ಗೌಡ್ರು ಒಕ್ಕಲಿಗ ನಾಯಕರನ್ನು ಬೆಳೆಸಿಲ್ಲ - ಅದರ ಫಲ ಎಚ್‌ಡಿಡಿ ಅನುಭವಿಸ್ತಿದ್ದಾರೆ : ಸಿದ್ದರಾಮಯ್ಯ

Published : Dec 06, 2024, 12:45 PM IST
Siddaramaiah

ಸಾರಾಂಶ

ಸಿದ್ದರಾಮಯ್ಯನನ್ನು ಉಪ ಮುಖ್ಯಮಂತ್ರಿ ಮಾಡಿ ನಾನು ರಾಜಕೀಯವಾಗಿ ಬೆಳೆಸಿದೆ ಎಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಹೇಳುತ್ತಾ ಬಂದಿದ್ದಾರೆ. ಆದರೆ, ನಾನು ಹಾಗೂ ಜಾಲಪ್ಪ ಬೆನ್ನಿಗೆ ನಿಲ್ಲದಿದ್ದರೆ ರಾಮಕೃಷ್ಣ ಹೆಗಡೆ ಅವರ ಪೈಪೋಟಿ ಎದುರಿಸಿ ದೇವೇಗೌಡ ಅವರು ಮುಖ್ಯಮಂತ್ರಿಯಾಗುತ್ತಲೇ ಇರಲಿಲ್ಲ.  

ಹಾಸನ : ಸಿದ್ದರಾಮಯ್ಯನನ್ನು ಉಪ ಮುಖ್ಯಮಂತ್ರಿ ಮಾಡಿ ನಾನು ರಾಜಕೀಯವಾಗಿ ಬೆಳೆಸಿದೆ ಎಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಹೇಳುತ್ತಾ ಬಂದಿದ್ದಾರೆ. ಆದರೆ, ನಾನು ಹಾಗೂ ಜಾಲಪ್ಪ ಬೆನ್ನಿಗೆ ನಿಲ್ಲದಿದ್ದರೆ ರಾಮಕೃಷ್ಣ ಹೆಗಡೆ ಅವರ ಪೈಪೋಟಿ ಎದುರಿಸಿ ದೇವೇಗೌಡ ಅವರು ಮುಖ್ಯಮಂತ್ರಿಯಾಗುತ್ತಲೇ ಇರಲಿಲ್ಲ. ದೇವೇಗೌಡರನ್ನು ಮುಖ್ಯಮಂತ್ರಿ ಮಾಡಿದ್ದೇ ನಾವು!

ಹೀಗಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಒಂದು ಕಾಲದ ಗುರು ಎಂದೇ ಬಿಂಬಿತರಾಗಿದ್ದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರಿಗೆ ಭರ್ಜರಿ ತಿರುಗೇಟು ನೀಡಿದ್ದಾರೆ. ಅಷ್ಟೇ ಅಲ್ಲ, ದೇವೇಗೌಡ ಅವರೇ ನಿಮ್ಮ ರಾಜಕೀಯ ಕಾಲ ಮುಗಿಯಿತು ಎಂದು ಅಬ್ಬರಿಸಿದ್ದಾರೆ.

ಕೆಪಿಸಿಸಿ ಮತ್ತು ಸ್ವಾಭಿಮಾನಿ ಸಂಘಟನೆ ಜಂಟಿಯಾಗಿ ಹಾಸನದಲ್ಲಿ ಆಯೋಜಿಸಿದ್ದ ಜನ ಕಲ್ಯಾಣ ಸಮಾವೇಶ ಅಕ್ಷರಶಃ ಸಿದ್ದರಾಮೋತ್ಸವವಾಗಿ ಪರಿವರ್ತಿತವಾದರೆ, ಈ ಉತ್ಸವದಲ್ಲಿ ಬೊಬ್ಬಿರಿದ ಸಿದ್ದರಾಮಯ್ಯ ಅವರು ಎಚ್‌.ಡಿ.ದೇವೇಗೌಡ, ಜೆಡಿಎಸ್‌-ಬಿಜೆಪಿ ಮೈತ್ರಿ ಕೂಟದ ವಿರುದ್ಧ ಭರ್ಜರಿ ವಾಗ್ದಾಳಿ ನಡೆಸಿದರು.

ಜೆಡಿಎಸ್‌ನ ಭದ್ರಕೋಟೆ ಎನಿಸಿದ್ದ ಹಾಸನದಲ್ಲಿ ನಿಂತು ದೇವೇಗೌಡ ಅವರನ್ನೇ ಕೇಂದ್ರವಾಗಿಸಿ ವಾಕ್ ಪ್ರಹಾರ ಮಾಡಿದ ಸಿದ್ದರಾಮಯ್ಯ ಅವರು, ದೇವೇಗೌಡ ಅವರು ನನ್ನನ್ನು ಬೆಳೆಸಿದೆ ಎನ್ನುತ್ತಾರೆ. ನನ್ನನ್ನು ಬಿಡಿ ಅವರು ಖುದ್ದು ಒಕ್ಕಲಿಗ ನಾಯಕರನ್ನೇ ಬೆಳೆಸಲಿಲ್ಲ ಎಂದರು.

