ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿ ಆಗುತ್ತಿದೆ: ಎಚ್.ವಿಶ್ವನಾಥ್

KannadaprabhaNewsNetwork |  
Published : Jun 20, 2024, 01:13 AM ISTUpdated : Jun 20, 2024, 03:58 AM IST
H Vishwanath

ಸಾರಾಂಶ

ಗ್ಯಾರಂಟಿ ಯೋಜನೆಗಳು ಜಾರಿಯಾಗಿ ವರ್ಷ ಕಳೆದಿದೆ. ಸರ್ಕಾರ ಗ್ಯಾರಂಟಿ ಜಾರಿಗೊಳಿಸಿದಾಗ ನಾನು ಸ್ವಾಗತಿಸಿದ್ದೆ. ಬಡವರಿಗೆ ಅದರಿಂದ ಅನುಕೂಲವಾಗುತ್ತದೆ ಎಂದು ನಿರೀಕ್ಷಿಸಿದ್ದೆ. ಆದರೆ, ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತಿದೆ.  

 ಮೈಸೂರು : ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಪರದಾಡುತ್ತಿದ್ದು,ಆರ್ಥಿಕವಾಗಿ ದಿವಾಳಿ ಆಗಿರುವುದರಿಂದ ಹಣ ಹೊಂದಿಸಲು ಪರದಾಡುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ವಾಗ್ದಾಳಿ ನಡೆಸಿದರು.

ಗ್ಯಾರಂಟಿ ಯೋಜನೆಗಳು ಜಾರಿಯಾಗಿ ವರ್ಷ ಕಳೆದಿದೆ. ಸರ್ಕಾರ ಗ್ಯಾರಂಟಿ ಜಾರಿಗೊಳಿಸಿದಾಗ ನಾನು ಸ್ವಾಗತಿಸಿದ್ದೆ. ಬಡವರಿಗೆ ಅದರಿಂದ ಅನುಕೂಲವಾಗುತ್ತದೆ ಎಂದು ನಿರೀಕ್ಷಿಸಿದ್ದೆ. ಆದರೆ, ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತಿದೆ. ಪ್ರಸ್ತುತ ರಾಜ್ಯದಲ್ಲಿ ಸರ್ಕಾರಿ ಶಾಲೆ ಮುಚ್ಚುತ್ತಿದ್ದು, ಪೋಷಕರು ಖಾಸಗಿ ಶಾಲೆಗೆ ದುಬಾರಿ ಶುಲ್ಕ ಕಟ್ಟಿ ಸುಸ್ತಾಗಿದ್ದಾರೆ. ಹೀಗಾಗಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಗಮನ ಹರಿಸಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಬುಧವಾರ ಸಲಹೆ ನೀಡಿದರು.

1 ರಿಂದ 12ನೇ ತರಗತಿವರೆಗೆ ಉಚಿತ ಶಿಕ್ಷಣ ಘೋಷಿಸಬೇಕಿತ್ತು. ಆರೋಗ್ಯದ ವಿಷಯದಲ್ಲೂ ತೊಂದರೆ ಇದೆ. ಜನ ಸಾಲ ಮಾಡಿ ದೊಡ್ಡ ಆಸ್ಪತ್ರೆಗಳಿಗೆ ಸೇರುತ್ತಿದ್ದಾರೆ. ಎರಡು ಮೂರು ದಿನಕ್ಕೆ ಲಕ್ಷಾಂತರ ರೂ. ಬಿಲ್ ಪಾವತಿಸಬೇಕಾದ ಸ್ಥಿತಿ ಇದೆ. ಇವೆರಡೂ ಜನರನ್ನು ಸುಸ್ತು ಮಾಡುತ್ತಿವೆ. ನಾನು ಸಚಿವನಾಗಿದ್ದಾಗ ಯಶಸ್ವಿನಿ ಯೋಜನೆ ಜಾರಿಗೆ ತಂದಿದ್ದೆ. ಇದರಿಂದ ಜನರಿಗೆ ಅನುಕೂಲ ಆಗಿತ್ತು. ಆದರೆ, ಸಿದ್ದರಾಮಯ್ಯ ಅದನ್ನು ನಿಲ್ಲಿಸಿದರು. ನಾನು ಸಾಮಾಜಿಕ ನ್ಯಾಯದ ಪರ ಇದ್ದೇನೆ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ ಇದು ಯಾವ ಸೀಮೆ ಸಾಮಾಜಿಕ ನಾಯಕ ಎಂದು ಹರಿಹಾಯ್ದರು.

ರಾಜ್ಯದಲ್ಲಿ ಸಾವಿರಕ್ಕೂ ಹೆಚ್ಚು ಬಹುರಾಷ್ಟ್ರೀಯ ಕಂಪನಿಗಳಿವೆ. ಅವುಗಳಿಂದ ಹಣ ಪಡೆದು ಅಕ್ಷರ, ಆರೋಗ್ಯವನ್ನು ಉಚಿತವಾಗಿ ನೀಡಲಿ ಎಂದು ಆಗ್ರಹಿಸಿದರು.

