ಇಂದು ಮುನಿರತ್ನಗೆ ಸಂಬಂಧಿಸಿದ ಮತ್ತೆ ಎರಡು ಸ್ಫೋಟಕ ಆಡಿಯೋ ? ರೇಣುಕಾಸ್ವಾಮಿ ರೀತಿ ಹತ್ಯೆ ಬೆದರಿಕೆ

ಸಾರಾಂಶ

ಶಾಸಕ ಮುನಿರತ್ನ ಅವರಿಗೆ ಸಂಬಂಧಿಸಿದ ಇನ್ನೂ ಎರಡು ಆಡಿಯೋಗಳಿವೆ ಎಂದು ಬಿಬಿಎಂಪಿ ಗುತ್ತಿಗೆದಾರ ಚಲುವರಾಜು ಆರೋಪಿಸಿದ್ದಾರೆ. 35% ಕಮಿಷನ್‌ ವಿಚಾರವೂ ಒಳಗೊಂಡ ಈ ಆಡಿಯೋಗಳನ್ನು ಮಂಗಳವಾರ ಬಿಡುಗಡೆ ಮಾಡುವುದಾಗಿ ಅವರು ತಿಳಿಸಿದ್ದಾರೆ. 

ಬೆಂಗಳೂರು : ಶಾಸಕ ಮುನಿರತ್ನ ಅವರಿಗೆ ಸಂಬಂಧಿಸಿದ ಇನ್ನೂ ಎರಡು ಆಡಿಯೋ ಇವೆ. ಅದರಲ್ಲಿ 35 ಪರ್ಸೆಂಟ್‌ ಕಮಿಷನ್‌ ವಿಚಾರವೂ ಇದೆ. ಮಂಗಳವಾರ ಮಾಧ್ಯಮಗಳಿಗೆ ಅವುಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಬಿಬಿಎಂಪಿ ಗುತ್ತಿಗೆದಾರ ಚಲುವರಾಜು ಸ್ಫೋಟಕ ಮಾಹಿತಿ ಹೊರಹಾಕಿದ್ದಾರೆ.

ಚಲುವರಾಜು ಈ ಮುನ್ನ ಬಿಡುಗಡೆ ಮಾಡಿದ ಆಡಿಯೋದ ಕಾರಣಕ್ಕೆ ಮುನಿರತ್ನ ಈಗಾಗಲೇ ಬಂಧನಕ್ಕೆ ಒಳಗಾಗಿದ್ದಾರೆ. ಈಗ ಮತ್ತೆರಡು ಆಡಿಯೋ ಬಿಡುಗಡೆ ಮಾಡುವುದಾಗಿ ಗುತ್ತಿಗೆದಾರ ಹೇಳಿರುವುದರಿಂದ ಅವರಿಗೆ ಹೊಸ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರು ತಮ್ಮ ನಿವಾಸಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರು ನನಗೆ ಹಣಕ್ಕಾಗಿ ಕಿರುಕುಳ ನೀಡಿ ಕೊಠಡಿಯಲ್ಲಿ ಕೂಡಿ ಹಾಕಿ ಹಿಂಸೆ ನೀಡಿದ್ದಾರೆ. ಜೀವ ಬೆದರಿಕೆ ಹಾಕಿರುವುದಕ್ಕೆ ಸಂಬಂಧಿಸಿದಂತೆ ಈಗಾಗಲೇ ಒಂದು ಆಡಿಯೋ ಬಿಡುಗಡೆ ಮಾಡಿದ್ದೇನೆ. 11 ಕೋಟಿ ರು. ಬಿಡುಗಡೆ ಮಾಡಿಸಲು ಶೇ.50 ಕಮೀಷನ್‌ ಕೇಳಿದ್ದಾರೆ. ಇದಲ್ಲದೆ, 35 ಪರ್ಸೆಂಟೇಜ್‌ ಕಮೀಷನ್‌ ವಿಚಾರ ಒಳಗೊಂಡಂತೆ ಇನ್ನೂ ಎರಡು ಆಡಿಯೋಗಳಿದ್ದು ಅವುಗಳನ್ನೂ ಮಂಗಳವಾರ ಬಿಡುಗಡೆ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.

