21ಕ್ಕೆ ಬೆಂಗಳೂರಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಅತೃಪ್ತರ ಬಂಡಾಯ ಸಭೆ?

KannadaprabhaNewsNetwork |  
Published : Aug 15, 2024, 01:55 AM ISTUpdated : Aug 15, 2024, 03:15 AM IST
BY vijayendraa

ಸಾರಾಂಶ

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ವಿರುದ್ಧದ ಬಂಡಾಯದ ಕಹಳೆ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯಿದ್ದು, ಇನ್ನೊಂದು ವಾರದಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಸಭೆ ನಿಗದಿಯಾಗಿದೆ.

 ಬೆಂಗಳೂರು :  ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ವಿರುದ್ಧದ ಬಂಡಾಯದ ಕಹಳೆ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯಿದ್ದು, ಇನ್ನೊಂದು ವಾರದಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಸಭೆ ನಿಗದಿಯಾಗಿದೆ.

ಬಹುತೇಕ ಈ ತಿಂಗಳ 21ರಂದು ಸಭೆ ನಡೆಯುವ ಸಂಭವವಿದ್ದು, ಭಿನ್ನ ಧ್ವನಿ ಎತ್ತಿರುವ ಹಿರಿಯ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ ಹಾಗೂ ರಮೇಶ್ ಜಾರಕಿಹೊಳಿ ಅವರೇ ಈ ಸಭೆಯ ನೇತೃತ್ವ ವಹಿಸಲಿದ್ದಾರೆ. ಈ ಬಾರಿ ಎಲ್ಲ ಜಿಲ್ಲೆಗಳಿಂದಲೂ ಅತೃಪ್ತ ಮುಖಂಡರನ್ನು ಸಭೆಗೆ ಆಹ್ವಾನಿಸಲು ಉದ್ದೇಶಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಒಂದು ವೇಳೆ ಅಷ್ಟರೊಳಗಾಗಿ ಬಿಜೆಪಿಯ ವರಿಷ್ಠರು ಬ್ರೇಕ್ ಹಾಕಿದಲ್ಲಿ ಮಾತ್ರ ಸಭೆ ರದ್ದಾಗಬಹುದು ಅಥವಾ ಮುಂದೂಲ್ಪಡಬಹುದು. ಇಲ್ಲದಿದ್ದರೆ ಸಭೆ ನಡೆಯುವುದು ನಿಶ್ಚಿತ ಎಂದು ತಿಳಿದು ಬಂದಿದೆ.

ಕಳೆದ ಭಾನುವಾರ ಬೆಳಗಾವಿಯ ಹೊರವಲಯದ ರೆಸಾರ್ಟ್‌ವೊಂದರಲ್ಲಿ ನಡೆದ ಸಭೆಯ ಮುಂದುವರಿದ ಭಾಗವಿದು. ಈ ಸಭೆಯಲ್ಲೂ ಯತ್ನಾಳ್‌, ಜಾರಕಿಹೊಳಿ ಜತೆಗೆ ಅರವಿಂದ್ ಲಿಂಬಾವಳಿ, ಅಣ್ಣಾ ಸಾಹೇಬ್ ಜೊಲ್ಲೆ, ಜಿ.ಎಂ.ಸಿದ್ದೇಶ್ವರ್‌, ಪ್ರತಾಪ್ ಸಿಂಹ, ಕುಮಾರ್ ಬಂಗಾರಪ್ಪ, ಬಿ.ಪಿ.ಹರೀಶ್‌ ಅವರೊಂದಿಗೆ ಇತರ ಹಲವು ಮುಖಂಡರೂ ಜತೆಗೂಡುವ ನಿರೀಕ್ಷೆಯಿದೆ.

ಪಾದಯಾತ್ರೆ ಹೆಸರಲ್ಲಿ ಸಭೆ:  ಮೇಲ್ನೋಟಕ್ಕೆ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಮುಂದಿಟ್ಟುಕೊಂಡು ಕೂಡಲಸಂಗಮದಿಂದ ಬಳ್ಳಾರಿವರೆಗೆ ಪಾದಯಾತ್ರೆ ಹಮ್ಮಿಕೊಳ್ಳುವ ಬಗ್ಗೆ ಈ ಸಭೆ ನಡೆಸಲಾಗುವುದು ಎಂದು ಹೇಳುತ್ತಿದ್ದರೂ ಆಂತರ್ಯದಲ್ಲಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ನಾಯಕತ್ವಕ್ಕೆ ಸಡ್ಡು ಹೊಡೆಯುವುದೇ ಆಗಿದೆ ಎಂದು ಮೂಲಗಳು ತಿಳಿಸಿವೆ.

ಈ ಬಾರಿಯ ಸಭೆಯಲ್ಲಿ ಪಕ್ಷದ ವರಿಷ್ಠರನ್ನು ಭೇಟಿ ಮಾಡಲು ದೆಹಲಿಗೆ ತೆರಳುವ ಬಗ್ಗೆ, ವರಿಷ್ಠರ ಮೇಲೆ ಒತ್ತಡ ಹೇರುವ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆಯಿದೆ.

ಈಗಾಗಲೇ ಬೆಳಗಾವಿ ಸಭೆ ಬಳಿಕ ಬಿಜೆಪಿ ಪಾಳೆಯದಲ್ಲಿ ತೀವ್ರ ಚರ್ಚೆ ಆರಂಭ‍ವಾಗಿದೆ. ವಿಜಯೇಂದ್ರ ಅವರು ಬುಧವಾರ ಬೆಂಗಳೂರಿನಲ್ಲಿ ಸಂಘ ಪರಿವಾರದ ಮುಖಂಡರು ಹಾಗೂ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್ ಅವರನ್ನು ಭೇಟಿ ಮಾಡಿ ಪಕ್ಷದಲ್ಲಿನ ಬೆಳವಣಿಗೆಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. ಇದರ ಬೆನ್ನಲ್ಲೇ ಬಂಡಾಯದ ಮತ್ತೊಂದು ಸಭೆ ನಡೆಸಲು ಮುಂದಾಗಿರುವುದು ಕುತೂಹಲ ಮೂಡಿಸಿದೆ.

PREV

Recommended Stories

ರಾಹುಲ್‌ ವಿರುದ್ಧ 5ಕ್ಕೆ ಬಿಜೆಪಿ ಧರಣಿ : ಬಿವೈವಿ
ಸಂಘರ್ಷ ಬಿಟ್ಟು ಒಳಮೀಸಲು ಜಾರಿ : ಪರಂ ನೇತೃತ್ವದ ಸಭೆ