ಓಂಶಕ್ತಿ ಭಕ್ತರ ಮೇಲೆ ಕಲ್ಲು ತೂರಿದ ಜೆ.ಜೆ.ನಗರದಲ್ಲಿ ಬೂದಿ ಮುಚ್ಚಿದ ಕೆಂಡ ಸ್ಥಿತಿ

KannadaprabhaNewsNetwork |  
Published : Jan 06, 2026, 04:15 AM IST
Bengaluru Stone Pelting

ಸಾರಾಂಶ

ಓಂ ಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲು ತೂರಾಟ ನಡೆಸಿದ ಪ್ರಕರಣಕ್ಕೆ ಸಂಬಂಧಿದಂತೆ ಜೆ.ಜೆ ನಗರ ಪೊಲೀಸ್‌ ಠಾಣೆ ಪೊಲೀಸರು ಮೂವರು ಅಪ್ರಾಪ್ತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಮತ್ತೊಂದೆಡೆ ಸ್ಥಳೀಯ ಶಾಸಕರೂ ಆಗಿರುವ ವಸತಿ ಸಚಿವ ಜಮೀರ್‌ ಅಹಮದ್‌  ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 ಬೆಂಗಳೂರು :  ಓಂ ಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲು ತೂರಾಟ ನಡೆಸಿದ ಪ್ರಕರಣಕ್ಕೆ ಸಂಬಂಧಿದಂತೆ ಜೆ.ಜೆ ನಗರ ಪೊಲೀಸ್‌ ಠಾಣೆ ಪೊಲೀಸರು ಮೂವರು ಅಪ್ರಾಪ್ತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಮತ್ತೊಂದೆಡೆ ಸ್ಥಳೀಯ ಶಾಸಕರೂ ಆಗಿರುವ ವಸತಿ ಸಚಿವ ಜಮೀರ್‌ ಅಹಮದ್‌ ಖಾನ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಜೆ.ಜೆ.ನಗರದ ವಿ.ಎಸ್‌.ಗಾರ್ಡನ್‌ ಬಳಿ ಭಾನುವಾರ ರಾತ್ರಿ 8 ಗಂಟೆಯ ಸುಮಾರಿಗೆ ಓಂ ಶಕ್ತಿ ದೇವಿಯ ಮೆರವಣಿಗೆ ನಡೆಸುತ್ತಿದ್ದ ವೇಳೆ ದುಷ್ಕರ್ಮಿಗಳು ಕಲ್ಲು ತೂರಾಟ ಮಾಡಿದ್ದರು. ಘಟನೆಯಲ್ಲಿ ಬಾಲಕಿ ಸೇರಿ ಮೂವರು ಮಹಿಳೆಯರು ಗಾಯಗೊಂಡಿದ್ದರು. ಇದರಿಂದ ಆಕ್ರೋಶಗೊಂಡಿದ್ದ ಓಂ ಶಕ್ತಿ ಮಾಲಾಧಾರಿಗಳು ಮತ್ತು ಸ್ಥಳೀಯರು ಜೆ.ಜೆ.ನಗರ ಠಾಣೆ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದ್ದರು. ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿತ್ತು.

ಈ ಸಂಬಂಧ ವಿ.ಎಸ್‌.ಗಾರ್ಡನ್‌ ನಿವಾಸಿ ಶಶಿಕುಮಾರ್‌ ಅವರು ನೀಡಿದ ದೂರಿನನ್ವಯ ಎಫ್‌ಐಆರ್‌ ದಾಖಲಿಸಿಕೊಂಡಿದ್ದ ಪೊಲೀಸರು ತಡರಾತ್ರಿಯೇ ಕಾರ್ಯಾಚರಣೆ ನಡೆಸಿ ಘಟನೆ ಕಾರಣರಾಗಿದ್ದ ಮೂವರು ಅಪ್ರಾಪ್ತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಅಪ್ರಾಪ್ತರು ಗಲಾಟೆ ಆದಂತಹ ಸಂದರ್ಭದಲ್ಲಿ ಎಲ್ಲಿದ್ದರು? ಇವರಿಗೆ ಅಪರಾಧ ಹಿನ್ನೆಲೆ ಇದಿಯಾ? ಈ ಹಿಂದೆ ಇದೇ ರೀತಿಯ ಪ್ರಕರಣದಲ್ಲಿ ಭಾಗವಹಿಸಿದ್ದಾರೆಯೇ ಎಂಬ ಬಗ್ಗೆ ತನಿಖೆ ಕೈಗೊಂಡಿದ್ದಾರೆ.

