ಕರ್ನಾಟಕ ವಿದ್ಯುತ್ ನಿಗಮ ಅಳವಡಿಸುವ ಸ್ಮಾರ್ಟ್‌ ಮೀಟರ್‌ ಕೋಟ್ಯಂತರ ಅಕ್ರಮ : ಬಿಜೆಪಿ ದೂರು

KannadaprabhaNewsNetwork |  
Published : Apr 22, 2025, 01:52 AM ISTUpdated : Apr 22, 2025, 05:12 AM IST
CN Ashwathnarayan

ಸಾರಾಂಶ

ಕರ್ನಾಟಕ ವಿದ್ಯುತ್ ನಿಗಮ (ಕೆಪಿಸಿಎಲ್) ಅಳವಡಿಸುವ ಸ್ಮಾರ್ಟ್ ಮೀಟರ್‌ನಲ್ಲಿ ಕೋಟ್ಯಂತರ ರುಪಾಯಿ ಅವ್ಯವಹಾರ ನಡೆದಿರುವ ಆರೋಪ ಸಂಬಂಧ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಒತ್ತಾಯಿಸಿ ಪ್ರತಿಪಕ್ಷ ಬಿಜೆಪಿ ಲೋಕಾಯುಕ್ತಕ್ಕೆ ದೂರು ನೀಡಿದೆ.

 ಬೆಂಗಳೂರು : ಕರ್ನಾಟಕ ವಿದ್ಯುತ್ ನಿಗಮ (ಕೆಪಿಸಿಎಲ್) ಅಳವಡಿಸುವ ಸ್ಮಾರ್ಟ್ ಮೀಟರ್‌ನಲ್ಲಿ ಕೋಟ್ಯಂತರ ರುಪಾಯಿ ಅವ್ಯವಹಾರ ನಡೆದಿರುವ ಆರೋಪ ಸಂಬಂಧ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಒತ್ತಾಯಿಸಿ ಪ್ರತಿಪಕ್ಷ ಬಿಜೆಪಿ ಲೋಕಾಯುಕ್ತಕ್ಕೆ ದೂರು ನೀಡಿದೆ.

ಸೋಮವಾರ ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ। ಸಿ.ಎನ್‌.ಅಶ್ವತ್ಥನಾರಾಯಣ ನೇತೃತ್ವದ ಬಿಜೆಪಿ ಮುಖಂಡರ ನಿಯೋಗ ಲೋಕಾಯುಕ್ತ ಪೊಲೀಸ್‌ ವರಿಷ್ಠಾಧಿಕಾರಿಗಳನ್ನು ಭೇಟಿ ಮಾಡಿ ದೂರು ನೀಡಿತು.

ಇಂಧನ ಸಚಿವ ಕೆ.ಜೆ.ಜಾರ್ಜ್, ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ್, ತಾಂತ್ರಿಕ ನಿರ್ದೇಶಕರಾದ ರಮೇಶ್, ಬಾಲಾಜಿ ಮತ್ತಿತರರ ವಿರುದ್ಧ ದೂರು ದಾಖಲಿಸಲಾಗಿದೆ.

ಕೆಟಿಟಿಪಿ ನಿಯಮ ಗಾಳಿಗೆ ತೂರಿ ರಾಜಶ್ರೀ ಎಲೆಕ್ಟಿಕಲ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿಗೆ ಅನುಕೂಲ ಮಾಡಿಕೊಡಲು ಸ್ಟಾರ್ಟ್ ಮೀಟರ್ ಖರೀದಿ ಹಾಗೂ ನಿರ್ವಹಣೆಗೆ ದುಬಾರಿ ದರ ನಿಗದಿ ಮಾಡಿವೆ. ಪರಿಣಾಮ ಎಸ್ಕಾಂಗಳು ಹಾಗೂ ಸಾರ್ವಜನಿಕರಿಗೆ ಸೇರಿದ ಬರೊಬ್ಬರಿ 15,568 ಕೋಟಿ ರು. ಲೂಟಿಯಾಗುತ್ತಿದೆ ಎಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ.

