ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಅಲ್ಪ ಸಂಖ್ಯಾತರ ನಾಯಕ : ವಿರೋಧ ಪಕ್ಷದ ನಾಯಕ ಆರ್.ಅಶೋಕ್

KannadaprabhaNewsNetwork |  
Published : Dec 03, 2024, 12:32 AM ISTUpdated : Dec 03, 2024, 05:59 AM IST
೨ಕೆಎಂಎನ್‌ಡಿ-೮ಮಂಡ್ಯದ ಮಹಾವೀರ ವೃತ್ತದ ಬಳಿಯ ಟೀ ಅಂಗಡಿಯೊಂದರ ಬಳಿ ವಿರೋಧಪಕ್ಷದ ನಾಯಕ ಆರ್.ಅಶೋಕ್, ವಿಧಾನಪರಿಷತ್ ಸದಸ್ಯ ರವಿಕುಮಾರ್, ಮುಖಂಡ ಸಚ್ಚಿದಾನಂದ, ಅಶೋಕ್‌ಕುಮಾರ್ ಜೊತೆ ಚಹಾ ಸೇವಿಸಿದರು. | Kannada Prabha

ಸಾರಾಂಶ

ವಾಲ್ಮೀಕಿ ಹಗರಣ, ದಲಿತರ ಹಣ ದುರ್ಬಳಕೆಯಿಂದ ಹಿಂದುಳಿದ ವರ್ಗದವರು, ದಲಿತರ ಶಕ್ತಿಯನ್ನು ಕಳೆದುಕೊಂಡಿರುವ ಸಿದ್ದರಾಮಯ್ಯ ಮುಸಲ್ಮಾನರ ಓಲೈಕೆಗೆ ನಿಂತಿದ್ದಾರೆ. ಮೈಸೂರಿನಲ್ಲಿ 101  ಕುರುಬರ ಮನೆಗಳಿಗೆ ವಕ್ಫ್ ಆಸ್ತಿ ಎಂದು ನೋಟೀಸ್ ಜಾರಿ ಮಾಡಿದ್ದರೂ ರಕ್ಷಣೆಗೆ ನಿಂತಿಲ್ಲ.

  ಮಂಡ್ಯ : ಸಿದ್ದರಾಮಯ್ಯ ಈಗ ಅಹಿಂದ ನಾಯಕರಲ್ಲ. ಹಿಂದುಳಿದವರು ಮತ್ತು ದಲಿತರ ಅವರು ಕೇವಲ ಅಲ್ಪಸಂಖ್ಯಾತರ ನಾಯಕರಾಗಷ್ಟೇ ಉಳಿದುಕೊಂಡಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಟೀಕಿಸಿದರು.

ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ವಾಲ್ಮೀಕಿ ಹಗರಣ, ದಲಿತರ ಹಣ ದುರ್ಬಳಕೆಯಿಂದ ಹಿಂದುಳಿದ ವರ್ಗದವರು, ದಲಿತರ ಶಕ್ತಿಯನ್ನು ಕಳೆದುಕೊಂಡಿರುವ ಸಿದ್ದರಾಮಯ್ಯ ಮುಸಲ್ಮಾನರ ಓಲೈಕೆಗೆ ನಿಂತಿದ್ದಾರೆ. ಮೈಸೂರಿನಲ್ಲಿ 101 ಕುರುಬರ ಮನೆಗಳಿಗೆ ವಕ್ಫ್ ಆಸ್ತಿ ಎಂದು ನೋಟಿಸ್ ಜಾರಿ ಮಾಡಿದ್ದರೂ ರಕ್ಷಣೆಗೆ ನಿಂತಿಲ್ಲವೆಂದು ದೂರಿದರು.

