ಸಂಸದ ತೇಜಸ್ವಿ ಸೂರ್ಯ ವಿರುದ್ಧ ದಾಖಲಾಗಿರುವ ದೂರಿಗೆ ಸಂಬಂಧಿಸಿದ ತನಿಖೆಗೆ ಹೈಕೋರ್ಟ್‌ ತಡೆಯಾಜ್ಞೆ

KannadaprabhaNewsNetwork |  
Published : Nov 15, 2024, 01:34 AM ISTUpdated : Nov 15, 2024, 04:23 AM IST
Tejasvi surya

ಸಾರಾಂಶ

ಹಾವೇರಿ ಜಿಲ್ಲೆಯಲ್ಲಿ ವಕ್ಫ್‌ ಬೋರ್ಡ್‌ ಭೂಮಿ ವಶಕ್ಕೆ ಪಡೆದಿದ್ದಕ್ಕೆ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಸುಳ್ಳು ಸುದ್ದಿ ಹರಡಿದ ಆರೋಪದ ಮೇಲೆ ಸಂಸದ ತೇಜಸ್ವಿ ಸೂರ್ಯ ವಿರುದ್ಧ ದಾಖಲಾಗಿರುವ ದೂರಿಗೆ ಸಂಬಂಧಿಸಿದ ತನಿಖೆಗೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ.

 ಬೆಂಗಳೂರು :  ಹಾವೇರಿ ಜಿಲ್ಲೆಯಲ್ಲಿ ವಕ್ಫ್‌ ಬೋರ್ಡ್‌ ಭೂಮಿ ವಶಕ್ಕೆ ಪಡೆದಿದ್ದಕ್ಕೆ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಸುಳ್ಳು ಸುದ್ದಿ ಹರಡಿದ ಆರೋಪದ ಮೇಲೆ ಸಂಸದ ತೇಜಸ್ವಿ ಸೂರ್ಯ ವಿರುದ್ಧ ದಾಖಲಾಗಿರುವ ದೂರಿಗೆ ಸಂಬಂಧಿಸಿದ ತನಿಖೆಗೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ.

ಪ್ರಕರಣ ಸಂಬಂಧ ತಮ್ಮ ವಿರುದ್ಧ ಹಾವೇರಿ ಸಿಇಎನ್‌ ಠಾಣಾ ಪೊಲೀಸರು ದಾಖಲಿಸಿದ್ದ ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ಸಂಸದ ತೇಜಸ್ವಿ ಸೂರ್ಯ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಆದೇಶ ಮಾಡಿದೆ.

ಮೃತ ರೈತನ ತಂದೆ ಮತ್ತು ಪೊಲೀಸರು ಸ್ಪಷ್ಟೀಕರಣ ನೀಡಿದ ನಂತರ ಅರ್ಜಿದಾರರು ತಮ್ಮ ಟ್ವೀಟ್‌ ಅಳಿಸಿಹಾಕಿದ್ದಾರೆಂದು ಅರ್ಜಿದಾರರ ಪರ ವಕೀಲರು ತಿಳಿಸಿದ್ದಾರೆ. ಆದ್ದರಿಂದ ಪ್ರಕರಣ ಸಂಬಂಧ ಅರ್ಜಿದಾರರ ವಿರುದ್ಧ ತನಿಖೆಗೆ ಮಧ್ಯಂತರ ತಡೆಯಾಜ್ಞೆ ನೀಡಲಾಗುತ್ತಿದೆ ಎಂದು ತಿಳಿಸಿದ ಪೀಠ ಅರ್ಜಿ ವಿಚಾರಣೆಯನ್ನು ಡಿ.4ಕ್ಕೆ ಮುಂದೂಡಿತು.

ಮಧ್ಯಂತರ ಆದೇಶಕ್ಕೆ ಸರ್ಕಾರಿ ಅಭಿಯೋಜಕರು ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ಮಧ್ಯಂತರ ಆದೇಶದ ತೆರವಿಗೆ ಕೋರಲು ಅವರು ಸ್ವತಂತ್ರರಾಗಿದ್ದಾರೆ ಎಂದು ಪೀಠ ಇದೇ ವೇಳೆ ಸ್ಪಷ್ಟಪಡಿಸಿದೆ.

ಪ್ರಕರಣದ ಹಿನ್ನೆಲೆ: ಹಾವೇರಿಯಲ್ಲಿ ವಕ್ಫ್‌ ಬೋರ್ಡ್‌ ಭೂಮಿಯನ್ನು ವಶಪಡಿಸಿಕೊಂಡಿರುವುದಕ್ಕೆ ನೊಂದು ರೈತ ರುದ್ರಪ್ಪ ಚನ್ನಪ್ಪ ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದಾಗಿ 2024ರ ನ.7ರಂದು ಕನ್ನಡ ವೆಬ್‌ಪೋರ್ಟಲ್ ಸುದ್ದಿ ಪ್ರಕಟಿಸಿತ್ತು. ಅದನ್ನು ಸಂಸದ ತೇಜಸ್ವಿ ಸೂರ್ಯ ಅವರು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದರು.

ನಂತರ ಹಾವೇರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಬೆಳೆನಷ್ಟ ಉಂಟಾಗಿದ್ದರಿಂದ ಸಾಲಬಾಧೆಯಿಂದ ನೊಂದು ರುದ್ರಪ್ಪ ಅವರು 2022ರ ಜ.6ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಅದು ಬಿಟ್ಟು ವಕ್ಫ್‌ ಬೋರ್ಡ್‌ ಭೂಮಿ ವಶಪಡಿಸಿಕೊಂಡಿರುವುದಕ್ಕೆ ಅಲ್ಲ ಎಂದು ಸ್ಪಷ್ಟೀಕರಣ ನೀಡಿದ್ದರು. ಇದರಿಂದ ಪೊಲೀಸರು ಎರಡು ಗುಂಪುಗಳ ನಡುವೆ ದ್ವೇಷ ಭಾವನೆ ಕೆರಳಿಸಿದ ಆರೋಪದ ಮೇಲೆ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್‌ 353(2) ಅಡಿಯಲ್ಲಿ ಹಾವೇರಿ ಸಿಇಎನ್‌ ಠಾಣಾ ಪೊಲೀಸರು ತೇಜಸ್ವಿ ಸೂರ್ಯ ವಿರುದ್ಧ ಸ್ವಯ ಪ್ರೇರಿತವಾಗಿ ದೂರು ದಾಖಲಿಸಿದ್ದರು. ಇದರಿಂದ ಅವರು ತಮ್ಮ ವಿರುದ್ಧದ ಎಫ್‌ಐಆರ್ ರದ್ದು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

PREV

Recommended Stories

ಧರ್ಮಸ್ಥಳ ಪರವಾಗಿ ರಾಜ್ಯಾದ್ಯಂತ ಹಿಂದೂಗಳು ಪ್ರತಿಭಟನೆ
ಆರ್‌ಸಿಬಿ ಕಾಲ್ತುಳಿತ ಆಕಸ್ಮಿಕ, ಆದರೂ ಕ್ರಮ: ಗೃಹ ಸಚಿವ ಡಾ.ಜಿ.ಪರಮೇಶ್ವರ್‌