ಡಿಕೆಶಿ, ಸತೀಶ್‌ ಜತೆ ಸುರ್ಜೇವಾಲಾ ಗೌಪ್ಯ ಸಭೆ - ಬಣ ಬಡಿದಾಟಕ್ಕೆ ಬ್ರೇಕ್‌ ಹಾಕಲು ಮಾತುಕತೆ

ಸಾರಾಂಶ

 ಡಿ.ಕೆ.ಶಿವಕುಮಾರ್‌ ಮತ್ತು ಸಚಿವ ಸತೀಶ್‌ ಜಾರಕಿಹೊಳಿ ನಡುವಿನ ಬಣ ಬಡಿದಾಟಕ್ಕೆ ಬ್ರೇಕ್‌ ಹಾಕಲು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ ಸಿಂಗ್‌ ಸುರ್ಜೇವಾಲಾ ಅವರು ಬೆಳಗಾವಿಯಲ್ಲಿ ಶುಕ್ರವಾರ ಇಬ್ಬರೂ ಮುಖಂಡರ ಜೊತೆಗೆ ಪ್ರತ್ಯೇಕವಾಗಿ ಗೌಪ್ಯ ಸಭೆ ನಡೆಸಿದ್ದು, ಇದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಬೆಳಗಾವಿ : ಉಮಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮತ್ತು ಸಚಿವ ಸತೀಶ್‌ ಜಾರಕಿಹೊಳಿ ನಡುವಿನ ಬಣ ಬಡಿದಾಟಕ್ಕೆ ಬ್ರೇಕ್‌ ಹಾಕಲು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ ಸಿಂಗ್‌ ಸುರ್ಜೇವಾಲಾ ಅವರು ಬೆಳಗಾವಿಯಲ್ಲಿ ಶುಕ್ರವಾರ ಇಬ್ಬರೂ ಮುಖಂಡರ ಜೊತೆಗೆ ಪ್ರತ್ಯೇಕವಾಗಿ ಗೌಪ್ಯ ಸಭೆ ನಡೆಸಿದ್ದು, ಇದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಬೆಳಗಾವಿಯಲ್ಲಿ ಜ.21ರಂದು ನಡೆಯುವ ಗಾಂಧಿ ಭಾರತ ಕಾರ್ಯಕ್ರಮ ಹಿನ್ನೆಲೆ ಸುರ್ವೇವಾಲಾ ಅವರು ಬೆಳಗಾವಿ ಕಾಂಗ್ರೆಸ್ ಭವನದಲ್ಲಿ ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಯ ಕಾಂಗ್ರೆಸ್ ಶಾಸಕರ ಜೊತೆಗೆ ಪೂರ್ವಭಾವಿ ಸಭೆ ನಡೆಸಿದರು.

ಶಿವಕುಮಾರ್‌ ಅವರ ಜೊತೆ ಸಭೆ ನಡೆಸುವುದಕ್ಕೂ ಮುನ್ನ, ಸುರ್ಜೇವಾಲಾ ಅವರು ಮಾಜಿ ಸಂಸದ ಡಿ.ಕೆ.ಸುರೇಶ್‌ ಹಾಗೂ ಸತೀಶ್‌ ಜಾರಕಿಹೊಳಿ ಅವರನ್ನು ಅಕ್ಕಪಕ್ಕ ಕೂರಿಸಿಕೊಂಡು ಸಭೆ ನಡೆಸಿದರು. ಈ ಸಭೆಯಲ್ಲಿ ಸಚಿವರಾದ ಆರ್.ಬಿ. ತಿಮ್ಮಾಪುರ, ಬೋಸರಾಜು, ಶಾಸಕರಾದ ಲಕ್ಷ್ಮಣ ಸವದಿ, ರಾಜು ಕಾಗೆ, ಬಾಬಾಸಾಹೇಬ ಪಾಟೀಲ, ವಿಶ್ವಾಸ ವೈದ್ಯ, ಪ್ರಕಾಶ ಹುಕ್ಕೇರಿ ಸೇರಿ ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆ ನಾಯಕರಿದ್ದರು.

ಈ ವೇಳೆ ಸುರ್ಜೇವಾಲಾ ಅವರು, ಶಿವಕುಮಾರ್‌ ವಿರುದ್ಧ ಮುನಿಸಿಕೊಂಡಿರುವ ಸಚಿವ ಸತೀಶ್‌ರ ಮನವೊಲಿಕೆಗೆ ಯತ್ನಿಸಿದರು ಎನ್ನಲಾಗಿದೆ. ಸಭೆ ಬಳಿಕ ಸತೀಶ್‌, ಸುರ್ಜೇವಾಲಾ ಮತ್ತು ಸುರೇಶ್‌ ಅವರು ಒಂದೇ ವಾಹನದಲ್ಲಿ ತೆರಳಿದರು.

ಬಳಿಕ ಅವರು ಗಾಂಧಿ ಭಾರತ ಕಾರ್ಯಕ್ರಮ ನಡೆಯಲಿರುವ ಸಿಪಿಎಡ್‌ ಮೈದಾನದಲ್ಲಿ ಸಿದ್ಧತೆ ಪರಿಶೀಲಿಸಿದರು. ಕಾರ್ಯಕರ್ತರ ಸಭೆ ಬಳಿಕ ಸತೀಶ್‌ ಜಾರಕಿಹೊಳಿ ಅವರು ಕಾಗವಾಡಕ್ಕೆ ತೆರಳಿದರು. ನಗರದ ಖಾಸಗಿ ಹೊಟೇಲ್‌ನಲ್ಲಿ ಸುರ್ವೇವಾಲಾ ಅವರು ಡಿ.ಕೆ.ಶಿವಕುಮಾರ್‌ ಜೊತೆಗೆ ಪ್ರತ್ಯೇಕವಾಗಿ ಅರ್ಧ ಗಂಟೆ ಸಭೆ ನಡೆಸಿದರು. ಈ ವೇಳೆ ಡಿ.ಕೆ.ಸುರೇಶ್‌ ಕೂಡ ಜತೆಗಿದ್ದರು. ಬಳಿಕ ಮೂವರು ಒಂದೇ ವಾಹನದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ದಾಖಲಾಗಿರುವ ಆಸ್ಪತ್ರೆಗೆ ತೆರಳಿ, ಆರೋಗ್ಯ ವಿಚಾರಿಸಿದರು ಎಂದು ತಿಳಿದುಬಂದಿದೆ.

Share this article