ಮೈಸೂರು ರನ್‌ವೇಯಲ್ಲಿ ಸಿದ್ದು, ಡಿಕೆ ಜತೆ ರಾಗಾ ಪ್ರತ್ಯೇಕ ಚರ್ಚೆ

KannadaprabhaNewsNetwork |  
Published : Jan 14, 2026, 03:00 AM ISTUpdated : Jan 14, 2026, 04:18 AM IST
Rahul Gandhi

ಸಾರಾಂಶ

 ಕಾಂಗ್ರೆಸ್‌ ವರಿಷ್ಠ ರಾಹುಲ್ ಗಾಂಧಿ ಅವರ ಸಮ್ಮುಖ ನೇರಾನೇರ ಚರ್ಚೆ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ಇದೇ ಮೊದಲ ಬಾರಿ ಅವಕಾಶ ದೊರಕಿದ್ದು, ಇದರ ಪರಿಣಾಮ ಶೀಘ್ರ ಉಭಯ ನಾಯಕರನ್ನು ದೆಹಲಿಗೆ ಆಹ್ವಾನಿಸಿ, ಗೊಂದಲ ಪರಿಹರಿಸುವ ಭರವಸೆ ದೊರಕಿದೆ.

 ಬೆಂಗಳೂರು :  ಸರ್ಕಾರಕ್ಕೆ ಎರಡೂವರೆ ವರ್ಷ ತುಂಬಿದ ಕ್ಷಣದಿಂದ ಆರಂಭವಾಗಿರುವ ಆಂತರಿಕ ತುಮುಲದ ಬಗ್ಗೆ ಕಾಂಗ್ರೆಸ್‌ ವರಿಷ್ಠ ರಾಹುಲ್ ಗಾಂಧಿ ಅವರ ಸಮ್ಮುಖ ನೇರಾನೇರ ಚರ್ಚೆ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ಇದೇ ಮೊದಲ ಬಾರಿ ಅವಕಾಶ ದೊರಕಿದ್ದು, ಇದರ ಪರಿಣಾಮ ಶೀಘ್ರ ಉಭಯ ನಾಯಕರನ್ನು ದೆಹಲಿಗೆ ಆಹ್ವಾನಿಸಿ, ಗೊಂದಲ ಪರಿಹರಿಸುವ ಭರವಸೆ ದೊರಕಿದೆ.

ತಮಿಳುನಾಡಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮತ್ತೆ ದೆಹಲಿಗೆ ತೆರಳಲು ಮೈಸೂರು ವಿಮಾನ ನಿಲ್ದಾಣಕ್ಕೆ ಮಂಗಳವಾರ ಆಗಮಿಸಿದ್ದ ವೇಳೆ ವಿಮಾನ ನಿಲ್ದಾಣದ ರನ್‌ವೇಯಲ್ಲೇ ಈ ಮಾತುಕತೆಯ ಅವಕಾಶ ಉಭಯ ನಾಯಕರಿಗೂ ದೊರಕಿದೆ. ಬಯಲಲ್ಲಿ ನಿಂತೇ ಕೆಲ ನಿಮಿಷಗಳವರೆಗೂ ನಾಯಕರು ರಾಹುಲ್‌ ಜತೆಗೆ ಚರ್ಚಿಸಿದ್ದಾರೆ.

ಈ ವೇಳೆ ಉಭಯ ನಾಯಕರ ಅಹವಾಲಿಗೆ ರಾಹುಲ್‌ ಕೇವಲ ಕಿವಿಯಾಗಿದ್ದಾರೆ. ಉಭಯ ನಾಯಕರ ಬೇಡಿಕೆಗಳನ್ನೆಲ್ಲ ಆಲಿಸಿದ ರಾಹುಲ್‌ ದೆಹಲಿಗೆ ಬನ್ನಿ, ಚರ್ಚಿಸಿ ಗೊಂದಲ ಪರಿಹರಿಸೋಣ ಎಂದಿದ್ದಾರೆ. ಆದರೆ, ದೆಹಲಿಗೆ ಉಭಯ ನಾಯಕರು ಯಾವಾಗ ತೆರಳಬೇಕು ಎಂಬ ಬಗ್ಗೆ ಸ್ಪಷ್ಟತೆ ದೊರಕಿಲ್ಲ.

