ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ : ಸಚಿವ ಜಮೀರ್‌ ಅಹಮದ್‌

KannadaprabhaNewsNetwork |  
Published : Oct 05, 2025, 01:00 AM IST
4ಕೆಎಂಎನ್‌ಡಿ08ಮಂಡ್ಯಕ್ಕೆ ಆಗಮಿಸಿದ ವಸತಿ ಸಚಿವ ಜಮೀರ್‌ ಅಹಮದ್‌ ಅವರನ್ನು ಅಭಿಮಾನಿಗಳು ಅದ್ಧೂರಿಯಾಗಿ ಸ್ವಾಗತಿಸಿದರು.  | Kannada Prabha

ಸಾರಾಂಶ

ನಮ್ಮ ಅಧ್ಯಕ್ಷರು (ಡಿ.ಕೆ.ಶಿವಕುಮಾರ್‌) ಯಾರ ಬಗ್ಗೆ ಮಾತನಾಡಬಾರದು ಅಂತ ಸೂಚನೆ ಕೊಟ್ಟಿದ್ದಾರೆ‌. ನಮ್ಮಲ್ಲಿ ವ್ಯಕ್ತಿಗಿಂತ ಪಕ್ಷ ಮುಖ್ಯ. ಯಾರಾದರೂ ಮಾತನಾಡಿದರೆ ಕ್ರಮಕ್ಕೆ ಸೂಚನೆ ಕೊಟ್ಟಿದ್ದಾರೆ. ಈಗಾಗಲೇ ಹಲವರಿಗೆ ನೋಟಿಸ್ ಕೊಟ್ಟಿದ್ದಾರೆ. ಸದ್ಯಕ್ಕೆ ಸಿದ್ದರಾಮಯ್ಯ ಅವರೇ ಐದು ವರ್ಷ ಸಿಎಂ.

 ಮಂಡ್ಯ :  ಸಿದ್ದರಾಮಯ್ಯ ಅವರೇ ಪೂರ್ಣಾವಧಿಯವರೆಗೆ ಸಿಎಂ ಆಗಿರುತ್ತಾರೆ. ಇದರಲ್ಲಿ ಯಾವ ಬದಲಾವಣೆಯೂ ಇಲ್ಲ. ನವೆಂಬರ್‌ಗೆ ಯಾವ ಕ್ರಾಂತಿಯೂ ಆಗುವುದಿಲ್ಲ ಎಂದು ವಸತಿ ಸಚಿವ ಜಮೀರ್‌ ಅಹಮದ್‌ ಪುನರುಚ್ಚರಿಸಿದರು.

ನಗರದ ಖಾಸಗಿ ಹೋಟೆಲ್‌ಗೆ ಭೇಟಿ ನೀಡಿದ್ದ ವೇಳೆ ತಮ್ಮನ್ನು ಭೇಟಿಯಾದ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ಈಗ ಮುಖ್ಯಮಂತ್ರಿ ಕುರ್ಚಿಯಲ್ಲಿ ಸಿದ್ದರಾಮಯ್ಯ ಕುಳಿತಿದ್ದಾರೆ. ಅವರೇ ಅವಧಿ ಮುಗಿಯುವವರೆಗೆ ಮುಖ್ಯಮಂತ್ರಿ ಆಗಿರುತ್ತಾರೆ. ಈ ವಿಷಯವನ್ನು ಸ್ವತಃ ಡಿ.ಕೆ.ಶಿವಕುಮಾರ್ ಕೂಡ ಹೇಳಿದ್ದಾರೆ. ಐದು ವರ್ಷ ನಾನೇ ಸಿಎಂ ಅಂತ ಮೈಸೂರಿನಲ್ಲಿ ಸಿದ್ದರಾಮಯ್ಯ ಕೂಡ ಹೇಳಿದ್ದಾರೆ. ಆದರೂ ಹೈಕಮಾಂಡ್ ತೀರ್ಮಾನಕ್ಕೆ ನಾವು ಬದ್ಧ. ಅವರವರ ಬೆಂಬಲಿಗರಿಗೆ ಅವರವರ ನಾಯಕರು ಮುಖ್ಯಮಂತ್ರಿ ಆಗಬೇಕು ಅನ್ನೋದು ಆಸೆ ಇರುತ್ತೆ, ಅದು ತಪ್ಪಲ್ಲ ಎಂದು ಜಾರಿಕೆ ಉತ್ತರ ನೀಡಿದರು.

