ಗೌಡರ ಕುಟುಂಬದಿಂದ ಆಚೆ ಬರಲು ಒಕ್ಕಲಿಗ ಸಮುದಾಯ ತೀರ್ಮಾನಿಸಿದೆ- ಚುನಾವಣೆ ಫಲಿತಾಂಶವೇ ಇದಕ್ಕೆ ಸಾಕ್ಷಿ: ಯೋಗೇಶ್ವರ್‌

Published : Nov 26, 2024, 10:03 AM IST
CP Yogeshwar

ಸಾರಾಂಶ

ದೇವೇಗೌಡರ ಕುಟುಂಬದಿಂದ ಆಚೆ ಬರಬೇಕು ಎಂದು ಒಕ್ಕಲಿಗ ಸಮುದಾಯ ತೀರ್ಮಾನ ಮಾಡಿದೆ. ಚನ್ನಪಟ್ಟಣ ಉಪಚುನಾವಣೆ ಫಲಿತಾಂಶದಿಂದಲೇ ಇದು ಗೊತ್ತಾಗುತ್ತಿದೆ-ಸಿ.ಪಿ.ಯೋಗೇಶ್ವರ್‌

ಚನ್ನಪಟ್ಟಣ : ದೇವೇಗೌಡರ ಕುಟುಂಬದಿಂದ ಆಚೆ ಬರಬೇಕು ಎಂದು ಒಕ್ಕಲಿಗ ಸಮುದಾಯ ತೀರ್ಮಾನ ಮಾಡಿದೆ. ಚನ್ನಪಟ್ಟಣ ಉಪಚುನಾವಣೆ ಫಲಿತಾಂಶದಿಂದಲೇ ಇದು ಗೊತ್ತಾಗುತ್ತಿದೆ. ಅವರ ಕುಟುಂಬದಲ್ಲಿ ನಡೆದಿರೋ ಹಲವು ಬೆಳವಣಿಗೆಗಳಿಂದ ಸಮುದಾಯ ಬೇಸತ್ತಿದೆ ಎಂದು ನೂತನ ಶಾಸಕ ಸಿ.ಪಿ.ಯೋಗೇಶ್ವರ್‌ ಹೇಳಿದರು.

ಸೋಮವಾರ ಸುದ್ದಿಗಾರರ ಜತೆಗೆ ಮಾತನಾಡಿ, ದೇವೇಗೌಡರಿಗೆ ವಯಸ್ಸು ಆಗಿರುವ ಹಿನ್ನೆಲೆಯಲ್ಲಿ ಪಕ್ಷ ಮುನ್ನಡೆಸಲು ಸಾಧ್ಯವಾಗುತ್ತಿಲ್ಲ. ಜೆಡಿಎಸ್ ಗೆ ಪರ್ಯಾಯ ನಾಯಕತ್ವ ಇಲ್ಲ, ಅದೊಂದು ಕುಟುಂಬದ ಪಕ್ಷ. ಕುಮಾರಸ್ವಾಮಿ ಅವರು ಸೋತಿದ್ದಾರೆ. ಅವರ ನಾಯಕತ್ವದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಕೇವಲ ೧೯ ಸೀಟು ಪಡೆದುಕೊಂಡಿತ್ತು. ಅದರೆ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ೧೩೬ ಸೀಟು ಗೆದ್ದಿದ್ದಾರೆ. ಈ ಎರಡು ಹೋಲಿಕೆ ನೋಡಿದರೆ ಕುಮಾರಸ್ವಾಮಿ ನಾಯಕತ್ವ ಕ್ಷೀಣಿಸಿರುವುದು ಸ್ಪಷ್ಟ ಎಂದರು.

