ಬೆಂಗಳೂರಿನಲ್ಲಿ ಮತದಾನ ಹೆಚ್ಚಿಸುವುದೇ ಸವಾಲು : ಚುನಾವಣಾ ವಿಭಾಗ

KannadaprabhaNewsNetwork | Updated : Apr 05 2024, 04:31 AM IST

ಸಾರಾಂಶ

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಕುಸಿಯುತ್ತಿರುವ ಮತದಾನ ಪ್ರಮಾಣ ಹೆಚ್ಚಿಸುವುದು ಜಿಲ್ಲಾ ಚುನಾವಣಾ ವಿಭಾಗಕ್ಕೆ ಸವಾಲಿನ ಸಂಗತಿಯಾಗಿದ್ದು, ಮತದಾನ ಪ್ರಮಾಣ ಹೆಚ್ಚುಸುವುದಕ್ಕೆ ನಾನಾ ಪ್ರಯತ್ನಕ್ಕೆ ಮುಂದಾಗಿದೆ.

 ಬೆಂಗಳೂರು :  ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಕುಸಿಯುತ್ತಿರುವ ಮತದಾನ ಪ್ರಮಾಣ ಹೆಚ್ಚಿಸುವುದು ಜಿಲ್ಲಾ ಚುನಾವಣಾ ವಿಭಾಗಕ್ಕೆ ಸವಾಲಿನ ಸಂಗತಿಯಾಗಿದ್ದು, ಮತದಾನ ಪ್ರಮಾಣ ಹೆಚ್ಚುಸುವುದಕ್ಕೆ ನಾನಾ ಪ್ರಯತ್ನಕ್ಕೆ ಮುಂದಾಗಿದೆ.

ಐಟಿ ಬಿಟಿ, ತೆರಿಗೆ ಪಾವತಿ ಸೇರಿದಂತೆ ಮೊದಲಾದ ಕ್ಷೇತ್ರದಲ್ಲಿ ದೇಶಕ್ಕೆ ಮಾದರಿ ಆಗಿರುವ ರಾಜಧಾನಿ ಬೆಂಗಳೂರಿನ ನಾಗರಿಕರು ಚುನಾವಣಾ ಹಬ್ಬದಲ್ಲಿ ಭಾಗವಹಿಸುವುದರಲ್ಲಿ ಮಾತ್ರ ಹೆಚ್ಚಿನ ಆಸಕ್ತಿ ತೋರಿಸುತ್ತಿಲ್ಲ. ಚುನಾವಣೆಯಿಂದ ಚುನಾವಣೆಗೆ ಮತದಾನ ಪ್ರಮಾಣ ಕಡಿಮೆ ಆಗುತ್ತಿರುವುದು ಜಿಲ್ಲಾ ಚುನಾವಣಾ ವಿಭಾಗಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ನಗರದ ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ ಹಾಗೂ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಸುಮಾರು 80 ಲಕ್ಷಕ್ಕೂ ಅಧಿಕ ಮತದಾರರಿದ್ದು, ಮತದಾನ ಮಾಡುವುದಕ್ಕೆ ಅರ್ಧದಷ್ಟು ಮಂದಿ ಭಾಗವಹಿಸುತ್ತಿಲ್ಲ. ಮತದಾನದ ಶೇಕಡವಾರು ಹೆಚ್ಚಿಸುವ ನಿಟ್ಟಿನಲ್ಲಿ ಮತದಾನ ಪಟ್ಟಿ ಪರಿಷ್ಕರಣೆ ನಡೆಸಲಾಗುತ್ತಿದೆ. ಎರಡು ಕಡೆ ಮತದಾರ ಪಟ್ಟಿಯಲ್ಲಿ ಹೆಸರು ಇರುವ ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ.

ಮತದಾನ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಜಿಲ್ಲಾ ಚುನಾವಣಾ ವಿಭಾಗವು ಪ್ರತಿ ಚುನಾವಣೆಯಲ್ಲಿ ವಿವಿಧ ಮತದಾರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮತದಾನ ಹೆಚ್ಚಿಸುವ ಪ್ರಯತ್ನ ಮಾಡುತ್ತಿರುವುದಾಗಿ ಹೇಳುತ್ತಿದೆ. ಆದರೆ, ನಿರೀಕ್ಷಿತ ಮಟ್ಟದಲ್ಲಿ ಮತದಾರರನ್ನು ಮತಗಟ್ಟೆಗೆ ಕರೆತರುವುದರಲ್ಲಿ ಸಫಲವಾಗಿಲ್ಲ.

ಈ ಬಾರಿಯೂ ಬೀದಿನಾಟಕ, ರಂಗೋಲಿ ಸ್ಪರ್ಧೆ, ವಿಂಟೆಜ್‌ ಕಾರ್‌ ಮತ್ತು ಬೈಕ್‌ ರ್‍ಯಾಲಿ, ಅಂಗವಿಕಲರ ರ್‍ಯಾಲಿ ಸೇರಿದಂತೆ ಮೊದಲಾದವುಗಳನ್ನು ಕೈಗೊಂಡಿದೆ. ಮತ್ತಷ್ಟು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುವುದಕ್ಕೆ ತಯಾರಿ ನಡೆಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದು, ಎಷ್ಟರ ಮಟ್ಟಿಗೆ ಫಲ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಸಾಲು ಸಾಲು ರಜೆ ನಡುವೆ ಮತದಾನ