ರೈತರ ಜಮೀನನ್ನು ಅಕ್ರಮವಾಗಿ ವಕ್ಫ್ ಕಬಳಿಕೆ ಮಾಡುತ್ತಿರುವ ಬಗ್ಗೆ ವಿಧಾನ ಮಂಡಲದ ಅಧಿವೇಶನದಲ್ಲಿ ನಿಲುವಳಿ ಸೂಚನೆಯಲ್ಲಿ ಚರ್ಚೆಗೆ ಕೈಗೆತ್ತಿಕೊಳ್ಳುವಂತೆ ಒತ್ತಡ ಹಾಕಲಾಗುವುದು. ಕಾಂಗ್ರೆಸ್ ಸರ್ಕಾರ ಮುಸ್ಲಿಮರ ತುಷ್ಟೀಕರಣದ ರಾಜಕಾರಣ ಮಾಡುತ್ತಿದೆ. ಮುಸ್ಲಿಂ ಸಮುದಾಯದ ಕಣ್ಣಿಗೆ ಬೆಣ್ಣೆ ಹಿಂದೂ ಸಮುದಾಯದ ಕಣ್ಣಿಗೆ ಸುಣ್ಣ ಹಚ್ಚುವ ಮಾದರಿಯಲ್ಲಿ ಆಡಳಿತ ನಡೆಸುತ್ತಿದೆ. ಮುಸ್ಲಿಮರಿಗೆ ಪೂರ್ತಿ ಅಧಿಕಾರ ನೀಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆಂಧ್ರಪ್ರದೇಶ ಸರ್ಕಾರದ ಮಾದರಿಯಲ್ಲಿ ಕರ್ನಾಟಕದಲ್ಲೂ ಸಹ ವಕ್ಫ್ ಮಂಡಳಿಯನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿ ಸದನದಲ್ಲಿ ಹೋರಾಟ ಮಾಡುವುದಾಗಿ ತಿಳಿಸಿದರಲ್ಲದೆ, ವಕ್ಫ್ ಮಂಡಳಿ ವಿರುದ್ದ ನಿರ್ಣಯ ಕೈಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿಯವರನ್ನೂ ಒತ್ತಾಯಿಸಲಾಗುವುದು ಎಂದು ಹೇಳಿದರು.

ಸಾವಿನ ಭಾಗ್ಯ:  ಹಾಸನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮಾವೇಶ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಬಾಣಂತಿಯರ ಸಾವಿನ ಸಂಖ್ಯೆ ಹೆಚ್ಚಾಗಿದೆ. ಕಾಂಗ್ರೆಸ್ ಸರ್ಕಾರ ಸಾವಿನ ಭಾಗ್ಯ ನೀಡುತ್ತಿದೆ. ೧೧೧ ಶಿಶುಗಳ ಮಾರಣ ಹೋಮ ನಡೆದಿದೆ. ಒಂದು ಕಡೆ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಗಳ ಕೊರತೆಯ ಜೊತೆಗೆ ಕಳಪೆ ಔಷಧಗಳು ಸರ್ಕಾರಿ ಆಸ್ಪತ್ರೆಗಳಿಗೆ ಸರಬರಾಜಾಗುತ್ತಿವೆ. ಇದು ಮೆಡಿಕಲ್ ಮಾಫಿಯಾವಾಗಿದೆ. ಈ ಬಗ್ಗೆಯೂ ಸದನದಲ್ಲಿ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು.

ಸ್ವಾಮೀಜಿ ಮುಟ್ಟಿದರೆ ಹುಷಾರ್ :

ಶ್ರೆ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಇದೇ ನೆಪವೊಡ್ಡಿ ಸ್ವಾಮೀಜಿಯವರನ್ನು ಮುಟ್ಟಿದರೆ ಹುಷಾರ್ ಎಂದು ಎಚ್ಚರಿಕೆ ನೀಡಿದ ಅವರು, ವಕ್ಫ್ ರೈತರ ಜಮೀನುಗಳನ್ನು ನುಂಗುತ್ತಿರುವುದನ್ನು ಕಂಡು ನೋವಿನಿಂದ ಆ ಮಾತನ್ನು ಹೇಳಿದ್ದಾರೆ. ವಿಧಾನ ಸೌಧದ ಮೊಗಸಾಲೆಯಲ್ಲೇ ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆ ಕೂಗಿದ್ದರು. ಅವರಿಗೆ ಬಿರಿಯಾನಿ ಹಾಕಿ ಕಳುಹಿಸಿದರು. ಕೇಂದ್ರ ಸಚಿವ ಕುಮಾರಸ್ವಾಮಿ ಅವರನ್ನು ಕರಿಯಾ ಎಂದು ನಿಂದಿಸಿದರು. ಆದರೂ ಕ್ರಮ ಕೈಗೊಂಡಿಲ್ಲ. ಮುಸಲ್ಮಾನರು ಏನು ಬೇಕಾದರೂ ಹೇಳಬಹುದು, ಕೂಗಬಹುದು. ಹಿಂದೂಗಳು ಬಾಯಿಬಿಟ್ಟರೆ ಮಾತ್ರ ಕೇಸ್. ಇದು ಕಾಂಗ್ರೆಸ್ ಸರ್ಕಾರದ ನೀತಿ ಎಂದು ದೂರಿದರು.

ನಾನು ಅರಣ್ಯ ಸಚಿವನೇ ಆಗಿಲ್ಲ:  ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ವಿರುದ್ಧ ಪ್ರಕರಣ ದಾಖಲಿಸಿದವರು ಯಾರು ಎನ್ನುವುದನ್ನು ಮಠದವರು ಹೇಳಬೇಕು, ನಾನೇನಾದರೂ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದೇನೆ ಎಂದು ಹೇಳಿಕೆ ನೀಡಿದರೆ ಇಂದೇ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸಚಿವ ಚಲುವರಾಯಸ್ವಾಮಿ ಆರೋಪಕ್ಕೆ ತಿರುಗೇಟು ನೀಡಿದರು.

