ಎಸ್ಐಆರ್‌ ಅಕ್ರಮ ತನಿಖೆಗೆ ಎಸ್‌ಐಟಿ ? - ಮುಂದಿನ ಸಂಪುಟ ಸಭೇಲಿ ಚರ್ಚೆ ಸಂಭವ

Published : Oct 03, 2026, 05:26 AM IST
SIR

ಸಾರಾಂಶ

ರಾಜ್ಯದಲ್ಲಿ ಮತದಾರರ ಪಟ್ಟಿಯ ‘ವಿಶೇಷ ಸಮಗ್ರ ಪರಿಷ್ಕರಣೆ’ (ಎಸ್‌ಐಆರ್‌) ಪ್ರಕ್ರಿಯೆಯಲ್ಲಿ ಕೇಳಿ ಬಂದಿರುವ ಆರೋಪಗಳ ಕುರಿತು ದಾಖಲಾಗುವ ಎಫ್‌ಐಆರ್ ಆಧರಿಸಿ ತನಿಖೆ ನಡೆಸಲು ಸರ್ಕಾರ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸುವ ಸಾಧ್ಯತೆಗಳಿವೆ.

ಗಿರೀಶ್ ಮಾದೇನಹಳ್ಳಿ

 ಬೆಂಗಳೂರು: ರಾಜ್ಯದಲ್ಲಿ ಮತದಾರರ ಪಟ್ಟಿಯ ‘ವಿಶೇಷ ಸಮಗ್ರ ಪರಿಷ್ಕರಣೆ’ (ಎಸ್‌ಐಆರ್‌) ಪ್ರಕ್ರಿಯೆಯಲ್ಲಿ ಕೇಳಿ ಬಂದಿರುವ ಆರೋಪಗಳ ಕುರಿತು ದಾಖಲಾಗುವ ಎಫ್‌ಐಆರ್ ಆಧರಿಸಿ ತನಿಖೆ ನಡೆಸಲು ಸರ್ಕಾರ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸುವ ಸಾಧ್ಯತೆಗಳಿವೆ.

ಈ ಸಂಬಂಧ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾವನೆಗೆ ಸರ್ಕಾರ ಮುಂದಾಗಿದ್ದು, ಸಚಿವರ ಅಭಿಪ್ರಾಯ ಪಡೆದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನಿರ್ಣಯ ತೆಗೆದುಕೊಳ್ಳಲಿದ್ದಾರೆ. ಅಷ್ಟರೊಳಗೆ ರಾಜ್ಯವ್ಯಾಪಿ ಎಸ್‌ಐಆರ್ ಬಗ್ಗೆ ದಾಖಲಾಗುವ ಪ್ರಕರಣಗಳ ಕುರಿತು ಸಮಗ್ರ ಮಾಹಿತಿ ನೀಡುವಂತೆ ಕಂದಾಯ ಹಾಗೂ ಗೃಹ ಇಲಾಖೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚಿಸಿದ್ದಾರೆ ಎಂದು ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿವೆ.

ಇನ್ನೊಂದೆಡೆ, ಎಸ್‌ಐಆರ್ ಅಕ್ರಮದ ಬಗ್ಗೆ ಖಾಸಗಿ ವ್ಯಕ್ತಿಗಳ ದೂರು ಆಧರಿಸಿ ರಾಜ್ಯದಲ್ಲಿ ಐದು ಪ್ರಕರಣಗಳು ದಾಖಲಾಗಿವೆ. ಆದರೆ ಚುನಾವಣಾ ಆಯೋಗದ ಪ್ರತಿನಿಧಿಗಳು ದೂರು ಸಲ್ಲಿಸಿಲ್ಲ. ಹೀಗಾಗಿ ಮುಖ್ಯ ಚುನಾವಣಾಧಿಕಾರಿಗಳ ಆದೇಶದ ಮೇರೆಗೆ ಎಸ್‌ಐಆರ್ ಅಕ್ರಮದ ಬಗ್ಗೆ ಎರಡ್ಮೂರು ದಿನಗಳಲ್ಲಿ ಎಫ್‌ಐಆರ್‌ಗಳು ದಾಖಲಾಗುವ ನಿರೀಕ್ಷೆ ಇದೆ. ಎಷ್ಟು ಎಫ್‌ಐಆರ್‌ಗಳು ದಾಖಲಾಗುತ್ತವೆ ಎಂಬ ಬಗ್ಗೆ ವರದಿ ಪಡೆದು ಉನ್ನತ ಮಟ್ಟದ ತನಿಖೆಗೆ ಸರ್ಕಾರ ತೀರ್ಮಾನಿಸಿದೆ.

