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿ, ಸಿ.ಟಿ.ರವಿ-ಹೆಬ್ಬಾಳ್ಕರ್‌ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿರುವ ಸಂಬಂಧ ಸಭಾಪತಿ ಬಸವರಾಜ ಹೊರಟ್ಟಿ ಅವರು ಬರೆದಿರುವ ಪತ್ರದಲ್ಲಿ ಏನಿದೆ ಎಂಬುದನ್ನು ನೋಡಿಕೊಂಡು ಕಾನೂನು ಸಲಹೆ ಪಡೆದು ಮುಂದುವರೆಯುತ್ತೇವೆ. ಸಭಾಪತಿ ಬಸವರಾಜ ಹೊರಟ್ಟಿ ಅವರು ಕಾನೂನು ಚೌಕಟ್ಟಿನಲ್ಲಿ ತೀರ್ಪು ಕೊಡುತ್ತಾರೆ. ನಮ್ಮ ತನಿಖೆಯನ್ನು ಸಹ ಅದೇ ಕಾನೂನು ಚೌಕಟ್ಟಿನಲ್ಲೇ ಮಾಡುತ್ತೇವೆ ಎಂದು ಇದೇ ವೇಳೆ ತಿಳಿಸಿದರು.

ಕಾನೂನು ಯಾರಿಗೂ ಹೊರತಾಗಿಲ್ಲ. ಲಕ್ಷ್ಮಿ‌ ಹೆಬ್ಬಾಳ್ಕರ್ ದೂರಿನ ಮೇರೆಗೆ ಪೊಲೀಸರು ನಡೆದುಕೊಂಡಿದ್ದಾರೆ.‌ ಇದೆಲ್ಲ ಪರಿಶೀಲಿಸುತ್ತೇವೆ. ಕಾನೂನು ಚೌಕಟ್ಟಿನಲ್ಲಿ ಶಾಸಕಾಂಗದ ಸಾರ್ವಭೌಮತ್ವ ಉಲ್ಲಂಘನೆ ಆಗಿದೆಯಾ ಎಂದೂ ಪರಿಶೀಲಿಸುತ್ತೇವೆ. ಅನವಶ್ಯಕ ಗೊಂದಲ ಆಗುತ್ತಿದ್ದ ಹಿನ್ನೆಲೆಯಲ್ಲಿ ಸತ್ಯಾಸತ್ಯತೆ ಪತ್ತೆ ಹಚ್ಚಲು ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಸಿ.ಟಿ.ರವಿ ಅವರಿಗೆ ಅನಾಮಿಕರಿಂದ ಬೆದರಿಕೆ ಪತ್ರ ಬಂದಿರುವ ಬಗ್ಗೆ ಪರಿಶೀಲಿಸುತ್ತೇವೆ. ಈಗಾಗಲೇ ಸಿಐಡಿಯವರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಪತ್ರದ ವಿಚಾರವನ್ನೂ ಪರಿಶೀಲಿಸುತ್ತಾರೆ. ಯಾರು ಬರೆದಿದ್ದು ಎಂಬುದು ತನಿಖೆಯಿಂದಷ್ಟೇ ಗೊತ್ತಾಗಬೇಕು ಎಂದರು.

ಶಸ್ತ್ರಾಸ್ತ್ರ ಹೋರಾಟ ಬೇಡ:

ಎಲ್ಲರೂ ಹೋರಾಟ ಮಾಡಲು ಸಂವಿಧಾನದಲ್ಲಿ ಅವಕಾಶ ಇದೆ. ಸಂವಿಧಾನ ಹೇಳಿದ ದಾರಿಯಲ್ಲಿ ಹೋರಾಟ ಮಾಡಬೇಕು. ಶಸ್ತ್ರಾಸ್ತ್ರಗಳ ಬಳಕೆ ಮಾಡುವ ಮಾರ್ಗ ಬೇಡ. ಶಸ್ತ್ರಗಳ ದಾರಿ ಹಿಡಿಯಲ್ಲ ಅಂತ ನಕ್ಸಲರು ಹೇಳಿದ್ದಾರೆ. ಮೂರು ವರ್ಷ ಸರ್ಕಾರ ಇರುತ್ತದೆ. ಅವರ ಸಮಸ್ಯೆಗಳನ್ನು ಬಗೆಹರಿಸುವ ಕೆಲಸ ಮಾಡುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪರಂ ಸಮರ್ಥನೆ ಏನು?

- ಸಭಾಪತಿ ಹೊರಟ್ಟಿ ಕಾನೂನು ಚೌಕಟ್ಟಿನಲ್ಲಿ ತೀರ್ಪು ಕೊಡುತ್ತಾರೆ

- ನಾವು ನಮ್ಮ ತನಿಖೆಯನ್ನು ಅದೇ ಕಾನೂನು ಚೌಕಟ್ಟಲ್ಲೇ ಮಾಡ್ತೇವೆ

- ಲಕ್ಷ್ಮಿ ಹೆಬ್ಬಾಳ್ಕರ್‌ ದೂರು ಆಧರಿಸಿ ಪೊಲೀಸರು ಕ್ರಮ ಜರುಗಿಸಿದ್ದಾರೆ

- ಕಾನೂನು ಯಾರಿಗೂ ಹೊರತಾಗಿಲ್ಲ, ಕಾನೂನು ಸಲಹೆ ಆಧರಿಸಿ ನಮ್ಮ ನಡೆ

Share this article