ಕೋಲಾರ : ಈ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್- ಬಿಜೆಪಿ ಸೇರಿಕೊಂಡು ಅಂಬೇಡ್ಕರ್ ಸಂವಿಧಾನ ಒಡೆಯಲು ಹೊರಟಿವೆ. ಅದನ್ನು ತಡೆಯಲು ಕಾಂಗ್ರೆಸ್ ಮುಂದಾಗಿದೆ, ದಲಿತರು, ಅಲ್ಪಸಂಖ್ಯಾತರು ಬಡವರು, ಮಹಿಳೆಯರಿಗೆ ರಕ್ಷಣೆ ನೀಡಲು ನಡೆಯುತ್ತಿರುವ ಚುನಾವಣೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಸುರೇಶ್ ತಿಳಿಸಿದರು.ನಗರದ ಸ್ಕೌಟ್ಸ್ ಭವನದಲ್ಲಿ ಕಾಂಗ್ರೆಸ್ ಬೆಂಬಲಿತ ವಾಲ್ಮೀಕಿ ಸಮುದಾಯದ ಮುಖಂಡರ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಬಿಜೆಪಿ ಜಾತಿ ಜಾತಿಗಳ ಮಧ್ಯೆ ವಿಷ ಬೀಜಗಳನ್ನು ಬಿತ್ತಿ ಕೋಮು ಗಲಭೆಗಳನ್ನು ಸೃಷ್ಟಿಸಿ ಅಧಿಕಾರ ಉಳಿಸಿಕೊಳ್ಳಲು ಮುಂದಾಗಿದೆ ಎಂದು ಆರೋಪಿಸಿದರು.
ಸಂವಿಧಾನ ರಕ್ಷಣೆ ಉದ್ದೇಶ
ಕಾಂಗ್ರೆಸ್ ಅಭಿವೃದ್ಧಿ, ಸಂವಿಧಾನ ಮತ್ತು ಪ್ರಜಾಪ್ರಭುತ್ವ ರಕ್ಷಣೆಗಾಗಿ ನಿಮ್ಮ ಬೆಂಬಲವನ್ನು ಕೇಳುತ್ತೀದ್ದೇವೆ, ರಾಜ್ಯದಲ್ಲಿ ಸರಕಾರವು ವಾಲ್ಮೀಕಿ ಸಮುದಾಯಕ್ಕೆ ವಿಶೇಷ ಸ್ಥಾನಮಾನ ನೀಡಿದೆ, ಲೋಕೋಪಯೋಗಿ ಇಲಾಖೆಯನ್ನು ಸತೀಶ್ ಜಾರಕಿಹೊಳಿಗೆ ಸಹಕಾರ ಕೆ.ಸಿ.ರಾಜಣ್ಣರಿಗೆ ಕ್ರೀಡಾ ಅಭಿವೃದ್ಧಿಯನ್ನು ನಾಗೇಂದ್ರರಿಗೆ ನೀಡಲಾಗಿದೆ, ಅದೇ ರೀತಿಯಲ್ಲಿ ನಿಗಮ ಮಂಡಳಿಗಳ ಸ್ಥಾನಗಳನ್ನು ಕೊಟ್ಟಿದ್ದು ಸರಕಾರ ಮತ್ತು ಸಿದ್ದರಾಮಯ್ಯ ಡಿ.ಕೆ.ಶಿವಕುಮಾರ್ ಅವರ ಬೆಂಬಲವು ಸದಾ ಸಮುದಾಯದ ಮೇಲೆ ಇರಲಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಕಳೆದ ಬಾರಿ ಸಂಸದರಾಗಿ ಆಯ್ಕೆಯಾದ ಎಸ್.ಮುನಿಸ್ವಾಮಿ ಕೋಮುಭಾವನೆಗಳ ವಿಷಯಗಳನ್ನು ತಂದು ಯಾವುದೇ ಅಭಿವೃದ್ಧಿ ಮಾಡದೇ ಐದು ವರ್ಷಗಳ ಸಿಕ್ಕ ಅವಕಾಶವನ್ನು ಹಾಳು ಮಾಡಿದ್ದಾರೆ, ಪ್ರತಿ ಅಭಿವೃದ್ಧಿ ವಿಚಾರದಲ್ಲಿ ಗಲಾಟೆ ಮಾಡಿದ್ದೇ ಹೆಚ್ಚು ಅವರನ್ನು ಮೊದಲಿನಿಂದಲೂ ಹೋಳು ಮುನಿಸ್ವಾಮಿ, ಮಚ್ಚು ಮುನಿಸ್ವಾಮಿ ಎಂದೇ ರಾಜ್ಯಾದ್ಯಂತ ಪ್ರಸಿದ್ಧಿಯಾಗಿದ್ದಾರೆ ಎಂದು ಟೀಕಿಸಿದರು.ಮುನಿಸ್ವಾಮಿ ಕೈಗೊಂಬೆ ಬಾಬು
ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿ ಮಲ್ಲೇಶ್ ಬಾಬು ಅವರು ಮುನಿಸ್ವಾಮಿಯ ಕೈಗೊಂಬೆಯಾಗಿದ್ದಾರೆ. ಅವರನ್ನು ಬಲಿಕಾ ಬಕ್ರಾ, ಕುರುಬಾನಿ ಕಾ ಬಕ್ರಾ ಮಾಡಿದ್ದಾರೆ. ಬಂಗಾರಪೇಟೆಯಲ್ಲಿ ಗೆಲ್ಲಲು ಸಾಧ್ಯವಾಗದವರು ಇಲ್ಲಿ ಗೆಲ್ಲುತ್ತಾರೆಯೇ ಸಂವಿಧಾನ ಉಳಿವಿಗೆ ಕಾಂಗ್ರೆಸ್ ಅಭ್ಯರ್ಥಿ ಗೌತಮ್ ಗೆಲ್ಲಬೇಕು. ನಿಮ್ಮ ಋಣ ಗೌತಮ್ ಹಾಗೂ ಕಾಂಗ್ರೆಸ್ ಪಕ್ಷದ ಮೇಲೆ ಇರಲಿ. ಸಿದ್ಧರಾಮಯ್ಯ ಗ್ಯಾರಂಟಿ ನೀಡಿದ್ದಾರೆ. ಕೇಂದ್ರದಲ್ಲಿ ಗೆದ್ದರೂ ಗ್ಯಾರಂಟಿ ಜಾರಿ ಆಗಲಿದೆ ಎಂದರು.ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಮಾತನಾಡಿ, ಕ್ಷೇತ್ರದಲ್ಲಿ ಸುಮಾರು ೧.೨೫ ಲಕ್ಷದ ನಾಯಕರ ಸಮುದಾಯದವರು ಇದ್ದಾರೆ ಅವರಿಗೆ ಕಳೆದ ಹತ್ತು ವರ್ಷಗಳಿಂದ ಮೋಸ ಮಾಡಿ ಆಡಳಿತ ನಡೆಸುತ್ತಿದ್ದಾರೆ. ಮನೆಗಳನ್ನು ಕೊಟ್ಟಿರುವುದಾಗಿ ಸುಳ್ಳು ಹೇಳುತ್ತಿದ್ದಾರೆ ದೇಶದ ಸಾಲ ಕಳೆದ ೧೦ ವರ್ಷಗಳಲ್ಲಿ ೫೬ ಲಕ್ಷ ಕೋಟಿಯಿಂದ ೧೮೬ ಲಕ್ಷ ಕೋಟಿಗೇರಿದೆ ಎಂದರು.ದೇಶದಲ್ಲಿರಲು ದಾಖಲೆ ಕೇಳ್ತಾರೆ
ಶಾಸಕ ಕೊತ್ತೂರು ಮಂಜುನಾಥ್ ಮಾತನಾಡಿ, ದೇಶದಲ್ಲಿ ಇರಬೇಕೆಂದರೆ ಬಿಜೆಪಿಯವರು ದಾಖಲೆ ಕೇಳುತ್ತಾರೆ. ದೇಶದಲ್ಲಿ ಅದೆಲ್ಲಾ ನಡೆಯಲ್ಲ. ಜನರ ಬಳಿ ಹಳೆಯ ದಾಖಲೆಗಳು ಎಲ್ಲಿರುತ್ತವೆ ಅಂಬೇಡ್ಕರ್ ಆಶಯ ಉಳಿಸುವುದು ಕಾಂಗ್ರೆಸ್ ಮಾತ್ರ ಈಗಾಗಲೇ ಜಿಲ್ಲಾ ಕೇಂದ್ರದಲ್ಲಿ ವಾಲ್ಮೀಕಿ ಸಮುದಾಯ ಭವನವನ್ನು ಉದ್ಘಾಟಿಸಿದ್ದೇವೆ ಮುಂದಿನ ದಿನಗಳಲ್ಲಿ ಪ್ರತಿಮೆಯನ್ನು ಕೂಡ ಮಾಡಿಕೊಡುತ್ತೇವೆ ಸಮುದಾಯದ ಬಂಧುಗಳು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ವಾಲ್ಮೀಕಿ ಸಮುದಾಯ ಮುಖಂಡ ಹಾಗೂ ನಗರಸಭೆ ಸದಸ್ಯ ಅಂಬರೀಷ್ ಮಾತನಾಡಿ, ಎಸ್ಟಿ ಸಮುದಾಯದ 17 ಜನ ಶಾಸಕರಿದ್ದೇವೆ. ಆದಿವಾಸಿಗಳಿಗೆ ಬಿಜೆಪಿಯಿಂದ ಅನ್ಯಾಯವಾಗಿದೆ. 2013 ರಲ್ಲಿ ಸಿದ್ಧರಾಮಯ್ಯ ಬಹಳ ಅನುಕೂಲ ಮತ್ತು ಅನುದಾನ ಕೊಟ್ಟಿದ್ದಾರೆ ಬೀದಿಯಲ್ಲಿ ಕುಳಿತು ಹೋರಾಟ ನಡೆಸಿದ್ದಕ್ಕೆ ಮೀಸಲಾತಿ ಕೊಟ್ಟರು. ಆದರೆ, ರಾಜಕೀಯ ಮೀಸಲಾತಿಯನ್ನು ರಾಜಕೀಯ ಲಾಭಕ್ಕಾಗಿ ನೀಡಿದ್ದಾರೆ ಎಂದು ಟೀಕಿಸಿದರು.ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್‌ಕುಮಾರ್, ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್,ಕೆಪಿಸಿಸಿ ಸದಸ್ಯ ನಂದಿನಿ ಪ್ರವೀಣ್, ವಾಲ್ಮೀಕಿ ಸಂಘದ ಜಿಲ್ಲಾ ಅಧ್ಯಕ್ಷ ಕುಡುವನಹಳ್ಳಿ ಆನಂದ್, ಮುಖಂಡರಾದ ರಾಮಣ್ಣ, ಶ್ರೀನಿವಾಸ್, ಅಂಜಿನಪ್ಪ, ರಾಮಾಂಜಿನಪ್ಪ, ವಕ್ಕಲೇರಿ ರಾಜಪ್ಪ,, ಅನೀಫ್, ಪ್ರಸಾದ್ ಬಾಬು ಇದ್ದರು.