;Resize=(412,232))
ಪಟನಾ: ಬಿಹಾರದಲ್ಲಿ ಪರಸ್ಪರ ಸೀಟು ಹಂಚಿಕೆ ಬಿಕ್ಕಟ್ಟು ಇತ್ಯರ್ಥಪಡಿಸುಕೊಳ್ಳುವುದಕ್ಕೆ ವಿಫಲವಾಗಿದ್ದ ವಿಪಕ್ಷ ಇಂಡಿಯಾ ಮೈತ್ರಿ ಕೂಟ, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರನ್ನು ತನ್ನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದೆ. ಇದರೊಂದಿಗೆ ರಾಜ್ಯದಲ್ಲೇ ತಾನೇ ಬಾಸ್ ಎಂದು ಆರ್‌ಜೆಡಿ ಮತ್ತು ಅದರ ನಾಯಕ ತೇಜಸ್ವಿ ಯಾದವ್ ಸಾಬೀತುಪಡಿಸಿದ್ದಾರೆ.
ಈ ಕುರಿತು ಗುರುವಾರ ಇಲ್ಲಿ ಹೇಳಿಕೆ ನೀಡಿರುವ ಕಾಂಗ್ರೆಸ್‌ನ ಹಿರಿಯ ನಾಯಕ ಅಶೋಕ್ ಗೆಹ್ಲೋಟ್, ‘ತೇಜಸ್ವಿ ಯಾದವ್ ಅವರನ್ನು ನಮ್ಮ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಲು ಮೈತ್ರಿಕೂಟದ ಎಲ್ಲಾ ನಾಯಕರು ಸಮ್ಮತಿಸಿದ್ದಾರೆ. ಇದಕ್ಕೆ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ವಿಪಕ್ಷ ನಾಯಕ ರಾಹುಲ್ ಗಾಂಧಿ ಸಮ್ಮತಿಯೂ ಸಿಕ್ಕಿದೆ. ಇನ್ನು ಬಿಹಾರದಲ್ಲಿ ಸಂಕೀರ್ಣ ಸಾಮಾಜಿಕ ಚೌಕಟ್ಟನ್ನು ಅಧ್ಯಯನ ಮಾಡಿದ ಬಳಿಕ ವಿಕಾಸ್ ಶೀಲ್ ಇನ್ಸಾನ್ ಪಕ್ಷದ ಮುಖ್ಯಸ್ಥ ಮುಕೇಶ್ ಸಾಹ್ನಿ ಮತ್ತು ಮೈತ್ರಿಕೂಟದ ಇತರೆ ಪಕ್ಷದ ನಾಯಕರೊಬ್ಬರನ್ನು ಉಪಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಯಿತು’ ಎಂದು ತಿಳಿಸಿದ್ದರು.
ಇನ್ನು ಎನ್‌ಡಿಎ ಮೈತ್ರಿಕೂಟ, ಬಿಹಾರ ಸಿಎಂ, ಜೆಡಿಯ ನಾಯಕ ನಿತೀಶ್ ನೇತೃತ್ವದಲ್ಲೇ ಚುನಾವಣೆ ಎದುರಿಸಲಿದೆ. ಚುನಾವಣೆ ಬಳಿಕ, ಉನ್ನತ ಹುದ್ದೆ ಯಾರು ಏರಬೇಕೆಂಬ ಬಗ್ಗೆ ನೂತನ ಶಾಸಕರು ನಿರ್ಧರಿಸುತ್ತಾರೆ ಎಂದು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು.
ಕಾಂಗ್ರೆಸ್ ಮುಂದೆ ಆರ್‌ಜೆಡಿ ಪಟ್ಟು
1. ಚುನಾವಣೆ ಘೋಷಣೆಯಾದಾಗಿನಿಂದಲೂ ಆರ್‌ಜೆಡಿ ಮತ್ತು ಕಾಂಗ್ರೆಸ್ ನಡುವೆ ಸೀಟು ಹಂಚಿಕೆ ಬಿಕ್ಕಟ್ಟು ಆರಂಭವಾಗಿ, ನಾಮಪತ್ರ ಸಲ್ಲಿದರೂ ಮುಗಿಯಲಿಲ್ಲ. ಹೀಗಾಗಿ 4 ಕ್ಷೇತ್ರದಲ್ಲಿ ಎರಡೂ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದವು.
2. ಇನ್ನೊಂದೆಡೆ ತೇಜಸ್ವಿಯನ್ನು ಸಿಎಂ ಅಭ್ಯರ್ಥಿ ಎಂದು ಘೋಷಿಸಲು ಕಾಂಗ್ರೆಸ್‌ಗೆ ಸುತರಾಂ ಒಪ್ಪಿಗೆ ಇರಲಿಲ್ಲ. ತೇಜಸ್ವಿ ಹೆಸರು ಘೋಷಿಸಿದರೆ ಯಾದವೇತರ ಸಮುದಾಯದ ಮತ ಬೀಳುವುದು ಕಷ್ಟ ಎಂಬುದು ಕಾಂಗ್ರೆಸ್ ವಾದವಾಗಿತ್ತು.
3. ಜೊತೆಗೆ ಒಬ್ಬರೇ ವ್ಯಕ್ತಿಯನ್ನು ಸಿಎಂ ಅಭ್ಯರ್ಥಿ ಎಂದು ಘೋಷಿಸಿ ಚುನಾವಣೆಗೆ ಹೋಗುವ ಬದಲು ಸಾಮುದಾಯಿಕ ನಾಯಕತ್ವ ಕಾಂಗ್ರೆಸ್‌ನ ಒಲವಾಗಿತ್ತು. ಹೀಗಾಗಿ ಅದು ಸಿಎಂ ಅಭ್ಯರ್ಥಿ ಹೆಸರು ಘೋಷಣೆ ಮುಂದೂಡಿಕೊಂಡೇ ಬಂದಿತ್ತು.
4. ಆದರೆ ಇಂಥ ನಿಲುವು ಇಂಡಿ ಕೂಟಕ್ಕೆ ಭಾರೀ ಅಡ್ಡಿಯಾಗಲಿದೆ. ಗೆಲುವಿನ ಸಾಧ್ಯತೆ ದೂರ ಮಾಡಲಿದೆ ಎಂಬ ತೇಜಸ್ವಿ ಯಾದವ್ ಎಚ್ಚರಿಕೆ ಕಾಂಗ್ರೆಸ್ ನಾಯಕರನ್ನು ಬೆಚ್ಚಿ ಬೀಳಿಸಿತು ಎನ್ನಲಾಗಿದೆ.
5. ಹೀಗಾಗಿ ಅಂತಿಮವಾಗಿ ಮತದಾನಕ್ಕೆ ಕೆಲವೇ ದಿನಗಳಿರುವಾಗ ತೇಜಸ್ವಿ ಅವರನ್ನೇ ಇಂಡಿ ಕೂಟದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಲು ಕಾಂಗ್ರೆಸ್ ಒಪ್ಪಿತು. ಇದು ಬಿಹಾರದಲ್ಲಿ ಆರ್‌ಜೆಡಿ ಮುಂದೆ ಕಾಂಗ್ರೆಸ್ ಮಂಡಿಯೂರಿದ ಸಂಕೇತ ಎಂದು ರಾಜಕೀಯ ಪಂಡಿತರು ವಿಶ್ಲೇಷಿಸಿದ್ದಾರೆ.