ಜಪಾನಿಂದ ಡಿಕೆ ಬಂದ ಬಳಿಕ ಸಾಹುಕಾರ್‌ ಟೀಂಗೆ ಸಂಕಷ್ಟ?

Published : Nov 24, 2026, 05:30 AM IST
KPSC

ಸಾರಾಂಶ

ಕಳೆದ ಮೂರು ವರ್ಷ ಅವಧಿಯಲ್ಲಿ ಪಶುವೈದ್ಯಾಧಿಕಾರಿಗಳು ಹಾಗೂ ಕೆಎಎಸ್ ಸೇರಿದಂತೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನಡೆಸಿದ ಎಲ್ಲ ನೇಮಕಾತಿಗಳಲ್ಲಿ ಅಕ್ರಮ ನಡೆದಿದೆ ಎಂದು ವಿಶೇಷ ತನಿಖಾ ತಂಡ (ಎಸ್‌ಐಟಿ)ಕ್ಕೆ 32 ಪುಟಗಳ ಸವಿವರ ವರದಿಯನ್ನು ಸಲ್ಲಿಸಿ ಸೂಕ್ತ ತನಿಖೆಗೆ ಜಾರಿ ನಿರ್ದೇಶನಾಲಯವು (ಇ.ಡಿ.) ಶಿಫಾರಸು ಮಾಡಿದೆ.

 ಗಿರೀಶ್ ಮಾದೇನಹಳ್ಳಿ

ಬೆಂಗಳೂರು : ಕಳೆದ ಮೂರು ವರ್ಷ ಅವಧಿಯಲ್ಲಿ ಪಶುವೈದ್ಯಾಧಿಕಾರಿಗಳು ಹಾಗೂ ಕೆಎಎಸ್ ಸೇರಿದಂತೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನಡೆಸಿದ ಎಲ್ಲ ನೇಮಕಾತಿಗಳಲ್ಲಿ ಅಕ್ರಮ ನಡೆದಿದೆ ಎಂದು ವಿಶೇಷ ತನಿಖಾ ತಂಡ (ಎಸ್‌ಐಟಿ)ಕ್ಕೆ 32 ಪುಟಗಳ ಸವಿವರ ವರದಿಯನ್ನು ಸಲ್ಲಿಸಿ ಸೂಕ್ತ ತನಿಖೆಗೆ ಜಾರಿ ನಿರ್ದೇಶನಾಲಯವು (ಇ.ಡಿ.) ಶಿಫಾರಸು ಮಾಡಿದೆ.

ಈ ನೇಮಕಾತಿ ಹಗರಣ ಕುರಿತ ತನ್ನ ತನಿಖೆ ವೇಳೆ ಲಭ್ಯವಾದ ಪುರಾವೆಗಳನ್ನು ಸಹ ವರದಿಯಲ್ಲಿ ಇ.ಡಿ. ಉಲ್ಲೇಖಿಸಿದೆ. ಎಸ್‌ಐಟಿ ಮುಖ್ಯಸ್ಥರೂ ಆಗಿರುವ ಬೆಂಗಳೂರು ನಗರ ಮುಖ್ಯ ಪೊಲೀಸ್ ಆಯುಕ್ತ ಆರ್‌.ಹಿತೇಂದ್ರ ಅವರಿಗೆ ಇ.ಡಿ. ಸಲ್ಲಿಸಿರುವ ವರದಿಯ ಪ್ರತಿ ‘ಕನ್ನಡಪ್ರಭ’ಕ್ಕೆ ಲಭ್ಯವಾಗಿದೆ. ಈ ವರದಿ ಬೆನ್ನಲ್ಲೇ ಎಸ್‌ಐಟಿ ಮುಂದಿನ ನಡೆ ಬಗ್ಗೆ ಕುತೂಹಲ ಕೆರಳಿಸಿದೆ.

ಇನ್ನೊಂದೆಡೆ ಇ.ಡಿ. ತನಿಖೆಯಲ್ಲಿ ಪತ್ತೆಯಾಗಿರುವ ಕೆಪಿಎಸ್‌ಸಿ ನೇಮಕಾತಿ ಅಕ್ರಮಗಳ ಕುರಿತು ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಎಸ್‌ಐಟಿಗೆ ಹೈಕೋರ್ಟ್ ಕೂಡ ಆದೇಶಿಸಿದೆ. ಈ ಬೆಳವಣಿಗೆ ಬಗ್ಗೆ ರಾಜ್ಯ ಸರ್ಕಾರದ ಜತೆ ಎಸ್‌ಐಟಿ ಸಮಾಲೋಚಿಸಿದ್ದು, ವಿದೇಶ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ರಾಜ್ಯಕ್ಕೆ ಮರಳಿದ ನಂತರ ಕೆಪಿಎಸ್‌ಸಿ ನೇಮಕಾತಿ ಅಕ್ರಮದ ತನಿಖೆ ಸಂಬಂಧ ಅಂತಿಮ ತೀರ್ಮಾನ ನಿರ್ಣಯವಾಗಲಿದೆ ಎಂದು ತಿಳಿದು ಬಂದಿದೆ.

