ಏನಿದು ಪ್ರಕರಣ?
ಆದಾಯ ಮೂಲಕ್ಕಿಂತ 200 ಕೋಟಿ ರು. ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಾರೆ ಎಂಬ ಪ್ರಕರಣ. ಯಡಿಯೂರಪ್ಪ ಸಿಎಂ ಆಗಿದ್ದಾಗ ಸಿಬಿಐ ತನಿಖೆಗೆ ವಹಿಸಲಾಗಿತ್ತು--
ಈಗ ವಾಪಸ್ ಏಕೆ?ಪ್ರಕರಣವನ್ನು ಸಿಬಿಐಗೆ ವಹಿಸಲು ಅಡ್ವೋಕೇಟ್ ಜನರಲ್ ಯಾವುದೇ ಸಮರ್ಥನೆ ನೀಡಿಲ್ಲ. ಸ್ಪೀಕರ್ ಅನುಮತಿಯನ್ನೂ ಪಡೆದಿಲ್ಲ. ಸಿಎಂ ಮೌಖಿಕ ಆದೇಶದ ಮೇರೆಗೆ ಸಿಬಿಐಗೆ ವಹಿಸಿದ್ದು ಕಾನೂನುಬಾಹಿರ ಎಂಬ ಕಾರಣ ನೀಡಿ ಪ್ರಕರಣ ವಾಪಸ್.
--ಕನ್ನಡಪ್ರಭ ವಾರ್ತೆ ಬೆಂಗಳೂರು
ಮಹತ್ವದ ಬೆಳವಣಿಗೆಯಲ್ಲಿ ಹಿಂದಿನ ಬಿಜೆಪಿ ಸರ್ಕಾರವು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ವಿರುದ್ಧದ ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿದ್ದ ನಿರ್ಧಾರವನ್ನು ಹಿಂಪಡೆಯಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.ಆದಾಯ ಮೂಲಕ್ಕಿಂತ 200 ಕೋಟಿ ರು. ಹೆಚ್ಚು ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದರು ಎಂಬ ಆರೋಪದ ಹಿನ್ನೆಲೆಯಲ್ಲಿ ಹಿಂದಿನ ಸರ್ಕಾರ ಡಿ.ಕೆ.ಶಿವಕುಮಾರ್ ಹಾಗೂ ಇತರರ ವಿರುದ್ಧ ತನಿಖೆ ನಡೆಸಲು ಸಿಬಿಐಗೆ ವಹಿಸಿತ್ತು. ಆದರೆ, ಪ್ರಕರಣವನ್ನು ಸಿಬಿಐಗೆ ವಹಿಸಲು ಅಂದಿನ ಅಡ್ವೋಕೇಟ್ ಜನರಲ್ ಯಾವುದೇ ಸಮರ್ಥನೆ ನೀಡಿಲ್ಲ. ಅಡ್ವೋಕೇಟ್ ಜನರಲ್ ಅಭಿಪ್ರಾಯಕ್ಕೆ ವಿರುದ್ಧವಾಗಿ ಹಾಗೂ ಸ್ಪೀಕರ್ ಅನುಮತಿಯೂ ಇಲ್ಲದೆ ಕೇವಲ ಅಂದಿನ ಮುಖ್ಯಮಂತ್ರಿಗಳ ಮೌಖಿಕ ಆದೇಶದ ಮೇಲೆ ಸಿಬಿಐಗೆ ವಹಿಸಿರುವುದು ಕಾನೂನುಬಾಹಿರ ಎಂದು ಪರಿಗಣಿಸಿ ತನಿಖೆ ಹಿಂಪಡೆಯಲು ಸಚಿವ ಸಂಪುಟ ನಿರ್ಧಾರ ಮಾಡಿದೆ.
ಈ ಬಗ್ಗೆ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್, ಹಿಂದಿನ ಸರ್ಕಾರ ಡಿ.ಕೆ.ಶಿವಕುಮಾರ್ ವಿರುದ್ಧದ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲು ಸ್ಪೀಕರ್ ಅನುಮತಿ ಪಡೆದಿರಲಿಲ್ಲ. ಅಂದಿನ ಮುಖ್ಯಮಂತ್ರಿಗಳ ಮೌಖಿಕ ಆದೇಶದ ಮೇರೆಗೆ ಸಿಬಿಐ ತನಿಖೆಗೆ ವಹಿಸಿದ್ದರು.ಈ ಬಗ್ಗೆ ಹಿಂದಿನ ಅಡ್ವೋಕೇಟ್ ಜನರಲ್ ಹಾಗೂ ಹಾಲಿ ಅಡ್ವೋಕೇಟ್ ಜನರಲ್ ಅವರ ಅಭಿಪ್ರಾಯವನ್ನು ಗಂಭೀರವಾಗಿ ಪರಿಗಣಿಸಿ ಕಾನೂನುಬಾಹಿರವಾಗಿ ಸಿಬಿಐಗೆ ವಹಿಸಿರುವ ಕ್ರಮ ಸರಿಯಲ್ಲ ಎಂದು ಸಚಿವ ಸಂಪುಟ ಸಭೆ ನಿರ್ಧಾರ ಮಾಡಿದೆ. ಸಂಪುಟದಲ್ಲಿ ಆಗಿರುವ ನಿರ್ಣಯದ ಆಧಾರದ ಮೇಲೆ ಡಿ.ಕೆ.ಶಿವಕುಮಾರ್ ಅವರ ಪ್ರಕರಣ ಸಿಬಿಐಗೆ ವಹಿಸಿರುವ ಪ್ರಕರಣವನ್ನು ವಾಪಸ್ ಪಡೆಯುವ ಸಂಬಂಧ ಇನ್ನು ಒಂದೆರಡು ದಿನಗಳಲ್ಲಿ ಆದೇಶ ಹೊರಬೀಳಲಿದೆ ಎಂದು ಹೇಳಿದರು.
