ಆರ್‌ಸಿಬಿ ಪರೇಡ್‌ ಗೊಂದಲವೂ ಕಾಲ್ತುಳಿತಕ್ಕೆ ಕಾರಣ?

Published : Jun 06, 2025, 07:53 AM IST
RCB victory stampede

ಸಾರಾಂಶ

18ನೇ ಆವೃತ್ತಿ ಐಪಿಎಲ್‌ ಟ್ರೋಫಿ ಗೆದ್ದ ಬಳಿಕ ಆರ್‌ಸಿಬಿ ಆಟಗಾರರು ಬುಧವಾರ ನಡೆಸಿದ ಸಂಭ್ರಮಾಚರಣೆ ವೇಳೆ ಉಂಟಾದ ಕಾಲ್ತುಳಿತ 11 ಜನರನ್ನು ಬಲಿ ತೆಗೆದುಕೊಂಡಿದೆ.

  ಬೆಂಗಳೂರು : 18ನೇ ಆವೃತ್ತಿ ಐಪಿಎಲ್‌ ಟ್ರೋಫಿ ಗೆದ್ದ ಬಳಿಕ ಆರ್‌ಸಿಬಿ ಆಟಗಾರರು ಬುಧವಾರ ನಡೆಸಿದ ಸಂಭ್ರಮಾಚರಣೆ ವೇಳೆ ಉಂಟಾದ ಕಾಲ್ತುಳಿತ 11 ಜನರನ್ನು ಬಲಿ ತೆಗೆದುಕೊಂಡಿದೆ. ಹಲವರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಈ ಘಟನೆಗೆ ರಾಜ್ಯ ಸರ್ಕಾರ, ರಾಜ್ಯ ಕ್ರಿಕೆಟ್‌ ಸಂಸ್ಥೆ ನೇರ ಹೊಣೆ ಎಂಬ ಆರೋಪಗಳು ಕೇಳಿಬರುತ್ತಿವೆ. ಈ ನಡುವೆ ಆರ್‌ಸಿಬಿ ಫ್ರಾಂಚೈಸಿಯು ಪರೇಡ್‌ ವಿಚಾರದಲ್ಲಿ ಸೃಷ್ಟಿಸಿದ ಗೊಂದಲವೂ ಕಾಲ್ತುಳಿತಕ್ಕೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

ಮಂಗಳವಾರ ಅಹಮದಾಬಾದ್‌ ಕ್ರೀಡಾಂಗಣದಲ್ಲಿ ಟ್ರೋಫಿ ಗೆದ್ದಿದ್ದ ಆರ್‌ಸಿಬಿ, ಬುಧವಾರ ಮಧ್ಯಾಹ್ನ 3.30ಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ತೆರೆದ ಬಸ್‌ನಲ್ಲಿ ಆಟಗಾರರ ಪರೇಡ್‌ ಹಾಗೂ ಕ್ರೀಡಾಂಗಣದಲ್ಲಿ ವಿಜಯೋತ್ಸವ ನಡೆಸುವುದಾಗಿ ತಿಳಿಸಿತ್ತು. ಈ ಬಗ್ಗೆ ಬೆಳಗ್ಗೆ 7 ಗಂಟೆ ವೇಳೆಗೆ ಟ್ವೀಟ್‌ ಮಾಡಿತ್ತು. ಆದರೆ ಮಧ್ಯಾಹ್ನ ಸಂಭ್ರಮಾಚರಣೆ ಬಗ್ಗೆ ಮಾಹಿತಿ ನೀಡಿದ್ದ ಗೃಹ ಸಚಿವ ಡಾ.ಜಿ.ಪರಮೇಶ್ವರ್‌, ಆಟಗಾರರ ಪರೇಡ್‌ ಇಲ್ಲ ಎಂದಿದ್ದರು. ಬಳಿಕ ನಗರ ಸಂಚಾರ ಪೊಲೀಸರು ಕೂಡಾ ಈ ಬಗ್ಗೆ ಟ್ವೀಟ್‌ ಮಾಡಿ, ‘ಆರ್‌ಸಿಬಿ ಆಟಗಾರರ ವಿಜಯಯಾತ್ರೆ ಇಲ್ಲ. ಸಂಜೆ 5ರಿಂದ 6 ಗಂಟೆ ವರೆಗೆ ಕ್ರೀಡಾಂಗಣದಲ್ಲಿ ಅಭಿನಂದನಾ ಸಮಾರಂಭ ನಡೆಯಲಿದೆ’ ಎಂದಿತ್ತು. ಆದರೆ ಕೆಲ ನಿಮಿಷಗಳ ಬಳಿಕ ಟ್ವೀಟ್‌ ಡಿಲಿಟ್‌ ಮಾಡಲಾಗಿದೆ.