ಬೂದಿ ಮುಚ್ಚಿದ ಕೆಂಡವಾದ ಜೆ.ಜೆ ನಗರ: 

ಓಂ ಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲು ತೂರಾಟ ಘಟನೆ ನಡೆಯುತ್ತಿದ್ದಂತೆ ಜೆ.ಜೆ ನಗರ ಪೊಲೀಸ್‌ ಠಾಣೆ ಮುಂದೆ ನೂರಾರು ಜನರು ಜಮಾಯಿಸಿ ನ್ಯಾಯಕ್ಕಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಕೆಎಸ್‌ಆರ್‌ಪಿ ತುಕಡಿಗಳನ್ನು ನಿಯೋಜಿಸಿ ಬಿಗಿ ಬಂದೋಬಸ್ತ್‌ ಮಾಡಿ ಪರಿಸ್ಥಿತಿಯನ್ನು ನಿಯಂತ್ರಿಸಲಾಯಿತು. ನಂತರ ಸೋಮವಾರ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್‌ ಪಥಸಂಚಲನ ಕೂಡ ನಡೆಸಲಾಯಿತು. ಠಾಣೆಯಲ್ಲೇ ಪಶ್ಚಿಮ ವಿಭಾಗ ಡಿಸಿಪಿ ಯತೀಶ್ ಸೇರಿ ಹಿರಿಯ ಅಧಿಕಾರಿಗಳು ಮೊಕ್ಕಾಂ ಹೂಡಿದ್ದರು. ಜೆ.ಜೆ ನಗರದಲ್ಲಿ ಸೋಮವಾರ ಬೂದಿಮುಚ್ಚಿದ ಕೆಂಡದಂತಿತ್ತು.

ಶ್ರೀರಾಮಸೇನೆ ಕಾರ್ಯಕರ್ತರ ಆಕ್ರೋಶ: 

 ಠಾಣೆ ಬಳಿ ಸಚಿವ ಜಮೀರ್ ಆಗಮಿಸುತ್ತಿದಂತೆ ನೆರೆದಿದ್ದ ಸಾರ್ವಜನಿಕರು ನಿಜವಾದ ಆರೋಪಿಗಳನ್ನು ಬಂಧನ ಮಾಡಿಲ್ಲ ಎಂದು ಆರೋಪಿಸಿದರು. ಸಚಿವರನ್ನು ಕರೆಯಿಸಿ‌ ಸಂಧಾನ ಮಾಡಲಾಗುತ್ತಿದೆ. ಕಲ್ಲು ಎಸೆದ ನೈಜ ಆರೋಪಿಗಳನ್ನು ಬಂಧಿಸಿಲ್ಲ. ಸಂಧಾನ ಪ್ರಕ್ರಿಯೆ ನಡೆಸುತ್ತಾರೆ. ಇಲ್ಲಿ ಯಾರಿಗೂ ರಕ್ಷಣೆ ಇಲ್ಲ. ಮೂರು ಜನರನ್ನು ಬಂಧಿಸಿದ್ದೇವೆ ಎನ್ನುತ್ತಿದ್ದಾರೆ. ಇಲ್ಲಿ ಶಾಂತಿ ನೆಲೆಸಬೇಕು. ಅವರು ಮೆರವಣಿಗೆ ಮಾಡುತ್ತಾರೆ. ಎಲ್ಲಾದರೂ ಕಲ್ಲು ಬೀಳುತ್ತಿದ್ದೀಯಾ?