ಈಗ ಬಿಡುಗಡೆಯಾಗಿರುವ ಆಡಿಯೋದಲ್ಲಿರುವುದು ಮುನಿರತ್ನ ಅವರ ಧ್ವನಿ. ನಾನು ಚಲುವರಾಜು ಅವರಿಗೆ ಹೊಡೆದಿಲ್ಲ. ಅವರ ಹೆಂಡತಿ-ಮಕ್ಕಳನ್ನು ಕೇಳಿಲ್ಲ. ದಲಿತರನ್ನು ಅವಹೇಳನ ಮಾಡಿಲ್ಲ ಎಂದು ಮುನಿರತ್ನ ಅವರು ತಿರುಪತಿಗೆ ಬಂದು ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದರು.

ನಮ್ಮ ಕುಟುಂಬ ಭಯಗೊಂಡಿದ್ದು, ರಕ್ಷಣೆ ನೀಡಬೇಕು ಎಂದು ಸಚಿವರಲ್ಲಿ ಮನವಿ ಮಾಡಿದ್ದೇನೆ. ಈಗಾಗಲೇ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರ ಬಳಿ ಮಾತನಾಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚಿಸುತ್ತೇನೆ ಎಂದು ಸಚಿವರು ಭರವಸೆ ನೀಡಿದ್ದಾರೆ ಎಂದು ವಿವರಿಸಿದರು.

ಹನುಮಂತರಾಯಪ್ಪ ಅವರ ಜೊತೆ ಮಾತನಾಡಿರುವ ಆಡಿಯೋ ವೈರಲ್‌ ಆಗಿರುವ ಸಂಬಂಧ ಸ್ಪಷ್ಟನೆ ನೀಡಿದ ಚಲುವರಾಜು, ‘ಆಡಿಯೋದಲ್ಲಿರುವ ಧ್ವನಿ ನನ್ನದೇ. ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ತನಿಖೆಗೆ ಸಹಕರಿಸುತ್ತಿದ್ದೇನೆ’ ಎಂದು ತಿಳಿಸಿದರು.

ರೇಣುಕಾಸ್ವಾಮಿ ರೀತಿ ನಿನ್ನ ಹತ್ಯೆ: ಚೇಲಾಗಳ ಧಮ್ಕಿ

ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ್ದು ಮುನಿರತ್ನ ಅವರ ಭಾವಮೈದುನ. ನಿನಗೂ ಇದೇ ಗತಿ ಬರುತ್ತದೆ’ ಎಂದು ಮುನಿರತ್ನ ಅವರ ಬೆಂಬಲಿಗರು ತಮಗೆ ಬೆದರಿಕೆ ಹಾಕಿದ್ದಾರೆ ಎಂದು ಗುತ್ತಿಗೆದಾರ ಚಲುವರಾಜು ಆರೋಪಿಸಿದ್ದಾರೆ. ‘ಹಣ ಕೊಡಲು ಆಗದಿದ್ದರೆ ನಿನ್ನ ಹೆಂಡತಿಯನ್ನು ಕಳುಹಿಸು, ತಾಯಿ ಕಳುಹಿಸು. ಇಲ್ಲದಿದ್ದರೆ ನಿನ್ನ ಮಗಳನ್ನು ಕಳುಹಿಸು. ಅವರ ಫೋಟೋ ಕಳುಹಿಸು. ನೂರು ಪ್ಲಾನ್‌ ಹಾಕಿ ನಿನ್ನನ್ನು ಹೊಡೆದು ಹಾಕುತ್ತೇವೆ’ ಎಂದು ಶಾಸಕರು ಜೀವ ಬೆದರಿಕೆ ಹಾಕಿದ್ದಾರೆ ಎಂದಿದ್ದಾರೆ.

Share this article