ಏಕೆ ಎಸ್‌ಐಟಿ ಅಥವಾ ಸಿಐಡಿ?:

ಕಳೆದ ಲೋಕಸಭಾ ಚುನಾವಣೆ ಬಳಿಕ ರಾಷ್ಟ್ರಮಟ್ಟದಲ್ಲಿ ‘ಮತಕಳವು’ ಆರೋಪ ಕೇಳಿಬಂದಿತ್ತು. ಈ ಬಗ್ಗೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು, ಈ ಆಪಾದನೆಗೆ ಪುರಾವೆಯಾಗಿ 2023ರಲ್ಲಿ ಕಲಬುರಗಿ ಜಿಲ್ಲೆಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದ್ದ ಮತ ಕಳವು ಯತ್ನ ಪ್ರಕರಣ ಮುಂದಿಟ್ಟಿದ್ದರು. ಆಗ ಆಳಂದ ಕ್ಷೇತ್ರದ ಮತ ಕಳವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಿಐಡಿ ಎಡಿಜಿಪಿ ಬಿಜಯ್ ಕುಮಾರ್ ಸಿಂಗ್ ನೇತೃತ್ವದಲ್ಲಿ ಎಸ್‌ಐಟಿಯನ್ನು ಸರ್ಕಾರ ರಚಿಸಿತ್ತು. ಮತಕಳವು ಸಂಬಂಧ ದಾಖಲಾದ ಮೊದಲ ಪ್ರಕರಣ ಸಹ ಇದಾಗಿತ್ತು.

ಈಗ ಎಸ್ಐಆರ್ ಪ್ರಕ್ರಿಯೆ ಬಗ್ಗೆ ಕೂಡ ಕೇಂದ್ರ ಸರ್ಕಾರದ ವಿರುದ್ಧ ‘ಇಂಡಿಯಾ’ ಮೈತ್ರಿಕೂಟದ ಪಕ್ಷಗಳು ರಾಷ್ಟ್ರವ್ಯಾಪಿ ವಿರೋಧ ವ್ಯಕ್ತಪಡಿಸುತ್ತಿವೆ. ಆದರೆ ಈವರೆಗೆ ಚುನಾವಣಾಧಿಕಾರಿಗಳ ದೂರು ಆಧರಿಸಿ ದೇಶದಲ್ಲೆಲ್ಲೂ ಎಫ್‌ಐಆರ್ ದಾಖಲಾಗಿಲ್ಲ. ಕೇವಲ ಮೌಖಿಕ ಮಟ್ಟದಲ್ಲಿ ಆರೋಪ-ಪ್ರತ್ಯಾರೋಪಗಳು ನಡೆದಿವೆ. ಆದರೆ ಗುರುವಾರ ರಾಜ್ಯದಲ್ಲಿ ಎಸ್‌ಐಆರ್ ಅಕ್ರಮದ ಕುರಿತು ಕೇಳಿಬಂದಿರುವ ಆರೋಪಗಳ ಬಗ್ಗೆ ದೂರು ದಾಖಲಿಸಿ ತನಿಖೆಗೆ ಆದೇಶಿಸುವಂತೆ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮುಖ್ಯಮಂತ್ರಿ ಸಾರಥ್ಯದಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಈ ಹೋರಾಟಕ್ಕೆ ಮಣಿದು ಅಕ್ರಮ ಕಂಡು ಬಂದರೆ ಪೊಲೀಸರಿಗೆ ದೂರು ದಾಖಲಿಸುವಂತೆ ಮುಖ್ಯ ಚುನಾವಣಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಈ ಆದೇಶದ ಮೇರೆಗೆ ಮುಂದಿನ ಹಂತದಲ್ಲಿ ಪೊಲೀಸ್ ಠಾಣೆಗಳಲ್ಲಿ ಸ್ಥಳೀಯ ಚುನಾವಣಾಧಿಕಾರಿ ದೂರು ನೀಡಿದರೆ ಎಫ್‌ಐಆರ್‌ ದಾಖಲಾಗಲಿದೆ. ಆಗ ರಾಷ್ಟ್ರಮಟ್ಟದಲ್ಲಿ ಎಸ್‌ಐಆರ್ ಪ್ರಕರಣ ಮತ್ತೊಂದು ಸ್ವರೂಪ ಪಡೆಯಲಿದೆ. ಬಹುಮುಖ್ಯ ಪ್ರಕರಣವಾಗುವ ಕಾರಣ ಸ್ಥಳೀಯ ಮಟ್ಟದಲ್ಲಿ ತನಿಖೆಗೆ ತಾಂತ್ರಿಕ ಸಮಸ್ಯೆ ಎದುರಾಗಬಹುದು. ಅಲ್ಲದೆ ಪೊಲೀಸರ ಕಾರ್ಯದೊತ್ತಡವೂ ತನಿಖೆ ಮೇಲೆ ಅಡ್ಡ ಪರಿಣಾಮ ಬೀರಬಹುದು. ಹೀಗಾಗಿ ಎಡಿಜಿಪಿ ಮಟ್ಟದ ಅಧಿಕಾರಿ ಸಾರಥ್ಯದಲ್ಲಿ ಎಸ್‌ಐಟಿ ರಚನೆಗೆ ಸರ್ಕಾರ ಮಟ್ಟದಲ್ಲಿ ಚರ್ಚೆ ನಡೆದಿದೆ. ಒಂದು ವೇಳೆ ಎಸ್‌ಐಟಿ ರಚನೆಯಾಗದೆ ಹೋದರೆ ತನಿಖೆಯನ್ನು ಸಿಐಡಿಗೆ ವಹಿಸಬಹುದು ಎಂದು ಮೂಲಗಳು ಹೇಳಿವೆ.

