ವಿಧಾನ ಪರಿಷತ್ ಹಾಲಿ, ಮಾಜಿ ಸದಸ್ಯರ ಪೈಕಿ ಕೆಲವರು ಸಕ್ರಿಯ ಪ್ರಚಾರ

KannadaprabhaNewsNetwork | Updated : Apr 19 2024, 05:08 AM IST

ಸಾರಾಂಶ

 ಅವಿಭಜಿತ ಮೈಸೂರು ಜಿಲ್ಲೆಯಲ್ಲಿ ಐದು ಮಂದಿ ವಿಧಾನ ಪರಿಷತ್ ಸದಸ್ಯರಿದ್ದಾರೆ. ಹಲವಾರು ಮಂದಿ ಮಾಜಿ ಸದಸ್ಯರು ಇದ್ದಾರೆ. ಈ ಪೈಕಿ ಕೆಲವರು ಲೋಕಸಭಾ ಚುನಾವಣೆಯಲ್ಲಿ ಸಕ್ರಿಯ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಮತ್ತೆ ಕೆಲವರು ಸಭೆಗಳಿಗೆ ಸೀಮಿತವಾಗಿದ್ದಾರೆ.

ಅಂಶಿ ಪ್ರಸನ್ನಕುಮಾರ್

 ಮೈಸೂರು :  ಇತ್ತೀಚೆಗೆ ಮರಿತಿಬ್ಬೇಗೌಡ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು, ಅವಿಭಜಿತ ಮೈಸೂರು ಜಿಲ್ಲೆಯಲ್ಲಿ ಐದು ಮಂದಿ ವಿಧಾನ ಪರಿಷತ್ ಸದಸ್ಯರಿದ್ದಾರೆ. ಹಲವಾರು ಮಂದಿ ಮಾಜಿ ಸದಸ್ಯರು ಇದ್ದಾರೆ. ಈ ಪೈಕಿ ಕೆಲವರು ಲೋಕಸಭಾ ಚುನಾವಣೆಯಲ್ಲಿ ಸಕ್ರಿಯ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಮತ್ತೆ ಕೆಲವರು ಸಭೆಗಳಿಗೆ ಸೀಮಿತವಾಗಿದ್ದಾರೆ.

ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಸತತ ನಾಲ್ಕನೇ ಬಾರಿ ಗೆದ್ದಿರುವ (2000 ದಿಂದ ಮೊದಲ ಬಾರಿ ಕಾಂಗ್ರೆಸ್, ಎರಡನೇ ಬಾರಿ ಪಕ್ಷೇತರ, ಮೂರು ಮತ್ತು ನಾಲ್ಕನೇ ಬಾರಿ ಜೆಡಿಎಸ್) ಮರಿತಿಬ್ಬೇಗೌಡರು ಮುಂದಿನ ಜೂನ್ನಲ್ಲಿ ನಡೆಯುವ ಚುನಾವಣೆಯಲ್ಲಿ ಸತತ ಐದನೇ ಬಾರಿ ಸ್ಪರ್ಧಿಸಿ, ಗೆಲ್ಲುವ ತಂತ್ರಗಾರಿಕೆ ನಡೆಸುತ್ತಿದ್ದಾರೆ. ಜೆಡಿಎಸ್ನಿಂದ ದೂರ ಉಳಿದಿದ್ದ ಅವರು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವುದರಿಂದ ಇತ್ತೀಚೆಗೆ ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಮೈಸೂರು ಹಾಗೂ ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಬಹಿರಂಗ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.

ಎಚ್. ವಿಶ್ವನಾಥ್ ಅವರು ಬಿಜೆಪಿ ಸರ್ಕಾರದಿಂದ ಸಾಹಿತ್ಯ ಕೋಟಾದಲ್ಲಿ ಮೇಲ್ಮನೆಗೆ ನಾಮ ನಿರ್ದೇಶಿತ ಸದಸ್ಯರು. ಈ ಬಾರಿ ಲೋಕಸಭೆಗೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಟಿಕೆಟ್ ಸಿಗದಿದ್ದರಿಂದ ಬಿಜೆಪಿಯಲ್ಲಿಯೇ ಮುಂದುವರೆದು, ಮೈಸೂರಿನಲ್ಲಿ ಯದುವೀರ್, ಮಂಡ್ಯದಲ್ಲಿ ಎಚ್.ಡಿ. ಕುಮಾರಸ್ವಾಮಿ, ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಪರ ಪ್ರಚಾರ ಮಾಡಿದ್ದಾರೆ.

