ಕನ್ನಡಪ್ರಭ ವಾರ್ತೆ, ತುಮಕೂರು
ನಗರದ ಬಡ್ಡಿಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಜಿಂದಾಲ್ ಅಲ್ಯೂಮಿನಿಯಂ ಸಂಸ್ಥೆಯವರು ನಿರ್ಮಿಸಿಕೊಟ್ಟಿರುವ ನೂತನ ಶಾಲಾ ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ವಿದ್ಯೆ ಸಾಧಕನ ಸ್ವತ್ತೇ ಹೊರತು ಸೋಮಾರಿಯ ಸ್ವತ್ತಲ್ಲ, ಮಕ್ಕಳ ಬದುಕು ರೂಪಿಸುವ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಮುಂದಿನ ಪೀಳಿಗೆಗೆ ಶಿಕ್ಷಣವನ್ನು ಆಸ್ತಿ ರೂಪದಲ್ಲಿ ನೀಡಬೇಕು ಎಂದರು.
ಎಲ್ಲಾ ಮಕ್ಕಳಿಗೂ ದೇವರು ಸಮಾನ ಬುದ್ಧಿಶಕ್ತಿ ಕೊಟ್ಟಿರುತ್ತಾನೆ. ಆ ಮಕ್ಕಳಲ್ಲಿರುವ ಬುದ್ಧಿಶಕ್ತಿ, ಪ್ರತಿಭೆಯನ್ನು ಅರಳಿಸಲು ಶಿಕ್ಷಕರು, ಪೋಷಕರು ಆದ್ಯತೆ ನೀಡಬೇಕು. ಮಕ್ಕಳು ಶಿಸ್ತು, ಶ್ರದ್ಧೆಯಿಂದ ಅಭ್ಯಾಸ ಮಾಡಿದರೆ ಯಶಸ್ಸು ಗಳಿಸಿ ಉನ್ನತ ಸ್ಥಾನಮಾನ ಪಡೆಯಬಹುದು. ಈಗ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಸೌಕರ್ಯಗಳಿವೆ. ಮಕ್ಕಳು ಶಾಲೆಯಲ್ಲಿ ಅಭ್ಯಾಸ ಮಾಡುವಷ್ಟೇ ಮುಖ್ಯವಾಗಿ ಅವರು ಶಾಲೆಗೆ ಗೈರುಹಾಜರಾಗದಂತೆ ನೋಡಿಕೊಳ್ಳಬೇಕು. ಪರೀಕ್ಷೆಯಲ್ಲಿ ಪಡೆಯುವ ಅಂಕಗಳಷ್ಟೇ ಶಾಲೆಯ ಹಾಜರಾತಿಯೂ ಮುಖ್ಯವಾಗುತ್ತದೆ. ಮಕ್ಕಳು ಶಾಲೆಗೆ ಗೈರು ಹಾಜರಾಗದಂತೆ ಶಿಕ್ಷಕರು, ಇಲಾಖೆ ಅಧಿಕಾರಿಗಳು ಪೋಷಕರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಸಚಿವ ಕೆ.ಎನ್.ರಾಜಣ್ಣ ಸಲಹೆ ಮಾಡಿದರು.ಬಡ್ಡಿಹಳ್ಳಿ ಸರ್ಕಾರಿ ಶಾಲೆಯ ಈ ಮೊದಲಿದ್ದ ಕಟ್ಟಡ ಮಳೆಗಾಲದಲ್ಲಿ ಜಲಾವೃತವಾಗಿ ವಿದ್ಯಾರ್ಥಿಗಳ ಕಲಿಕೆಗೆ ಸಮಸ್ಯೆಯಾಗುತ್ತಿತ್ತು. ಈ ಸಮಸ್ಯೆ ನಿವಾರಿಸಲು ಹೊಸ ಜಾಗದಲ್ಲಿ ಶಾಲೆ ಸ್ಥಾಪನೆಯಾಗಲು ಸಹಕರಿಸಿದರು. ಮಳೆಗಾಲದಲ್ಲಿ ನೀರು ಸಂಗ್ರಹವಾಗುವ ಜಾಗಗಳನ್ನು ರಕ್ಷಣೆ ಮಾಡಬೇಕು. ನಗರ ಪ್ರದೇಶಗಳಲ್ಲಿ ಕೆರೆಕಟ್ಟೆಗಳನ್ನು