ಖರ್ಗೆ ಮುಖ್ಯಮಂತ್ರಿ ಆಗಬಾರದು ಅಂತ ಏನೂ ಇಲ್ಲವಲ್ಲ? : ಸತೀಶ್‌

Published : Jul 31, 2025, 11:54 AM IST
 Minister Satish Jarkiholi's Key Statement on Cabinet Reshuffle in Raichur

ಸಾರಾಂಶ

ತಮಗೆ ಹಿಂದೆ ಮುಖ್ಯಮಂತ್ರಿ ಸ್ಥಾನ ಕೈತಪ್ಪಿದ್ದನ್ನು ಪಕ್ಷದ ವರಿಷ್ಠರು ಮುಂದೆ ಸರಿಪಡಿಸಬಹುದು ಎನ್ನುವ ಸಂದೇಶ ನೀಡಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅಸಮಾಧಾನ ಹೊರಹಾಕಿದ್ದರೂ ಹಾಕಿರಬಹುದು - ಸತೀಶ್‌ ಜಾರಕಿಹೊಳಿ

ಬೆಂಗಳೂರು : ತಮಗೆ ಹಿಂದೆ ಮುಖ್ಯಮಂತ್ರಿ ಸ್ಥಾನ ಕೈತಪ್ಪಿದ್ದನ್ನು ಪಕ್ಷದ ವರಿಷ್ಠರು ಮುಂದೆ ಸರಿಪಡಿಸಬಹುದು ಎನ್ನುವ ಸಂದೇಶ ನೀಡಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅಸಮಾಧಾನ ಹೊರಹಾಕಿದ್ದರೂ ಹಾಕಿರಬಹುದು. 

ಅವರು ಮುಂದೆ ಮುಖ್ಯಮಂತ್ರಿ ಆಗಬಾರದು ಅಂತ ಏನೂ ಇಲ್ವಲ್ಲ...? ಮುಖ್ಯಮಂತ್ರಿ ಸ್ಥಾನ ಕೈತಪ್ಪಿದ ವಿಚಾರವಾಗಿ ಚರ್ಚೆಗೆ ಗ್ರಾಸವಾದ ಖರ್ಗೆ ಹೇಳಿಕೆ ಕುರಿತು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಅವರು ಇಂಥದ್ದೊಂದು ಕುತೂಹಲಕಾರಿ ಪ್ರತಿಕ್ರಿಯೆ ನೀಡಿದ್ದಾರೆ. 

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ ಮುಖ್ಯಮಂತ್ರಿ ಸ್ಥಾನ ಕೈತಪ್ಪಿದ್ದರ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಅವರ ಅಸಮಾಧಾನ ಕುರಿತ ಪ್ರಶ್ನೆಗೆ, 1999ರಲ್ಲಿ ಮುಖ್ಯಮಂತ್ರಿ ಆಗುವ ಅವಕಾಶ ಕೈತಪ್ಪಿತು. ಅದು ನಮ್ಮವರಿಂದಲೂ ಆಗಿರಬಹುದು, ಕಡಿಮೆ ಸೀಟಿನಿಂದಲೂ ಆಗಿರಬಹುದು ಎನ್ನುವ ಅರ್ಥದಲ್ಲಿ ಖರ್ಗೆ ಹೇಳಿಕೆ ನೀಡಿದ್ದಾರೆ ಎಂದರು. 

 ಖರ್ಗೆ ಅವರ ಈ ಹೇಳಿಕೆ ತಮಗಾದ ಅನ್ಯಾಯವನ್ನು ವರಿಷ್ಠರು ಮುಂದೆ ಸರಿಪಡಿಸಬಹುದು ಎನ್ನುವ ಸಂದೇಶವಾ? ಎಂಬ ಪ್ರಶ್ನೆಗೆ, ಇದ್ದರೂ ಇರಬಹುದು. ಅವರು ಮುಂದೆ ಮುಖ್ಯಮಂತ್ರಿ ಆಗಬಾರದು ಅಂತ ಏನಿಲ್ಲವಲ್ಲ? ಹೊಸಬರಾಗಲಿ, ಹಳಬರಾಗಲಿ ಎಲ್ಲ ನಾಯಕರಿಗೂ ಮುಖ್ಯಮಂತ್ರಿ ಸ್ಥಾನದ ಆಸೆ ಇದ್ದೇ ಇರುತ್ತದೆ. ಹೊಸಬರಿಗೆ ಮಾತ್ರ ಆ ಆಸೆ ಇರಬೇಕು, ಹಳಬರಿಗೆ ಇರಬಾರದು ಅಂತೇನಿಲ್ಲವಲ್ಲ ಎಂದರು.