18ರ ಮೊದಲು ಭೇಟಿಗೆ ಬುಲಾವ್‌?:

ಮೂಲಗಳ ಪ್ರಕಾರ ರಾಹುಲ್‌ ಗಾಂಧಿ ಅವರು ಜ.18ರಂದು ಲಂಡನ್‌ಗೆ ತೆರಳುವ ಸಾಧ್ಯತೆಯಿದ್ದು, 24ಕ್ಕೆ ಹಿಂತಿರುಗಲಿದ್ದಾರೆ. ಬಹುತೇಕ ಜ.18ರ ಮೊದಲು ಅಥವಾ ಜ.24ರ ನಂತರ ಉಭಯ ನಾಯಕರಿಗೆ ದೆಹಲಿಗೆ ಬುಲಾವ್‌ ಬರುವ ಸಾಧ್ಯತೆಯಿದೆ.

ಪ್ರತ್ಯೇಕ ಮಾತುಕತೆ:

ತಮಿಳುನಾಡಿನ ಕಾರ್ಯಕ್ರಮವೊಂದಕ್ಕೆ ಆಗಮಿಸಿದ್ದ ರಾಹುಲ್‌ ಗಾಂಧಿ ಅವರು ಮಾರ್ಗ ಮಧ್ಯೆ ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಈ ವೇಳೆ ಬೆಳಗ್ಗೆ ಉಭಯ ನಾಯಕರು ಕೇವಲ ಸ್ವಾಗತ ಮಾಡಿದ್ದಾರೆ. ನಂತರ ತಮಿಳುನಾಡಿನಿಂದ ಹಿಂತಿರುಗಿ, ದೆಹಲಿಗೆ ತೆರಳಲು ಮತ್ತೆ ಮೈಸೂರು ವಿಮಾನ ನಿಲ್ದಾಣಕ್ಕೆ ರಾಹುಲ್‌ ಆಗಮಿಸಿದ್ದಾರೆ.

ಈ ಸಂದರ್ಭದಲ್ಲಿ ಅವರನ್ನು ಸಿಎಂ ಹಾಗೂ ಡಿಸಿಎಂ ಮತ್ತೆ ಭೇಟಿ ಮಾಡಿದ್ದು, ಈ ವೇಳೆ ಉಭಯ ನಾಯಕರಿಗೂ ಕೆಲ ನಿಮಿಷಗಳ ಮಟ್ಟಿಗೆ ಪ್ರತ್ಯೇಕ ಚರ್ಚೆಗೆ ಅವಕಾಶ ದೊರಕಿದೆ. ಆರಂಭದಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕಮಾರ್‌ ಅವರ ಜತೆ ಜಂಟಿಯಾಗಿಯೇ 5 ನಿಮಿಷ ಒಟ್ಟಿಗೆ ಚರ್ಚೆ ನಡೆಸಿದರು. ನಂತರ ಉಭಯ ನಾಯಕರೊಂದಿಗೆ ಕೆಲ ನಿಮಿಷಗಳ ಕಾಲ ರಾಹುಲ್‌ ಪ್ರತ್ಯೇಕ ಮಾತುಕತೆ ನಡೆಸಿದ್ದಾರೆ.

ಸ್ಪಷ್ಟನೆ ಕೋರಿದ ಸಿಎಂ:

ಪ್ರತ್ಯೇಕ ಚರ್ಚೆ ವೇಳೆ ಸಿದ್ದರಾಮಯ್ಯ ಅವರು, ಸಂಪುಟ ಪುನರ್‌ ರಚನೆ ಕುರಿತು ಸ್ಪಷ್ಟನೆ ನೀಡಬೇಕು. ಶಾಸಕರು, ಸಂಪುಟ ಸದಸ್ಯರಲ್ಲಿ ಈ ಬಗ್ಗೆ ಗೊಂದಲ ಉಂಟಾಗಿದೆ. ಆದಷ್ಟು ಬೇಗ ಗೊಂದಲ ಬಗೆಹರಿಸುವ ಕೆಲಸ ಆಗಬೇಕು ಎಂಬ ಕೋರಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಜತೆಗೆ, ರಾಜ್ಯ ನಾಯಕತ್ವದ ಬಗ್ಗೆ ಎದ್ದಿರುವ ಗೊಂದಲಕ್ಕೆ ಕೊನೆಹಾಡಬೇಕು. ಇದರಿಂದ ಆಡಳಿತಕ್ಕೆ ತೊಂದರೆಯಾಗುತ್ತಿರುವುದಾಗಿಯೂ ವಿವರಿಸಿದರು ಎಂದೂ ಹೇಳಲಾಗುತ್ತಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ರಾಹುಲ್‌ ಗಾಂಧಿ ಅವರು, ದೆಹಲಿಗೆ ಕರೆಸುತ್ತೇವೆ. ಆಗ ಎಲ್ಲ ವಿಚಾರವೂ ಚರ್ಚಿಸಿ ಗೊಂದಲ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದಾದ ನಂತರ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಸಹ ರಾಹುಲ್‌ಗಾಂಧಿ ಅವರೊಂದಿಗೆ ಪ್ರತ್ಯೇಕವಾಗಿ ಚರ್ಚಿಸಿದ್ದಾರೆ. ಈ ಸಂದರ್ಭದಲ್ಲಿ ಶಿವಕುಮಾರ್‌ ಅವರು ಅಧಿಕಾರ ಹಸ್ತಾಂತರ ಕುರಿತು ಸ್ಪಷ್ಟನೆ ನೀಡುವಂತೆ ಕೋರಿದರು ಎನ್ನಲಾಗಿದೆ.