ಹಿಂದುಗಳು ಮೆರವಣಿಗೆ ಮಾಡಿದರೆ ಕಲ್ಲು ಯಾಕೆ ತೂರುತ್ತಾರೆ ಎಂದು ಶ್ರೀರಾಮಸೇನೆಯ ಪ್ರಸನ್ನ ಅವರು ಆಕ್ರೋಶ ವ್ಯಕ್ತಪಡಿಸಿದ್ದರು.

ಸಚಿವ ಜಮೀರ್‌ ಮಧ್ಯಸ್ಥಿಕೆ: 

 ಸ್ಥಳೀಯ ಶಾಸಕರೂ ಆಗಿರುವ ವಸತಿ ಸಚಿವ ಜಮೀರ್‌ ಅಹಮದ್‌ ಅವರು ಠಾಣೆಗೆ ಆಗಮಿಸಿರುವ ವಿಷಯ ತಿಳಿದು ದೂರುದಾರ ಹಾಗೂ ಓಂ ಶಕ್ತಿ ದೇವಸ್ಥಾನದ ಮುಖ್ಯಸ್ಥ ಶಶಿಕುಮಾರ್, ಓಂ ಶಕ್ತಿ ಮಾಲಾಧಾರಿಗಳು ಠಾಣೆ ಬಳಿ ಆಗಮಿಸಿದ್ದರು. ಘಟನೆಯ ಬಗ್ಗೆ ಪೊಲೀಸರ ಮಧ್ಯಸ್ಥಿಕೆಯಲ್ಲಿ ಠಾಣೆ ಒಳಗಡೆಯೇ ಜಮೀರ್ ಅವರು ದೇವಸ್ಥಾನದವರೊಂದಿಗೆ ಮಾತುಕತೆ ನಡೆಸಿದರು.

ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ: ಜಮೀರ್‌ 

ಯಾರು ತಪ್ಪು ಮಾಡಿದ್ದಾರೋ, ಅದರ ಹಿಂದೆ ಯಾರು ಇದ್ದಾರೋ ಅವರಿಗೆ ಕಠಿಣ ಶಿಕ್ಷೆಯಾಗಲಿದೆ ಎಂದು ಸಚಿವ ಜಮೀರ್‌ ಅಹಮದ್‌ ತಿಳಿಸಿದ್ದಾರೆ.ಕಲ್ಲು ತೂರಾಟ ಘಟನೆಗೆ ಸಂಬಂಧಿಸಿದಂತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಕಲ್ಲು ಹೊಡೆದವರು ಬಾಲಕರೆಂದು ಹೇಳಲಾಗುತ್ತಿದೆ. ಚಿಕ್ಕವರಾಗಲಿ ಅಥವಾ ದೊಡ್ಡವರಾಗಲಿ ತಪ್ಪು ತಪ್ಪೇ. ಮತ್ತು ಇದರ ಹಿಂದೆ ಯಾರು ಇದ್ದಾರೆ ಎಂಬುದನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಿ ಎಂದು ಡಿಸಿಪಿ ಅವರಿಗೆ ಸೂಚನೆ ನೀಡಿದ್ದೇನೆ ಎಂದರು.

ಯಾರೇ ಆದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ನಾನು ಕಳೆದ 8 ವರ್ಷಗಳಿಂದ ನನ್ನ ಕ್ಷೇತ್ರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಿದ್ದೇನೆ. ಪೊಲೀಸರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಈ ಘಟನೆ ನಡೆಯಬಾರದಿತ್ತು ಆದರೂ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದು ಹೇಳಿದರು.ಯಾವುದೇ ಮುಲಾಜಿಲ್ಲದೆ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಇಲ್ಲಿ ಹಿಂದೂ, ಮುಸ್ಲಿಂ ಸಮುದಾಯದವರು ಸಹೋದರರಂತೆ ವಾಸಿಸುತ್ತಿದ್ದಾರೆ. ಇಂತಹ ಘಟನೆ ಮರಕಳಿಸದಂತೆ ಎಚ್ಚರಿಕೆ ವಹಿಸಬೇಕು. ಅಲ್ಲದೇ ಈ ಪ್ರದೇಶದಲ್ಲಿ ಕೆಲ ಕಿಡಿಗೇಡಿಗಳು ಗಾಂಜಾ ಸೇವಿಸಿ ಅಡ್ಡಾಡುತ್ತಾ, ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದಾರೆ ಎಂಬ ದೂರುಗಳು ಬಂದಿವೆ ಎಂದರು.-ಬಾಕ್ಸ್-

