ರಾಜ್ಯದ ಮುಖ್ಯಮಂತ್ರಿಗಳು ಜ್ಯೋತಿಷ್ಯ ಹೇಳೋಕೆ ಶುರು ಮಾಡಿದ್ದಾರೆ: ಎಚ್.ಡಿ. ಕುಮಾರಸ್ವಾಮಿ ವ್ಯಂಗ್ಯ

KannadaprabhaNewsNetwork |  
Published : Mar 29, 2024, 12:51 AM ISTUpdated : Mar 29, 2024, 03:26 PM IST
57 | Kannada Prabha

ಸಾರಾಂಶ

ರಾಜ್ಯದ ಮುಖ್ಯಮಂತ್ರಿಗಳು ಜ್ಯೋತಿಷ್ಯ ಹೇಳೋಕೆ ಶುರು ಮಾಡಿದ್ದಾರೆ. ಈಗಾಗಲೇ ಮಂಡ್ಯದಲ್ಲಿ ನನ್ನನ್ನು ಸೋಲುತ್ತಾರೆ ಎಂದು ಜ್ಯೋತಿಷ್ಯ ಹೇಳಿದ್ದಾರೆ. ಉಳಿದವರ ಸೋಲು ಗೆಲುವಿನ ಬಗ್ಗೆಯೂ ಅವರನ್ನೇ ಕೇಳಿ ಹೇಳುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವ್ಯಂಗ್ಯವಾಡಿದರು.

ಕನ್ನಡಪ್ರಭ ವಾರ್ತೆ ನಂಜನಗೂಡು

ರಾಜ್ಯದ ಮುಖ್ಯಮಂತ್ರಿಗಳು ಜ್ಯೋತಿಷ್ಯ ಹೇಳೋಕೆ ಶುರು ಮಾಡಿದ್ದಾರೆ. ಈಗಾಗಲೇ ಮಂಡ್ಯದಲ್ಲಿ ನನ್ನನ್ನು ಸೋಲುತ್ತಾರೆ ಎಂದು ಜ್ಯೋತಿಷ್ಯ ಹೇಳಿದ್ದಾರೆ. ಉಳಿದವರ ಸೋಲು ಗೆಲುವಿನ ಬಗ್ಗೆಯೂ ಅವರನ್ನೇ ಕೇಳಿ ಹೇಳುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವ್ಯಂಗ್ಯವಾಡಿದರು.

ಪಟ್ಟಣದ ಶ್ರೀಕಂಠೇಶ್ವರಸ್ವಾಮಿ ದೇವಾಲಯಕ್ಕೆ ಗುರುವಾರ ಭೇಟಿ ನೀಡಿ ತುಲಾಭಾರ ಸೇರಿದಂತೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗ ಜ್ಯೋತಿಷಿಯಾಗಿದ್ದಾರೆ. ಯಾರ್ ಯಾರು ಗೆಲ್ಲುತ್ತಾರೆ, ಸೋಲುತ್ತಾರೆ ಎಂಬುದನ್ನು ಸಿದ್ದರಾಮಯ್ಯ ಜ್ಯೋತಿಷ್ಯ ಹೇಳಲು ಆರಂಭಿಸಿದ್ದಾರೆ ಎಂದು ಲೇವಡಿ ಮಾಡಿದರು.

ರಾಜ್ಯ ಸರ್ಕಾರ ಪತನ: ರಾಜ್ಯದ 28 ಕ್ಷೇತ್ರದಲ್ಲೂ ಗೆಲ್ಲುವ ಗುರಿಯೊಂದಿಗೆ ಬಿಜೆಪಿ, ಜೆಡಿಎಸ್ ಮೈತ್ರಿಕೂಟ ಕಣಕ್ಕಿಳಿದಿದೆ. ಅಭ್ಯರ್ಥಿಗಳ ಗೆಲುವು ಸೋಲನ್ನು ತೀರ್ಮಾನಿಸುವುದು ಮತದಾರ ಪ್ರಭುಗಳು ಎಂಬುದು ಸಿದ್ದರಾಮಯ್ಯ ಅವರಿಗೆ ತಿಳಿದಿರಲಿ. 

