ಶಾಸಕರ ಬೆಂಬಲ ಕೇಳುವ ಸಮಯ ಇದಲ್ಲ: ಡಿಕೆಸು

KannadaprabhaNewsNetwork |  
Published : Jul 13, 2025, 01:18 AM ISTUpdated : Jul 13, 2025, 06:24 AM IST
DK Suresh

ಸಾರಾಂಶ

ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಕೆಲಸ ಮುಂದುವರೆಸಿದ್ದಾರೆ. ಡಿ.ಕೆ. ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ. ಹೀಗಾಗಿ, ಶಾಸಕರ ಬೆಂಬಲ ಕೇಳುವ ಸಮಯ ಇದಲ್ಲ ಎಂದು ‘ಬಮೂಲ್‌’ ಅಧ್ಯಕ್ಷ ಮತ್ತು ಮಾಜಿ ಸಂಸದ ಡಿ.ಕೆ. ಸುರೇಶ್‌ ತಿಳಿಸಿದ್ದಾರೆ. 

  ಬೆಂಗಳೂರು : ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಕೆಲಸ ಮುಂದುವರೆಸಿದ್ದಾರೆ. ಡಿ.ಕೆ. ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ. ಹೀಗಾಗಿ, ಶಾಸಕರ ಬೆಂಬಲ ಕೇಳುವ ಸಮಯ ಇದಲ್ಲ ಎಂದು ‘ಬಮೂಲ್‌’ ಅಧ್ಯಕ್ಷ ಮತ್ತು ಮಾಜಿ ಸಂಸದ ಡಿ.ಕೆ. ಸುರೇಶ್‌ ತಿಳಿಸಿದ್ದಾರೆ. ತನ್ಮೂಲಕ ಡಿಕೆಶಿ ಅವರಿಗೆ ಶಾಸಕರ ಬೆಂಬಲ ಜಾಸ್ತಿ ಇಲ್ಲ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಮಾರುತ್ತರ ನೀಡಿದ್ದಾರೆ.

ಜತೆಗೆ, ಡಿ.ಕೆ. ಶಿವಕುಮಾರ್‌ ಅವರಿಗೆ ಯಾವುದೇ ಸ್ಥಾನದ ವಿಚಾರವಾಗಿ ಆತುರ ಅಥವಾ ಆತಂಕವಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.

ಸದಾಶಿವನಗರದ ತಮ್ಮ ನಿವಾಸದ ಬಳಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಸುರೇಶ್‌, ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಜಗಳವಿಲ್ಲ. ನಾಯಕತ್ವ ವಿಚಾರವಾಗಿ ಪಕ್ಷದ ವರಿಷ್ಠರು, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಅವರು ಸ್ಪಷ್ಟನೆ ನೀಡಿದ್ದಾರೆ. ಸಿದ್ದರಾಮಯ್ಯ ಅವರೂ ಕೂಡ ಮುಂದುವರಿಯಲಿದ್ದೇನೆ ಎಂದು ಹೇಳಿದ್ದಾರೆ. ಆದರೂ, ಮಾಧ್ಯಮಗಳಿಗೆ ಈ ಬಗ್ಗೆ ಗೊಂದಲವಿರುವುದು ಏಕೆ ಎಂಬುದು ತಿಳಿದಿಲ್ಲ. ಡಿ.ಕೆ. ಶಿವಕುಮಾರ್‌ ಅವರು ಪಕ್ಷ ಕೊಟ್ಟಿರುವ ಜವಾಬ್ದಾರಿಯನ್ನು ಪಕ್ಷದ ಕಾರ್ಯಕರ್ತನಾಗಿ ನಿಭಾಯಿಸುತ್ತಿದ್ದಾರೆ ಎಂದರು.

ಡಿ.ಕೆ. ಶಿವಕುಮಾರ್‌ ಅವರಿಗೆ ಹೆಚ್ಚಿನ ಶಾಸಕರ ಬೆಂಬಲವಿಲ್ಲ ಎಂದು ಸಿದ್ದರಾಮಯ್ಯ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಡಿ.ಕೆ. ಶಿವಕುಮಾರ್‌ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಶಾಸಕರ ಬೆಂಬಲ ಕೇಳುವ ಸಮಯ ಇದಲ್ಲ. ಶಿವಕುಮಾರ್‌ ಅವರದ್ದು ಬಲಾಬಲ ಪ್ರದರ್ಶಿಸುವ ವ್ಯಕ್ತಿತ್ವವಲ್ಲ. ವರಿಷ್ಠರಿಗೆ ಗೌರವ ನೀಡುವ ವ್ಯಕ್ತಿತ್ವ ಹೊಂದಿರುವವರು. ಇನ್ನು, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾಗಿ ಕೆಲಸ ಮಾಡುತ್ತಿದ್ದಾರೆ. ಸದ್ಯಕ್ಕೆ ಮುಖ್ಯಮಂತ್ರಿ ಹುದ್ದೆ ಖಾಲಿಯಿಲ್ಲ. ಆದರೂ ಪದೇಪದೇ ಆ ವಿಚಾರ ಚರ್ಚೆಯಾಗುತ್ತಿರುವುದರ ಬಗ್ಗೆ ತಿಳಿದಿಲ್ಲ ಎಂದು ಹೇಳಿದರು.