ಇದು ಅಭಿಮಾನಿಗಳಲ್ಲಿ ಗೊಂದಲಕ್ಕೆ ಕಾರಣವಾಗಿದೆ. ಈ ನಡುವೆ ಪರೇಡ್‌ಗೆ ಸಿದ್ಧತೆ ನಡೆಸುತ್ತಿರುವ ಆರ್‌ಸಿಬಿ ಬಸ್‌ನ ಫೋಟೋಗಳು ಕೂಡಾ ವೈರಲ್‌ ಆಗಿದ್ದರಿಂದ ಅಭಿಮಾನಿಗಳು ಮತ್ತಷ್ಟು ಗೊಂದಲಕ್ಕೆ ಒಳಗಾಗಿದ್ದಾರೆ. ಮಧ್ಯಾಹ್ನ 3.14ಕ್ಕೆ ಮತ್ತೊಂದು ಟ್ವೀಟ್‌ ಮಾಡಿದ ಆರ್‌ಸಿಬಿ, ‘ಸಂಜೆ 5ರಿಂದ 6 ಗಂಟೆ ವರೆಗೆ ವಿಕ್ಟರಿ ಪರೇಡ್‌ ನಡೆಯಲಿದೆ. ಬಳಿಕ ಕ್ರೀಡಾಂಗಣದಲ್ಲಿ ಸಂಭ್ರಮಾಚರಣೆ ಇದೆ’ ಎಂದು ಮಾಹಿತಿ ಹಂಚಿಕೊಂಡಿದೆ. ಅಲ್ಲದೆ, ಕ್ರೀಡಾಂಗಣಕ್ಕೆ ಉಚಿತ ಪ್ರವೇಶ ನೀಡಲಾಗಿದ್ದು, ಇದಕ್ಕಾಗಿ ಆರ್‌ಸಿಬಿ ಅಧಿಕೃತ ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಳ್ಳಲು ಸೂಚಿಸಿದೆ.

ಇದರಿಂದಾಗಿ, ಪರೇಡ್‌ ಇಲ್ಲವೋ ಇದೆಯೋ, ಕ್ರೀಡಾಂಗಣಕ್ಕೆ ಪ್ರವೇಶಿಸಲು ಟಿಕೆಟ್‌ ಅಗತ್ಯವಿದೆಯೇ ಇಲ್ಲವೇ ಎಂಬ ಗೊಂದಲದಲ್ಲೇ ಜನ ಕ್ರೀಡಾಂಗಣದ ಬಳಿ ಜಮಾಯಿಸಿದ್ದಾರೆ. ಮತ್ತೊಂದೆಡೆ, ವಿಧಾನಸೌಧ ಬಳಿ ರಾಜ್ಯ ಸರ್ಕಾರದಿಂದಲೇ ಸನ್ಮಾನ ಸಮಾರಂಭ ಆಯೋಜಿಸಿದ್ದರಿಂದ ಜನ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದಾರೆ. ಸಂಜೆ 4 ಗಂಟೆ ವೇಳೆಗಾಗಲೇ ಜನ ಕ್ರೀಡಾಂಗಣದ ಬಳಿ ನೆರೆದಿದ್ದಾರೆ. ಆದರೆ ವೆಬ್‌ಸೈಟ್‌ನಲ್ಲಿ ಉಚಿತ ಪಾಸ್‌ಗೆ ನೋಂದಾಯಿಸುವ ಬಗ್ಗೆ ಹಲವರಿಗೆ ಮಾಹಿತಿಯೇ ಇರಲಿಲ್ಲ. ಅಲ್ಲದೆ, ಸೀಮಿತ ಗೇಟ್‌ಗಳಲ್ಲಿ ಮಾತ್ರ ಕ್ರೀಡಾಂಗಣಕ್ಕೆ ಪ್ರವೇಶ ನೀಡಿದ್ದರಿಂದ ನೂಕುನುಗ್ಗಲು ಉಂಟಾಗಿದೆ.

ಗೊಂದಲ ಉಂಟಾಗಿದ್ದು ಹೇಗೆ?

- ಬೆಳಗ್ಗೆ 7: ಪರೇಡ್‌ ಬಗ್ಗೆ ಆರ್‌ಸಿಬಿ ಅಧಿಕೃತ ಖಾತೆಯಿಂದ ಟ್ವೀಟ್‌.

