ಬೆಂಗಳೂರು : ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ತೇಜಸ್ವಿ ಸೂರ್ಯ ಗುರುವಾರ ಉಮೇದುವಾರಿಕೆ ಸಲ್ಲಿಸಿದರು.
ಇದಕ್ಕೂ ಮುನ್ನ ಗಿರಿನಗರದ ಗಣೇಶ ದೇವಸ್ಥಾನಕ್ಕೆ ಕುಟುಂಬದೊಂದಿಗೆ ತೆರಳಿ ಪೂಜೆ ಸಲ್ಲಿಸಿದರು. ಹಿರಿಯರು ಹಾಗೂ ಹಿತೈಷಿಗಳ ಆಶೀರ್ವಾದ ಪಡೆದರು. ಗಿರಿನಗರ ಭಾಗದಿಂದ ನಾಮಪತ್ರ ಸಲ್ಲಿಕೆ ಮೆರವಣಿಗೆಗೆ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಚಾಲನೆ ನೀಡಿ ಶುಭ ಹಾರೈಸಿದರು.
ಜಯನಗರ 4ನೇ ಬ್ಲಾಕಿನ ಮಯ್ಯಾಸ್ ಹೋಟೆಲ್‌ನಿಂದ ಬೃಹತ್ ಮೆರವಣಿಗೆಯಲ್ಲಿ ಬಿಬಿಎಂಪಿ ಜಂಟಿ ಆಯುಕ್ತರ ಕಚೇರಿವರೆಗೆ ಸಾಗಿ ನಾಮಪತ್ರ ಸಲ್ಲಿಸಿದರು. ಕೇಂದ್ರ ಸಚಿವ ಅನುರಾಗ್ ಸಿಂಗ್ ಠಾಕೂರ್, ವಿರೋಧ ಪಕ್ಷದ ನಾಯಕ ಆರ್.ಅಶೋಕ್, ರಾಜ್ಯಸಭಾ ಸದಸ್ಯ ಜಗ್ಗೇಶ್, ಸಂಸದ ಪ್ರತಾಪ್ ಸಿಂಹ, ಶಾಸಕ ಉದಯ ಗರುಡಾಚಾರ್, ಸತೀಶ್ ರೆಡ್ಡಿ, ರವಿ ಸುಬ್ರಹ್ಮಣ್ಯ, ಸಿ.ಕೆ.ರಾಮಮೂರ್ತಿ, ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ, ಜೆಡಿಎಸ್ ನಗರ ಘಟಕದ ಅಧ್ಯಕ್ಷ ರಮೇಶ್‌ಗೌಡ ಸೇರಿದಂತೆ ಬಿಜೆಪಿ-ಜೆಡಿಎಸ್‌ನ ಹಲವು ಮುಖಂಡರು, ಕಾರ್ಯಕರ್ತರು ಸಾಥ್ ನೀಡಿದರು.
ಈ ವೇಳೆ ಮಾತನಾಡಿದ ತೇಜಸ್ವಿ ಸೂರ್ಯ, ಸಂಸದನಾಗಿ ಕಳೆದ ಐದು ವರ್ಷ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಇವತ್ತು ಸೇರಿರುವ ಜನರನ್ನು ಕಾಂಗ್ರೆಸ್ ನೋಡಿದರೆ, ಐದು ಲಕ್ಷ ಮತಗಳ ಅಂತರದಲ್ಲಿ ಬಿಜೆಪಿ ಗೆಲ್ಲಲಿದೆ ಎಂಬುದು ಗೊತ್ತಾಗಿದೆ. ಕೋವಿಡ್ ಸಂದರ್ಭದಲ್ಲಿ ಬೆಡ್ ಬ್ಲಾಕಿಂಗ್ ಹಗರಣ ಬಯಲು ಮಾಡಿದೆ. ಮೆಟ್ರೋ, ಸಬ್ ಅರ್ಬನ್ ರೈಲು, ಕಷ್ಟದಲ್ಲಿರುವ ಎರಡು ಸಾವಿರ ಮಕ್ಕಳಿಗೆ ನರೇಂದ್ರ ಮೋದಿ ವಿದ್ಯಾ ವೇತನ ನೀಡಲಾಗಿದೆ. ಬೆಂಗಳೂರಿನಲ್ಲಿ ಎನ್‌ಐಎ ಕಚೇರಿಯನ್ನು ತೆರೆಯಲಾಗಿದೆ. ಹೀಗಾಗಿ ಮೋದಿ ಅವರ ಕೈಯನ್ನು ಮತ್ತಷ್ಟು ಬಲಪಡಿಸಬೇಕಿದೆ ಎಂದು ಹೇಳಿದರು..