ನಮ್ಮ ಅಧ್ಯಕ್ಷರು (ಡಿ.ಕೆ.ಶಿವಕುಮಾರ್‌) ಯಾರ ಬಗ್ಗೆ ಮಾತನಾಡಬಾರದು ಅಂತ ಸೂಚನೆ ಕೊಟ್ಟಿದ್ದಾರೆ‌. ನಮ್ಮಲ್ಲಿ ವ್ಯಕ್ತಿಗಿಂತ ಪಕ್ಷ ಮುಖ್ಯ. ಯಾರಾದರೂ ಮಾತನಾಡಿದರೆ ಕ್ರಮಕ್ಕೆ ಸೂಚನೆ ಕೊಟ್ಟಿದ್ದಾರೆ. ಈಗಾಗಲೇ ಹಲವರಿಗೆ ನೋಟಿಸ್ ಕೊಟ್ಟಿದ್ದಾರೆ. ಸದ್ಯಕ್ಕೆ ಸಿದ್ದರಾಮಯ್ಯ ಅವರೇ ಐದು ವರ್ಷ ಸಿಎಂ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು.

ಡಿಕೆಶಿ ಸಿಎಂ ಆಗಬೇಕೆಂದು ಬಯಸುವೆ:

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೂಡ ಮುಖ್ಯಮಂತ್ರಿ ಆಗಬೇಕು ಎಂದು ಬಯಸುವವನು ನಾನು. ಅವರಿಗೂ ಮುಖ್ಯಮಂತ್ರಿ ಆಗಬೇಕೆಂಬ ಆಸೆ ಇದೆ. ಈ ಐದು ವರ್ಷ ಮಾತ್ರ ಸಿದ್ದರಾಮಯ್ಯ ಅವರೇ ಇರುತ್ತಾರೆ ಎಂದ ಅವರು, ನವೆಂಬರ್‌ಗೆ ಸಂಪುಟ ಪುನಾರಚನೆಯಾಗಬೇಕೆಂಬ ಆಸೆ ಎಲ್ಲರಿಗೂ ಇದೆ. ಪಕ್ಷದ ಕೆಲವು ಹಿರಿಯರಿಗೆ ಮಂತ್ರಿಯಾಗುವ ಆಸೆ ಇದೆ. ಅವರಿಗೂ ಅವಕಾಶ ಸಿಗಬೇಕು ಎನ್ನುವುದು ತಪ್ಪಲ್ಲ. ಇದರ ತೀರ್ಮಾನ ಹೈಕಮಾಂಡ್‌ಗೆ ಬಿಟ್ಟಿದ್ದು ಎಂದರು.

ಆರ್.ಅಶೋಕ್ ಗೆ ಕೆಲಸ ಏನೂ ಇಲ್ಲ:

ಸಿದ್ದರಾಮಯ್ಯ ದಸರಾನೇ ಮಾಡೋಲ್ಲ ಎಂದು ಅಶೋಕ್‌ ಹೇಳಿದ್ದರು. ಸಿದ್ದರಾಮಯ್ಯನವರು ಅದ್ಧೂರಿಯಾಗೇ ದಸರಾ ಉದ್ಘಾಟಿಸಿದರು. ಅಶೋಕ್‌ ಹೇಳಿದ್ದರಲ್ಲಿ ಯಾವುದಾದರೂ ಒಂದು ಮಾತು ಸತ್ಯ ಆಗಿದೆಯಾ. ಅವರ ಪಕ್ಷದಲ್ಲೇ ಐದಾರು ಗುಂಪುಗಳಾಗಿದೆ ಅದನ್ನೇ ನೋಡಿಕೊಳ್ಳಲಿ. ನಮ್ಮ ಪಕ್ಷದ ವಿಚಾರ ಬಿಡಿ. ನಿಮ್ಮ ಪಕ್ಷ ನೆಲ ಕಚ್ಚಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಲಿ ಎಂದು ಚುಚ್ಚಿ ನುಡಿದರು.