ಎಐಸಿಸಿ ಅಧ್ಯಕ್ಷ ಸ್ಥಾನದ ಅಧಿಕಾರಾವಧಿ ಮುಗಿದ ಬಳಿಕ ಮುಂದಿನ ಜೂನ್‌ ನಂತರ ಮಲ್ಲಿಕಾರ್ಜುನ ಖರ್ಗೆ ಅವರನ್ನು ರಾಜ್ಯ ರಾಜಕಾರಣಕ್ಕೆ ವಾಪಸ್‌ ಕರೆತರುವ ತೆರೆಮರೆಯ ಪ್ರಯತ್ನವೇನಾದರೂ ನಡೆದಿದೆಯಾ ಎಂಬ ಪ್ರಶ್ನೆಗೆ, ಅದನ್ನು ಹೈಕಮಾಂಡ್‌ ನಿರ್ಧರಿಸಬೇಕು. ಈ ಹಿಂದೆ ರಾಜ್ಯದಲ್ಲಿ ಎರಡು ಪವರ್‌ ಸೆಂಟರ್‌ ಆಗಬಾರದು ಎನ್ನುವ ಕಾರಣಕ್ಕೆ ಸೋನಿಯಾಗಾಂಧಿ, ರಾಹುಲ್‌ ಗಾಂಧಿ ಅವರು ಖರ್ಗೆ ಅವರನ್ನು ದೆಹಲಿ ರಾಜಕಾರಣಕ್ಕೆ ಕರೆಸಿಕೊಂಡಿದ್ದರು. 

ಈಗ ಅವರನ್ನು ರಾಜ್ಯ ರಾಜಕಾರಣಕ್ಕೆ ವಾಪಸ್‌ ಕಳುಹಿಸುವುದಿದ್ದರೂ ಅವರೇ ನಿರ್ಧಾರ ಮಾಡಬೇಕು ಎಂದರು. ಈಗಲೂ ರಾಜ್ಯದಲ್ಲಿ ಪವರ್ ಸೆಂಟರ್‌ ಇವೆ. ಇನ್ನಷ್ಟು ಆಗಬಹುದಲ್ವಾ ಎಂದಾಗ, ಖರ್ಗೆ ಅವರನ್ನು ರಾಜ್ಯಕ್ಕೆ ಕರೆತಂದರೆ ಇಲ್ಲಿಂದ ಒಬ್ಬರನ್ನು ದೆಹಲಿ ಕಡೆಗೆ ಕಳುಹಿಸಬೇಕಾಗುತ್ತದೆ. ಘರ್ಷಣೆ ಆಗಬಾರದು ಅಂತ ಹೈಕಮಾಂಡ್‌ ಯಾವಾಗಲೂ ತಂತ್ರ ರೂಪಿಸುತ್ತಿರುತ್ತದೆ ಎಂದರು.

PREV
Read more Articles on

Recommended Stories

ಸಾರಿಗೆ ನೌಕರರ ಹೋರಾಟಕ್ಕೆ ಬಿಜೆಪಿ ನೈತಿಕ ಬೆಂಬಲ : ಬಿ.ವೈ.ವಿಜಯೇಂದ್ರ
ಟ್ರಂಪ್‌ ಡೆಡ್ ಎಕಾನಮಿ ಹೇಳಿಕೆ : ರಾಹುಲ್‌ ವರ್ಸಸ್‌ ಕಾಂಗ್ರೆಸ್‌!