;Resize=(412,232))
ವಿಧಾನಸಭೆ : ‘ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ 57,733 ಸೈಬರ್ ಅಪರಾಧ ಪ್ರಕರಣ ವರದಿಯಾಗಿದ್ದು, 5,473 ಕೋಟಿ ರು. ವಂಚನೆಯಾಗಿದೆ. ಈ ಪೈಕಿ 10,759 ಪ್ರಕರಣ ಪತ್ತೆ ಮಾಡಲಾಗಿದೆ’ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಬಿಜೆಪಿ ಸದಸ್ಯ ಸಿಮೆಂಟ್ ಮಂಜು ಅವರು ಆನ್‌ಲೈನ್ ಬೆಟ್ಟಿಂಗ್ ಕುರಿತ ಪ್ರಶ್ನೆಗೆ ಉತ್ತರಿಸಿರುವ ಅವರು, ರಾಜ್ಯದಲ್ಲಿ ಸಿಬ್ಬಂದಿ ಕೊರತೆ ಹಾಗೂ ತಕ್ಷಣ ಕ್ರಮ ಕೈಗೊಳ್ಳದಿರುವುದರಿಂದ ಅಪರಾಧಿಗಳಿಗೆ ಧೈರ್ಯ ಬರುತ್ತಿದೆ. ಶಸ್ತ್ರಾಸ್ತ್ರಗಳು ಅನಿಯಂತ್ರಿತವಾಗಿ ಲಭ್ಯವಾಗುತ್ತಿವೆ. ಮಾರುಕಟ್ಟೆಯಲ್ಲಿನ ಕಲಬೆರಕೆ ಶಸ್ತ್ರಾಸ್ತ್ರಗಳ ಲಭ್ಯತೆಯಿಂದ ಹತ್ಯೆ, ದರೋಡೆ, ದಬ್ಬಾಳಿಕೆ ಹೆಚ್ಚಾಗುತ್ತಿದೆ. ಜತೆಗೆ ಕಠಿಣ ಶಿಕ್ಷೆ ಕೊರತೆ ಹಾಗೂ ಶಿಕ್ಷೆಯಾಗುವುದರಲ್ಲಿನ ವಿಳಂಬದಿಂದ ಅಪರಾಧ ಹೆಚ್ಚಾಗುತ್ತಿದೆ ಎಂದರು.
ಸಾರ್ವಜನಿಕ ಮೇಲ್ವಿಚಾರಣೆ ಕೊರತೆ ಇದೆ. ಸಿಸಿಟಿವಿ, ಪೆಟ್ರೋಲಿಂಗ್, ಬೀದಿ ದೀಪ ವ್ಯವಸ್ಥೆಯ ಕೊರತೆ ಅಪರಾಧಿಗಳಿಗೆ ಧೈರ್ಯ ಹೆಚ್ಚುತ್ತಿದೆ. ಸಾಮಾಜಿಕ ಜಾಲತಾಣದ ಅತಿಯಾದ ಬಳಕೆ, ಆರ್ಥಿಕ ಲಾಭದ ಆಸೆ, ಫಿಶಿಂಗ್ ಹಾಗೂ ಸೋಷಿಯಲ್ ಎಂಜಿನಿಯರಿಂಗ್ ತಂತ್ರಗಳಿಂದಾಗಿ ಸೈಬರ್ ವಂಚನೆ ಹೆಚ್ಚಾಗುತ್ತಿದೆ ಎಂದು ಅವರು ಉತ್ತರಿಸಿದ್ದಾರೆ.
ಇತ್ತೀಚೆಗೆ ತೆಗೆದುಕೊಂಡಿರುವ ಬಿಗಿ ಕ್ರಮಗಳಿಂದಾಗಿ ಸೈಬರ್ ಅಪರಾಧ ವರ್ಷದಿಂದ ವರ್ಷಕ್ಕೆ ಇಳಿಕೆಯಾಗಿದೆ. ಆನ್‌ಲೈನ್ ಬೆಟ್ಟಿಂಗ್ ನಿಷೇಧಿಸಿ ಕಾನೂನು ರೂಪಿಸಿದರೆ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಅದು ದೊಡ್ಡ ಮಟ್ಟದ ಮಾಫಿಯಾ. ಇದನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಲಿದ್ದೇವೆ ಎಂದು ಹೇಳಿದರು.
ಇದಕ್ಕೂ ಮೊದಲು ಮಾತನಾಡಿದ ಸಿಮೆಂಟ್ ಮಂಜು, ರಾಜ್ಯದಲ್ಲಿ ಆನ್‌ಲೈನ್ ಬೆಟ್ಟಿಂಗ್ ಹೆಚ್ಚಾಗುತ್ತಿದೆ. ಸೈಬರ್ ಅಪರಾಧದಿಂದ ಜನ ವಂಚನೆಗೆ ಗುರಿಯಾಗುತ್ತಿದ್ದಾರೆ. ಈ ಬಗ್ಗೆ ದೂರು ನೀಡಲು ಸೈಬರ್ ಕಂಟ್ರೋಲ್ ರೂಂ ಮಾಡಬೇಕು ಎಂದು ಮನವಿ ಮಾಡಿದರು.
ಪಟ್ಟಿ:
- ವರ್ಷ-ಸೈಬರ್ ಅಪರಾಧ ಸಂಖ್ಯೆ- ಪತ್ತೆ ಹಚ್ಚಿದ ಪ್ರಕರಣ- ವಂಚನೆ ಮೊತ್ತ
2023- 22,255- 6,159- 873.29 ಕೋಟಿ ರು.
2024- 22,478- 3,549- 2562 ಕೋಟಿ ರು.
2025- 13,000- 1,009- 2,038 ಕೋಟಿ ರು.