ನನ್ನ ರಾಜಕೀಯ ಜೀವನದಲ್ಲಿ ನಾನು ಅರಣ್ಯ ಸಚಿವನಾಗಿಯೇ ಇಲ್ಲ. ಅಂದು ಚೆನ್ನಿಗಪ್ಪ ಅರಣ್ಯ ಸಚಿವರಾಗಿದ್ದವರು, ಅವರನ್ನು ಕೇಳಲಿ. ಅದು ಬಿಟ್ಟು ನನ್ನ ಮೇಲೆ ಹೇಳಿದರೆ ಹೇಗೆ ಎಂದು ಪ್ರಶ್ನಿಸಿದರು.

ಮೈಸೂರಿನ ಮೂಡಾ ಪ್ರಕರಣ ಮುಚ್ಚಿಹಾಕಲು ಹಾಸನದಲ್ಲಿ ಸಮಾವೇಶ ಮಾಡುತ್ತಿದ್ದಾರೆ. ಈಗ ಇ.ಡಿ. ತನಿಖೆ ಶುರು ಮಾಡಿದೆ. ಸಿಬಿಐ ಕೂಡ ತನಿಖೆಗೆ ಮುಂದಾಗುವ ಸಾಧ್ಯತೆಗಳಿವೆ. ಸಿದ್ದರಾಮಯ್ಯನವರಿಗೆ ಭಯ ಕಾಡುತ್ತಿದ್ದು ಅದಕ್ಕಾಗಿ ಹಾಸನದಲ್ಲಿ ಮುಡಾ ಉತ್ಸವ ಮಾಡುತ್ತಿದ್ದಾರೆ ಎಂದು ಜರಿದರು.

ರೈತ ವಿರೋಧಿ ಸರ್ಕಾರ:  ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಮಾತನಾಡಿ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವುದು ರೈತ ವಿರೋಧಿ ಸರ್ಕಾರ. ಕೃಷಿ ಸಮ್ಮಾನ್ ಯೋಜನೆಯಡಿ ಕೇಂದ್ರ ಸರ್ಕಾರ ರೈತರಿಗೆ ೬ ಸಾವಿರ ರು. ರಾಜ್ಯ ಸರ್ಕಾರ ೪ ಸಾವಿರ ರು.ನೀಡುತ್ತಿದ್ದೆವು. ಆದರೆ ಕಾಂಗ್ರೆಸ್ ಸರ್ಕಾರ ತನ್ನ ಪಾಲಿನ ೪ ಸಾವಿರ ರು. ಹಣ ನೀಡುವುದನ್ನು ನಿಲ್ಲಿಸಿದೆ ಇದು ರೈತ ವಿರೋಧಿಯಲ್ಲವೇ ಎಂದು ಪ್ರಶ್ನಿಸಿದರು.

ಹಾಲು ಉತ್ಪಾದಕರಿಗೆ ೯ ತಿಂಗಳ ಪ್ರೋತ್ಸಾಹ ಧನ ನೀಡಿಲ್ಲ. ನೀರಾವರಿ ಯೋಜನೆಗೆ ೧ ರು. ನೀಡಿಲ್ಲ. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಹೇಳೋರಿಲ್ಲ, ಕೇಳೋರಿಲ್ಲ ಎಂಬಂತಾಗಿದೆ. ಅಲ್ಪಸಂಖ್ಯಾತರ ತುಷ್ಠೀಕರಣ ಪರಾಕಾಷ್ಠೆಯಾಗಿದೆ. ಅಲ್ಪಸಂಖ್ಯಾತರ ಅಭಿವೃದ್ಧಿಗೆ ೧೦ ಸಾವಿರ ಕೋಟಿ ರು., ದಲಿತರ ೨೫ ಸಾವಿರ ಕೋಟಿ ಹಣವನ್ನು ಗ್ಯಾರೆಂಟಿ ಯೋಜನೆಗಳಿಗೆ ಬಳಸಿಕೊಳ್ಳುತ್ತಾರೆ. ಒಳ ಮೀಸಲಾತಿ ನೀಡಿಲ್ಲ. ಎಸ್‌ಸಿಪಿ, ಟಿಎಸ್‌ಪಿ ಅನುದಾನ ನೀಡಿಲ್ಲ. ಮಕ್ಕಳಿಗೆ ಪ್ರತಿ ವರ್ಷ ೨ ಜೊತೆ ಸಮವಸ್ತ್ರ ನೀಡಲಾಗುತ್ತಿತ್ತು. ಈಗ ಕೇವಲ ಒಂದು ಸಮವಸ್ತ್ರ ನೀಡುತ್ತಿದೆ. ವೈಧ್ಯಕೀಯ ವಿದ್ಯಾರ್ಥಿಗಳ ಶುಲ್ಕ ಶೇ. ೧೦ರಷ್ಟು ಹೆಚ್ಚಳ ಮಾಡಿದ್ದಾರೆ. ವಿದ್ಯಾರ್ಥಿ ವೇತನ ಕೊಡುತ್ತಿಲ್ಲ. ಇದೊಂದು ಎಟಿಎಂ ಸರ್ಕಾರವಾಗಿದೆ ಎಂದು ಆರೋಪಿಸಿದರು.