ಡಿ.ಕೆ. ಶಿವಕುಮಾರ್‌ ಅವರು ಈ ಅವಧಿಯಲ್ಲಿಯೇ ಸಿಎಂ ಆಗುತ್ತಾರೆ ಎಂದು ಕೆಲವರು ಹೇಳುತ್ತಿದ್ದಾರೆ ಎಂಬ ಪ್ರಶ್ನೆಗೆ, ನನಗೆ ಆ ವಿಚಾರ ತಿಳಿದಿಲ್ಲ. ಪ್ರತಿಯೊಬ್ಬರೂ ಒಬ್ಬೊಬ್ಬರು ಮುಖ್ಯಮಂತ್ರಿಯಾಗಲಿ ಎಂದು ಆಸೆ ಪಡುತ್ತಾರೆ. ಪ್ರತಿ ಜಿಲ್ಲೆ, ಸಮುದಾಯದವರು ತಮ್ಮವರು ಸಿಎಂ ಆಗಲಿ ಎಂದು ಆಶಿಸುವುದು ಸಹಜ. ಎಲ್ಲ ಅವಧಿಯಲ್ಲೂ ಈ ರೀತಿಯ ಬೆಳವಣಿಗೆ ನಡೆದುಕೊಂಡು ಬಂದಿದೆ. ಅಂತಹ ಅಭಿಪ್ರಾಯ ತಪ್ಪು ಎಂದು ಹೇಳಲು ಆಗವುದಿಲ್ಲ ಎಂದು ತಿಳಿಸಿದರು.---ತಮ್ಮದೇ ಲಕ್ಷಣ ರೇಖೆ ಹೇಗೆ ದಾಟುತ್ತಾರೆ?75 ವರ್ಷಕ್ಕೆ ನಿವೃತ್ತಿ ಪಡೆಯಬೇಕು ಎಂಬ ಆರ್‌ಎಸ್‌ಎಸ್‌ ಮುಖಂಡ ಮೋಹನ್‌ ಭಾಗವತ್‌ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಡಿ.ಕೆ. ಸುರೇಶ್‌, ರಾಜಕಾರಣದಲ್ಲಿ ನಿವೃತ್ತಿಯಿಲ್ಲ ಎಂಬುದು ನನ್ನ ಅಭಿಪ್ರಾಯ. ಆದರೆ, ರಾಜಕೀಯ ಇಚ್ಛಾಶಕ್ತಿ ಜತೆಗೆ ಅವರೇ ಹಾಕಿಕೊಂಡ ಲಕ್ಷ್ಮಣ ರೇಖೆಯನ್ನು ಹೇಗೆ ದಾಟುತ್ತಾರೆ ಎಂಬುದು ಮುಖ್ಯ. ಯಾವಾಗಲೂ ಇನ್ನೊಬ್ಬರಿಗೆ ಮಾರ್ಗದರ್ಶಕರಾಗಿ ಮಾದರಿಯಾಗಿರಬೇಕು. ಆ ರೀತಿ ದಿಟ್ಟ ಹೆಜ್ಜೆ ಇಟ್ಟಾಗ ಅವರ ಹೆಸರು ಶಾಶ್ವತವಾಗಿ ಉಳಿಯುತ್ತದೆ ಎಂದು ಅಭಿಪ್ರಾಯಪಟ್ಟರು.

ಎಲ್ಲರೂ ಸೇರಿ ಪಕ್ಷ ಕಟ್ಟಿದ್ದಾರೆ

ಹನಿ ಹನಿ ಗೂಡಿದ್ರೆ ಹಳ್ಳ ಎಂಬಂತೆ ಎಲ್ಲರೂ ಪಕ್ಷ ಕಟ್ಟಿದ್ದಾರೆ. ಅದರಲ್ಲಿ ಡಿ.ಕೆ.ಶಿವಕುಮಾರ್ ಪ್ರಮುಖ ಪಾತ್ರ ವಹಿಸಿದ್ದಾರೆ. ಅದನ್ನು ನಾವು ಇಲ್ಲ ಅನ್ನೋಕಾಗುತ್ತಾ? ಖರ್ಗೆ, ಪರಮೇಶ್ವರ್, ದಿನೇಶ್‌ ಗುಂಡೂರಾವ್, ಆರ್.ವಿ.ದೇಶಪಾಂಡೆ ಪಾತ್ರ ಇಲ್ವಾ?