ಆರ್ಥಿಕ ಇಲಾಖೆ ಸಂಪೂರ್ಣವಾಗಿ ದಿಕ್ಕು ತಪ್ಪಿದಂತಿದೆ. ಹೆಚ್ಚು ಬಾರಿ ಬಜೆಟ್ ಮಂಡಿಸಿದರೂ ಸಿದ್ದರಾಮಯ್ಯ ಹಿಂತಿರುಗಿ ನೋಡಿದ್ದಾರಾ? ಯಾವ ಇಲಾಖೆಗೆ ಎಷ್ಟು ಅನುದಾನ ಸಿಕ್ಕಿದೆ, ಆರ್ಥಿಕ ಸ್ಥಿತಿಗತಿ ಹೇಗಿದೆ ಎಂದು ನೋಡಿದ್ದಾರಾ? ಅವರು ಯಾವ ಸೀಮೆಯ ಹಣಕಾಸು ಮಂತ್ರಿ? ಯಾವ ಸಚಿವರಿಗೂ ತಮ್ಮ ಇಲಾಖೆಯ ಹಣಕಾಸು ಸ್ಥಿತಿಗತಿಯ ಬಗ್ಗೆ ಜ್ಞಾನವೇ ಇಲ್ಲ ಎಂದು ಅವರು ದೂರಿದರು.

ಗ್ಯಾರಂಟಿಗಳಿಗೆ 65 ಸಾವಿರ ಕೋಟಿ ಖರ್ಚು ಮಾಡಿ ಅದಕ್ಕೊಬ್ಬ ಉಸ್ತುವಾರಿ, ಜಿಲ್ಲೆಗೊಬ್ಬ ಉಸ್ತುವಾರಿ ಕೊಟ್ಟು ಹಣ ದುರುಪಯೋಗ ಮಾಡಲಾಗುತ್ತಿದೆ. ಸಂಬಳ, ಸಾರಿಗೆ, ಅನುದಾನ ಸಾಲದ ಬಡ್ಡಿಗೆ 2.30 ಲಕ್ಷ ಕೋಟಿ ಬೇಕು. ಬಜೆಟ್ನ ಶೇ. 70ರಷ್ಟು ಎಸ್ಟಾಬ್ಲಿಸ್ ಮೆಂಟ್ ಗೆ ಬಳಕೆಯಾದರೆ, ಶೇ. 30ರಷ್ಟು ಮಾತ್ರ ಅಭಿವೃದ್ಧಿ ಬಳಕೆಯಾಗುತ್ತಿದೆ. ಆರ್ಥಿಕ ನೀತಿ ದುರ್ಬಲವಾಗಿ ವಿವೇಚನೆ ಇಲ್ಲದೆ ಅವಿವೇಕದಿಂದ ಖರ್ಚು ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದರು.

ಶ್ವೇತಪತ್ರ ಹೊರಡಿಸಲಿ:

ಗ್ಯಾರಂಟಿ ಯೋಜನೆ, ಹಣಕಾಸು ಪೂರೈಕೆಮತ್ತು ರಾಜ್ಯದ ಅಭಿವೃದ್ಧಿ ಹೇಗಿದೆ ಎಂಬ ಕುರಿತು ಸರ್ಕಾರ ಶ್ವೇತ ಪತ್ರ ಹೊರಡಿಸಲಿ. ಕಳೆದ ಒಂದು ವರ್ಷದಿಂದ ಯಾವುದೇ ಹುದ್ದೆ ಭರ್ತಿಯಾಗಿಲ್ಲ. ಖಾಲಿ ಹುದ್ದೆ ತುಂಬುವ ಬದಲು ಹೊರ ಗುತ್ತಿಗೆ ಆಧಾರದ ಮೇಲೆ ಲಕ್ಷಾಂತರ ಜನರಿಂದ ಕೆಲಸ ಮಾಡಿಸುತ್ತಿದ್ದಾರೆ. ಇದರ ಟೆಂಡರ್ ಅನ್ನು ಮಂತ್ರಿಗಳ, ರಾಜಕಾರಣಿಗಳ ಸಂಬಂಧಿಕರಿಗೆ ನೀಡಿದ್ದಾರೆ. ನಿಯಮದಂತೆ ನೌಕರರಿಗೆ 18 ಸಾವಿರ ಕೊಡಬೇಕು. ಆದರೆ, ಹೊರ ಗುತ್ತಿಗೆಯಲ್ಲಿ ಕೆಲಸ ಮಾಡುವ ನೌಕರನಿಗೆ ಸಿಗುತ್ತಿರುವುದೇ 12 ಸಾವಿರ. ಇದರಲ್ಲೂ ಸರ್ಕಾರ ಹಣ ಲೂಟಿ ಮಾಡುತ್ತಿದೆ ಎಂದು ಅವರು ಆರೋಪಿಸಿದರು.

