;Resize=(412,232))
ತುಮಕೂರು : ‘ನನ್ನನ್ನು ಸಚಿವ ಸ್ಥಾನದಿಂದ ಕೆಳಗಿಳಿಸಲು ಮೂವರು ದೆಹಲಿಯಲ್ಲಿ ವ್ಯವಸ್ಥಿತವಾಗಿ ಪಿತೂರಿ ಮಾಡಿದ್ದಾರೆ. ಪಿತೂರಿ ವಿದ್ಯೆ ನನಗೂ ಗೊತ್ತಿದೆ. ಈ ಸಂದರ್ಭದಲ್ಲಿ ಅದನ್ನು ಬಳಸುವುದಿಲ್ಲ. ಮುಂದೆ ಕಾಲ ಬರುತ್ತದೆ’ ಎಂದು ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರು ಮಾರ್ಮಿಕವಾಗಿ ನುಡಿದಿದ್ದಾರೆ.
ಸಚಿವ ಸ್ಥಾನದಿಂದ ವಜಾಗೊಂಡ ಬಳಿಕ ಇದೇ ಮೊದಲ ಬಾರಿಗೆ ಅವರು ಮಧುಗಿರಿಗೆ ಭೇಟಿ ನೀಡಿದರು. ದಾರಿ ಮಧ್ಯೆ, ತುಮಕೂರಲ್ಲಿ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಅಧಿವೇಶನ ಮುಗಿದ ಬಳಿಕ ದೆಹಲಿಗೆ ತೆರಳಿ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡುತ್ತೇನೆ. ವಸ್ತುಸ್ಥಿತಿಯನ್ನು ತಿಳಿಸುತ್ತೇನೆ. ಹೈಕಮಾಂಡ್ ನಾಯಕರು ವಸ್ತುಸ್ಥಿತಿಯನ್ನು ಅರ್ಥ ಮಾಡಿಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ. ಸಮಯ ಬಂದಾಗ ಸಚಿವ ಸ್ಥಾನವನ್ನು ತೆಗೆದುಕೊಳ್ಳುತ್ತೇನೆ. ಇದೇ ಅವಧಿಯಲ್ಲಿ ಮತ್ತೆ ಸಚಿವನಾಗುತ್ತೇನೆ. ದೆಹಲಿಗೆ ಹೋಗಿ ಬಂದ ಬಳಿಕ ಸಿಹಿ ಸುದ್ದಿ ಕೊಡುವೆ ಎಂದರು.
ಚಿಕ್ಕವಯಸ್ಸಿನಿಂದ ನಾನು ಏನು ಅಂದುಕೊಂಡು ಬಂದಿದ್ದೇನೋ ಅದನ್ನು ಸಾಧಿಸಿಕೊಂಡು ಬಂದಿದ್ದೇನೆ. ಅಧಿಕಾರ ಎಂದಿಗೂ ಶಾಶ್ವತವಲ್ಲ. ನಾನು ಅಧಿಕಾರಕ್ಕಾಗಿ ಎಂದೂ ಅಂಟಿಕೊಂಡು ಕೂತಿಲ್ಲ. ಸಚಿವ ಸ್ಥಾನ ಹೋಗಲು ಹಲವು ಕಾರಣಗಳಿವೆ. ಸಮಯ ಬಂದಾಗ ಎಲ್ಲವನ್ನೂ ಹೇಳುವೆ. ನಾನು ಯಾವತ್ತೂ ಸ್ವಾರ್ಥಕ್ಕಾಗಿ ಸುಳ್ಳು ಹೇಳಿಲ್ಲ. ಆದರೆ, ಬೇರೆಯವರ ಅನುಕೂಲಕ್ಕಾಗಿ ಸುಳ್ಳು ಹೇಳಿದ್ದೇನೆ. ಹೆಚ್ಚುವರಿಯಾಗಿ ಉಪಮುಖ್ಯಮಂತ್ರಿಗಳನ್ನು ನೇಮಕ ಮಾಡಿ, ಕೆಪಿಸಿಸಿ ಅಧ್ಯಕ್ಷರನ್ನು ಬದಲಿಸಿ ಎಂದಿದ್ದೇನೆ. ಅದನ್ನು ದೆಹಲಿಗೆ ತಲುಪಿಸಿದ್ದಾರೆ. ಪಕ್ಷದ ವಿಚಾರವನ್ನು ಬಹಿರಂಗವಾಗಿ ಮಾತನಾಡಬಾರದು, ಪರಿಸ್ಥಿತಿ ಸತ್ಯವನ್ನು ಕಹಿ ಮಾಡುತ್ತದೆ ಎಂದರು.