2028ಕ್ಕೆ 150ಕ್ಕೂ ಹೆಚ್ಚು ಸ್ಥಾನ:

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕಾದರೆ ಕನಿಷ್ಠ 15 ವರ್ಷ ಬೇಕು. 2028ಕ್ಕೂ ನಮ್ಮದೇ ಸರ್ಕಾರ ಅಧಿಕಾರಕ್ಕೆ ಬರಲಿದೆ. ಮುಂದಿನ ಚುನಾವಣೆಯಲ್ಲಿ 150 ಸ್ಥಾನ ದಾಟುತ್ತೇವೆ. ನಮಗೆ ಜನರ ಬೆಂಬಲ ಇದೆ. ಉಪ ಚುನಾವಣೆಯಲ್ಲಿ ನಾವೇ ಗೆದ್ದಿಲ್ವಾ? ಒಳ್ಳೆಯ ಸರ್ಕಾರ ಕೊಟ್ಟಿದ್ದೇವೆ. ಅದಕ್ಕೆ ಜನರು ಗೆಲ್ಲಿಸಿದ್ದಾರೆ. 2028ಕ್ಕೆ 150 ಸೀಟ್ ಗೆದ್ದೇ ಗೆಲ್ಲುತ್ತೇವೆ ಬರೆದಿಟ್ಟುಕೊಳ್ಳಿ ಎಂದು ವಿಶ್ವಾಸದಿಂದ ನುಡಿದರು.

ಒಂದು ಮನೆ ಕೊಟ್ಟಿದ್ದರೂ ರಾಜಕೀಯ ನಿವೃತ್ತಿ:

ಸ್ಲಂ ಬೋರ್ಡ್, ರಾಜೀವ್ ಗಾಂಧಿ ಯೋಜನೆಯಲ್ಲಿ ಒಂದು ಮನೆಯನ್ನ ಬಿಜೆಪಿ ಕೊಟ್ಟಿದ್ದರೂ ನಾನು ದೇವರಾಣೆ ರಾಜಕೀಯ ನಿವೃತ್ತಿ ತಗೆದುಕೊಳ್ಳುತ್ತೇನೆ. ಬಿಜೆಪಿ ಸಾಬೀತು ಮಾಡಿದರೆ ಸಂಜೆಯೇ ರಾಜ್ಯಪಾಲರ ಮನೆಗೆ ಹೋಗಿ ರಾಜೀನಾಮೆ ಕೊಡುವೆ ಎಂದು ಅಶೋಕ್‌ ಮತ್ತು ವಿಜಯೇಂದ್ರ ಅವರಿಗೆ ಬಹಿರಂಗ ಸವಾಲು ಹಾಕಿದ ಜಮೀರ್‌ ಅಹಮದ್‌, ನಿಮಗೆ ತಾಕತ್ತು, ಧಮ್ಮು ಇದೆಯಾ. ಬಿಜೆಪಿಯವರಿಗೆ ಟೀಕೆ ಮಾಡೋದು ಬಿಟ್ಟು ಬೇರೆ ಯಾವ ಕೆಲಸವೂ ಇಲ್ಲ. ಯಾವುದಾದರೂ ಅಭಿವೃದ್ಧಿ ಕೆಲಸ ಮಾಡಿದ್ದಾರಾ ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ಮಾಡಿರುವ ಭಾಗ್ಯದ ಬಗ್ಗೆ ನಾವು ಹೇಳುತ್ತೇವೆ. ಬಿಜೆಪಿಯವರ ಕಾರ್ಯಕ್ರಮ ಬರೀ ಸೊನ್ನೆ. ಅವರ ಅಜೆಂಡಾ ಹಿಂದೂ-ಮುಸ್ಲಿಂ ಅಷ್ಟೇ. ಅವರಿಗೆ ಹಿಂದೂ-ಮುಸ್ಲಿಂ ಬೇಕಾಗಿಲ್ಲ ಕುರ್ಚಿ ಬೇಕಷ್ಟೆ ಎಂದು ಛೇಡಿಸಿದರು.

ಪ್ರಧಾನಿ ನರೇಂದ್ರ ಮೋದಿಯವರೇ 15 ಲಕ್ಷ ಎಲ್ಲಿ?, ಗ್ಯಾರಂಟಿಗಳ ಬಗ್ಗೆ ಟೀಕೆ ಮಾಡಿದರು. ನಮ್ಮ ಸರ್ಕಾರ ಗ್ಯಾರಂಟಿಗಳನ್ನು ಕೊಟ್ಟು ಸಕ್ಸಸ್ ಅಗಿದೆ. ಸಿದ್ದರಾಮಯ್ಯ ಹಿಂದೆ ಸ್ಲಂ ಬೋರ್ಡ್‌ಗೆ 1.80 ಲಕ್ಷ ಮನೆ ಕೊಟ್ಟರು.