ಮುಖ್ಯವಾಗಿ ಸಿದ್ದರಾಮಯ್ಯ ಅವರು ರಾಹುಲ್‌ ಹೇಳಿದರೆ ಪದವಿ ತ್ಯಾಗ ಮಾಡುವುದಾಗಿ ಹೇಳುತ್ತಿದ್ದಾರೆ. ನಾನು ಪಕ್ಷಕ್ಕಾಗಿ ದುಡಿದಿದ್ದೇನೆ. ಅಧಿಕಾರದ ಭರವಸೆಯೂ ನನಗೆ ದೊರಕಿತ್ತು. ಹೀಗಾಗಿ, ಸ್ಪಷ್ಟ ತೀರ್ಮಾನ ಹೇಳಿ. ಗೊಂದಲ ಮುಂದುವರೆದರೆ ಅನಗತ್ಯವಾಗಿ ಪಕ್ಷಕ್ಕೆ ಹಾನಿಯಾಗುತ್ತದೆ ಎಂದರು ಎನ್ನಲಾಗಿದೆ.

ಉಭಯ ನಾಯಕರ ಅಹವಾಲನ್ನು ರಾಹುಲ್‌ ಕೇವಲ ಆಲಿಸಿದ್ದಾರೆ. ಬಳಿಕ ದೆಹಲಿಗೆ ಬನ್ನಿ ಚರ್ಚಿಸೋಣ ಎಂದಿದ್ದಾರೆ ಎನ್ನುತ್ತವೆ ಮೂಲಗಳು.

ಸಿಎಂಗೂ ಮೊದಲೇ ಡಿಸಿಎಂ ವಾಪಸ್‌:

ರಾಹುಲ್‌ಗಾಂಧಿ ಅವರ ಭೇಟಿಗೆ ಮಂಗಳವಾರ ಮಧ್ಯಾಹ್ನ 1 ಗಂಟೆಗೆ ಡಿ.ಕೆ.ಶಿವಕುಮಾರ್‌ ಅವರು ಸಿದ್ದರಾಮಯ್ಯ ಅವರ ಜತೆಯೇ ವಿಶೇಷ ವಿಮಾನದಲ್ಲಿ ಮೈಸೂರಿಗೆ ತೆರಳಿದ್ದರು. ಬಳಿಕ ಸಂಜೆ 6.30 ಗಂಟೆಗೆ ಮುಖ್ಯಮಂತ್ರಿಗಳ ಜತೆಯೇ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಶಿವಕುಮಾರ್ ವಾಪಸಾಗಬೇಕಾಗಿತ್ತು. ಆದರೆ, ಶಿವಕುಮಾರ್‌ ಅವರು ರಸ್ತೆ ಮೂಲಕ ಸಿಎಂಗಿಂತ ಮೊದಲೇ ಬೆಂಗಳೂರಿನತ್ತ ಹೊರಟರು.

ಇದು ಕುತೂಹಲಕ್ಕೆ ಕಾರಣವಾಗಿದ್ದು, ಸಿದ್ದರಾಮಯ್ಯ ಅವರ ಕಾರ್ಯಕ್ರಮ ತಡವಾಗುವ ಹಿನ್ನೆಲೆಯಲ್ಲಿ ಶಿವಕುಮಾರ್‌ ಅವರು ಕಾರಿನಲ್ಲೇ ವಾಪಸಾದರು. ಇದರಲ್ಲಿ ಬೇರೆ ವಿಶೇಷವೇನಿಲ್ಲ ಎಂದು ಉಪಮುಖ್ಯಮಂತ್ರಿಗಳ ಕಚೇರಿ ಮೂಲಗಳು ಸ್ಪಷ್ಟನೆ ನೀಡಿವೆ.