ಸ್ಮಾರ್ಟ್ ಮೀಟರ್ ಅಳವಡಿಕೆಗೆ ಕೇಂದ್ರ ಸರ್ಕಾರ ₹900 ಸಹಾಯ ಧನ ನೀಡುತ್ತದೆ. ಅನ್ಯ ರಾಜ್ಯಗಳಲ್ಲಿ ಗುತ್ತಿಗೆದಾರ ಸಂಸ್ಥೆಗೆ ಆರಂಭದಲ್ಲಿ ಈ ಸಹಾಯಧನದ ಮೊತ್ತ ₹900 ಮಾತ್ರ ನೀಡಲಾಗುತ್ತದೆ. ಆದರೆ, ರಾಜ್ಯದಲ್ಲಿ ಆರಂಭದಲ್ಲೇ ಗುತ್ತಿಗೆದಾರರ ಸಂಸ್ಥೆಗೆ ಸ್ಮಾರ್ಟ್ ಮೀಟರ್‌ನ ಸಂಪೂರ್ಣ ಮೊತ್ತ ₹8,510 ಪಾವತಿಯಾಗುವಂತೆ ವ್ಯವಸ್ಥೆ ಮಾಡಲಾಗಿದೆ. ಈ ಬಗ್ಗೆ ವಿಸ್ತೃತವಾಗಿ ತನಿಖೆ ನಡೆಸಬೇಕು ಎಂದು ದೂರಿನಲ್ಲಿ ಆಗ್ರಹಿಸಲಾಗಿದೆ.

ದೂರು ನೀಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಮಾಜಿ ಸಚಿವ ಡಾ। ಸಿ.ಎನ್‌.ಅಶ್ವತ್ಥನಾರಾಯಣ, ಸ್ಮಾರ್ಟ್ ಮೀಟರ್ ವಿಷಯದಲ್ಲಿ ಹತ್ತಾರು ಅವ್ಯವಹಾರದ ದೂರುಗಳಿದ್ದು, ಲೋಕಾಯುಕ್ತ ಪೊಲೀಸರ ಗಮನಕ್ಕೆ ತಂದಿದ್ದೇವೆ. ಭ್ರಷ್ಟಾಚಾರ ಕುರಿತು ಸವಿಸ್ತಾರವಾಗಿ ತಿಳಿಸಿದ್ದೇವೆ. ತನಿಖೆ ಕೈಗೊಂಡು ಕ್ರಮ ವಹಿಸಿ ತಾರ್ಕಿಕ ಅಂತ್ಯ ಕೊಡಬೇಕು ಎಂಬುದಾಗಿ ಕೋರಲಾಗಿದೆ ಎಂದು ಹೇಳಿದರು.

ಭ್ರಷ್ಟಾಚಾರ ತಡೆಗಾಗಿ ಈ ದೂರು ನೀಡಲಾಗಿದ್ದು, ಯುದ್ಧ ಪ್ರಾರಂಭವಾಗಿದೆ. ಸಚಿವ ಕೆ.ಜೆ.ಜಾರ್ಜ್ ಅವರು 9 ಸುಳ್ಳು ಹೇಳಿದ್ದಾರೆ. ಬೇನಾಮಿ, ದುರ್ಬಳಕೆ ನಡೆದಿರುವುದು, ಸ್ಮಾರ್ಟ್ ಮೀಟರನ್ನು ಗ್ರಾಹಕರಿಗೆ ಕಡ್ಡಾಯ ಮಾಡಲು ಕಾನೂನಿನಲ್ಲಿ ಅವಕಾಶ ಇಲ್ಲ. ಆದರೂ ಕಡ್ಡಾಯ ಮಾಡಿದ್ದಾರೆ. ಅಷ್ಟೇ ಅಲ್ಲ, ಕಪ್ಪು ಪಟ್ಟಿಗೆ ಸೇರಿಸಿರುವ ಕಂಪನಿಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದಾರೆ ಎಂದು ದೂರಿದರು.

ಈ ವೇಳೆ ಶಾಸಕರಾದ ಎಸ್‌.ಆರ್‌.ವಿಶ್ವನಾಥ್‌, ಧೀರಜ್‌ ಮುನಿರಾಜ್, ಸಿ.ಕೆ.ರಾಮಮೂರ್ತಿ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್.ಹರೀಶ್ ಮತ್ತು ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ ಇತರರು ಉಪಸ್ಥಿತರಿದ್ದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಮತಚೋರಿ ಹೆಸರಲ್ಲಿ ಸುಳ್ಳು ಪ್ರಚಾರ ತಪ್ಪು: ದೇವೇಗೌಡ
ದೆಹಲಿಯಲ್ಲೂ ಸಿದ್ದು ಸಿದ್ದು, ಡಿಕೆ ಡಿಕೆ ಸದ್ದು