ದೇವೇಗೌಡ, ಕುಮಾರಸ್ವಾಮಿ ಯಾವ ಒಕ್ಕಲಿಗ ನಾಯಕರನ್ನೂ ಬೆಳೆಸಲಿಲ್ಲ. ಬಚ್ಚೇಗೌಡರು, ವೈ.ಕೆ.ರಾಮಯ್ಯ, ಬೈರೇಗೌಡರು, ಕೃಷ್ಣಪ್ಪ, ಚಲುವರಾಯಸ್ವಾಮಿ ಸೇರಿ ತಮ್ಮೊಂದಿಗೆ ಇದ್ದ ಒಕ್ಕಲಿಗ ನಾಯಕರನ್ನು ರಾಜಕೀಯವಾಗಿ ಮುಗಿಸಲು ಯತ್ನಿಸಿದರು. ಇದಕ್ಕಾಗಿಯೇ ಒಕ್ಕಲಿಗ ನಾಯಕರಾದ ದಿ.ಎಂ.ಟಿ.ಕೃಷ್ಣಪ್ಪ ಅವರು, ‘ದೇವೇಗೌಡ ಅವರ ಅಂತ್ಯ ಅವರೇ ನೋಡುತ್ತಾರೆ’ ಎಂದಿದ್ದರು. ಅದು ಈಗ ನಿಜವಾಗುತ್ತಿದೆ. ಒಕ್ಕಲಿಗ ನಾಯಕರನ್ನು ರಾಜಕೀಯವಾಗಿ ಮುಗಿಸಿದ್ದರ ಫಲ ಈಗ ದೇವೇಗೌಡರು ನೋಡುವಂತಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಉಪ ಚುನಾವಣೆ ಸಂದರ್ಭದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ನನ್ನ ಗರ್ವಭಂಗ ಮಾಡುತ್ತೇನೆ, ಕಾಂಗ್ರೆಸ್ ಸರ್ಕಾರ ಕಿತ್ತೊಗೆಯುತ್ತೇನೆ ಎಂದಿದ್ದರು. ನನಗಿಂತ 15 ವರ್ಷ ದೊಡ್ಡವರಾದ ಅವರು ವಯಸ್ಸಿಗೆ ತಕ್ಕಂತೆ ಮಾತನಾಡಬೇಕಿತ್ತು. ನಾನೆಂದೂ ಅಹಂಕಾರಪಟ್ಟಿಲ್ಲ. ಹೀಗಾಗಿ ನನ್ನ ಗರ್ವಭಂಗ ಆಗಲು ಜನರು ಬಿಡುವುದಿಲ್ಲ ಎಂದರು.

ಜಾತ್ಯತೀತ ಜನತಾದಳ ಯಾವಾಗ ಕೋಮುವಾದಿ ಪಕ್ಷದೊಂದಿಗೆ ಸೇರಿಕೊಂಡು ರಾಜಕೀಯ ಆರಂಭಿಸಿತೋ ಆಗಲೇ ಅದರ ಹೆಸರಿನಲ್ಲಿರುವ ಜಾತ್ಯತೀತ ಪದ ಅರ್ಥ ಕಳೆದುಕೊಂಡಿದೆ. ದೇವೇಗೌಡ ಅವರೇ ನಿಮ್ಮ ರಾಜಕೀಯ ಕಾಲ ಮುಗಿದಿದೆ. ಪಾಪ... ನನ್ನ ಉಸಿರು ಇರುವವರೆಗೂ ರಾಜಕೀಯ ಮಾಡುತ್ತೇನೆ ಎಂದು ದೇವೇಗೌಡ ಹೇಳಿದ್ದಾರೆ. ಮಾಡಲಿ, ಅವರಿಗೆ ದೇವರು ಉತ್ತಮ ಆರೋಗ್ಯ ನೀಡಲಿ. ಆದರೆ, ಅವರ ರಾಜಕೀಯ ಕಾಲ ಮುಗಿದಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಮತದಾರರೇ ನನ್ನ ದೇವರು

