ಬೆಂಗಳೂರು : ಹೊಸ ವಿದ್ಯುತ್ ಸಂಪರ್ಕ ಪಡೆಯಲು ಸ್ಮಾಟ್ ಮೀಟರ್ ಕಡ್ಡಾಯಗೊಳಿಸಿ ಅದರ ದರ ಹೆಚ್ಚಳ ಮಾಡಿರುವ ಕ್ರಮಕ್ಕೆ ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ತೀವ್ರವಾಗಿ ವಿರೋಧ ವ್ಯಕ್ತಪಡಿಸಿವೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಮತ್ತು ಜೆಡಿಎಸ್ ಪಕ್ಷ ಸರ್ಕಾರದ ನಡೆಯನ್ನು ಖಂಡಿಸಿದೆ.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು, ಸರ್ಕಾರವೊಂದು ಆರ್ಥಿಕ ದಿವಾಳಿಯಾದರೆ ಮಾತ್ರ ಇಂತಹ ದಿಗಿಲು ಹುಟ್ಟಿಸುವ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯ. ಬೆಸ್ಕಾಂ ಸಂಸ್ಥೆ ತನ್ನ ವ್ಯಾಪ್ತಿಯಲ್ಲಿ ಸ್ಮಾರ್ಟ್ ಮೀಟರ್ ಅಳವಡಿಸುವುದನ್ನು ಕಡ್ಡಾಯಗೊಳಿಸಿ ಶೇ.400-800 ರಷ್ಟು ದರ ಏರಿಕೆ ಮಾಡಿರುವ ನಿರ್ಧಾರ ಪ್ರಕಟಿಸಿರುವುದು ಕೇವಲ ವಿದ್ಯುತ್ ಶಾಕ್ ಅಲ್ಲ, ಜನ ಸುಲಿಗೆ, ಲೂಟಿಕೋರತನವಾಗಿದೆ ಎಂದು ಟೀಕಾಪ್ರಹಾರ ನಡೆಸಿದ್ದಾರೆ.
ಬೆಸ್ಕಾಂ ಜಾರಿಗೆ ತಂದಿರುವ ದರವನ್ನೇ ರಾಜ್ಯದ ಇತರ ಎಸ್ಕಾಂಗಳ ವ್ಯಾಪ್ತಿಯಲ್ಲೂ ಜಾರಿ ಮಾಡುವುದಾಗಿ ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ. ಈಗಾಗಲೇ ಗೃಹಜ್ಯೋತಿ ಯೋಜನೆಯಡಿ ಉಚಿತವಾಗಿ ಒದಗಿಸಲಾಗಿರುವ ವಿದ್ಯುತ್ ಸೇವೆಗೆ ಸರ್ಕಾರ ಹಣ ಒದಗಿಸದಿದ್ದರೆ ಹಣವನ್ನು ಫಲಾನುಭವಿಗಳಿಂದ ವಸೂಲಿ ಮಾಡುವುದಾಗಿ ಹೇಳಿ ಎಸ್ಕಾಂ ಅಧಿಕಾರಿಗಳು ಸರ್ವಸನ್ನದ್ಧರಾಗಿ ನಿಂತಿದ್ದಾರೆ. ಇದರ ನಡುವೆಯೇ ಸ್ಮಾರ್ಟ್ ಮೀಟರ್ ಹೆಸರಿನಲ್ಲಿ ಅವೈಜ್ಞಾನಿಕವಾಗಿ ಶೇ.400 ರಿಂದ 800ರಷ್ಟು ದರ ಏರಿಕೆ ಮಾಡಿರುವ ಕ್ರಮ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಕಲ್ಪಿಸಿಕೊಳ್ಳಲೂ ಸಾಧ್ಯವಾಗದ ತುಘಲಕ್ ನಿರ್ಧಾರವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಸರ್ಕಾರ ದಿವಾಳಿ:
ಸರ್ಕಾರದ ಆರ್ಥಿಕ ಸ್ಥಿತಿ ದಿವಾಳಿಯಾಗಿರುವುದರ ಸ್ಪಷ್ಟ ಸೂಚನೆ ಇಂತಹ ಜನವಿರೋಧಿ ಆರ್ಥಿಕ ನಿರ್ಧಾರಗಳಿಂದ ವ್ಯಕ್ತವಾಗುತ್ತಿದೆ. ಸ್ಮಾರ್ಟ್ ಮೀಟರ್ ದರದ ಹೇರಿಕೆಯನ್ನು ಈ ಹಿಂದಿನಂತೆ ನಿಗದಿಪಡಿಸದೆ ಹೋದರೆ ಜನರ ಆಕ್ರೋಶ ಎದುರಿಸಲು ಕಾಂಗ್ರೆಸ್ ಸರ್ಕಾರ ಸಿದ್ಧವಾಗಬೇಕು ಎಂದು ಹೇಳಿದ್ದಾರೆ.
ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರು, ಉಚಿತ ಎಂದು ಅಧಿಕಾರಕ್ಕೆ ಬಂದ ಸರ್ಕಾರದಿಂದ ಬೆಲೆ ಏರಿಕೆ ಖಚಿತ. ವಿವಿಧ ವಸ್ತು ಹಾಗು ಸೇವೆಗಳ ದರ ಏರಿಕೆ, ತೆರಿಗೆ ಹೆಚ್ಚಳದಿಂದ ತತ್ತರಿಸಿರುವ ಸಾರ್ವಜನಿಕರಿಗೆ ಇನ್ನೊಂದು ಶಾಕ್ ನೀಡಿದೆ. ವಿದ್ಯುಚ್ಛಕ್ತಿ ಬೆಲೆ ಏರಿಸಿದ ಸರ್ಕಾರ ಈಗ ಬೆಸ್ಕಾಂ ಬಳಕೆದಾರರಿಗೆ ಸ್ಮಾರ್ಟ್ ಮೀಟರ್ ಕಡ್ಡಾಯ ಮಾಡಿ ಅದರ ಬೆಲೆ ಶೇ.400ರಿಂದ 800ರಷ್ಟು ಏರಿಕೆ ಮಾಡಿದೆ. ಸಿಂಗಲ್ ಫೇಸ್ ಸ್ಮಾರ್ಟ್ ಮೀಟರ್ ದರ 950 ರು. ನಿಂದ 4,998 ರು.ಗೆ ಏರಿಕೆ ಮಾಡಿದೆ. ಎಸ್ಪಿ-2 ದರ 2,400 ರು.ನಿಂದ 9ಸಾವಿರ ರು.ಗೆ, 3 ಫೇಸ್ 2,500 ರು.ನಿಂದ 28 ಸಾವಿರಕ್ಕೆ ಏರಿಸಿದೆ ಎಂದು ಕಿಡರಿಕಾರಿದರು.
ಇನ್ನು ಜೆಡಿಎಸ್ ಸಹ ಆಕ್ರೋಶ ವ್ಯಕ್ತಪಡಿಸಿದ್ದು, ವಿದ್ಯುತ್ ದರ ಏರಿಕೆ ಶಾಕ್‌ಗೆ ಮೊದಲೇ ವಿದ್ಯುತ್ ಸ್ಮಾರ್ಟ್ ಮೀಟರ್ ದರವನ್ನು ಶೇ.400 ರಿಂದ ಶೇ.800ರಷ್ಟು ಹೆಚ್ಚಿಸಿ ರಾಜ್ಯದ ಜನರಿಗೆ ಹೈವೋಲ್ಟೇಜ್ ಶಾಕ್ ನೀಡಿದೆ ಎಂದು ಟೀಕಿಸಿದೆ.
- ದಿವಾಳಿಯಾದ ಕಾರಣ ಇಂತಹ ನಿರ್ಧಾರ
- ದರ 800% ಹೆಚ್ಚಳ ಹೈವೋಲ್ಟೇಜ್ ಶಾಕ್
- ಬಿಜೆಪಿ, ಜೆಡಿಎಸ್‌ನಿಂದ ತೀವ್ರ ಆಕ್ರೋಶ
ಇದು ಲೂಟಿಕೋರತನ, ತುಘಲಕ್ ತೀರ್ಮಾನ
ಸರ್ಕಾರವೊಂದು ಆರ್ಥಿಕ ದಿವಾಳಿಯಾದರೆ ಮಾತ್ರ ಇಂತಹ ದಿಗಿಲು ಹುಟ್ಟಿಸುವ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯ. ಇದು ಕೇವಲ ವಿದ್ಯುತ್ ಶಾಕ್ ಅಲ್ಲ, ಜನ ಸುಲಿಗೆ, ಲೂಟಿಕೋರತನ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಕಲ್ಪಿಸಿಕೊಳ್ಳಲೂ ಸಾಧ್ಯವಾಗದ ತುಘಲಕ್ ನಿರ್ಧಾರ. ಜನರ ಆಕ್ರೋಶ ಎದುರಿಸಲು ಸರ್ಕಾರ ಸಜ್ಜಾಗಬೇಕು.- ಬಿ.ವೈ. ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