ಬೆಂಗಳೂರು ಮೂರು ಲೋಕಸಭಾ ಕ್ಷೇತ್ರಕ್ಕೆ ಏ.26ರ ಶುಕ್ರವಾರ ಮತದಾನ ನಡೆಯಲಿದೆ. ಏ.27ರ ಶನಿವಾರ ನಾಲ್ಕೇ ಶನಿವಾರ ರಜೆ ದಿನವಾಗಿದೆ. ಇನ್ನು 28 ಭಾನುವಾರ ಸರ್ಕಾರಿ ರಜೆ ದಿನವಾಗಿದೆ. ವಾರಾಂತ್ಯದ ಈ ಸಾಲು ಸಾಲು ರಜೆ ನಡುವೆ ಮತದಾರರನ್ನು ಹಿಡಿದಿಟ್ಟುಕೊಂಡು ಮತದಾನದ ಹಬ್ಬದಲ್ಲಿ ಭಾಗವಹಿಸುವಂತೆ ಮಾಡುವುದು ಜಿಲ್ಲಾ ಚುನಾವಣಾ ವಿಭಾಗದ ಅಧಿಕಾರಿಗಳಿಗೆ ಸವಾಲಿನ ಸಂಗತಿಯಾಗಿದೆ.ಕಡಿಮೆ ಮತದಾನ ಬೂತ್‌ ಗುರುತು

ಮೂರು ಲೋಕಸಭಾ ಕ್ಷೇತ್ರದಲ್ಲಿ ಸರಾಸರಿ ಮತದಾನಕ್ಕಿಂತ ಶೇ.5ಕ್ಕಿಂತ ಹೆಚ್ಚಿನ ಪ್ರಮಾಣ ಮತದಾನವಾಗಿರುವ ಮತಗಟ್ಟೆಗಳನ್ನು ಗುರುತಿಸಲಾಗಿದೆ. 8,989 ಮತಗಟ್ಟೆಗಳಲ್ಲಿ 1,786 ಮತಗಟ್ಟೆಯಲ್ಲಿ 2019ರ ಲೋಕಸಭಾ ಚುನಾವಣೆಯಲ್ಲಿ ಸರಾಸರಿ ಮತದಾನ ಪ್ರಮಾಣಕ್ಕಿಂತ ಕಡಿಮೆ ಮತದಾನವಾಗಿದೆ. ಈ ಮತಗಟ್ಟೆಯ ವ್ಯಾಪ್ತಿಯ ಪ್ರತಿ ಮತದಾರರ ಮನೆಗೆ ಭೇಟಿ ನೀಡಿ ಮತದಾರರಿಗೆ ಜಾಗೃತಿ ಮೂಡಿಸಲಾಗುತ್ತಿದೆ.ಮತದಾರ ಸ್ನೇಹಿ ಕ್ರಮ

ಮತದಾರರನ್ನು ಮತಗಟ್ಟೆಯತ್ತ ಸೆಳೆಯುವ ಉದ್ದೇಶದಿಂದ ಪ್ರತಿ ಮನೆಗೆ ಮತದಾರ ಗೈಡ್‌ ನೀಡಲಾಗುತ್ತಿದೆ. ಮತದಾರರಿಗೆ ಮತದಾರ ಚೀಟಿ ವಿತರಣೆಯನ್ನು ಕಡ್ಡಾಯವಾಗಿ ಮಾಡುವುದಕ್ಕೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಚೀಟಿಯಲ್ಲಿ ಕ್ಯೂಆರ್‌ ಕೋಡ್‌ ಮುದ್ರಿಸಲಾಗಿದ್ದು, ಮೊಬೈಲ್‌ ನಲ್ಲಿ ಸ್ಕ್ಯಾನ್‌ ಮಾಡಿದರೆ ಮತಗಟ್ಟೆಗೆ ದಾರಿ ತೋರಿಸಲಿದೆ. ಪ್ರತಿ ಮನೆಯ ಬಾಗಿಲಿಗೆ ಮತದಾನ ದಿನಾಂಕ ನೆನಪಿಸುವ ಸ್ಟಿಕರ್‌ ಅಂಟಿಸಲಾಗುತ್ತಿದೆ. ಮತಗಟ್ಟೆಗೆ ಆಗಮಿಸುವ ಮತದಾರರ ವಾಹನ ನಿಲುಗಡೆ ವಾಹನ ಪಾರ್ಕಿಂಗ್‌ ವ್ಯವಸ್ಥೆ, ಕುಡಿಯುವ ನೀರು, ನೆರಳಿನ ವ್ಯವಸ್ಥೆ ಶೌಚಾಲಯ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.2 ಚುನಾವಣೆಯಲ್ಲಿಶೇ.55 ಮತದಾನ

ಕಳೆದ 2014 ಮತ್ತು 2019ರ ಲೋಕಸಭಾ ಚುನಾವಣೆಯಲ್ಲಿ ಸರಾಸರಿ ಶೇ.55 ಹಾಗೂ ಅದಕ್ಕಿಂತ ಕಡಿಮೆ ಮತದಾನ ಬೆಂಗಳೂರಿನ ಮೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಆಗಿದೆ.

ಲೋಕಸಭಾ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಹಲವು ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ. ಕಡಿಮೆ ಮತದಾನ ಬೂತ್ ಗಳಲ್ಲಿ ಪ್ರತಿ ಮತದಾರರ ಮನೆಗೆ ತೆರಳಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ.

-ಕಾಂತರಾಜ್‌, ಅಧ್ಯಕ್ಷ, ಜಿಲ್ಲಾ ಸ್ವೀಪ್ ಸಮಿತಿ.

2 ಚುನಾವಣೆಗಳ ಮತದಾನ ವಿವರ (ಶೇಕಡಾ)

ಲೋಕಸಭಾ ಕ್ಷೇತ್ರ20142019ಬೆಂಗಳೂರು ಉತ್ತರ56.5354.62

ಬೆಂಗಳೂರು ಕೇಂದ್ರ55.6454.29ಬೆಂಗಳೂರು ದಕ್ಷಿಣ55.7553.48

Share this article