85,000 ಅರ್ಜಿ ಪರಿಶೀಲನೆಗೆ ಡಿಸಿಗಳಿಗೆ ಸೂಚನೆ

ರಾಜ್ಯದಲ್ಲಿ ಎಸ್‌ಐಆರ್ ಪ್ರಕ್ರಿಯೆಲ್ಲಿ ಮತ ಅಳಿಸುವಂತೆ ಕೋರಿ ನಾಲ್ಕು ತಿಂಗಳಲ್ಲಿ 84,900 ಫಾರಂ-7 ಅರ್ಜಿಗಳು ಸಲ್ಲಿಕೆಯಾಗಿವೆ. ಈ ಅರ್ಜಿಗಳ ಬಗ್ಗೆ ಬೂತ್‌ವಾರು ಕೂಲಂಕಷವಾಗಿ ಪರಿಶೀಲಿಸಿ ಅಕ್ರಮವಾಗಿದ್ದರೆ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿಗಳಿಗೆ ಸರ್ಕಾರದ ಒತ್ತಾಯಿಸಲಾಗಿದೆ. ಈ ಬಗ್ಗೆ ವಾರದಲ್ಲಿ ವರದಿ ನೀಡುವಂತೆಯೂ ಸೂಚಿಸಲಾಗಿದೆ. ಹೀಗಾಗಿ ಜಿಲ್ಲಾಧಿಕಾರಿಗಳು ತೆಗೆದುಕೊಳ್ಳುವ ಕ್ರಮ ಆಧರಿಸಿ ಸರ್ಕಾರದ ಮುಂದಿನ ನಡೆ ನಿರ್ಣಯವಾಗಲಿದೆ ಎನ್ನಲಾಗಿದೆ.

ಐದು ಎಫ್‌ಐಆರ್‌ಗಳು:

ಇನ್ನು ಅಕ್ರಮವಾಗಿ ಮುಸ್ಲಿಂ ಸಮುದಾಯದವರ ಮತಗಳನ್ನು ಅಳಿಸಿ ಹಾಕುವಂತೆ ಫಾರಂ-7ರಲ್ಲಿ ಅರ್ಜಿ ಸಲ್ಲಿಸಲಾಗಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರ ವಿರುದ್ಧ ಮೈಸೂರು, ಬಳ್ಳಾರಿ, ಬೆಳಗಾವಿ ಹಾಗೂ ಮಡಿಕೇರಿ ಸೇರಿ ರಾಜ್ಯದಲ್ಲಿ ಐದು ಎಫ್‌ಐಆರ್‌ಗಳು ದಾಖಲಾಗಿವೆ. ಆದರೆ ಮೂರನೇ ವ್ಯಕ್ತಿ ದೂರಿನ ಮೇರೆಗೆ ಪ್ರಕರಣಗಳು ದಾಖಲಾಗಿರುವ ಕಾರಣ ತನಿಖೆಗೆ ತಾಂತ್ರಿಕ ಸಮಸ್ಯೆ ಇದೆ.

