ರಾಜ್ಯದ 293 ಬಸ್ಸು ನಿಲ್ದಾಣಗಳಲ್ಲಿ ನಮ್ಮ ಕ್ಲಿನಿಕ್‌ಗಳನ್ನು ಸ್ಥಾಪಿಸಲು ಸಚಿವ ಸಂಪುಟ ಸಭೆ ತೀರ್ಮಾನ

Published : Nov 29, 2024, 10:36 AM IST
Namma Clinic

ಸಾರಾಂಶ

ರಾಜ್ಯದ 293 ಬಸ್ಸು ನಿಲ್ದಾಣಗಳಲ್ಲಿ ನಮ್ಮ ಕ್ಲಿನಿಕ್‌ಗಳನ್ನು ಸ್ಥಾಪಿಸಲು ಹಾಗೂ ಚಿಕ್ಕಬಳ್ಳಾಪುರ ನಂದಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಮಂಜೂರಾಗಿದ್ದ 50 ಹಾಸಿಗೆ ತೀವ್ರ ನಿಗಾ ಆರೈಕೆ ಘಟಕವನ್ನು ಚಿಕ್ಕಬಳ್ಳಾಪುರ ಬದಲಿಗೆ ಚಿಂತಾಮಣಿಗೆ ಸ್ಥಳಾಂತರ ಮಾಡಲು  ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ.

ಬೆಂಗಳೂರು :  ರಾಜ್ಯದ 293 ಬಸ್ಸು ನಿಲ್ದಾಣಗಳಲ್ಲಿ ನಮ್ಮ ಕ್ಲಿನಿಕ್‌ಗಳನ್ನು ಸ್ಥಾಪಿಸಲು ಹಾಗೂ ಚಿಕ್ಕಬಳ್ಳಾಪುರ ನಂದಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಮಂಜೂರಾಗಿದ್ದ 50 ಹಾಸಿಗೆ ತೀವ್ರ ನಿಗಾ ಆರೈಕೆ ಘಟಕವನ್ನು ಚಿಕ್ಕಬಳ್ಳಾಪುರ ಬದಲಿಗೆ ಚಿಂತಾಮಣಿಗೆ ಸ್ಥಳಾಂತರ ಮಾಡಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ.

ಇದೇ ವೇಳೆ ಮೈಸೂರಿನ ಲಲಿಲ್‌ ಮಹಲ್‌ ಪ್ಯಾಲೇಸ್‌ ಹೋಟೆಲ್‌ನ ನಿರ್ವಹಣೆಯನ್ನು ರಾಜ್ಯ ಸರ್ಕಾರದ ಬದಲಿಗೆ ಖಾಸಗಿಗೆ ವಹಿಸಲು ತೀರ್ಮಾನ ಮಾಡಲಾಗಿದೆ.

ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ದೊಡ್ಡ ಬಸ್ಸು ನಿಲ್ದಾಣ, ಟಿಟಿಎಂಸಿಗಳಲ್ಲಿ 254 ಹಾಗೂ ಕೆಎಸ್‌ಆರ್‌ಟಿಸಿ ಬಸ್ಸು ನಿಲ್ದಾಣಗಳಲ್ಲಿ 39 ನಮ್ಮ ಕ್ಲಿನಿಕ್‌ ಸ್ಥಾಪನೆ ಮಾಡಲು ನಿರ್ಧರಿಸಲಾಗಿದೆ. ಒಟ್ಟು 108.36 ಕೋಟಿ ರು. ವೆಚ್ಚದಲ್ಲಿ ನಮ್ಮ ಕ್ಲಿನಿಕ್‌ ಸ್ಥಾಪನೆಗೆ ನಿರ್ಧಾರ ಮಾಡಿದೆ.

ಐಸಿಯು ಘಟಕ ಸ್ಥಳಾಂತರ:

ಕನಕಪುರದಿಂದ ಚಿಕ್ಕಬಳ್ಳಾಪುರಕ್ಕೆ ಸ್ಥಳಾಂತರಿಸಿದ ಕಾರಣಕ್ಕೆ ಚಿಕ್ಕಬಳ್ಳಾಪುರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಿಂದ (ನಂದಿ-ಸಿಐಎಂಎಸ್‌) ಇದೀಗ 50 ಹಾಸಿಗೆಯ ತೀವ್ರ ನಿಗಾ ಆರೋಗ್ಯ ಘಟಕವನ್ನು ಸ್ಥಳಾಂತರಿಸಲು ಸಚಿವ ಸಂಪುಟ ಸಭೆ ನಿರ್ಧಾರ ಮಾಡಿದೆ.

