ಬೆಳಗಾವಿ ಅಧಿವೇಶನದಲ್ಲಿ ಶಾಸಕ ಎಚ್ .ಟಿ.ಮಂಜು ಸರ್ಕಾರಕ್ಕೆ ಒತ್ತಾಯ
ಕಾವೇರಿ ನೀರು ಉಳಿಸಲು ಸೂಕ್ತ ತೀರ್ಮಾನ ಕೈಗೊಂಡು ರೈತರು, ಹೋರಾಟಗಾರರು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹಕ್ಕೆ ಇತಿಶ್ರೀ ಹಾಡಬೇಕು ಎಂದು ಶಾಸಕ ಎಚ್ .ಟಿ.ಮಂಜು ಒತ್ತಾಯಿಸಿದ್ದಾರೆ.
ಬೆಳಗಾವಿ ಅಧಿವೇಶನದ ಚರ್ಚೆ ವೇಳೆ ಮಾತನಾಡಿದ ಅವರು, ನಾನೊಬ್ಬ ಮಂಡ್ಯ ಜಿಲ್ಲೆಯನ್ನು ಪ್ರತಿನಿಧಿಸುವ ಶಾಸಕನಾಗಿ ಜಿಲ್ಲಾ ಹಿತರಕ್ಷಣ ಸಮಿತಿ ಹಾಗೂ ವಿವಿಧ ಸಂಘಟನೆಗಳು ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ, ಕಾವೇರಿ ಕೊಳದ ನೀರಿನ ರಕ್ಷಣೆಗಾಗಿ ಸರದಿ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದರೂ ಸರ್ಕಾರ ಈ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಹೇಳಿದರು.ಸತ್ಯಾಗ್ರಹ ಮಾಡುತ್ತಿರುವ ಜೀವಗಳಿಗೆ ಬೆಲೆಯಿಲ್ಲವೇ? ಮುಖ್ಯಮಂತ್ರಿಗಳು ಸತ್ಯಾಗ್ರಹದ ಸ್ಥಳಕ್ಕೆ ಭೇಟಿ ನೀಡಿದ್ದರೂ ಸಹ ರೈತರ ಸಮಸ್ಯೆಗೆ ಪರಿಹಾರ ನೀಡುವಲ್ಲಿ ವಿಫಲರಾಗಿದ್ದಾರೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶದಂತೆ ತಮಿಳುನಾಡಿಗೆ ಬಿಡಬೇಕಾಗಿದ್ದ ನೀರನ್ನು ಬಿಟ್ಟರೂ ಇನ್ನೂ ಹೆಚ್ಚುವರಿ ನೀರು ಹರಿಸುತ್ತಿರುವುದು ಸರಿಯಲ್ಲ. ಸರ್ಕಾರ ಕಾವೇರಿ ಕೊಳದ ನೀರಿನ ಉಳಿವಿಗಾಗಿ ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಬಾಕ್ಸ್....
ಕೆ.ಆರ್ .ಪೇಟೆ ತಾಲೂಕಿನಲ್ಲಿ 2021ರಲ್ಲಿ ಸುರಿದ ಮಹಾಮಳೆಗೆ ಒಡೆದಿರುವ ಕೆರೆಕಟ್ಟೆಗಳು ಹಾಗೂ ಸೇತುವೆಗಳನ್ನು ದುರಸ್ಥಿಗೊಳಿಸುವಂತೆ ಕ್ರಮ ವಹಿಸಲು ಶಾಸಕ ಎಚ್.ಟಿ.ಮಂಜು ಸರ್ಕಾರವನ್ನು ಒತ್ತಾಯಿಸಿದರು.
ಹೇಮಾವತಿ ನೀರಿನ ಆಶ್ರಯದಲ್ಲಿ ಇರುವ ತಾಲೂಕಿನಲ್ಲಿ 2021 ರಲ್ಲಿ ಸುರಿದ ಭಾರಿ ಮಳೆಗೆ ಸಂತೆಬಾಚಹಳ್ಳಿ ಹೋಬಳಿಯ ಸೋಮೇನಹಳ್ಳಿ ಸೇತುವೆ ಸಂಪರ್ಕ ಕಳೆದುಕೊಂಡಿದೆ. ಎರಡುವರೆ ವರ್ಷಗಳಾದರೂ ಈ ಸೇತುವೆಯನ್ನು ಪುನರ್ ನಿರ್ಮಾಣ ಮಾಡದಿರುವುದು ದುರಂತ. ಇದರಿಂದ ಸಾರ್ವಜನಿಕರ ಓಡಾಟಕ್ಕೆ ಅನಾನುಕೂಲವಾಗಿದೆ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಸಹ ಒಡೆದ ಕೆರೆಏರಿಗಳ ಪರಿಶೀಲನೆ ನಡೆಸಿದ್ದಾರೆ. ಆದ್ದರಿಂದ ಸರ್ಕಾರ ಕೂಡಲೇ ಕೆರೆ ಏರಿಗಳ ಮರು ನಿರ್ಮಾಣ ಹಾಗೂ ಸೇತುವೆ ನಿರ್ಮಾಣ ಕಾಮಗಾರಿಯನ್ನು ಆರಂಭಿಸಬೇಕು ಎಂದು ಮನವಿ ಮಾಡಿದರು.