ಪ್ರಜ್ವಲ್‌ ಸಂತ್ರಸ್ತರನ್ನು ರಕ್ಷಿಸಿ: ಸಿದ್ದುಗೆ ರಾಹುಲ್ ಗಾಂಧಿ ಪತ್ರ

KannadaprabhaNewsNetwork | Updated : May 05 2024, 04:42 AM IST

ಸಾರಾಂಶ

ಹಾಸನ ಜೆಡಿಎಸ್‌ ಸಂಸದ ಪ್ರಜ್ವಲ್‌ ರೇವಣ್ಣ ಅವರ ಲೈಂಗಿಕ ಶೋಷಣೆಯಿಂದ ನಲುಗಿರುವ ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ನೆರವನ್ನೂ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಪತ್ರ ಬರೆದು ಒತ್ತಾಯಿಸಿದ್ದಾರೆ.

  ನವದೆಹಲಿ :  ಹಾಸನ ಜೆಡಿಎಸ್‌ ಸಂಸದ ಪ್ರಜ್ವಲ್‌ ರೇವಣ್ಣ ಅವರ ಲೈಂಗಿಕ ಶೋಷಣೆಯಿಂದ ನಲುಗಿರುವ ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ನೆರವನ್ನೂ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಪತ್ರ ಬರೆದು ಒತ್ತಾಯಿಸಿದ್ದಾರೆ.

ಪ್ರಜ್ವಲ್‌ ಮಹಿಳೆಯರ ಮೇಲೆ ಎಸಗಿದ ಕೃತ್ಯಗಳನ್ನು ಪತ್ರದಲ್ಲಿ ಖಂಡಿಸಿರುವ ಅವರು, ಸಂಸದನಿಗೆ ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾರಿಂದ ರಕ್ಷಣೆ ದೊರೆಯುತ್ತಿದೆ. ಪ್ರಜ್ವಲ್‌ ದೇಶ ತೊರೆಯಲು ನೆರವಾಗುವ ಮೂಲಕ ಅರ್ಥಪೂರ್ಣವಾಗಿ ನಡೆಯುತ್ತಿದ್ದ ತನಿಖೆಯನ್ನು ದಾರಿ ತಪ್ಪಿಸಲು ಕೇಂದ್ರ ಸರ್ಕಾರ ಯತ್ನಿಸಿದೆ ಎಂದು ಆಪಾದಿಸಿದ್ದಾರೆ.ಇದೇ ವೇಳೆ, ಪ್ರಧಾನಿ ಮೋದಿ ಅವರ ವಿರುದ್ಧ ಪರೋಕ್ಷವಾಗಿ ಹರಿಹಾಯ್ದಿರುವ ಅವರು, ಮಹಿಳೆಯರ ಮೇಲೆ ಕಂಡು ಕೇಳರಿಯದ ರೀತಿಯಲ್ಲಿ ದೌರ್ಜನ್ಯ ನಡೆದರೂ ಹಿರಿಯ ಜನಪ್ರತಿನಿಧಿಯೊಬ್ಬರು ನಿರಂತರವಾಗಿ ಮೌನದಿಂದ ಇರುವುದನ್ನು ನನ್ನ ರಾಜಕೀಯ ಜೀವನದಲ್ಲೇ ನೋಡಿಲ್ಲ ಎಂದು ಛೇಡಿಸಿದ್ದಾರೆ.

ಸಂತ್ರಸ್ತರ ರಕ್ಷಣೆಗೆ ಬದ್ಧ

ಪ್ರಜ್ವಲ್ ಅವರಿಂದ ಅತ್ಯಾಚಾರ, ಅನ್ಯಾಯಕ್ಕೆ ಒಳಗಾದ ಸಂತ್ರಸ್ತರ ರಕ್ಷಣೆಗೆ ನಮ್ಮ ಸರ್ಕಾರ ಬದ್ಧವಾಗಿದೆ. ನಿಷ್ಪಕ್ಷಪಾತ ತನಿಖೆ ನಡೆಸಿ ಪ್ರಕರಣದಲ್ಲಿ ಎಷ್ಟೇ ಪ್ರಭಾವಿಗಳು ಶಾಮೀಲಾಗಿದ್ದರೂ ಅವರನ್ನು ಕಾನೂನಿನ ಕೈಗಳಿಗೆ ಒಪ್ಪಿಸಲಾಗುವುದು. ನೊಂದವರ ಕಣ್ಣೀರು ಒರೆಸುವ ವಾಗ್ದಾನವನ್ನು ರಾಹುಲ್‌ ಗಾಂಧಿ ಸೇರಿದಂತೆ ಎಲ್ಲರಿಗೂ ನೀಡುತ್ತೇನೆ. - 