ಸಚಿವ ಸಂಪುಟದ ಸಹೋದ್ಯೋಗಿಯೊಬ್ಬರ ಪ್ರಕರಣ ಹಿಂಪಡೆದು ಸಂಪುಟ ತೀರ್ಮಾನ ಮಾಡುವುದು ಸ್ವಜನಪಕ್ಷಪಾತ ಅಲ್ಲವೇ ಎಂಬ ಪ್ರಶ್ನೆಗೆ, ‘ಕಾನೂನಾತ್ಮಕವಾಗಿ, ನಿಯಮಗಳ ಅಡಿಯಲ್ಲಿ ಸಂಪುಟ ಸಭೆಯಲ್ಲಿ ತೀರ್ಮಾನ ಆಗಿದೆ. ಹಿಂದಿನ ಹಾಗೂ ಹಾಲಿ ಅಡ್ವೋಕೇಟ್ ಜನರಲ್ ಅವರ ಅಭಿಪ್ರಾಯ ಪಡೆದಿದ್ದೇವೆ. ಕಾನೂನು ಬಾಹಿರವಾಗಿ ಹಿಂದಿನ ಸರ್ಕಾರದ ತೀರ್ಮಾನವನ್ನು ಸರಿಪಡಿಸಲು ಈ ನಿರ್ಣಯ ಆಗಿದೆ’ ಎಂದು ಹೇಳಿದರು.ಶಾಸಕರು ಹಾಗೂ ಸಚಿವರ ಮೇಲಿನ ವಿಚಾರಣೆ ಹಂತದ ಪ್ರಕರಣ ಹಿಂಪಡೆಯುವಂತಿಲ್ಲ ಎಂದು ಸುಪ್ರೀಂಕೋರ್ಟ್ ಆದೇಶ ಇದೆಯಲ್ಲ ಎಂಬ ಪ್ರಶ್ನೆಗೆ, ಈ ಬಗ್ಗೆ ಕೂಲಂಕಷವಾಗಿ ಮತ್ತೊಮ್ಮೆ ವಿವರಿಸಲಾಗುವುದು ಎಂದಷ್ಟೇ ತಿಳಿಸಿದರು.ರಾಜಕೀಯಕ್ಕಾಗಿ ಸಿಬಿಐ ತನಿಖೆ:
ಹಿಂದಿನ ಸರ್ಕಾರ ಸಿಬಿಐಗೆ ವಹಿಸಿರುವ ಡಿ.ಕೆ.ಶಿವಕುಮಾರ್ ವಿರುದ್ಧದ ಪ್ರಕರಣದಂತಹ 577 ಪ್ರಕರಣ ರಾಜ್ಯದಲ್ಲಿ ಬೇರೆ ಬೇರೆ ನಾಯಕರ ವಿರುದ್ಧ ದಾಖಲಾಗಿವೆ. ಅವುಗಳಲ್ಲಿ ಯಾವುದನ್ನೂ ಸಿಬಿಐಗೆ ವಹಿಸಿಲ್ಲ. ಬದಲಿಗೆ ಲೋಕಾಯುಕ್ತ ಹಾಗೂ ಸಿಐಡಿಯಂತಹ ತನಿಖೆಗೆ ಮಾತ್ರ ನೀಡಲಾಗಿದೆ. ಇನ್ನು ಬಿಜೆಪಿ ಸರ್ಕಾರದ ಅವಧಿಯಲ್ಲೇ ಹಾಲಿ ಸಚಿವ ಜಮೀರ್ ಅಹಮದ್ ಖಾನ್ ಅವರ ಮೇಲೆ ಪ್ರಕರಣ ದಾಖಲಾಗಿದ್ದರೂ ಅದನ್ನು ಲೋಕಾಯುಕ್ತಕ್ಕೆ ನೀಡಲಾಗಿತ್ತು. ಈ ಹಿಂದೆ ಅಭಯ್‌ಕುಮಾರ್ ಪಾಟೀಲ್ ವಿರುದ್ಧವೂ ಇಂತಹದ್ದೇ ಪ್ರಕರಣದ ತನಿಖೆಯನ್ನು ವಿಧಾನಸಭೆಯ ಸಭಾಧ್ಯಕ್ಷರ ಹಂತದಲ್ಲೇ ಕೈಬಿಟ್ಟಿದ್ದರು. ಹೀಗಿದ್ದರೂ ಡಿ.ಕೆ.