ರಾಜೀವ್ ಗಾಂಧಿ ವಸತಿ ಯೋಜನೆಯಡಿ 800 ಮನೆ ನೀಡಿದರು. ಒಟ್ಟು 2.30 ಲಕ್ಷ ಮನೆಗಳನ್ನು ಸಿದ್ದರಾಮಯ್ಯ ಜಾರಿ ಮಾಡಿದರು.

ಮನೆಗಳ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಕೇವಲ 1.5 ಲಕ್ಷ ರು. ಕೊಡುತ್ತಾರೆ. ನಾನು ಮಂತ್ರಿಯಾಗಿ ಮನೆಗಳನ್ನು ಪೂರ್ಣಗೊಳಿಸಲು 9.5 ಸಾವಿರ ಕೋಟಿ ರು. ಬೇಕಾಗುತ್ತೆ. 39,700 ಮನೆಗಳನ್ನ ಕೊಟ್ಟಿದ್ದೇವೆ. ಬಿಜೆಪಿಯವರು ಏಕೆ ಕೊಟ್ಟಿಲ್ಲ? ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷಕ್ಕೆ ಮಾತ್ರನಾ ಬಡವರ ಬಗ್ಗೆ ಕಾಳಜಿ. ನವೆಂಬರ್‌ನಲ್ಲಿ ಮತ್ತೆ ಮನೆಗಳನ್ನು ಬಡವರಿಗೆ ಕೊಡುತ್ತಿದ್ದೇವೆ ಎಂದರು.

ಘಟನೆ ನಡೆಯಬಾರದಿತ್ತು:

ಬೆಳಗಾವಿ ಕಲ್ಲು ತೂರಾಟ ವಿಚಾರವಾಗಿ ಪ್ರತಿಕ್ರಿಯಿಸಿ, ಆ ರೀತಿಯ ಘಟನೆ ನಡೆಯಬಾರದಿತ್ತು. ನಮ್ಮ ರಾಜ್ಯ ಒಟ್ಟಾಗಿ ಬಾಳುತ್ತಿರುವ ರಾಜ್ಯ. ಆ ಘಟನೆ ಕೇಳಿ ನನಗೂ ನೋವಾಯಿತು. ಇದನ್ನು ಯಾರೋ ಆಗದವರು ಮಾಡುತ್ತಿದ್ದಾರೆ. ನಾವೆಲ್ಲರೂ ಒಂದೇ ಜಾತಿ, ಧರ್ಮಕ್ಕೆ ಸೇರಿದವರು. ಯಾರೂ ಹುಟ್ಟುತ್ತಾ ಮುಸ್ಲಿಂ, ಹಿಂದೂ ಆಗಿ ಹುಟ್ಟಬೇಕು ಅಂತ ಕೇಳುವುದಿಲ್ಲ. ರಾಜಕಾರಣಿಗಳು ಜಾತಿ ಮಾಡಬೇಡಿ. ನಮ್ಮನ್ನು ನಂಬಿ ಲಕ್ಷಾಂತರ ಜನರು ನಮ್ಮೊಂದಿಗೆ ಇರುತ್ತಾರೆ. ಜಾತಿ ರಾಜಕೀಯ ಮಾಡುವುದಾದರೆ ಮನೆಯಲ್ಲಿ ಕುಳಿತು ಮಾಡಿ. ರಾಜಕೀಯಕ್ಕೆ ಬಂದರೆ ಜಾತಿ ಮಾಡಬೇಡಿ. ಜಾತಿ ರಾಜಕಾರಣ ಮಾಡಿದರೆ ನಮ್ಮ ಮಕ್ಕಳು ಹುಳ ಬಿದ್ದು ಸಾಯುವರು ಎಂದು ಎಚ್ಚರಿಸಿದರು.

ಇದೇ ವೇಳೆ ಮುಡಾ ಅಧ್ಯಕ್ಷ ನಹೀಂ ಹಾಜರಿದ್ದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಮೈಸೂರು ರನ್‌ವೇಯಲ್ಲಿ ಸಿದ್ದು, ಡಿಕೆ ಜತೆ ರಾಗಾ ಪ್ರತ್ಯೇಕ ಚರ್ಚೆ
ಅಕ್ರಮ ಕಟ್ಟಡ ಪರಿಶೀಲಿಸಿ ತೆರವಿಗೆ ತಂಡ ರಚಿಸಲು ಮಹೇಶ್ವರ್ ರಾವ್ ಸೂಚನೆ