ನಾಳೆ ರಾಹುಲ್ ಗಾಂದಿ ಜತೆ ಸಿದ್ದು, ಡಿಕೆಶಿ ಸಭೆ ಸಸ್ಪೆನ್ಸ್‌ : ಪ್ರತ್ಯೇಕವಾಗಿ ಭೇಟಿಗೆ ಪ್ರಯತ್ನ

Published : Jul 09, 2025, 06:23 AM IST
Siddu DKS

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಪ್ರತ್ಯೇಕವಾಗಿ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಗುರುವಾರ ಭೇಟಿ ಮಾಡಲು ಪ್ರಯತ್ನಿಸಿರುವುದು ತೀವ್ರ ಕುತೂಹಲ ಮೂಡಿಸಿದೆ.

ಬೆಂಗಳೂರು : ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸುರ್ಜೇವಾಲಾ ಅವರು ಶಾಸಕರೊಂದಿಗೆ ಸಭೆ ಆರಂಭಿಸಿದ ನಂತರ ನಾಯಕತ್ವ ಬದಲಾವಣೆ ವಿಚಾರ ಮತ್ತೆ ಸದ್ದು ಮಾಡತೊಡಗಿದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಪ್ರತ್ಯೇಕವಾಗಿ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಗುರುವಾರ ಭೇಟಿ ಮಾಡಲು ಪ್ರಯತ್ನಿಸಿರುವುದು ತೀವ್ರ ಕುತೂಹಲ ಮೂಡಿಸಿದೆ.

ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಯವರು ಜು.10ರಂದು ರಾಹುಲ್‌ ಭೇಟಿಗೆ ಸಮಯ ನಿಗದಿ ಪಡಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಆದರೆ, ರಾಹುಲ್ ಭೇಟಿ ಇನ್ನೂ ನಿಗದಿಯಾಗಿಲ್ಲ. ಮೂಲಗಳ ಪ್ರಕಾರ ಬಿಹಾರ ಪ್ರವಾಸದಲ್ಲಿರುವ ರಾಹುಲ್‌ ಗಾಂಧಿ ಅವರು ಗುರುವಾರ ದೆಹಲಿಗೆ ಹಿಂತಿರುಗಿದರೆ ಇಬ್ಬರನ್ನೂ ಪ್ರತ್ಯೇಕವಾಗಿ ಭೇಟಿಯಾಗುವ ಸಾಧ್ಯತೆಯಿದೆ.

ಸಿದ್ದು ಬೇಸರ:

ಸಿದ್ದರಾಮಯ್ಯ ಅವರು ಮತ್ತೆ ಮತ್ತೆ ತಮ್ಮ ನಾಯಕತ್ವ ಬದಲಾವಣೆ ವಿಚಾರ ಪ್ರಸ್ತಾಪವಾಗುತ್ತಿರುವ ಬಗ್ಗೆ ಹಾಗೂ ಕೆಲ ಎಐಸಿಸಿ ನಾಯಕರು ಇದಕ್ಕೆ ಪ್ರೋತ್ಸಾಹ ಕೊಡುತ್ತಿರುವ ಬಗ್ಗೆ ತೀವ್ರ ಬೇಸತ್ತಿದ್ದಾರೆ. ಈ ಬಗ್ಗೆ ರಾಹುಲ್ ಅವರ ಬಳಿಯೇ ನೇರವಾಗಿ ಅತೃಪ್ತಿ ವ್ಯಕ್ತಪಡಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ಇದೇ ವೇಳೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ರಾಹುಲ್‌ ಅವರನ್ನು ಪ್ರತ್ಯೇಕವಾಗಿ ಭೇಟಿಯಾದಾಗ ತಮ್ಮ ಸಿಎಂ ಆಕಾಂಕ್ಷೆಯನ್ನು ಮತ್ತೆ ವ್ಯಕ್ತಪಡಿಸುವರೇ ಎಂಬ ಕುತೂಹಲವಿದೆ.

ನಾಳೆ ಸುರ್ಜೇವಾಲಾ ಜತೆ ಸಭೆ ಪಕ್ಕಾ!:

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಬೆಳಗ್ಗೆ 11ಕ್ಕೆ ದೆಹಲಿಗೆ ಪ್ರಯಾಣ ಬೆಳೆಸಲಿದ್ದು ಸಂಜೆ 4 ಗಂಟೆಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರನ್ನು ಭೇಟಿಯಾಗಿ ಮೈಸೂರು ದಸರಾ ಮಹೋತ್ಸವದಲ್ಲಿ ವೈಮಾನಿಕ ಪ್ರದರ್ಶನ ಆಯೋಜಿಸುವ ಕುರಿತು ಚರ್ಚೆ ನಡೆಸಲಿದ್ದಾರೆ.