ಫೆ.13ಕ್ಕೆ ಕಾಂಗ್ರೆಸ್‌ ಸರ್ಕಾರಕ್ಕೆ 1000 ದಿನ

- ಅಂದು ಹಾವೇರಿಯಲ್ಲಿ ಸಾಧನಾ ಸಮಾವೇಶ । ಮಾರ್ಚ್‌ 1/2ನೇ ವಾರ ಬಜೆಟ್‌: ಸಿದ್ದು

ಕನ್ನಡಪ್ರಭ ವಾರ್ತೆ ಮೈಸೂರುಕಾಂಗ್ರೆಸ್‌ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಫೆಬ್ರವರಿ 13ರಂದು 1000 ದಿನ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಹಾವೇರಿಯಲ್ಲಿ ಸಾಧನಾ ಸಮಾವೇಶ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ತಮಿಳುನಾಡಿಗೆ ತೆರಳಲು ಮೈಸೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಮೈಸೂರು ವಿಮಾನ ನಿಲ್ದಾಣದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್, ಸಚಿವರ ಜೊತೆಗೂಡಿ ಸ್ವಾಗತಿಸಿದ ನಂತರ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮಾರ್ಚ್ ಮೊದಲ ಅಥವಾ ಎರಡನೇ ವಾರದಲ್ಲಿ ಬಜೆಟ್ ಮಂಡಿಸುತ್ತೇನೆ.  ಬಜೆಟ್ ತಯಾರಿ ಸಂಬಂಧ ಎಲ್ಲಾ ರೀತಿಯ ತಯಾರಿಗಳು ನಡೆದಿದೆ.

 ಇದೇ ವೇಳೆ ಫೆ.13ರಂದು ಹಾವೇರಿಯಲ್ಲಿ ರಾಜ್ಯ ಸರ್ಕಾರದ ಸಾಧನಾ ಸಮಾವೇಶ ಮಾಡುತ್ತೇವೆ. ಸಮಾವೇಶದ ಸಂಬಂಧ ಎಲ್ಲ ರೀತಿ ತಯಾರಿ ನಡೆಯುತ್ತಿದೆ ಎಂದು ತಿಳಿಸಿದರು.ನಾವು ಬೆಂಗಳೂರು ಪಾಲಿಕೆ ಚುನಾವಣೆಗೆ ಸಿದ್ಧರಾಗಿದ್ದೇವೆ. ಬಿಜೆಪಿ- ಜೆಡಿಎಸ್ ಒಂದಾಗಿ ಚುನಾವಣೆ ನಡೆಸಿದರೂ ನಮಗೆ ಸಮಸ್ಯೆ ಇಲ್ಲ. ಇರುವುದು ಎರಡೇ, ಒಂದು ಕಾಂಗ್ರೆಸ್ ಮತ, ಮತ್ತೊಂದು ಕಾಂಗ್ರೆಸ್ ವಿರೋಧಿ ಮತ. ಇಲ್ಲಿ ಜೆಡಿಎಸ್ ಮತ ಬೇರೆ ಬಿಜೆಪಿ ಮತ ಬೇರೆ ಎಂದಿರುವುದಿಲ್ಲ. ಎರಡು ಪಕ್ಷದ ಮತ ಒಂದೇ ಅಭ್ಯರ್ಥಿಗೆ ಬಿದ್ದರೆ ಕಾಂಗ್ರೆಸ್‌ಗೆ ಸಮಸ್ಯೆಯಾಗುತ್ತದೆ ಎಂಬುದು ತಪ್ಪು ಅಭಿಪ್ರಾಯ ಎಂದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಅಕ್ರಮ ಕಟ್ಟಡ ಪರಿಶೀಲಿಸಿ ತೆರವಿಗೆ ತಂಡ ರಚಿಸಲು ಮಹೇಶ್ವರ್ ರಾವ್ ಸೂಚನೆ
17ಕ್ಕೆ ಮೊದಲ ವಂದೇಭಾರತ್‌ ಸ್ಲೀಪರ್‌ ರೈಲಿಗೆ ಚಾಲನೆ