ಸಿದ್ದರಾಮಯ್ಯ, ಮುಖ್ಯಮಂತ್ರಿ 2023ರ ಡಿಸೆಂಬರ್‌ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಜಿ. ದೇವರಾಜೇಗೌಡ ಅವರು ಪತ್ರ ಬರೆದು ಪ್ರಜ್ವಲ್‌ ರೇವಣ್ಣ ಅವರ ಪೂರ್ವಾಪರ ತಿಳಿಸಿದ್ದರು. ಆತನ ಲೈಂಗಿಕ ಹಿಂಸೆಯನ್ನು ವಿವರಿಸಿದ್ದರು. ಆ ಕುರಿತು ವಿಡಿಯೋಗಳು ಇರುವುದನ್ನೂ ಹೇಳಿದ್ದರು. ಆಘಾತಕಾರಿ ಎಂದರೆ, ಇಂತಹ ಆರೋಪಗಳು ಇದ್ದ ಹೊರತಾಗಿಯೂ ಪ್ರಧಾನಿ ಮೋದಿ ಅವರು ಆ ಮಾಸ್‌ ರೇಪಿಸ್ಟ್‌ ಪರ ಪ್ರಚಾರ ಮಾಡಿದ್ದರು ಎಂದು ದೂರಿದ್ದಾರೆ.

ಸಂತ್ರಸ್ತರಿಗೆ ದಯೆ ಬೇಕು: ಪ್ರಜ್ವಲ್‌ ರೇವಣ್ಣ ಅವರ ಸಂತ್ರಸ್ತರು ನ್ಯಾಯಕ್ಕಾಗಿ ಹೋರಾಡುತ್ತಿರುವ ಈ ಸಂದರ್ಭದಲ್ಲಿ ಅವರಿಗೆ ದಯೆ ಹಾಗೂ ಸೌಹಾರ್ದತೆಯ ಅಗತ್ಯವಿದೆ. ಈ ಹೇಯ ಕೃತ್ಯಗಳನ್ನು ಎಸಗಿದ ಎಲ್ಲ ವ್ಯಕ್ತಿಗಳು ಕಾನೂನಿನ ಮುಂದೆ ನಿಲ್ಲುವಂತೆ ಮಾಡಬೇಕಾದ ಸಾಮೂಹಿಕ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದು ಪತ್ರದಲ್ಲಿ ಹೇಳಿದ್ದಾರೆ.ಹಾಸನ ಸಂಸದ ಮಹಿಳೆಯರ ಮೇಲೆ ಎಸಗಿದ ಕೃತ್ಯ ಘೋರ ಲೈಂಗಿಕ ಹಿಂಸೆಯಾಗಿದೆ. ಹಲವು ವರ್ಷಗಳ ಕಾಲ ಮಹಿಳೆಯರ ಮೇಲೆ ಲೈಂಗಿಕವಾಗಿ ಶೋಷಣೆ ಮಾಡಿದ್ದೇ ಅಲ್ಲದೆ, ಆ ಕೃತ್ಯಗಳನ್ನು ಆತ ಮೊಬೈಲ್‌ನಲ್ಲಿ ಸೆರೆ ಹಿಡಿದುಕೊಂಡಿದ್ದಾನೆ. ಸೋದರ ಹಾಗೂ ಪುತ್ರನ ರೀತಿ ತನ್ನನ್ನು ಕಂಡ ಮಹಿಳೆಯರ ಮೇಲೂ ಅತ್ಯಂತ ಹಿಂಸಾರೂಪದಲ್ಲಿ ಶೋಷಣೆ ಮಾಡಿರುವ ಆತ, ಆ ಮಹಿಳೆಯರ ಗೌರವವನ್ನೇ ಕಸಿದಿದ್ದಾನೆ. ನಮ್ಮ ತಾಯಂದಿರು ಹಾಗೂ ಸೋದರಿಯರ ಮೇಲೆ ಅತ್ಯಾಚಾರವೆಸಗಿದ ಆತನಿಗೆ ಕಠಿಣ ಶಿಕ್ಷೆಯಾಗಬೇಕಿದೆ ಎಂದು ಹೇಳಿದ್ದಾರೆ.

Share this article