ಎಲ್ಲೆಡೆ ಮೈತ್ರಿಕೂಟದ ಅಭ್ಯರ್ಥಿ ಗೆಲುವು ಸಾಧಿಸುವ ಮೂಲಕ ಸಿದ್ದರಾಮಯ್ಯ ಸರ್ಕಾರದ ಆಡಳಿತಕ್ಕೆ ಕನ್ನಡಿ ಹಿಡಿಯಲಿದೆ ಎಂದು ತಿರುಗೇಟು ನೀಡಿದರು. ರಾಜ್ಯದಲ್ಲಿ 28 ಸ್ಥಾನಗಳಲ್ಲೂ ಎನ್.ಡಿಎ ಮೈತ್ರಿಕೂಟದ ಅಭ್ಯರ್ಥಿಗಳು ಗೆಲುವು ಸಾಧಿಸಿದಲ್ಲಿ ರಾಜ್ಯ ಸರ್ಕಾರ ಪತನಗೊಳ್ಳಲಿದೆ ಎಂದರು.

ಇದಕ್ಕೂ ಮುನ್ನ ಶ್ರೀಕಂಠೇಶ್ವರಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ ಎಚ್.ಡಿ. ಕುಮಾರಸ್ವಾಮಿ ತುಲಾಭಾರ ಸೇವೆ ಸಲ್ಲಿಸುವ ಮೂಲಕ ತಮ್ಮ ಹರಕೆ ತೀರಿಸಿದರು. ಅಕ್ಕಿ, ಬೆಲ್ಲದ ಮೂಲಕ ತುಲಾಭಾರ ಸೇವೆ ಸಮರ್ಪಿಸಿದರು.

ನಂತರ ಶ್ರೀಕಂಠೇಶ್ವರಸ್ವಾಮಿ, ಪಾರ್ವತಿದೇವಿ, ಸುಬ್ರಹ್ಮಣ್ಯ, ನಾರಾಯಣಸ್ವಾಮಿ ಸೇರಿದಂತೆ ದೇವಾಲಯದ ಎಲ್ಲ ಗುಡಿಗಳಲ್ಲೂ ವಿಶೇಷ ಪೂಜೆ ಸಲ್ಲಿಸಿದರು. ನಂತರ ಜೆಡಿಎಸ್ ಜಿಲ್ಲಾಧ್ಯಕ್ಷ ಎನ್. ನರಸಿಂಹಸ್ವಾಮಿ ನಿವಾಸಕ್ಕೆ ತೆರಳಿ ಉಪಹಾರ ಸೇವಿಸಿದರು.

ಶಾಸಕ ಜಿ.ಟಿ. ದೇವೇಗೌಡ, ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ, ಮಾಜಿ ಸಚಿವ ಸಾ.ರಾ. ಮಹೇಶ್, ಮಾಜಿ ಶಾಸಕ ಎಂ. ಅಶ್ವಿನ್ ಕುಮಾರ್, ಜೆಡಿಎಸ್ ಜಿಲ್ಲಾಧ್ಯಕ್ಷ ಎನ್. ನರಸಿಂಹಸ್ವಾಮಿ, ತಾಲೂಕು ಅಧ್ಯಕ್ಷ ಆರ್.ವಿ. ಮಹದೇವಸ್ವಾಮಿ, ಮುಖಂಡರಾದ ಸಂಜಯ್ ಗೌಡ, ರವಿಕುಮಾರ್, ಬಿಜೆಪಿ ನಗರಾಧ್ಯಕ್ಷ ಸಿದ್ದರಾಜು ಇದ್ದರು.

ಕಾಂಗ್ರೆಸ್ ನಲ್ಲಿ ನೀವು ಯಾರು? ಅಲ್ಲಿ ನೀವು ವಲಸಿಗರಲ್ಲವಾ?: ಸಿಎಂಗೆ ಕುಮಾರಸ್ವಾಮಿ ಪ್ರಶ್ನೆ

ಕನ್ನಡಪ್ರಭ ವಾರ್ತೆ ಮೈಸೂರು

ನಾನು ಸೋಲುತ್ತೇನೆ ಎಂದು ಹೇಳುವ ಸಿದ್ದರಾಮಯ್ಯ ಯಾವಾಗ ಜೋತಿಷಿಯಾದರು? ನನಗೆ ಗೊತ್ತಿಲ್ಲ. ನನ್ನನ್ನು ವಲಸಿಗ ಎಂದು ಹೇಳಿದ್ದಾರೆ.