ಆಳಂದ ಎಸ್‌ಐಟಿಯಿಂದ ಮಾಹಿತಿ ಪಡೆದ ಸಿಎಂ ಡಿಕೆ

ಎಸ್ಐಆರ್‌ ಅಕ್ರಮದ ವಿರುದ್ಧ ಸಮರಕ್ಕೂ ಮುನ್ನ ಆಳಂದ ಎಸ್‌ಐಟಿ ತಂಡದಿಂದ ಚುನಾವಣಾ ಅಕ್ರಮಗಳ ತನಿಖೆ ಕುರಿತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾಹಿತಿ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. ತಮ್ಮ ಕಚೇರಿಗೆ ಹಿರಿಯ ಐಪಿಎಸ್ ಅಧಿಕಾರಿಗಳನ್ನು ಕರೆಸಿಕೊಂಡು ಚುನಾವಣಾ ಅಕ್ರಮದಲ್ಲಿ ಕಾನೂನು ಪ್ರಕ್ರಿಯೆಗಳ ಬಗ್ಗೆ ಮುಖ್ಯಮಂತ್ರಿ ಸಮಾಲೋಚಿಸಿದ್ದಾರೆ. ಆಗ ಚುನಾವಣಾ ಅಕ್ರಮಗಳ ಬಗ್ಗೆ ಮೂರನೇ ವ್ಯಕ್ತಿ ದೂರಿಗೆ ಕಾನೂನು ಮಾನ್ಯತೆ ಇಲ್ಲ. ಹೀಗಾಗಿ ಚುನಾವಣಾ ಪ್ರಕ್ರಿಯೆಯಲ್ಲಿ ಲೋಪಗಳ ತನಿಖೆಗೆ ಕಾನೂನು ಕ್ರಮ ತೆಗೆದುಕೊಳ್ಳಲು ಚುನಾವಣಾ ಆಯೋಗವೇ ಬಾಧ್ಯಸ್ಥರು ಎಂದು ಮುಖ್ಯಮಂತ್ರಿ ಅವರಿಗೆ ಅಧಿಕಾರಿಗಳು ಮನವರಿಕೆ ಮಾಡಿದ್ದಾರೆ ಎನ್ನಲಾಗಿದೆ.

ಎಸ್‌ಐಟಿ ಏಕೆ?

- ಎಸ್‌ಐಆರ್‌ ವೇಳೆ ಅಕ್ರಮ ಆರೋಪ ಸಂಬಂಧ ಖಾಸಗಿ ವ್ಯಕ್ತಿಗಳ ದೂರು ದಾಖಲಿಸಿ ರಾಜ್ಯದ ವಿವಿಧ ಕಡೆ 5 ಎಫ್‌ಐಆರ್‌ ಆಗಿವೆ

- ಆದರೆ ಈವರೆಗೂ ಚುನಾವಣಾ ಆಯೋಗ ದೂರು ದಾಖಲಿಸಿಲ್ಲ. ಪರಿಣಾಮ- ಆಯೋಗದ ದೂರು ಆಧರಿಸಿ ಕೇಸ್‌ ದಾಖಲಾಗಿಲ್ಲ

- ಮುಖ್ಯ ಚುನಾವಣಾಧಿಕಾರಿಗಳ ಆದೇಶದ ಮೇರೆಗೆ ಎಸ್‌ಐಆರ್‌ ಅಕ್ರಮದ ಬಗ್ಗೆ 2-3 ದಿನದಲ್ಲಿ ಎಫ್‌ಐಆರ್ ದಾಖಲು ಸಂಭವ

- ಅಂತಹ ಎಫ್‌ಐಆರ್‌ಗಳ ವಿವರ ನೀಡುವಂತೆ ಕಂದಾಯ ಹಾಗೂ ಗೃಹ ಇಲಾಖೆ ಅಧಿಕಾರಿಗಳಿಗೆ ಮುಖ್ಯಮಂತ್ರಿಗಳಿಂದ ಸೂಚನೆ

- ಆಯೋಗವೇ ಪೊಲೀಸ್‌ ಠಾಣೆಗಳಲ್ಲಿ ದೂರು ನೀಡಿದರೆ, ಅದು ಎಫ್‌ಐಆರ್‌ ಆದರೆ ರಾಷ್ಟ್ರಮಟ್ಟದಲ್ಲಿ ಹೋರಾಟಕ್ಕೆ ಹೊಸ ರೂಪ

- ಬಹುಮುಖ್ಯ ಪ್ರಕರಣವಾಗುವ ಕಾರಣ ತಾಂತ್ರಿಕ ಸಮಸ್ಯೆ, ಪೊಲೀಸ್‌ ಕಾರ್ಯದೊತ್ತಡದ ಸಮಸ್ಯೆ ಕೂಡ ಎದುರಾಗಬಹುದು

- ಆದ ಕಾರಣ ಎಡಿಜಿಪಿ ಮಟ್ಟದ ಅಧಿಕಾರಿ ಸಾರಥ್ಯದಲ್ಲಿ ಎಸ್‌ಐಟಿ ರಚನೆಗೆ ರಾಜ್ಯದ ಸರ್ಕಾರದ ಮಟ್ಟದಲ್ಲಿ ಮಹತ್ವದ ಚರ್ಚೆ

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

‘50 ಲಕ್ಷ ಅಹಿಂದ ಮತ ಡಿಲೀಟ್‌ಗೆ ದೋಸ್ತಿ ಷಡ್ಯಂತ್ರ’
ಕೊಲೆಗಡುಕರು ಅಸೆಂಬ್ಲಿಯಲ್ಲಿ ಇರಬೇಕೇ ? : ಸುಪ್ರೀಂಕೋರ್ಟ್‌