ಇಡೀ ಕುಟುಂಬವೇ ಬಂದು ಚನ್ನಪಟ್ಟಣದಲ್ಲಿ ನಿಂತು ಹೋರಾಟ ಮಾಡಿದರೂ ಗೆಲ್ಲಲು ಸಾಧ್ಯ ಆಗಲಿಲ್ಲ. ಅವರನ್ನು ನಂಬಿರೋ ಕಾರ್ಯಕರ್ತರು, ಬಹಳ ಜನ ಶಾಸಕರು ನೊಂದಿದ್ದಾರೆ. ಏನಾದರೂ ಮನಸ್ಸು ಮಾಡಿದರೆ, ಅವರಿಗೆ ಬೇರೆ ಅವಕಾಶ ತಪ್ಪಿದರೆ ನಾವು ನೋಡಬಹುದು ಎಂದು ಮಾರ್ಮಿಕವಾಗಿ ನುಡಿದರು.

ತಮ್ಮ ಮಗನನ್ನೇ ಗೆಲ್ಲಿಸಿಕೊಂಡು ಬರಲಿಲ್ಲ ಅಂದ ಮೇಲೆ ಕೇಂದ್ರ ಸಚಿವರಾಗಿ ಏನು ಪ್ರಯೋಜನ ಎಂದು ಇದೇ ವೇಳೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಗೆ ಯೋಗೇಶ್ವರ್ ಟಾಂಗ್ ನೀಡಿದರು.

ಜೆಡಿಎಸ್‌ನವರು ಸೋತು ಸುಣ್ಣ ಆಗಿದ್ದಾರೆ. ಕುರುಕ್ಷೇತ್ರದ ಕಥೆಯಲ್ಲಿ ಮಗನನ್ನು ಯುದ್ಧ ಭೂಮಿಗೆ ಕಳುಹಿಸಿ ನೀನು ರಣಹೇಡಿ ಆಗ್ಬಿಟ್ಟೆ ಅಂತ ಬಬ್ರುವಾಹನ ಹೇಳುತ್ತಾನಲ್ವಾ ಅದೇ ಪರಿಸ್ಥಿತಿ ಅವರದು ಆಗಿದೆ. ಕುಮಾರಸ್ವಾಮಿಯದು ಭಂಡತನ, ಅವರಿಗೆ ಇದ್ರೆ ಈ ಊರು, ಬಿಟ್ರೆ ಇನ್ನೊಂದು ಊರು ಎಂದು ವ್ಯಂಗ್ಯವಾಡಿದರು.

ಎಚ್‌ಡಿಕೆ, ಬಿಎಸ್‌ವೈ, ಬಿವಿವೈ

ಪಿತೂರಿಯಿಂದ ಬಿಜೆಪಿ ಬಿಟ್ಟೆ

ನಾನೇನು ಬಿಜೆಪಿ ಬಿಟ್ಟು ಬರಲಿಲ್ಲ. ಪಕ್ಷದಿಂದ ಆಚೆ ತಳ್ಳಲ್ಪಟ್ಟವನು ನಾನು. ಕುಮಾರಸ್ವಾಮಿ, ಯಡಿಯೂರಪ್ಪ ಹಾಗೂ ವಿಜಯೇಂದ್ರ ಪಿತೂರಿಯಿಂದ ನಾನು ಹೊರಗೆ ಬಂದಿದ್ದೇನೆ ಎಂದು ಸಿ.ಪಿ.ಯೋಗೇಶ್ವರ್ ಆರೋಪಿಸಿದರು.

ನಾನು ಕಾಂಗ್ರೆಸ್‌ನಲ್ಲೇ ಇರುತ್ತೇನೆ. ನಾನು ಯಾವಾಗ ಕಾಂಗ್ರೆಸ್ ಬಿಡುತ್ತೇನೆ ಎಂದು ಹೇಳಿದ್ದೇನೆ. ನಾನು ಪಕ್ಕಾ ಕಾಂಗ್ರೆಸ್ಸಿಗ, ಪಕ್ಷ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

PREV

Recommended Stories

ರಾಹುಲ್‌ ವಿರುದ್ಧ 5ಕ್ಕೆ ಬಿಜೆಪಿ ಧರಣಿ : ಬಿವೈವಿ
ಸಂಘರ್ಷ ಬಿಟ್ಟು ಒಳಮೀಸಲು ಜಾರಿ : ಪರಂ ನೇತೃತ್ವದ ಸಭೆ