ಶಿವಕುಮಾರ್ ಮೇಲೆ ಮಾತ್ರ ರಾಜಕೀಯ ಕಾರಣಗಳಿಗಾಗಿ ಸಿಬಿಐ ತನಿಖೆಗೆ ವಹಿಸಿದ್ದರು. ಈ ನಿಯಮ ಬಾಹಿರ ತನಿಖೆಯನ್ನು ಹಿಂಪಡೆಯಬೇಕು ಎಂದು ಸಚಿವ ಸಂಪುಟ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು ಎಂದು ಮೂಲಗಳು ತಿಳಿಸಿವೆ.---------ಕೇಸು ಹಿಂಪಡೆಯಲು ಕಾರಣವೇನು?ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರು ನ.21ರಂದು ನೀಡಿರುವ ಅಭಿಪ್ರಾಯ ಆಧರಿಸಿ ಸಿಬಿಐ ತನಿಖೆ ಆದೇಶ ಹಿಂಪಡೆಯಲು ಗೃಹ ಇಲಾಖೆ ಪ್ರಸ್ತಾವನೆ ಮಂಡಿಸಿದೆ.ಈ ವರದಿಯಲ್ಲಿ, ಹಿಂದೆ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಸಿಬಿಐ ತನಿಖೆಗೆ ಶಿಫಾರಸು ಮಾಡುವ ವೇಳೆ ಪ್ರಕರಣವನ್ನು ತನಿಖೆ ಮಾಡಲು ಪೊಲೀಸರ ಅಸಮರ್ಥತೆಯನ್ನು ಪರಿಶೀಲಿಸಿಲ್ಲ. ಜತೆಗೆ ಸಿಬಿಐಗೆ ವಹಿಸುವುದನ್ನು ಸಮರ್ಥಿಸಿಕೊಂಡು ಯಾವುದೇ ಕಾರಣಗಳನ್ನೂ ನೀಡಿಲ್ಲ. ಆಗಿನ ಅಡ್ವೋಕೇಟ್ ಜನರಲ್ ಅವರೂ ತನಿಖೆಗೆ ವಹಿಸುವಂತೆ ಸೂಕ್ತ ಕಾರಣಗಳನ್ನು ನೀಡಿರಲಿಲ್ಲ. ಹೀಗಾಗಿ ಸಿಬಿಐ ತನಿಖೆ ಆದೇಶ ಹಿಂಪಡೆಯಬೇಕು ಎಂದು ತಿಳಿಸಲಾಗಿತ್ತು. ಇದರ ಆಧಾರದ ಮೇಲೆ ತನಿಖೆ ಹಿಂಪಡೆಯಲು ಪ್ರಸ್ತಾವನೆ ಮಂಡಿಸಿ ಅಂಗೀಕಾರ ಪಡೆಯಲಾಗಿದೆ.
--ರಾಜಕೀಯ ಕಾರಣಕ್ಕಾಗಿ ಸಿಬಿಐ ತನಿಖೆಗೆ ಪ್ರಕರಣಡಿಕೆಶಿ ವಿರುದ್ಧ ಇರುವಂತಹದ್ದೇ 577 ಪ್ರಕರಣಗಳು ರಾಜ್ಯದಲ್ಲಿ ಬೇರೆ ಬೇರೆ ನಾಯಕರ ವಿರುದ್ಧ ದಾಖಲಾಗಿವೆ. ಅವುಗಳಲ್ಲಿ ಯಾವುದನ್ನೂ ಸಿಬಿಐಗೆ ವಹಿಸಿಲ್ಲ. ಬದಲಿಗೆ ಲೋಕಾಯುಕ್ತ ಹಾಗೂ ಸಿಐಡಿಯಂತಹ ತನಿಖೆಗೆ ಮಾತ್ರ ನೀಡಲಾಗಿದೆ. ಡಿಕೆಶಿ ಪ್ರಕರಣವನ್ನು ಮಾತ್ರ ರಾಜಕೀಯ ಕಾರಣಗಳಿಗಾಗಿ ಸಿಬಿಐ ತನಿಖೆಗೆ ವಹಿಸಲಾಗಿದೆ.- ಎಚ್.ಕೆ.ಪಾಟೀಲ್ ಕಾನೂನು ಸಚಿವ