ಈ ಮಧ್ಯೆ, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಅವರ ಸಭೆ ಹಾಗೂ ರಾಹುಲ್‌ ಭೇಟಿ ಪ್ರಯತ್ನ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅವರ ರಾಷ್ಟ್ರ ರಾಜಧಾನಿ ಪ್ರವಾಸ ಇನ್ನು ಒಂದು ದಿನಕ್ಕೆ ವಿಸ್ತರಣೆಯಾಗುವ ಸಾಧ್ಯತೆ ಇದೆ. ಗುರುವಾರ ಮತ್ತು ಶುಕ್ರವಾರ ಸಿದ್ದರಾಮಯ್ಯ ಅವರು ದೆಹಲಿಯಲ್ಲೇ ಉಳಿಯಲಿದ್ದಾರೆ. ಜು.10ರ ಗುರುವಾರ ಸುರ್ಜೇವಾಲಾ ಅವರು ಮುಖ್ಯಮಂತ್ರಿಗಳು ಮತ್ತು ಈಗಾಗಲೇ ದೆಹಲಿಯಲ್ಲಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರೊಂದಿಗೆ ಮಹತ್ವದ ಸಭೆ ನಡೆಸಲಿದ್ದಾರೆ.

ಸಭೆಯಲ್ಲಿ ಪ್ರಮುಖವಾಗಿ ನಿಗಮ ಮಂಡಳಿ ಅಧ್ಯಕ್ಷರು, ಸದಸ್ಯರ ನೇಮಕಾತಿ, ಪಕ್ಷ ಸಂಘಟನೆ ವಿಚಾರಗಳ ಜೊತೆಗೆ ಸರ್ಕಾರದ ಕಾರ್ಯವೈಖರಿ ಬಗ್ಗೆಯೂ ಸರ್ಕಾರ ಮತ್ತು ಪಕ್ಷದ ನಾಯಕತ್ವದ ಜೊತೆ ಚರ್ಚೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

ರಾಜ್ಯದ ವಿವಿಧ ಶಾಸಕರು ಸಚಿವರ ಕಾರ್ಯವೈಖರಿ ಬಗ್ಗೆ, ಕ್ಷೇತ್ರದ ಅಭಿವೃದ್ಧಿಗೆ ಅನುದಾನ ದೊರೆಯದ ಬಗ್ಗೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸುರ್ಜೇವಾಲಾ ಅವರು ಆರೇಳು ದಿನಗಳ ಕಾಲ ಕರ್ನಾಟಕದಲ್ಲೇ ಉಳಿದು ಪಕ್ಷದ ನೂರಕ್ಕೂ ಹೆಚ್ಚು ಶಾಸಕರೊಂದಿಗೆ ಒನ್‌ ಟು ಒನ್‌ ಮಾತುಕತೆ ನಡೆಸಿ ಅಹವಾಲು ಸ್ವೀಕರಿಸಿದ್ದಾರೆ. ಇದೆಲ್ಲದರ ವರದಿಯನ್ನು ಸಿದ್ಧಪಡಿಸಿಕೊಂಡು ಅವರೂ ಕೂಡ ಬುಧವಾರ ದೆಹಲಿಗೆ ವಾಪಸ್ಸಾಗಲಿದ್ದಾರೆ.

ಸರ್ಕಾರ, ಸಚಿವರ ಕಾರ್ಯವೈಖರಿ ಕುರಿತು ಶಾಸಕರಿಂದ ಬಂದ ಅಭಿಪ್ರಾಯ, ದೂರು, ದುಮ್ಮಾನಗಳ ಆಧಾರದಲ್ಲಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಅವರೊಂದಿಗೆ ಚರ್ಚೆ ನಡೆಸಿ ಶಾಸಕರನ್ನು ಸಮಾಧಾನಪಡಿಸಲು ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಕೆಲವು ಸಲಹೆ-ಸೂಚನೆಗಳನ್ನು ನೀಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

PREV
Read more Articles on