ರಾಷ್ಟ್ರೀಯ ಆರೋಗ್ಯ ಅಭಿಯಾನದ ಪಿಎಂ-ಅಭಿಮ್‌ ಯೋಜನೆಯಡಿ 16.63 ಕೋಟಿ ರು. ವೆಚ್ಚದಲ್ಲಿ 50 ಹಾಸಿಗೆಯ ತೀವ್ರ ನಿಗಾ ಘಟಕ ಸ್ಥಾಪನೆಗೆ ನಿರ್ಧರಿಸಲಾಗಿತ್ತು. ಇದನ್ನು ಚಿಕ್ಕಬಳ್ಳಾಪುರ ಬದಲಿಗೆ ಚಿಂತಾಮಣಿ ತಾಲೂಕಿಗೆ ಸ್ಥಳಾಂತರಿಸಲು ಅ.15ರಂದು ಆದೇಶ ಮಾಡಿದ್ದು, ಅದಕ್ಕೆ ಗುರುವಾರದ ಸಂಪುಟ ಸಭೆಯಲ್ಲಿ ಘಟನೋತ್ತರ ಅನುಮೋದನೆ ನೀಡಲಾಗಿದೆ.

ಈ ಬಗ್ಗೆ ಸ್ಪಷ್ಟನೆ ನೀಡಿದ ಸಚಿವ ಎಚ್.ಕೆ. ಪಾಟೀಲ್‌, ನಂದಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯು 300 ಹಾಸಿಗೆಯ ಆಸ್ಪತ್ರೆಯಾಗಿದ್ದು, ಬೋಧನಾ ಆಸ್ಪತ್ರೆಯಾಗಿದೆ. ಇಲ್ಲಿಗಿಂತ ತೀವ್ರ ನಿಗಾ ಘಟಕ ಚಿಂತಾಮಣಿಗೆ ಅಗತ್ಯವಾಗಿದ್ದರಿಂದ ಅಲ್ಲಿಗೆ ಸ್ಥಳಾಂತರಿಸಿದ್ದೇವೆ ಎಂದು ಹೇಳಿದರು.

ಲಲಿತ್‌ ಮಹಲ್‌ಖಾಸಗಿ ನಿರ್ವಹಣೆಗೆ

100 ವರ್ಷಕ್ಕೂ ಹಳೆಯದಾದ ಲಲಿತ್‌ ಮಹಲ್‌ ಪ್ಯಾಲೇಸ್‌ ಹೋಟೆಲ್‌ನ್ನು ಪಾರಂಪರಿಕ ಘನತೆಗೆ ಯಾವುದೇ ಚ್ಯುತಿ ಬಾರದಂತೆ ನವೀಕರಣ ಹಾಗೂ ನಿರ್ವಹಣೆ ಮಾಡಲು ಖಾಸಗಿ ಕಂಪೆನಿಗೆ ವಹಿಸಲು ಸಂಪುಟ ಸಭೆ ನಿರ್ಧಾರ ಮಾಡಿದೆ.

ಜಂಗಲ್‌ ಲಾಡ್ಜ್‌ ಮತ್ತು ರೆಸಾರ್ಟ್‌ ಲಿಮಿಟೆಡ್‌ಗೆ ಹೋಟೆಲ್‌ ನಿರ್ವಹಣೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ದೊಡ್ಡ ಮಟ್ಟದಲ್ಲಿ ನಿರ್ವಹಣೆ ಮಾಡಲು ಪಾರದರ್ಶಕವಾಗಿ ಟೆಂಡರ್‌ ಪ್ರಕ್ರಿಯೆಯಲ್ಲಿ ಭಾಗವಹಿಸಲು ಆಹ್ವಾನ ನೀಡಬೇಕು. ಬಳಿಕ ಮಾನದಂಡಗಳ ಪ್ರಕಾರ ಉತ್ತಮ ಸಂಸ್ಥೆಯನ್ನು ಆಯ್ಕೆ ಮಾಡಬೇಕು ಎಂದು ನಿರ್ಧರಿಸಲಾಗಿದೆ.

ಇತರೆ ನಿರ್ಣಯಗಳು:

ಮೈಸೂರು ಜಿಲ್ಲೆ ಕೆ.ಆರ್‌. ನಗರ ತಾಲೂಕು ಕಪ್ಪಡಿ ಗ್ರಾಮದ ಬಳಿ ಕಾವೇರಿಗೆ ಅಡ್ಡಲಾಗಿ 25 ಕೋಟಿ ರು. ಅಂದಾಜು ವೆಚ್ಚದಲ್ಲಿ ಸೇತುವೆ ನಿರ್ಮಾಣಕ್ಕೆ ತೀರ್ಮಾನ.

-₹2,500 ಕೋಟಿ ವೆಚ್ಚದಲ್ಲಿ 4 ವರ್ಷದಲ್ಲಿ 500 ಸರ್ಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್‌ ಶಾಲೆಗಳಾಗಿ ಪರಿವರ್ತಿಸಲು ಸಂಪುಟದಿಂದ ಆಡಳಿತಾತ್ಮಕ ಒಪ್ಪಿಗೆ.

-ಆಸ್ಪತ್ರೆಗಳಲ್ಲಿ ಔಷಧ, ಪ್ರಯೋಗಾಲಯ ಉಪಕರಣ ಖರೀದಿಗೆ ₹145.99 ಕೋಟಿ ಅನುದಾನ ಮಂಜೂರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಉ.ಕ.ಅಭಿವೃದ್ಧಿ ಕೈ ಸರ್ಕಾರ ಬದ್ಧ : ಸಿಎಂ
ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!