ಬೆಂಗಳೂರು ; ಮಹಿಳೆಯರ ಸುರಕ್ಷತೆ, ಯುವ ಜನತೆಗೆ ಉದ್ಯೋಗ, ಆರೋಗ್ಯ, ಶಿಕ್ಷಣ ಕ್ಷೇತ್ರದ ಅಭಿವೃದ್ಧಿ ಹೀಗೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕಾಗಿ ತಾವು ಮಾಡಲಿರುವ ಅಭಿವೃದ್ಧಿ ಕಾರ್ಯಗಳ ಕುರಿತಂತೆ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ ಪ್ರಣಾಳಿಕೆಯನ್ನು ಪ್ರಕಟಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ರಾಷ್ಟ್ರಮಟ್ಟದ ಪ್ರಣಾಳಿಕೆಯ ಜೊತೆಯೇ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕಾಗಿ ಸೌಮ್ಯಾರೆಡ್ಡಿ ಪ್ರತ್ಯೇಕ ಪ್ರಣಾಳಿಕೆ ಪ್ರಕಟಿಸಿದ್ದಾರೆ. ಅದರ ಮೂಲಕ ಸ್ಥಳೀಯ ಸಮಸ್ಯೆಗಳ ನಿವಾರಣೆ, ಸ್ಥಳೀಯರಿಗಾಗಿ ಕೈಗೊಳ್ಳುವ ಅಭಿವೃದ್ಧಿ ಕಾರ್ಯಗಳ ಕುರಿತು ವಿವರಿಸಿದ್ದಾರೆ. ಸಂಸದೆಯಾಗಿ ಗೆದ್ದರೆ ಕ್ಷೇತ್ರ ವ್ಯಾಪ್ತಿಯಲ್ಲಿ ಅನುಷ್ಠಾನಗೊಳಿಸುವ ಕಾರ್ಯಕ್ರಮಗಳು, ಕ್ಷೇತ್ರದ ಬದಲಾವಣೆ ಕುರಿತು ತಮಗಿರುವ ಗುರಿಯ ಬಗ್ಗೆ ಪ್ರಣಾಳಿಕೆಯಲ್ಲಿ ವಿವರಿಸಿದ್ದಾರೆ.
ಅದರಂತೆ ಮಹಿಳೆಯರ ಸುರಕ್ಷತೆಗಾಗಿ ಹೊಸ ರೀತಿಯ ಯೋಜನೆ ಅನುಷ್ಠಾನ, ಮಹಿಳಾ ಉದ್ಯಮಿಗಳ ಸೃಷ್ಟಿಗೆ ಸಹಾಯ, ಯುವಕರಿಗೆ ಉದ್ಯೋಗ ದೊರಕಿಸಲು ಕೌಶಲ್ಯ ತರಬೇತಿ ನೀಡುವುದು, ಸರ್ಕಾರಿ ಶಾಲೆಗಳಲ್ಲೂ ಕೃತಕ ಬುದ್ಧಿ ಮತ್ತೆ ಸೇರಿದಂತೆ ತಂತ್ರಜ್ಞಾನ ಬಳಸಿ ಶಿಕ್ಷಣ ನೀಡುವುದು, ಬೆಂಗಳೂರು ದಕ್ಷಿಣ ಕ್ಷೇತ್ರ ವ್ಯಾಪ್ತಿಯಲ್ಲಿ ಅವಕಾಶವಿರುವಲ್ಲಿ ನಮ್ಮ ಮೆಟ್ರೋ ರೈಲು ಸಂಪರ್ಕ ಕಲ್ಪಿಸುವುದು, ಕ್ಷೇತ್ರದಲ್ಲಿ ಹಸಿರು ಹೆಚ್ಚಿಸುವುದು, ಕೇಂದ್ರ ಮತ್ತು ರಾಜ್ಯದ ನಡುವೆ ಕೊಂಡಿಯಾಗಿ ಕೆಲಸ ಮಾಡುವುದು ಸೇರಿದಂತೆ ಹಲವು ವಿಚಾರಗಳ ಕುರಿತಂತೆ ಪ್ರಣಾಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಇದೇ ವೇಳೆ ಕೊರೋನಾ ಸಂದರ್ಭ ಸೇರಿದಂತೆ ಜಯನಗರ ಶಾಸಕಿಯಾಗಿ ತಾವು ಮಾಡಿರುವ ಕಾರ್ಯಗಳ ಬಗ್ಗೆಯೂ ಪ್ರಣಾಳಿಕೆಯಲ್ಲಿ ವಿವರಣೆ ನೀಡಿರುವ ಸೌಮ್ಯಾರೆಡ್ಡಿ, ಕೊರೋನಾ ಸಂದರ್ಭದಲ್ಲಿ 16 ಲಕ್ಷಕ್ಕೂ ಹೆಚ್ಚಿನ ಜನರಿಗೆ ಆಹಾರ ವಿತರಣೆ, 3 ಲಕ್ಷಕ್ಕೂ ಹೆಚ್ಚಿನ ಕುಟುಂಬಗಳಿಗೆ ಪಡಿತರ ಕಿಟ್ ವಿತರಣೆ, 5,500 ಆಕ್ಸಿಜನ್ ಸಿಲಿಂಡರ್ ವಿತರಣೆ, 3,300ಕ್ಕೂ ಹೆಚ್ಚಿನ ಪಿಪಿಇ ಕಿಟ್ ವಿತರಣೆ, 10 ಸಾವಿರಕ್ಕೂ ಹೆಚ್ಚಿನ ಔಷಧ ಕಿಟ್ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಹಾಗೆಯೇ, ಶಾಸಕಿಯಾಗಿ 15ಕ್ಕೂ ಹೆಚ್ಚಿನ ಸರ್ಕಾರಿ, ಬಿಬಿಎಂಪಿ ಶಾಲೆಗಳ ಅಭಿವೃದ್ಧಿ, 13ಕ್ಕೂ ಹೆಚ್ಚಿನ ಉದ್ಯಾನಗಳ ಅಭಿವೃದ್ಧಿ, 5ಕ್ಕೂ ಹೆಚ್ಚಿನ ಮೈದಾನಗಳನ್ನು ಅಭಿವೃದ್ಧಿಗೊಳಿಸಲಾಗಿದೆ ಎಂದು ಹೇಳಿದ್ದಾರೆ.