ನನ್ನನ್ನು ಸಚಿವ ಸ್ಥಾನದಿಂದ ತೆಗೆಯುವ ವಿಷಯ ಮುಖ್ಯಮಂತ್ರಿಗೆ ಗೊತ್ತಿರಲಿಲ್ಲ. ಮುಖ್ಯಮಂತ್ರಿಯವರು ಹೈಕಮಾಂಡ್ ಅನ್ನು ಮನವೊಲಿಸಲು ಯತ್ನಿಸಿದ್ದಾರೆ. ಆದರೆ, ಆಗಿಲ್ಲ. ರಾಹುಲ್ ಗಾಂಧಿಯವರು ಸಿಎಂಗೆ ಫೋನ್ ಮಾಡಿದ್ದರು. ಕಾರಣ ಏನು ಅಂತ ಗೊತ್ತಿಲ್ಲ. ನಾನು ಸತ್ಯ ಹೇಳಿದ್ದೇನೆ ಎಂದರು.
ರಾಹುಲ್‌ರಿಂದ ಉತ್ತಮ ಕಾರ್ಯ:
ರಾಹುಲ್ ಗಾಂಧಿಯವರು ‘ವೋಟ್ ಚೋರಿ’ ವಿಚಾರ ತೆಗೆದುಕೊಂಡು ಜಾಗೃತಿ ಮೂಡಿಸುತ್ತಿರುವುದು ಒಳ್ಳೆಯ ಕೆಲಸ. ಹಳ್ಳಿಗಳಲ್ಲಿ ಮತ ಕಳವು ಮಾಡುವುದು ಕಷ್ಟ. ಹಳ್ಳಿಯ ಜನರು ನಕಲಿ ವೋಟು ಹಾಕಿಸಲು ಬಿಡುವುದಿಲ್ಲ. ಆದರೆ, ನಗರ ಪ್ರದೇಶದಲ್ಲಿ ಮತಗಳ್ಳತನ ಮಾಡಬಹುದು ಎಂದು ಶ್ಲಾಘಿಸಿದರು.
ರಾಷ್ಟ್ರಮಟ್ಟದಲ್ಲಿ ಇನ್ನೊಂದು 20 ಸೀಟು ಹೆಚ್ಚಿಗೆ ಬಂದಿದ್ದರೆ ರಾಹುಲ್ ಗಾಂಧಿ ಪ್ರಧಾನಿ ಆಗುತ್ತಿದ್ದರು. ಆಗ ಮೋದಿ ಪ್ರಧಾನಿ ಆಗುವುದು ಕಷ್ಟ ಆಗುತ್ತಿತ್ತು. ಏನೇ ಆದರೂ, ರಾಜಕೀಯಲ್ಲಿ ಮೋಸ ಜಾಸ್ತಿ ದಿನ ನಡೆಯುವುದಿಲ್ಲ ಎಂದರು.
ಬಿಜೆಪಿಗೆ ಹೋಗುವುದಿಲ್ಲ:
ಬಿಜೆಪಿಗೆ ಬರುವಂತೆ ಶ್ರೀರಾಮುಲು ಆಹ್ವಾನ ಕೊಟ್ಟಿರುವ ಬಗ್ಗೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ನನಗೇನು ಕಡಿಮೆ ಮಾಡಿದೆ? ನಾನೇ ಅವರನ್ನು ಕಾಂಗ್ರೆಸ್‌ಗೆ ಕರೆ ತರುತ್ತೇನೆ. ಶ್ರೀರಾಮುಲು ಪ್ರೀತಿ, ವಿಶ್ವಾಸಕ್ಕೆ ಹೇಳಿರಬಹುದು. ಅವರು ಹೇಳಿದರು ಅಂತಾ ಹೋಗಲಿಕ್ಕೆ ಆಗುತ್ತಾ ಎಂದು ಪ್ರಶ್ನಿಸಿದರು.