ನಿವೃತ್ತರಾದವರನ್ನೂ ಮರು ನೇಮಕ ಮಾಡಿಕೊಂಡು ಪಿಂಚಣಿಯೊಂದಿಗೆ ಸಂಬಳ ನೀಡಲಾಗುತ್ತಿದೆ. ಸಿಎಂ ಆರ್ಥಿಕ ಸ್ಥಿತಿ ಬಗ್ಗೆ ಚಿಂತಿಸುತ್ತಲೇ ಇಲ್ಲ. ಆದರೂ ತೆರಿಗೆದಾರರಿಗೆ ಯಾವ ರೀತಿ ಉತ್ತರ ಕೊಡುತ್ತೀರಿ? ಯಾರು ಹೇಳುವವರು, ಕೇಳುವರಿಲ್ಲದೆ ರಾಜ್ಯವನ್ನು ದಿವಾಳಿ ಮಾಡಲು ಹೊರಟಿದ್ದಾರೆ. ಕೆಎಸ್ಸಾರ್ಟಿಸಿ ಲಾಭದಲ್ಲಿದೆಯಂತೆ? ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸಿದರೂ ಹೇಗೆ ಲಾಭದಲ್ಲಿದೆ? ಜನರಿಗೆ ಸರ್ಕಾರ ಟೋಪಿ ಹಾಕುತ್ತಿದೆ. ಇದರ ಬದಲು ವಿವೇಚನಾಯುಕ್ತವಾಗಿ ಚರ್ಚಿಸಿ ಸಮಾಜಕ್ಕೆ ಅಗತ್ಯವಿರುವ ಕಾರ್ಯಕ್ರಮ ರೂಪಿಸಲಿ ಎಂದು ಅವರು ಸಲಹೆ ನೀಡಿದರು.

ಕಟ್ಟಡ ಅಡವಿಡಲಾಗುತ್ತಿದೆ:

ಸರ್ಕಾರದಲ್ಲಿ ಹಣವಿಲ್ಲದೆ ಸರ್ಕಾರಿ ಕಟ್ಟಡಗಳನ್ನು ಅಡವಿಡಲು ರಾಜ್ಯ ಸರ್ಕಾರ ಮುಂದಾಗಿದೆ. ಸರ್ಕಾರಕ್ಕೆ ಲಂಗು ಲಗಾಮು ಇಲ್ಲದಂತಾಗಿದೆ. ಪ್ರತಿ ವಸ್ತುವಿಗೂ ಜಿಎಸ್ಟಿ ಬೀಳುತ್ತಿದೆ. ಅವರ ತೆರಿಗೆ ಹಣವನ್ನು ಖರ್ಚು ಮಾಡುವುದು ಈ ರೀತಿಯೇ? ನೀರು, ವಿದ್ಯುತ್, ಆಸ್ತಿ ನೊಂದಣಿ ಶುಲ್ಕ ದುಪ್ಪಟ್ಟಾಗಿದೆ. ಜನರ ದುಡ್ಡು ಎತ್ತೆತ್ತಲೋ ಹೋಗುತ್ತಿದೆ ಎಂದು ಅವರು ದೂರಿದರು.ದರ್ಶನ್ ಬಗ್ಗೆ ನಾನು ಏನೂ ಹೇಳುವುದಿಲ್ಲ. 2014ರ ಲೋಕಸಭಾ ಚುನಾವಣೆ ವೇಳೆ ನನ್ನ ಪರ ಪ್ರಚಾರ ಮಾಡಿದ್ದರು. ಆಗ ದರ್ಶನ್ ತಾಯಿ ಕಾಂಗ್ರೆಸ್ ನಲ್ಲಿದ್ದರು. ದರ್ಶನ್ ಬಗ್ಗೆ ಈಗ ಮಾತನಾಡಿ ನಾನೇಕೆ ಸಾಕ್ಷಿ ಹೇಳಲು ಹೋಗಿ ನಿಲ್ಲಬೇಕು.

- ಎಚ್.ವಿಶ್ವನಾಥ್, ವಿಧಾನ ಪರಿಷತ್ ಸದಸ್ಯರು

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ನಮ್ಮವರಿಗೆ ಇಲ್ಲದ ಪರಿಹಾರ ಅವರಿಗೆ ಏಕೆ : ಬಿಜೆಪಿ ಆಕ್ರೋಶ
ಶೆಡ್‌ ತೆರವಿನ ಪ್ರಕರಣದಲ್ಲಿ ಪಾಕ್‌ ಹಸ್ತಕ್ಷೇಪಕ್ಕೆ ಕೈ ಕಿಡಿ