- ಎಚ್‌.ಸಿ. ಮಹದೇವಪ್ಪ, ಸಚಿವ

 ಡಿಕೆಶಿ ದಿಢೀರ್‌ ದೆಹಲಿಗೆ- ಹೈಕಮಾಂಡ್‌ ಬುಲಾವ್‌: ಸಂಚಲನ

 ಬೆಂಗಳೂರು : ಮುಖ್ಯಮಂತ್ರಿ ಸ್ಥಾನದ ವಿಚಾರವಾಗಿ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಕುರಿತು ಚರ್ಚೆ ನಡೆದಿರುವ ಬೆನ್ನಲ್ಲೇ ಡಿಸಿಎಂ ಡಿ.ಕೆ. ಶಿವಕುಮಾರ್‌ ದಿಢೀರ್‌ ದೆಹಲಿ ಪ್ರವಾಸ ಕೈಗೊಂಡಿದ್ದು, ಭಾರೀ ಕುತೂಹಲಕ್ಕೆ ಕಾರಣವಾಗಿದೆ.

ಪ್ರಸಕ್ತ ಅವಧಿ ಪೂರ್ತಿ ತಾವೇ ಸಿಎಂ ಎಂದು ಸಿದ್ದು ಘೋಷಿಸಿದ ನಂತರವೂ ಮೌನವಹಿಸಿದ್ದ ಡಿಕೆಶಿ, ಶನಿವಾರ ರಾತ್ರಿ ದೆಹಲಿಗೆ ತೆರಳಿದ್ದಾರೆ ಎನ್ನಲಾಗಿದೆ. ಶನಿವಾರ ಬೆಳಗ್ಗೆ ಶಿರಡಿಗೆ ತೆರಳಿ ಸಾಯಿಬಾಬಾ ದರ್ಶನ ಪಡೆದಿದ್ದ ಅವರು, ಅದಾದ ನಂತರ ಬೆಂಗಳೂರಿಗೆ ವಾಪಸಾಗದೆ ಪುಣೆ ಮೂಲಕವೇ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಸಿದ್ದು ಹೇಳಿಕೆ ಸೇರಿ ರಾಜ್ಯದ ವಿದ್ಯಮಾನ ಬಗ್ಗೆ ಹೈಕಮಾಂಡ್‌ ಜತೆ ಚರ್ಚಿಸು ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.ಆದರೆ, ಇದರ ಬೆನ್ನಲ್ಲೇ ಶನಿವಾರ ತಡರಾತ್ರಿ ಟ್ವೀಟ್‌ ಮಾಡಿರುವ ಅವರು, ’ನಾನು ಖಾಸಗಿ ಕಾರ್ಯಕ್ರಮ ನಿಮಿತ್ತ ಶಿರಡಿ ಮತ್ತಿತರ ಕಡೆ ಭೇಟಿ ನೀಡಿದ್ದೇನೆ. ಆದರೆ ಕೆಲವು ಟೀವಿ ಚಾನೆಲ್‌, ಇತರ ಮಾಧ್ಯಮಗಳಲ್ಲಿ ಹೈಕಮಾಂಡ್ ಬುಲಾವ್ ಮೇರೆಗೆ ದಿಲ್ಲಿಗೆ ತೆರಳಿದ್ದೇನೆ ಎಂದು ವರದಿ ಆಗಿರುವುದು ಸಂಪೂರ್ಣ ಸತ್ಯಕ್ಕೆ ದೂರವಾದ ವಿಚಾರ. ನನ್ನ ಖಾಸಗಿ ಕಾರ್ಯಕ್ರಮಗಳಿಗೆ ರಾಜಕೀಯ ಬಣ್ಣ ಹಚ್ಚುವುದು ಸಲ್ಲದು’ ಎಂದಿದ್ದಾರೆ.

PREV
Read more Articles on

Recommended Stories

ಮತ್ತೆ ಕೈ ಶಾಸಕ ವೀರೇಂದ್ರಪಪ್ಪಿಗೆ ಇ.ಡಿ. ದಾಳಿ ಬಿಸಿ!
ರಾಜಣ್ಣ ಅಲ್ಲ, ಬಾಲಕೃಷ್ಣ ಟೀಂ ಬಿಜೆಪಿಗೆ: ರಾಜೇಂದ್ರ