ವರದಿಯಲ್ಲಿರುವ ಪ್ರಮುಖಾಂಶಗಳು

*ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರ ಮನೆಯ ಮೇಲಿನ ದಾಳಿ ವೇಳೆ ಕೈ ಬರಹದ ಪುಸ್ತಕ ಸಿಕ್ಕಿತು. ಅದರಲ್ಲಿ ಪರೀಕ್ಷಾ ಕೇಂದ್ರಗಳು, ಆ ಕೇಂದ್ರಗಳಲ್ಲಿ ಪರೀಕ್ಷೆ ಬರೆದ ಅಭ್ಯರ್ಥಿಗಳ ನೋಂದಣಿ ಸಂಖ್ಯೆಗಳು ಹಾಗೂ ಅಭ್ಯರ್ಥಿಗಳಿಗೆ ವಿತರಣೆಯಾಗಲಿರುವ ಪ್ರಶ್ನೆ ಪತ್ರಿಕೆಗಳ ಕ್ರಮ ಸಂಖ್ಯೆಗಳ ವಿವರ ಉಲ್ಲೇಖವಾಗಿದ್ದವು.

*ಪಶು ವೈದ್ಯ, ಕೆಎಎಸ್‌ ಸೇರಿದಂತೆ ಸರ್ಕಾರಿ ಹುದ್ದೆಗಳು ಕೋಟ್ಯಂತರ ರು.ಗೆ ಡೀಲ್ ಆಗುತ್ತಿದ್ದವು. ಈ ವ್ಯವಹಾರವನ್ನು ಕೆಪಿಎಸ್‌ಸಿ ಅಧಿಕಾರಿ-ಸಿಬ್ಬಂದಿ ಹಾಗೂ ಸದಸ್ಯರು ನಡೆಸುತ್ತಿದ್ದರು. ನೇಮಕಾತಿ ಪ್ರಕ್ರಿಯೆಯ ಪ್ರಾಥಮಿಕ ಹಂತದಲ್ಲಿ ಮುಂಗಡವಾಗಿ ಲಕ್ಷ ಲಕ್ಷ ಸಂದಾಯವಾಗುತ್ತಿತ್ತು. ಆಯ್ಕೆ ಪಟ್ಟಿ ತಯಾರಿ ಹೊತ್ತಿಗೆ ಪೂರ್ಣ ಹಣ ಸಂದಾಯವಾಗುತ್ತಿತ್ತು ಎಂದು ಆಯೋಗದ ಪರೀಕ್ಷಾ ನಿಯಂತ್ರಕರಾಗಿದ್ದ ಜ್ಞಾನೇಂದ್ರ ಕುಮಾರ್ ಗಂಗ್ವಾರ್‌ ವಿಚಾರಣೆ ವೇಳೆ ಹೇಳಿಕೆ ಕೊಟ್ಟಿದ್ದಾರೆ.

*ಭಾಲ್ಕಿಯ ಸಹಕಾರಿ ಬ್ಯಾಂಕ್ ಅಧ್ಯಕ್ಷ ಓಂಕಾರ್ ಅವರಿಗೆ 2025ರ ಜನವರಿಯಲ್ಲಿ 7 ಕೋಟಿ ರು. ನಗದು ಹಣವನ್ನು ಬಸವರಾಜ್ ಕನ್ನಾಳೆ ಕೊಟ್ಟಿದ್ದು, ಇದಕ್ಕೆ ಮಾಸಿಕ ಶೇ.2 ರಷ್ಟು ಬಡ್ಡಿ ವಿಧಿಸಲಾಗಿತ್ತು. ಅಲ್ಲದೆ ಕನ್ನಾಳೆ ಹಾಗೂ ಆತನ ಪರಿವಾರ ಹೆಸರಿನಲ್ಲಿ ಹತ್ತಾರು ಎಕರೆ ಜಮೀನು ಸಹ ಖರೀದಿಯಾಗಿತ್ತು. ಬೇನಾಮಿ ಚೆಕ್‌ಗಳಲ್ಲಿ ಈ ಭೂಮಿ ಖರೀದಿ ವಹಿವಾಟು ನಡೆದಿದೆ.

*ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕಪ್ಪ ಅವರ ಚೇಂಬರ್‌ನ ಟೇಬಲ್‌ ಡ್ರಾಯರ್‌ನಲ್ಲಿ 2022-23ರವರೆಗೆ ಹಣ ವರ್ಗಾವಣೆಯ ರಸೀದಿಗಳು ಪತ್ತೆಯಾಗಿವೆ. ಇದರಲ್ಲಿ ಸದಸ್ಯೆ ಬಿ.ವಿ.ಗೀತಾ ಅವರಿಗೆ 6.76 ಲಕ್ಷ ರು. ಹಾಗೂ ಅವರ ಪುತ್ರಿಗೆ 10.67 ಲಕ್ಷ ರು. ಹಣ ವರ್ಗಾಣೆಯಾಗಿದೆ. ಇನ್ನು ಗೀತಾ ಕುಟುಂಬದವರ ವಿಮಾನ ಪಯಣಕ್ಕೆ ಟಿಕೆಟ್‌ಗಳಿಗೆ ಹಣ ವಿನಿಯೋಗಿಸಿದ್ದೇನೆ ಎಂದು ವಿಚಾರಣೆ ವೇಳೆಯಲ್ಲಿ ಶಿವಶಂಕರಪ್ಪ ಬಾಯ್ಬಿಟ್ಟಿದ್ದಾರೆ.

*ಕೆಪಿಎಸ್‌ಸಿ ಮಾಜಿ ಸದಸ್ಯ ಡಾ.ನರೇಂದ್ರ ಅವರ ಸೋದರನ ಮಕ್ಕಳಾದ ಎಸ್.ಎಂ.ವಚನ್ ಮತ್ತು ಎಸ್.ಎಂ.ಶಶಾಂಕ್ ಅವರಿಂದ ಗೀತಾ ಮತ್ತು ಅವರ ಪುತ್ರಿ ಖಾತೆಗಳಿಗೆ ಒಂದು ಕೋಟಿ ರು. ಹಣ ಸಂದಾಯವಾಗಿದೆ. ಈ ಹಣವನ್ನು ತಮ್ಮ ಚಿಕ್ಕಪ್ಪ (ನರೇಂದ್ರ) ಅವರ ಸೂಚನೆ ಮೇರೆಗೆ ನೀಡಲಾಗಿತ್ತು ಎಂದು ವಚನ್ ಹಾಗೂ ಶಶಾಂಕ್ ಸ್ಪಷ್ಟನೆ ನೀಡಿದ್ದಾರೆ.

*ಶಿವಶಂಕರಪ್ಪ ಅವರ ಬಳಿ ಕೆಪಿಎಸ್‌ಸಿಯ ವಿವಿಧ ನೇಮಕಾತಿಗೆ ಸಂಬಂಧಿಸಿದ 16 ಪ್ರಶ್ನೆ ಪತ್ರಿಕೆಗಳು ಹಾಗೂ ಉತ್ತರ ಪತ್ರಿಕೆಗಳು ಪತ್ತೆಯಾಗಿದ್ದವು. ಕೆಎಎಸ್‌ ಹುದ್ದೆಗೆ ಸಂತೋಷ್ ಎಂಬಾತನ ಮೂಲಕ 1.6 ಕೋಟಿ ರು. ಹಾಗೂ ಬಂಡೇಪನಲ್ಲೇ ಮುತ್ಯನಿಂದ 30 ಲಕ್ಷ ರು.ಗೆ ಡೀಲ್ ಆಗಿತ್ತು ಎಂದು ಶಿವಶಂಕರಪ್ಪ ಅವರ ಒಡನಾಡಿ ರಿಯಲ್ ಎಸ್ಟೇಟ್ ಉದ್ಯಮಿ ಹೇಳಿಕೆ.

*ಕೆಎಎಸ್ ಹುದ್ದೆಗಳಿಗೆ 1 ರಿಂದ 3 ಕೋಟಿ ರು.ವರೆಗೆ ಹಣ ಸಂಗ್ರಹಿಸಲಾಗಿತ್ತು ಎಂದು ಆಯೋಗದ ಪರೀಕ್ಷಾ ನಿಯಂತ್ರಕರಾಗಿದ್ದ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಹೇಳಿಕೆ.

*2023-24ರ ಗ್ರೂಪ್‌-ಎ ಮತ್ತು ಬಿ (ಕೆಎಎಸ್‌), ಗ್ರಾಮೀಣ ನೀರು ಪೂರೈಕೆ ಮತ್ತು ನೈರ್ಮಲ್ಯ ಇಲಾಖೆಯ 24 ಸಹಾಯಕ ಎಂಜಿನಿಯರ್‌, ಆರ್‌ಪಿಸಿ, ಬಿಬಿಎಂಪಿ ಹಾಗೂ ಜಲಸಂಪನ್ಮೂಲ ಇಲಾಖೆಯ ಸಹಾಯಕ ಎಂಜಿನಿಯರ್‌, ಜ್ಯೂನಿಯರ್ ಎಂಜಿನಿಯರ್‌, ಭೂ ದಾಖಲಾತಿ ಸಹಾಯಕ ನಿರ್ದೇಶಕ, ಪಿಡಿಒ ಹಾಗೂ ಕೈಗಾರಿಕಾ ವಿಸ್ತರಣಾಧಿಕಾರಿ ಹುದ್ದೆಗಳ ನೇಮಕಾತಿಯಲ್ಲಿ ಕೂಡ ಅಕ್ರಮ ನಡೆದಿರುವ ಬಗ್ಗೆ ಮಾಹಿತಿ ಇದೆ.

*2016ರ ಮೋಟಾರ್ ಪರೀಕ್ಷಾ ನಿರೀಕ್ಷಕರು (ಎಂವಿಐ) ನೇಮಕಾತಿಯಲ್ಲಿ ಕೂಡ ಅಕ್ರಮ ನಡೆದಿದೆ. ಆರೋಪಿ ಮನೆಯಲ್ಲಿ ಕೈ ಬರಹದಲ್ಲಿ ಬರೆಯಲಾದ ಪತ್ರ ಪತ್ತೆಯಾಗಿದೆ. ಇದರಲ್ಲಿ ಹುದ್ದೆಗಳಿಗೆ 5 ರಿಂದ 10 ಲಕ್ಷ ರು.ವರೆಗೆ ಸಂದಾಯವಾಗಿರುವ ಕುರಿತು ಹಣದ ವಿವರ ಉಲ್ಲೇಖವಾಗಿದೆ.

*ಬಿಬಿಎಂಪಿ 92 ಎಂಜಿನಿಯರ್‌ ಹುದ್ದೆಗಳ ನೇಮಕಾತಿ ವೇಳೆ ಹಣ ಸಂಗ್ರಹದ ಬಗ್ಗೆ ಆಯೋಗದ ನಿವೃತ್ತ ಅಧಿಕಾರಿ ಪ್ರಕಾಶ್ ಹೇಳಿಕೆ ಕೊಟ್ಟಿದ್ದು, ಹಣ ಸಂಗ್ರಹದ ವಿವರನ್ನು ತಾವೇ ಬರೆದಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

ಅಕ್ರಮದ ಬಗ್ಗೆ ಸಹಕಾರದಲ್ಲಿ ತನಿಖೆ-ಇ.ಡಿ.

ಕೆಪಿಎಸ್‌ಸಿ ನೇಮಕಾತಿ ಹಗರಣದ ಸಂಬಂಧ ಎಸ್‌ಐಟಿ ಹಾಗೂ ಇ.ಡಿ. ಪರಸ್ಪರ ಸಹಕಾರದಲ್ಲಿ ತನಿಖೆ ನಡೆಸಬೇಕಿದೆ. ಅಕ್ರಮ ಹಣ ವರ್ಗಾವಣೆ ಕುರಿತು ಮಾಹಿತಿ ನೀಡಿದರೆ ತಾವು ತನಿಖೆ ನಡೆಸುತ್ತೇವೆ. ಅದೇ ರೀತಿ ನಮ್ಮ ತನಿಖೆಯಲ್ಲಿ ಅಕ್ರಮದ ಬಗ್ಗೆ ಮಾಹಿತಿ ಪತ್ತೆಯಾದರೆ ನೀಡುತ್ತೇವೆ ಎಂದು ಎಸ್‌ಐಟಿ ಮುಖ್ಯಸ್ಥರಿಗೆ ಬೆಂಗಳೂರು ವಲಯದ ಇ.ಡಿ. ಹೆಚ್ಚುವರಿ ನಿರ್ದೇಶಕ ಡಾ.ವಿನೋದ್ ಶರ್ಮ ತಿಳಿಸಿದ್ದಾರೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಮೇಕೆದಾಟು ಯೋಜನೆ ಪರಿಸರ ಪರಿಣಾಮಗಳ ಅಧ್ಯಯನಕ್ಕೆ ಸಮ್ಮತಿ
ಯುಪೀಲಿ ಹ್ಯಾಟ್ರಿಕ್‌ ಸಾಧನೆಗೆ ಬಿಜೆಪಿಯಿಂದ 3 ಎಸ್‌ ಮಂತ್ರ