- ಮಧ್ಯಾಹ್ನ 12.45: ಪರೇಡ್‌ ಇಲ್ಲ ಎಂದ ಗೃಹ ಸಚಿವ ಡಾ.ಜಿ. ಪರಮೇಶ್ವರ್‌.

- ಮಧ್ಯಾಹ್ನ 1.08: ಸಂಚಾರ ಪೊಲೀಸರಿಂದ ‘ಪರೇಡ್‌ ಇಲ್ಲ’ ಎಂದು ಮಾಹಿತಿ.

- ಬಳಿಕ ಕೆಲ ನಿಮಿಷಗಳಲ್ಲೇ ಸಂಚಾರ ಪೊಲೀಸ್‌ ಇಲಾಖೆ ಟ್ವೀಟ್‌ ಡಿಲಿಟ್‌.

- ಇದರ ಬೆನ್ನಲ್ಲೇ ಪರೇಡ್‌ಗೆ ಸಿದ್ಧತೆ ನಡೆಸುತ್ತಿರುವ ಆರ್‌ಸಿಬಿ ಬಸ್‌ ಫೋಟೋ ವೈರಲ್‌.

- ಪರೇಡ್‌ ಇದೆ ಎಂದು ಮಧ್ಯಾಹ್ನ 3.14ಕ್ಕೆ ಟ್ವೀಟ್‌ ಮಾಡಿದ ಆರ್‌ಸಿಬಿ.

- ಸಂಜೆ 4 ಗಂಟೆ ವೇಳೆ ಕ್ರೀಡಾಂಗಣ ಬಳಿ ಜನ ಜಮಾವಣೆ, ಬಳಿಕ ಕಾಲ್ತುಳಿತ.

ಮಾಧ್ಯಮಗಳಿಗೆ ಉತ್ತರಿಸದೆ ಓಡಿ ಹೋದ ಕೆಎಸ್‌ಸಿಎ ಕಾರ್ಯದರ್ಶಿ!

ಬುಧವಾರದ ಭೀಕರ ಕಾಲ್ತುಳಿತ ಬಗ್ಗೆ ರಾಜ್ಯ ಕ್ರಿಕೆಟ್‌ ಸಂಸ್ಥೆ(ಕೆಎಸ್‌ಸಿಎ) ವಿರುದ್ಧ ಭಾರೀ ಟೀಕೆ ವ್ಯಕ್ತವಾಗುತ್ತಿದೆ. ಈ ನಡುವೆ ಗುರುವಾರ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಲಾಗದೆ ಕೆಎಸ್‌ಸಿಎ ಕಾರ್ಯದರ್ಶಿ ಎ.ಶಂಕರ್‌ ಓಡಿಹೋದ ಘಟನೆ ನಡೆದಿದೆ. ಕ್ರೀಡಾಂಗಣಕ್ಕೆ ಆಗಮಿಸಿದ್ದ ಮಾಧ್ಯಮ ಸಿಬ್ಬಂದಿ, ಶಂಕರ್‌ ಬಳಿ ಘಟನೆ ಬಗ್ಗೆ ಮಾತನಾಡಿಸಿದ್ದಾರೆ. ಆದರೆ ಇದಕ್ಕೆ ಉತ್ತರಿಸಲು ನಿರಾಕರಿಸಿದ ಅವರು, ಅತ್ತಿಂದಿತ್ತ ಓಡಾಡಿದ್ದಾರೆ. ಇದರ ವಿಡಿಯೋ ವೈರಲ್‌ ಆಗಿದೆ. ಕಾಲ್ತುಳಿತ ಘಟನೆ ಬಗ್ಗೆ ಪ್ರತಿಕ್ರಿಯೆಗೆ ಕೆಎಸ್‌ಸಿಎ ಅಧ್ಯಕ್ಷ ರಘುರಾಮ್‌ ಭಟ್‌, ಕಾರ್ಯದರ್ಶಿ ಶಂಕರ್‌ರನ್ನು ಮಾತನಾಡಿಸಲು ‘ಕನ್ನಡಪ್ರಭ’ ಪ್ರಯತ್ನಿಸಿತಾದರೂ, ಅವರು ಪ್ರತಿಕ್ರಿಯೆ ನೀಡಿಲ್ಲ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ವೈದ್ಯಕೀಯ ಪರಿಹಾರ ನಿಧಿ ಹಣಕ್ಕೆ ಬೆಂಗಳೂರು ಪಾಲಿಕೆ ತಡೆ
₹5 ಕೋಟಿ ವೆಚ್ಚದ ಜೆಜೆಎಂ ಕಳಪೆ ಕಾಮಗಾರಿ: ರಾಜಶೇಖರ ಪಾಟೀಲ್‌ ಆರೋಪ