ಕೋಲಾರ : ದೇಶದಲ್ಲಿ ಜಾತಿ, ಧರ್ಮಗಳ ಮಧ್ಯೆ ಗಲಾಟೆ ಮಾಡಿ ದೇವರ ಹೆಸರಿನಲ್ಲಿ ಜನಗಳನ್ನು ಯಾಮಾರಿಸಿದ್ದು ಅಲ್ಲದೆ ಸಂವಿಧಾನಕ್ಕೆ ಧಕ್ಕೆ ಉಂಟುಮಾಡಲು ಹೊರಟಿರುವ ಎನ್.ಡಿ.ಎ ಮೈತ್ರಿ ಅಭ್ಯರ್ಥಿಯನ್ನು ಸೋಲಿಸುವ ಮೂಲಕ ಸಂವಿಧಾನ ರಕ್ಷಣೆಗೆ ಬದ್ದವಾಗಿರುವ ಕಾಂಗ್ರೆಸ್ ಪಕ್ಷದ ಕೆ.ವಿ.ಗೌತಮ್‌ರನ್ನು ಬೆಂಬಲಿಸಲಿದೆ ಎಂದು ಕದಸಂಸ ರಾಜ್ಯ ಸಂಚಾಲಕ ಹೆಣ್ಣೂರು ಶ್ರೀನಿವಾಸ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದೇಶದಲ್ಲಿ ಹತ್ತು ವರ್ಷಗಳ ಮೋದಿ ಸರಕಾರ ಮತ್ತು ರಾಜ್ಯದ ಹಿಂದಿನ ಬಿಜೆಪಿ ನೇತೃತ್ವದ ಸರಕಾರಗಳು ಕಾರ್ಪೊರೇಟ್ ಸಂಸ್ಥೆಗಳ ಪರವಾಗಿ ನಿಂತಿದ್ದು ಸಾಮಾನ್ಯ ಜನರನ್ನು ಬೀದಿಗೆ ತಂದು ನಿಲ್ಲಿಸುವ ಕೆಲಸ ಮಾಡಿದ್ದಾರೆ. ಇದರ ಪರಿಣಾಮವಾಗಿ ಕಳೆದ 2023 ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಕದಸಂಸ ತೀರ್ಮಾನ ಕೈಗೊಂಡು ಇಡೀ ರಾಜ್ಯಾದ್ಯಂತ ಕಾಂಗ್ರೆಸ್ ಪಕ್ಷದ ಪರವಾಗಿ ಕೆಲಸ ಮಾಡಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲಾಗಿದೆ ಎಂದು ತಿಳಿಸಿದರು.ಆಶ್ವಾಸನೆ ಈಡೇರಿಸಿಲ್ಲ
ದೇಶದಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ 2014 ಲೋಕಸಭೆ ಚುನಾವಣೆಯಲ್ಲಿ ಅನೇಕ ಆಶ್ವಾಸನೆಗಳನ್ನು ನೀಡಿದ್ದರು ಪ್ರಮುಖವಾಗಿ ಅಚ್ಛೇದಿನ್ ಹೆಸರಿನಲ್ಲಿ ಮತ ಪಡೆದ ಬಿಜೆಪಿಯವರು ಪ್ರತಿಯೊಬ್ಬರಿಗೂ 15 ಲಕ್ಷ ಖಾತೆಗೆ ಹಾಕುತ್ತೇವೆ, ಗ್ಯಾಸ್ ಸಿಲಿಂಡರ್, ಪೆಟ್ರೋಲ್ ಡಿಸೇಲ್ ಬೆಲೆ ಇಳಿಸುತ್ತೇವೆ ಎಂದು ಹೇಳಿ ದಿನನಿತ್ಯ ಏರಿಕೆ ಮಾಡಿದರು ಜಿಎಸ್ಟಿಯಲ್ಲಿ ರಾಜ್ಯಕ್ಕೆ ಬರಬೇಕಾದ ಹಣ ನೀಡದೇ ಮಲತಾಯಿ ಧೋರಣೆ ಅನುಸರಿಸಿದ್ದಾರೆ ಎಂದು ಆರೋಪಿಸಿದರು.ಸಂವಿಧಾನ ಬದಲಾವಣೆಗೆ ತಂತ್ರ
ಕಳೆದ ೧೦ ವರ್ಷಗಳಲ್ಲಿ ಮೋದಿ ಮತ್ತು ಧರ್ಮದ ಅಮಲನ್ನು ತುಂಬಿಸಿ ಸಮಸ್ಯೆಗಳನ್ನು ಬದಿಗೊತ್ತಿದ್ದಾರೆ ಇದೀಗ ಸಂಸದರು, ಸಚಿವರು ಸಂವಿಧಾನ ಬದಲಾವಣೆ ಮಾತಾಡಿದ್ದಾರೆ ಮುಂದೆ ಏನಾದರೂ ೪೦೦ ಸ್ಥಾನಗಳು ಬಂದರೆ ಸಂವಿಧಾನ ಬದಲಾವಣೆ ಖಚಿತ ಎಂದು ಅನಂತಕುಮಾರ್ ಹೆಗಡೆ ಹೇಳಿದ್ದಾರೆ. ಈ ಎಲ್ಲ ಅಂಶಗಳನ್ನು ಮನಗಂಡು ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದರು.
ಕದಸಂಸ ರಾಜ್ಯ ಸಂಘಟನಾ ಸಂಚಾಲಕರಾದ ಸೂಲಿಕುಂಟೆ ರಮೇಶ್, ವಿಜಯನರಸಿಂಹ, ಜಿಲ್ಲಾ ಸಂಚಾಲಕ ನಾಗನಾಳ ಮುನಿಯಪ್ಪ, ಬೆಂಗಳೂರು ವಿಭಾಗದ ವೆಂಕಟೇಶ್, ಜಿಲ್ಲಾ ಸಂಘಟನಾ ಸಂಚಾಲಕರಾದ ಗೋವಿಂದರಾಜು, ವೆಂಕಟೇಶ್ ಇದ್ದರು.