ಕೇಂದ್ರ ಸಚಿವ ಅನುರಾಗ್ ಸಿಂಗ್ ಠಾಕೂರ್ ಮಾತನಾಡಿ, ಕಾಂಗ್ರೆಸ್ ಇಂದು ರಾಹುಲ್ ಗಾಂಧಿ, ಪ್ರಿಯಾಂಕಾ ವಾದ್ರಾ ಪಕ್ಷವಾಗಿದೆ. ರಾಹುಲ್ ಗಾಂಧಿ ಉತ್ತರಪ್ರದೇಶದಲ್ಲಿ ಸ್ಪರ್ಧಿಸದೆ ಕೇರಳದ ವಯನಾಡಿಗೆ ಬಂದಿದ್ದಾರೆ. ಅಲ್ಲಿ ಅವರಿಗೆ ಎಸ್‌ಡಿಪಿಐ ಬೆಂಬಲ ನೀಡಿದೆ. ಕಾಂಗ್ರೆಸ್ ಪಕ್ಷ ಪಿಎಫ್‌ಐಗೆ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತದಲ್ಲಿ ನೀರಿನ ಸಮಸ್ಯೆ ತಲೆದೋರಿದೆ. ಬೆಂಗಳೂರು ಇಂಟರ್ ನ್ಯಾಷನಲ್ ಏರ್‌ಪೋರ್ಟ್ ಪ್ರಪಂಚದಲ್ಲೇ ಅತ್ಯುತ್ತಮ ಏರ್‌ಪೋರ್ಟ್ ಆಗಿದೆ. ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ 22 ಏಮ್ಸ್, 23 ಐಐಎಂ, ಹೆದ್ದಾರಿ ರಸ್ತೆಗಳು, ಮೆಡಿಕಲ್ ಕಾಲೇಜುಗಳು, ವಿಶ್ವವಿದ್ಯಾಲಯಗಳು, ವಿಮಾನ ನಿಲ್ದಾಣಗಳ ಸಂಖ್ಯೆ ಹೆಚ್ಚಳವಾಗಿದೆ. ಭಾರತ ಐದನೇ ದೊಡ್ಡ ಆರ್ಥಿಕತೆ ಹೊಂದಿದ ದೇಶವಾಗಿದೆ ಎಂದರು.
ರಾಜ್ಯಸಭಾ ಸದಸ್ಯ ಜಗ್ಗೇಶ್ ಮಾತನಾಡಿ, ಕುರಿ ಕಡಿಯುವ ಮುನ್ನ ಹಾರ ಹಾಕುತ್ತಾರೆ. ಪಾಪ ಕುರಿಗೆ ಬಲಿ ಕೊಡುತ್ತಾರೆ ಎಂಬುದು ಗೊತ್ತಿರಲ್ಲ. ಹೀಗೆ ಕಾಂಗ್ರೆಸ್‌ನವರು ಉಚಿತ ಕೊಟ್ಟು ಮತದಾರನ ಬಲಿ ಹಾಕುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಕಿ ಕೊಟ್ಟಿದ್ದಾರೆ. ಆದರೆ, ಎಲ್ಲಿಯೂ ಉಚಿತ ಎಂದಿಲ್ಲ. ಮೋದಿ ಅವರು ಅಕ್ಕಿಯನ್ನು ಕೊಡುತ್ತಲೇ ಇರುತ್ತಾರೆ ಎಂದು ತಿಳಿಸಿದರು.
ಎಲ್ಲಿದ್ದೀಯಾ ರಾಹುಲ್ ಅಣ್ಣಾ?
ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, ಎಲ್ಲಿದ್ದೀಯಾ ರಾಹುಲ್ ಅಣ್ಣ? ಕಿದರ್ ಹೈ? ಒಂದು ದಿನ ರಜಾ ತೆಗೆದುಕೊಳ್ಳದ ಮೋದಿ ಬೇಕಾ? ವಿದೇಶದಲ್ಲಿ ತೆರಳಿ ಕುಳಿತುಕೊಳ್ಳುವ ರಾಹುಲ್ ಗಾಂಧಿ ಬೇಕಾ? ರಾಜ್ಯದಲ್ಲಿ ಅಲಿಬಾಬಾ ಮತ್ತು 40 ಜನ ಕಳ್ಳರು ಅಧಿಕಾರ ಮಾಡುತ್ತಿದ್ದಾರೆ. ಏನಿಲ್ಲಾ ಏನಿಲ್ಲಾ ಕುಡಿಯಲು ನೀರಿಲ್ಲ. ಆದರೆ, ಬಾರ್‌ಗಳು ಮಾತ್ರ ಭರ್ತಿ ಆಗಿರುತ್ತವೆ. ಇನ್ನು ಈ ಸರ್ಕಾರ ಸ್ಟಾಂಪ್ ಡ್ಯೂಟಿ ಜಾಸ್ತಿ ಮಾಡಿದೆ ಎಂದು ಕಿಡಿಕಾರಿದರು.