ಮುಚ್ಚುವ ಪ್ರಯತ್ನ ನಡೆದಿದೆ. ಕಟ್ಟೆಗಳಲ್ಲಿ ನೀರು ಸಂಗ್ರಹವಾಗುವುದರಿಂದ ಅಂತರ್ಜಲ ಮಟ್ಟ ಸುಧಾರಿಸುತ್ತದೆ ಎಂದರು. ಬಡ್ಡಿಹಳ್ಳಿ ಶಾಲೆಗೆ ಕೊಠಡಿಗಳನ್ನು ನಿರ್ಮಿಸಿಕೊಟ್ಟ ಜಿಂದಾಲ್ ಸಂಸ್ಥೆಯ ಅಧ್ಯಕ್ಷ ಪ್ರಗುಣ್ ಜಿಂದಾಲ್ ಸೇವೆ ಶ್ಲಾಘಿಸಿದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರು ಜಿಂದಾಲ್ ಸಂಸ್ಥೆ ಕೊಡುಗೆ ಸ್ಮರಿಸಿ, ಬಡ್ಡಿಹಳ್ಳಿ ಭಾಗದ ಅಭಿವೃದ್ಧಿಗೆ ಕೆ.ಎನ್.ರಾಜಣ್ಣನವರ ಕೊಡುಗೆ ಅಪಾರ. 70ರ ದಶಕದಲ್ಲಿ ಇವರು ಕ್ಯಾತ್ಸಂದ್ರ ಪಂಚಾಯತಿ ಅಧ್ಯಕ್ಷರಾಗಿದ್ದಾಗ, ಇಲ್ಲಿನ ಸಾರ್ವಜನಿಕ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನ ಮಾಡಿದ್ದರು ಎಂದು ಸ್ಮರಿಸಿದರು.
ನಿವೃತ್ತ ಪ್ರಾಚಾರ್ಯ ಮರಿಬಸಪ್ಪ ಮಾತನಾಡಿ, ಬಡ್ಡಿಹಳ್ಳಿ ಶಾಲೆಗೆ ಕಟ್ಟಡದ ಅವಶ್ಯಕತೆ ಇದ್ದ ಹಿನ್ನೆಲೆ ಜಿಂದಾಲ್, ಸುಸಜ್ಜಿತ ಕಟ್ಟಡ ನಿರ್ಮಿಸಿಕೊಟ್ಟರು ಎಂದು ಸಂಸ್ಥೆಗೆ ಅಭಿನಂದನೆ ಸಲ್ಲಿಸಿ, ಬಡವರೇ ಹೆಚ್ಚಾಗಿರುವ ಈ ಪ್ರದೇಶದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಉನ್ನತೀಕರಿಸಿದ ಪ್ರೌಢಶಾಲೆ ಸ್ಥಾಪನೆಗೆ ಕ್ರಮ ತೆಗೆದುಕೊಳ್ಳುವಂತೆ ಸಚಿವ ಕೆ.ಎನ್. ರಾಜಣ್ಣ ಅವರಿಗೆ ಮನವಿ ಮಾಡಿದರು.
ಯುವ ಕಾಂಗ್ರೆಸ್ ಮುಖಂಡ ಶಶಿ ಹುಲಿಕುಂಟೇಮಠ್, ನಗರಪಾಲಿಕೆ ಸದಸ್ಯ ಬಿ.ಜಿ. ಕೃಷ್ಣಪ್ಪ, ಡಿಡಿಪಿಐ ಸಿ.ರಂಗಧಾಮಯ್ಯ, ಬಿಇಒ ಡಾ. ಸೂರ್ಯಕಲಾ, ಡಿಜಿ ಕಚೇರಿಯ ಸರ್ಕಲ್ ಇನ್ಸ್ಪೆಕ್ಟರ್ ಡಾ. ಎಂ.ಬಿ.ನವೀನ್‌ಕುಮಾರ್, ನಗರಪಾಲಿಕೆ ನಾಮಿನಿ ಸದಸ್ಯ ಕೆ.ಎಸ್. ಮಹೇಶ್, ಎಸ್.ಡಿ.ಎಂ.ಸಿ ಅಧ್ಯಕ್ಷ ಹನುಮಂತರಾಯಪ್ಪ, ಶಾಲೆ ಮುಖ್ಯಶಿಕ್ಷಕಿ ಬಿ. ದಾಕ್ಷಾಯಣಮ್ಮ, ಮುಖಂಡರಾದ ಮುನಿ ಬಸವರಾಜು, ಸಿದ್ಧಲಿಂಗಯ್ಯ, ಮೂರ್ತಿ, ಗಿರಿಜಮ್ಮ, ರವೀಶ್, ವೆಂಕಟೇಶ್, ಶಿವಕುಮಾರ್, ರವೀಶ್, ಸೂರಾಚಾರ್ ಭಾಗವಹಿಸಿದ್ದರು.