ಹಿಂದುಗಳ ತಾಳ್ಮೆ ಕಾರಣಕ್ಕಾಗಿ ದೊಡ್ಡ ಅನಾಹುತ ತಪ್ಪಿತು: ಭಾಸ್ಕರ್ ರಾವ್

ಘಟನೆಯ ಬಗ್ಗೆ ಭಾನುವಾರ ರಾತ್ರಿಯೇ ಪೊಲೀಸರ ಜತೆ ಮಾತಾಡಿದ್ದೆ. ಆದಷ್ಟು ಬೇಗ ಆರೋಪಿಗಳನ್ನು ಬಂಧನ ಮಾಡಿ, ಇಲ್ಲವಾದರೆ ಪ್ರಕರಣ ಗಂಭೀರವಾದ ಸ್ವರೂಪ ಪಡೆದುಕೊಳ್ಳುತ್ತದೆ ಎಂದು ಹೇಳಿದ್ದೆ. ಪೊಲೀಸರು ಇಡೀ ರಾತ್ರಿ ಕಾರ್ಯಾಚರಣೆ ನಡೆಸಿ ಮೂವರು ಕಿಡಿಗೇಡಿಗಳನ್ನು ಪತ್ತೆ ಮಾಡಿ ಬಂಧಿಸಿದ್ದಾರೆ. ಪೊಲೀಸರ ಕಾರ್ಯ ಮೆಚ್ಚುವಂತದ್ದಾಗಿದೆ ಎಂದು ಬಿಜೆಪಿ ಮುಖಂಡ ಹಾಗೂ ಮಾಜಿ ಪೊಲೀಸ್‌ ಅಧಿಕಾರಿ ಭಾಸ್ಕರ್ ರಾವ್ ಹೇಳಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದುಗಳು ತಾಳ್ಮೆ ತೋರಿಸಿದ್ದಾರೆ. ಇಲ್ಲವಾಗಿದ್ದರೆ ದೊಡ್ಡ ಅನಾಹುತವಾಗುತ್ತಿತ್ತು. ಈ ಭಾಗದಲ್ಲಿ ಹದ್ದಿನ ಕಣ್ಣು ಇಟ್ಟಿರಬೇಕು. ಈ ಭಾಗದಲ್ಲಿ ಕೋಮು ಸಾಮರಸ್ಯ ಕಾಪಾಡಬೇಕು. ಇಲ್ಲಿ ಸಿಸಿ ಕ್ಯಾಮೆರಾ ಕವರೇಜ್ ಕಡಿಮೆ ಇದೆ. ಚಾಮರಾಜಪೇಟೆ ಅಪರಾಧ ಮುಕ್ತ ಮಾಡಬೇಕು ಎಂದರು. 

ಓಂ ಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲು ಎಸೆತ ಪ್ರಕರಣದ ಸಂಬಂಧ ಮೂವರ ಅಪ್ರಾಪ್ತರನ್ನು ವಶಕ್ಕೆ ಪಡೆಯಲಾಗಿದೆ. ವಿಚಾರಣೆ ಮುಂದುವರಿಸಲಾಗಿದೆ. ಘಟನೆಗೆ ಕಾರಣರಾದ ಅಪ್ರಾಪ್ತರ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಲಾಗುತ್ತದೆ.

-ಯತೀಶ್, ಪಶ್ಚಿಮ ವಿಭಾಗ ಡಿಸಿಪಿ

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಅಧಿಕಾರಕ್ಕಾಗಿ ಅಪವಿತ್ರ ರಾಜಕೀಯ ಮೈತ್ರಿ - ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ವೈರಿಗಳ ಮಿಲನ
ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ವಿವಾದ