ಚಲನಚಿತ್ರ ನಟ ಡಾ.ರಾಜ್‌ ಕುಮಾರ್ ಅವರು ಅಭಿಮಾನಿಗಳನ್ನು ದೇವರು ಎನ್ನುತ್ತಿದ್ದರು. ಹಾಗೆಯೇ ನನಗೆ ಮತದಾರ ಪ್ರಭುಗಳೇ ದೇವರು. ಆ ದೇವರುಗಳು ಉಪಚುನಾವಣೆಯಲ್ಲಿ 3 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲ್ಲುವಂತೆ ಮಾಡಿದರು. ಚನ್ನಪಟ್ಟಣದಲ್ಲಿ ಹಾಸನದ ಮಹಾನ್ ನಾಯಕರ ಮೊಮ್ಮಗ ನಿಖಿಲ್ ಮತ್ತು ಶಿಗ್ಗಾಂವಿಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಗ ಭರತ್‌ರನ್ನೇ ಮತದಾರ ದೇವರುಗಳು ಸೋಲಿಸಿ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿದರು. ಮತದಾರರಿಗೆ, ಕಾರ್ಯಕರ್ತರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಗ್ಯಾರಂಟಿ ನಿಲ್ಲಲ್ಲ: ಬಿಜೆಪಿ-ಜೆಡಿಎಸ್‌ನವರು ಗ್ಯಾರಂಟಿಗಳನ್ನು ವಿರೋಧಿಸುವ ಜನ ವಿರೋಧಿಗಳು. ನಾವು ಗ್ಯಾರಂಟಿ ಯೋಜನೆ ಘೋಷಿಸಿದಾಗ ಪ್ರಧಾನಿ ಮೋದಿ ಆದಿಯಾಗಿ ವಿರೋಧ ಪಕ್ಷದ ನಾಯಕರು ವಿರೋಧಿಸಿದ್ದರು. ನಾವು ವರ್ಷದಲ್ಲಿ ಗ್ಯಾರಂಟಿ ಯೋಜನೆಗಳಿಗಾಗಿ 56 ಸಾವಿರ ಕೋಟಿ ರು. ಖರ್ಚು ಮಾಡುತ್ತಿದ್ದೇವೆ. ಅಭಿವೃದ್ಧಿ ಯೋಜನೆಗಳಿಗೆ 60 ಸಾವಿರ ಕೋಟಿ ರು.ಗೂ ಹೆಚ್ಚಿನ ಹಣ ವ್ಯಯಿಸುತ್ತಿದ್ದೇವೆ. ಎಷ್ಟೇ ವಿರೋಧ ಮಾಡಿದರೂ ಯಾವುದೇ ಕಾರಣಕ್ಕೂ ಗ್ಯಾರಂಟಿಗಳು ನಿಲ್ಲುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಚುನಾವಣೆಗಾಗಿ ಅಳುತ್ತಾರೆ: ಕೇಂದ್ರ ಸರ್ಕಾರ ಪ್ರತಿಯೊಂದರಲ್ಲೂ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ. ಅದನ್ನು ಕೇಳುವ ಧೈರ್ಯ ಕೇಂದ್ರ ಮಂತ್ರಿಯಾಗಿರುವ ಕುಮಾರಸ್ವಾಮಿ ಸೇರಿ ಬಿಜೆಪಿ ಸಂಸದರಿಗಿಲ್ಲ. ಆದರೆ ಚುನಾವಣೆ ಬಂದಾಗ ಮಾತ್ರ ಕಣ್ಣೀರು ಹಾಕುತ್ತಾರೆ. ಹಾಸನದ ಹೆಣ್ಣು ಮಕ್ಕಳು ಕಣ್ಣೀರು ಹಾಕಿದಾಗ ಇವರಿಗೆ ಯಾಕೆ ಕಣ್ಣೀರು ಬರಲಿಲ್ಲ ಎಂದು ಪ್ರಶ್ನಿಸಿದರು.

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದ್ದು, ಹಾಸನದ ಏಳೂ ವಿಧಾನಸಭಾ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಗೆಲ್ಲಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ದೇವೇಗೌಡ ಅವರು ಚುನಾವಣೆಗೂ ಮೊದಲು ಮೇಕೆದಾಟು ಹಾಗೂ ಮಹಾದಾಯಿ ಯೋಜನೆಗೆ ಬೇಕಾದ ಅನುಮತಿ ಕೊಡಿಸುತ್ತೇನೆ ಎಂದಿದ್ದರು. ಈಗ ಅದರ ಬಗ್ಗೆ ಯಾಕೆ ಮಾತಾಡುತ್ತಿಲ್ಲ?

- ಸಿದ್ದರಾಮಯ್ಯ, ಮುಖ್ಯಮಂತ್ರಿ

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಪರಂ ಸಿಎಂ ಆಗಲಿ : 25ಕ್ಕೂ ಹೆಚ್ಚು ಮಠಾಧೀಶರ ಆಗ್ರಹ
ಎಸ್ಕಾಂಗಳಿಂದ ₹110 ಕೋಟಿ ಹೆಚ್ಚುವರಿ ವೆಚ್ಚ : ಸಿಎಜಿ ವರದಿ