ಮೈಸೂರು- ಚಾಮರಾಜನಗರ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಮೇಲ್ಮನೆಗೆ ಆಯ್ಕೆಯಾಗಿರುವ ಸಿ.ಎನ್. ಮಂಜೇಗೌಡ (ಜೆಡಿಎಸ್) ಹಾಗೂ ಡಾ.ಡಿ. ತಿಮ್ಮಯ್ಯ (ಕಾಂಗ್ರೆಸ್) ಅವರು ತಮ್ಮ ತನ್ಮ ಪಕ್ಷಗಳ ಪರ ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ ಜಿಲ್ಲೆಗಳನ್ನು ಒಳಗೊಂಡ ದಕ್ಷಿಣ ಪದವೀಧರ ಕ್ಷೇತ್ರದಿಂದ ಗೆದ್ದಿರುವ ಕಾಂಗ್ರೆಸ್ನ ಮಧು ಜಿ. ಮಾದೇಗೌಡರು ಮಂಡ್ಯದಲ್ಲಿ ಕಾಂಗ್ರೆಸ್ ಪರ ಪ್ರಚಾರ ನಿರತರಾಗಿದ್ದಾರೆ. ಮಂಡ್ಯ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಮೇಲ್ನೆಗೆ ಗೆದ್ದು, ಮೈಸೂರಿನ ವಿಳಾಸ ನೀಡಿ, ಎಂಡಿಎ ಹಾಗೂ ನಗರಪಾಲಿಕೆಗೆ ಪದನಿಮಿತ್ರ ಸದಸ್ಯರಾಗಿರುವ ದಿನೇಶ್ ಗೂಳಿಗೌಡ ಕೂಡ ಮಂಡ್ಯದಲ್ಲಿ ಪ್ರಚಾರನಿರತರು.

ವಿಧಾನ ಪರಿಷತ್‌ ಮಾಜಿ ಸದಸ್ಯರ ಪೈಕಿ ಸಿ.ಎಚ್.ವಿಜಯಶಂಕರ್, ಸಿದ್ದರಾಜು, ಸಿ. ರಮೇಶ್, ಪ್ರೊ.ಕೆ.ಆರ್. ಮಲ್ಲಿಕಾರ್ಜುನಪ್ಪ ಅವರು ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದಾರೆ. ಮಾಜಿ ಸದಸ್ಯರಾದ ತೋಂಟದಾರ್ಯ ಸಭೆಗಳಿಗೆ ಸೀಮಿತ. ಗೊ. ಮಧುಸೂದನ್ ಹೆಚ್ಚಾಗಿ ಕಾಣಿಸಿಕೊಂಡಿಲ್ಲ.

ಜೆಡಿಎಸ್‌ನ ಮಾಜಿ ಸದಸ್ಯ ಕೆ.ಟಿ. ಶ್ರೀಕಂಠೇಗೌಡರು ಮಂಡ್ಯದಲ್ಲಿ ಪಕ್ಷದ ಪರ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.

ಎರಡು ಅವಧಿಗೆ ಜೆಡಿಎಸ್ನಿಂದ ಮೇಲ್ಮನೆಗೆ ಆಯ್ಕೆಯಾಗಿ ನಂತರ ಬಿಜೆಪಿ ಸೇರಿ ಈಗ ಕಾಂಗ್ರೆಸ್ನಲ್ಲಿರುವ ಸಂದೇಶ್ ನಾಗರಾಜ್ ಕಾಂಗ್ರೆಸ್ ಸಭೆಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕಾಂಗ್ರೆಸ್ನ ಮಾಜಿ ಸದಸ್ಯ ಆರ್. ಧರ್ಮಸೇನ ಪಕ್ಷದ ಪರ ಪ್ರಚಾರದಲ್ಲಿ ನಿರತರಾಗಿದ್ದಾರೆ. ಕಾಂಗ್ರೆಸ್ನಿಂದ ಮೇಲ್ಮನೆಗೆ ಆಯ್ಕೆಯಾಗಿದ್ದ ಡಿ. ಮಾದೇಗೌಡರು ನಂತರ ಎಸ್.ಎಂ. ಕೃಷ್ಣ ಅವರ ಜೊತೆ ಬಿಜೆಪಿ ಸೇರಿದವರು. ಪಕ್ಷದ ಪರ ಪ್ರಚಾರದಲ್ಲಿ ಕಾಣಿಸಿಕೊಂಡಿದ್ದಾರೆ.

Share this article