ನವದೆಹಲಿ: ಭಾರತ-ಪಾಕಿಸ್ತಾನದ ನಡುವೆ ಕದನ ವಿರಾಮ ಜಾರಿಗೊಳಿಸಿದ್ದು ತಾನೇ ಎಂದು ಹೇಳಿಕೊಳ್ಳುತ್ತಿರುವ ಅಮೆರಿಕ ಅಧ್ಯಕ್ಷ ಟ್ರಂಪ್, ಅದೇ ಮಾತನ್ನು ಮಂಗಳವಾರ 25ನೇ ಬಾರಿ ಪುನರುಚ್ಚರಿಸಿದ್ದಾರೆ. ಇತ್ತ, ಟ್ರಂಪ್ 25 ಬಾರಿ ಇದೇ ಮಾತನ್ನು ಹೇಳಿ ಬೆಳ್ಳಿ ಹಬ್ಬ ಆಚರಿಸುತ್ತಿದ್ದಾರೆ. ಆದರೆ ಪ್ರಧಾನಿ ಮೋದಿ ಮಾತ್ರ ವಿದೇಶ ಪ್ರವಾಸದಲ್ಲಿ ಬ್ಯುಸಿಯಾಗಿದ್ದಾರೆ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.
ಇದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್, ‘ಕಳೆದ 73 ದಿನಗಳಲ್ಲಿ 25 ಬಾರಿ ಇದೇ ಮಾತು ಹೇಳಿ ಟ್ರಂಪ್ ಬೆಳ್ಳಿ ಹಬ್ಬ ಆಚರಿಸುತ್ತಿದ್ದಾರೆ. ಆದರೆ ಪ್ರಧಾನಿ ಮೋದಿ ಮಾತ್ರ ಮೌನಕ್ಕೆ ಶರಣಾಗಿದ್ದಾರೆ’ ಎಂದರು.
‘ಕದನ ವಿರಾಮ ಜಾರಿಗೊಳಿಸಲು ಟ್ರಂಪ್ ಯಾರೂ ಅಲ್ಲ. ಆದರೆ ಮೋದಿ ಈ ಬಗ್ಗೆ ಒಂದೇ ಒಂದು ಬಾರಿಯೂ ಅವರಿಗೆ ಪ್ರತಿಕ್ರಿಯೆ ನೀಡಿಲ್ಲ’ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.