ಮುಖಂಡರಾದ ಎಸ್. ಸಚ್ಚಿದಾನಂದ, ಎಚ್.ಆರ್. ಅಶೋಕ್‌ಕುಮಾರ್ ಇತರರು ಇದ್ದರು.

ಬಣ ಜಗಳ ವರಿಷ್ಠರು ಸರಿಮಾಡುವರು: ಸುಮಲತಾ

ಕನ್ನಡಪ್ರಭ ವಾರ್ತೆ ಮಂಡ್ಯಬಿಜೆಪಿ ಬಣಜಗಳವನ್ನು ವರಿಷ್ಠರು ಬಗೆಹರಿಸುತ್ತಾರೆ. ನಾನು ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಮಾಜಿ ಸಂಸದೆ ಸುಮಲತಾ ಹೇಳಿದರು

ಪಕ್ಷದೊಳಗೆ ಸಣ್ಣಪುಟ್ಟ ವೈಮನಸ್ಸುಗಳಿರುವುದು ಸಹಜ. ಅದನ್ನು ಸರಿಪಡಿಸಲು ವರಿಷ್ಠರಿದ್ದಾರೆ. ಎರಡು ಗುಂಪಿನ ನಡುವಿನ ಭಿನ್ನಾಭಿಪ್ರಾಯವನ್ನು ಬಗೆಹರಿಸುತ್ತಾರೆ. ಇದರಲ್ಲಿ ಬಹಳ ಆಳವಾಗಿ ನಾನು ಭಾಗಿಯಾದರೆ ಸರಿ ಹೋಗುವುದಿಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.ಚಂದ್ರಶೇಖರ ಸ್ವಾಮೀಜಿ ವಿರುದ್ಧ ಎಫ್‌ಐಆರ್‌ ದಾಖಲಾಗಿರುವುದು ಬೇಸರದ ವಿಚಾರ. ಎಲ್ಲ ವಿಚಾರದಲ್ಲೂ ರಾಜಕೀಯ ತರುತ್ತಿದ್ದಾರೆ. ಇದನ್ನು ಎಕ್ಸ್‌ಟ್ರೀಮ್‌ ಲೆವೆಲ್‌ಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಇದನ್ನು ನೋಡಿದರೆ ಭಯವಾಗುತ್ತದೆ. ಎಲ್ಲರಿಗೂ ವಾಕ್ ಸ್ವಾತಂತ್ರ್ಯ ಇರುತ್ತದೆ. ಸ್ವಾಮೀಜಿ ಅವರೇ ತಪ್ಪಾಯ್ತು ಎಂದ ಮೇಲೆ ಮುಂದುವರಿಸಿಕೊಂಡು ಹೋಗುವುದು ಸರಿಯಲ್ಲ ಎಂದರು.

ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮಂಡ್ಯವನ್ನು ಆಯ್ಕೆ ಮಾಡಿರುವುದು ಹೆಮ್ಮೆಯ ವಿಚಾರ. ಮಂಡ್ಯ ಜಿಲ್ಲೆಯ ಸೊಗಡನ್ನು ಪ್ರಪಂಚಕ್ಕೆ ತೋರಿಸಲು ಅವಕಾಶ ಈ ಮೂಲಕ ಸಿಗುತ್ತಿದೆ. ಚಿತ್ರರಂಗದವರಿಗೂ ಕೂಡ ಅಹ್ವಾನ ಸಿಗುತ್ತದೆ. ಎಲ್ಲರನ್ನು ಜೊತೆಗೂಡಿ ಕಾರ್ಯಕ್ರಮ ಮಾಡಿದರೆ ಚೆನ್ನಾಗಿ ಇರುತ್ತದೆ ಎಂದರು.

PREV

Recommended Stories

ಭಯಪಟ್ಟು ಮಾಡಿರುವ ಪಾತ್ರ ನನ್ನದು : ಪ್ರಜ್ವಲ್ ದೇವರಾಜ್
ಸ್ಪೀಕರ್ ವಿರುದ್ಧ ಹೊರಟ್ಟಿ ಸಿಟ್ಟು : ಅಸಮಾಧಾನಕ್ಕೆ ಪತ್ರದಲ್ಲಿ ಖಾದರ್‌ ಸ್ಪಷ್ಟನೆ