ಅನಂತ್‌ ಹೇಳಿಕೆಗೆ ಸ್ವಪಕ್ಷದ ನಾಯಕರಿಂದ ವಿರೋಧ

KannadaprabhaNewsNetwork | Updated : Jan 17 2024, 08:59 AM IST

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಅನಂತ ಕುಮಾರ್‌ ಹೆಗಡೆ ಏಕವಚನ ಪ್ರಯೋಗಕ್ಕೆ ಬಿಜೆಪಿ ಪಕ್ಷದ ಮುಖಂಡರಿಂದಲೇ ತೀವ್ರ ವಿರೋಧ ವ್ಯಕ್ತವಾಗಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು/ದಾವಣಗೆರೆ

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಅನಂತ ಕುಮಾರ್‌ ಹೆಗಡೆ ಏಕವಚನ ಪ್ರಯೋಗಕ್ಕೆ ಬಿಜೆಪಿ ಪಕ್ಷದ ಮುಖಂಡರಿಂದಲೇ ತೀವ್ರ ವಿರೋಧ ವ್ಯಕ್ತವಾಗಿದೆ. 

ಹೆಗಡೆಯವರ ಹೇಳಿಕೆಯನ್ನು ನಾವು ಸಮರ್ಥಿಸುವುದಿಲ್ಲ ಎಂದು ಮಾಜಿ ಸಚಿವ ಸಿ.ಟಿ.ರವಿ ಪ್ರತಿಪಾದಿಸಿದರೆ, ಸಂಸದರ ಹೇಳಿಕೆಯನ್ನು ನಾವೆಲ್ಲರೂ ಸರ್ವಸಮ್ಮತವಾಗಿ ಖಂಡಿಸುತ್ತೇವೆ ಎಂದು ಮಾಜಿ ಸಚಿವ ರೇಣುಕಾಚಾರ್ಯ ಹೇಳಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಸಿ.ಟಿ.ರವಿ, ಹಿರಿಯರಿಗೆ ಮತ್ತು ಸ್ಥಾನಕ್ಕೆ ಯಾವ ಗೌರವ ಕೊಡಬೇಕೋ ಅದನ್ನು ಕೊಡಲೇಬೇಕು. ಹೆಗಡೆಯವರ ಭಾವನೆ ನಿಜವಿರಬಹುದು. ಅವರ ಕಾರ್ಯ ಶೈಲಿ ಭಿನ್ನವಿದೆ. 

ಹಾಗೆಂದ ಮಾತ್ರಕ್ಕೆ ಇನ್ನೊಬ್ಬರ ಮನಸ್ಸಿಗೆ ನೋವುಂಟು ಮಾಡಬಾರದು. ಇಂತಹ ಹೇಳಿಕೆಗಳನ್ನು ನಾವು ಸಮರ್ಥಿಸುವುದಿಲ್ಲ. ರಾಮ ಎಲ್ಲರನ್ನೂ ಜೋಡಿಸಿಕೊಂಡು ಹೋಗುವವನು. ಹೆಗಡೆಯವರು ಮುಖ್ಯಮಂತ್ರಿಯನ್ನು ಏಕವಚನದಲ್ಲಿ ಬೈದಿದನ್ನು ಒಪ್ಪಿಕೊಳ್ಳುವುದಿಲ್ಲ ಎಂದರು.

ಟೀಕೆ ಮಾಡುವ ಭರದಲ್ಲಿ ಸಚಿವ ಶಿವರಾಜ್ ತಂಗಡಗಿ ಅವರು ಹೆಗಡೆ ಅವರನ್ನು ನಾಯಿಗೆ ಹೋಲಿಸಿರುವುದು ಕೂಡ ತಪ್ಪೇ. ಅದೇ ರೀತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಈ ಹಿಂದೆ ಏಕವಚನದಲ್ಲಿ ಮಾತನಾಡಿದ್ದರು. 

ಸರ್ಜಿಕಲ್ ಸ್ಟ್ರೈಕ್ ಅನ್ನು ಹೀಯಾಳಿಸಿದ್ದರು. ಅದು ಕೂಡ ತಪ್ಪೇ. ಹಿರಿಯರು, ಜನಪ್ರತಿನಿಧಿಗಳು ಇತರರಿಗೆ ಗೌರವ ನೀಡಬೇಕು. ಆಗ ಉಳಿದವರಿಗೆ ಮಾದರಿಯಾಗುತ್ತಾರೆ ಎಂದು ಹೇಳಿದರು.ಇದೇ ವೇಳೆ, ದಾವಣಗೆರೆಯಲ್ಲಿ ಮಾತನಾಡಿದ ಮಾಜಿ ಸಚಿವ ರೇಣುಕಾಚಾರ್ಯ, ಹೆಗಡೆಯವರ ಹೇಳಿಕೆಯನ್ನು ಯಾರೂ ಒಪ್ಪಲು ಸಾಧ್ಯವಿಲ್ಲ. 

ಮೋದಿಯವರು ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಎನ್ನುವ ಸಿದ್ಧಾಂತದ ಮೇಲೆ ಬಂದವರು. ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನದಲ್ಲಿದ್ದು, ಆ ಸ್ಥಾನದ ಮೇಲೆ ಯಾರೇ ಇದ್ದರೂ ಸ್ಥಾನಕ್ಕೆ ಬೆಲೆ, ಗೌರವ ಕೊಡಬೇಕು. ರಾಜಕೀಯವಾಗಿ ವಿರೋಧ ಮಾಡಿಕೊಳ್ಳಲಿ. 

ಆದರೆ, ಯಾರಿಗೇ ಆಗಲಿ, ಏಕವಚನದಿಂದ, ಅಗೌರವದಿಂದ ಮಾತನಾಡಬಾರದು. ಹೆಗಡೆ ಹೇಳಿಕೆಯನ್ನು ನಾವೆಲ್ಲರೂ ಸರ್ವಸಮ್ಮತವಾಗಿ ಖಂಡಿಸುತ್ತೇವೆ. ಮಾತಿನ ಭರದಲ್ಲಿ ಸಿದ್ದರಾಮಯ್ಯಗೆ ಏಕವಚನದಲ್ಲಿ ಮಾತನಾಡಿದ್ದು ತಪ್ಪು. ಹಾಗೆಂದು ಸಿದ್ದರಾಮಯ್ಯನವರು ಸರ್ಜಿಕಲ್ ಸ್ಟ್ರೈಕ್ ವಿಚಾರದಲ್ಲಿ ಪ್ರಧಾನಿ ಮೋದಿ ಬಗ್ಗೆ ಮಾತನಾಡಿದ್ದು ಸಹ ತಪ್ಪು ಎಂದು ಹೇಳಿದರು.

Share this article