ಮೈಸೂರು ಚಲೋ ಪಾದಯಾತ್ರೆಗೆ ಅಡ್ಡಿ: ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಸಂಘರ್ಷ

Published : Aug 10, 2024, 08:40 AM IST
BJP Padayatre

ಸಾರಾಂಶ

ಬಿಜೆಪಿ-ಜೆಡಿಎಸ್‌ ಹಮ್ಮಿಕೊಂಡಿದ್ದ ಮೈಸೂರು ಚಲೋ ಪಾದಯಾತ್ರೆ ಮೈಸೂರು ಪ್ರವೇಶದ ವೇಳೆ ಪೊಲೀಸರು ತಡೆ ಹಿಡಿದಾಗ ಕೆಲಕಾಲ ಸಂಘರ್ಷದ ವಾತಾವರಣ ನಿರ್ಮಾಣವಾಯಿತು. ಕಾಂಗ್ರೆಸ್‌ ಸಮಾವೇಶದ ಹಿನ್ನೆಲೆಯಲ್ಲಿ ಪೊಲೀಸರು ಈ ಕ್ರಮ ಕೈಗೊಂಡರು.

ಮೈಸೂರು/ಮಂಡ್ಯ :  ಕಾಂಗ್ರೆಸ್‌ ವಿರುದ್ಧ ಬಿಜೆಪಿ-ಜೆಡಿಎಸ್‌ ಹಮ್ಮಿಕೊಂಡಿರುವ ಜಂಟಿ ಪಾದಯಾತ್ರೆ ಕೊನೆಯ ದಿನ ಮೈಸೂರು ಪ್ರವೇಶಿಸಲು ಬಂದಾಗ ಪೊಲೀಸರು ಕೆಲಕಾಲ ತಡೆಹಿಡಿದ ಘಟನೆ ಶುಕ್ರವಾರ ಸಿದ್ದಲಿಂಗಪುರದ ಬಳಿ ನಡೆಯಿತು. ಈ ವೇಳೆ ಬಿಜೆಪಿ-ಜೆಡಿಎಸ್‌ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಕೆಲಕಾಲ ವಾಗ್ವಾದ ನಡೆದು ಸಂಘರ್ಷದ ವಾತಾವರಣ ನಿರ್ಮಾಣವಾಗಿತ್ತು.

ಬೆಂಗಳೂರಿನಿಂದ ಆರಂಭಗೊಂಡಿದ್ದ 128 ಕಿ.ಮೀ. ಪಾದಯಾತ್ರೆ ಕೊನೇ ದಿನ ಮಂಡ್ಯದ ಶ್ರೀರಂಗಪಟ್ಟಣದ ಮೂಲಕ ಮೈಸೂರು ಪ್ರವೇಶಿಸಿದ್ದು, ಸಿದ್ದಲಿಂಗಪುರದ ಬಳಿ ಊಟ ಮುಗಿಸಿ ಕೆಲಕಾಲ ವಿಶ್ರಾಂತಿ ಪಡೆದ ಬಳಿಕ ಮತ್ತೆ ಹೊರಡಲು ಅಣಿಯಾಯಿತು. ಆಗ ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿ ಪಾದಯಾತ್ರೆ ಹೊರಡದಂತೆ ತಡೆದರು. ಮೈಸೂರಿನಲ್ಲಿ ಕಾಂಗ್ರೆಸ್‌ ಸಮಾವೇಶ ಮುಗಿಸಿ ಜನ ವಾಪಸ್‌ ಹೋಗುತ್ತಿದ್ದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಪೊಲೀಸರು ಪಾದಯಾತ್ರೆಯನ್ನು ತಡೆಯಬೇಕಾಯಿತು. ಒಂದು ವೇಳೆ ಕಾಂಗ್ರೆಸ್‌ ಕಾರ್ಯಕರ್ತರು ಹಿಂತಿರುಗುವ ವೇಳೆ ಬಿಜೆಪಿ-ಜೆಡಿಎಸ್‌ ಪಾದಯಾತ್ರೆ ಎದುರಾದರೆ ಗಲಾಟೆ ಆಗಬಹುದು ಎನ್ನುವ ಕಾರಣಕ್ಕೆ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಪಾದಯಾತ್ರೆ ಮುಂದುವರಿಸದಂತೆ ಮನವಿ ಮಾಡಿದರು. ಆದರೆ ಬಿಜೆಪಿ-ಜೆಡಿಎಸ್‌ ಕಾರ್ಯಕರ್ತರು ಪೊಲೀಸರ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಕೆಲಕಾಲ ಸಂಘರ್ಷದ ವಾತಾವರಣ ನಿರ್ಮಾಣವಾಯಿತು.

ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಆರ್‌.ಅಶೋಕ್‌, ನಿಖಿಲ್‌ ಕುಮಾರ ಸ್ವಾಮಿ ಮತ್ತಿತರರು ಪರಿಸ್ಥಿತಿಯನ್ನು ವಿವರಿಸಿದ ಬಳಿಕ ಕಾರ್ಯಕರ್ತರು ಶಾಂತರಾದರು. ಮತ್ತೆ ಒಂದು ಗಂಟೆ ಬಳಿಕ ಪಾದಯಾತ್ರೆ ಹೊರಟು ಮೈಸೂರು ನಗರ ಪ್ರವೇಶಿಸುವಾಗ ರಾತ್ರಿ 8 ಗಂಟೆ ಮೀರಿತ್ತು.

ಇದಕ್ಕೂ ಮುನ್ನ ಗುರುವಾರ ಮಂಡ್ಯದ ತೂಬಿನಕೆರೆಯಿಂದ ಆರಂಭಗೊಂಡು ಶ್ರೀರಂಗಟಪ್ಟಣ ಕ್ಷೇತ್ರದ ಗ್ರಾಮಗಳ ಮೂಲಕ ಸಂಚರಿಸಿ ರಾತ್ರಿ ವೇಳೆಗೆ ಶ್ರೀರಂಗಪಟ್ಟಣದಲ್ಲಿ ಪಾದಯಾತ್ರೆ ಸ್ಥಗಿತಗೊಂಡಿತ್ತು. ಶುಕ್ರವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಪಟ್ಟಣದ ಟಿಎಪಿಸಿಎಂಎಸ್ ಕಲ್ಯಾಣ ಮಂಟಪದ ಬಳಿ 7ನೇ ದಿನದ ಮೈಸೂರು ಚಲೋ ಪಾದಯಾತ್ರೆಗೆ ಚಾಲನೆ ನೀಡಲಾಯಿತು.

ಕೊನೇ ದಿನದ ಪಾದಯಾತ್ರೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಸಿಎಂ ಜಗದೀಶ್‌ ಶೆಟ್ಟರ್, ಮಾಜಿ ಡಿಸಿಎಂ ಡಾ.ಅಶ್ವತ್ಥನಾರಾಯಣ, ಮೈಸೂರು ಸಂಸದ ಯದುವೀರ್ ಒಡೆಯರ್, ಸಿ.ಟಿ.ರವಿ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಇತರರು ಪಾಲ್ಗೊಂಡಿದ್ದರು.

ತಲೆಬಾಗಿ ನಮಸ್ಕಾರ:

ಪಾದಯಾತ್ರೆ ಮಂಡ್ಯ ಜಿಲ್ಲೆಯಿಂದ ಮೈಸೂರು ಜಿಲ್ಲೆಗೆ ಪ್ರವೇಶವಾಗುತ್ತಿದ್ದಂತೆ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಈಡುಗಾಯಿ ಒಡೆದು ತಲೆ ಬಾಗಿ ಹೆದ್ದಾರಿಗೆ ನಮಸ್ಕರಿಸಿದರು. ಪಾದಯಾತ್ರೆ ವೇಳೆ ಜೆಡಿಎಸ್ ಅಭಿಮಾನಿ ಯುವಕರು ನಿಖಿಲ್ ಭಾವಚಿತ್ರವನ್ನು ತಮ್ಮ ಎದೆ ಮೇಲೆ ಟ್ಯಾಟೂ ಹಾಕಿಸಿಕೊಂಡು ಗಮನ ಸೆಳೆದರು.

 ಕೊಬ್ಬರಿ, ಬೆಲ್ಲದ ಹಾರದಿಂದ ಸ್ವಾಗತ 

 ಶ್ರೀರಂಗಪಟ್ಟಣದ ಹೊರವಲಯದ ಪಶ್ಚಿಮವಾಹಿನಿ ಹಾಗೂ ನಗುವಿನಹಳ್ಳಿ ಗೇಟ್ ಬಳಿ ಗ್ರಾಮಸ್ಥರು ಬಿಜೆಪಿ-ಜೆಡಿಎಸ್‌ ಮುಖಂಡರಿಗೆ ಬೃಹದಾಕಾರದ ಬೆಲ್ಲ, ಕೊಬ್ಬರಿ ಹಾಗೂ ಮೋಸುಂಬಿ ಹಾರ ಹಾಕುವ ಮೂಲಕ ಅದ್ದೂರಿಯಾಗಿ ಪಾದಯಾತ್ರೆಗೆ ಸ್ವಾಗತ ಕೋರಿದರು.

 

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''
ಸರ್ವಜನಾಂಗ ಶಾಂತಿಯ ತೋಟ ಆಗಲು ಈ ಮಸೂದೆ ಬೇಕೇಬೇಕು