ಕಾಂಗ್ರೆಸ್ ನಲ್ಲಿ ನೀವು ಯಾರು? ಅಲ್ಲಿ ನೀವು ವಲಸಿಗರಲ್ಲವಾ? ಮೂಲ ಕಾಂಗ್ರೆಸ್ ನವರನ್ನು ಕಸದ ಬುಟ್ಟಿಗೆ ಹಾಕಿ ನೀವು ಅಲ್ಲಿ ಅಧಿಕಾರ ಮಾಡುತ್ತಿಲ್ವಾ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಕನ್ನಡಿಗ, ಎಲ್ಲಿ ಬೇಕಾದರು ನಾನು ಸ್ಪರ್ಧೆ ಮಾಡಬಹುದು. ಈ ಬಾರಿ ಮಂಡ್ಯದಲ್ಲಿ ನಮ್ಮ ಹಳೇಯ ಸ್ನೇಹಿತರು ಜೊತೆ ಸ್ಪರ್ಧೆ ಎದುರಿಸಬೇಕು. 

ನನ್ನ ಹಣೆಬರಹ ಹಂಗಿದೆ. ಹಳೆ ಸ್ನೇಹಿತರುಗಳೇ ನಮಗೆ ವಿರುದ್ಧ ಆಗುತ್ತಾರೆ, ಆಗಲಿ ಬಿಡಿ ಎಂದರು.ಮಂಡ್ಯದಲ್ಲಿ ಎಚ್.ಡಿ. ಕುಮಾರಸ್ವಾಮಿ ಸೋಲುತ್ತಾರೆಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕಳೆದ ಬಾರಿ ನನ್ನ ಮಗನ ಸೋಲಿಗೆ ಈ ಮಹಾನುಭಾವರು ಎಷ್ಟು ಕಾರಣ ಎಂಬುದು ಗೊತ್ತಿದೆ. 

ಅದರ ಆಧಾರದ ಮೇಲೆ ಇವರು ಈಗ ಮಾತನಾಡುತ್ತಿದ್ದಾರೆ. ಎಲ್ಲದಕ್ಕೂ ಜನ ಉತ್ತರ ಕೊಡುತ್ತಾರೆ ಎಂದು ತಿಳಿಸಿದರು.ಜೆಡಿಎಸ್ ಕೋಮುವಾದಿ ಎಂದು ಸಿದ್ದರಾಮಯ್ಯ ಹೇಳುತ್ತಾರೆ. 

ಸಿದ್ದರಾಮಯ್ಯ ಸರ್ಟಿಫಿಕೇಟ್ ನನಗೆ ಬೇಕಾಗಿಲ್ಲ. ಮೇಕೆದಾಟು ವಿಚಾರದಲ್ಲಿ ದೇವೇಗೌಡರನ್ನ ಪ್ರಶ್ನಿಸುವ ನೈತಿಕತೆ ಕಾಂಗ್ರೆಸ್ ನವರಿಗೆ ಇಲ್ಲ ಎಂದರು.

PREV

Recommended Stories

ಕೆರೆಗಳ ಬಫರ್ ವಲಯ ಕಡಿತ ವಿರೋಧಿಸಿ ರಾಜ್ಯಪಾಲರಿಗೆ ಮನವಿ
ಡಿಸಿಎಂ ಮಧ್ಯರಾತ್ರಿ ಸಿಟಿರೌಂಡ್ಸ್‌ : ನಗರದಲ್ಲಿ ರಸ್ತೆ ಗುಂಡಿ ಮುಚ್ಚುವ ಕಾಮಗಾರಿ ಪರಿಶೀಲಿಸಿದ ಡಿ.ಕೆ.ಶಿವಕುಮಾರ್‌