ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಮುಖ್ಯಮಂತ್ರಿ ಸಿದ್ದರಾಮಯ್ಯ ವಿಮಾನ ಪ್ರಯಾಣ ಕುರಿತು ಬಿಜೆಪಿಯವರು ಅನಾವಶ್ಯಕವಾಗಿ ಟೀಕೆ ಮಾಡುವುದು ಸರಿಯಲ್ಲ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಕಿಡಿಕಾರಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುರ್ತು ಸಂದರ್ಭದಲ್ಲಿ ಮುಖ್ಯಮಂತ್ರಿಗಳು ವಿಮಾನ ಸೌಲಭ್ಯ ಬಳಕೆ ಸಾಮಾನ್ಯ. ಈ ಹಿಂದೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ ಎಷ್ಟು ಬಾರಿ ಓಡಾಡಿಲ್ಲ. ಈ ಬಗ್ಗೆ ಮಾಹಿತಿ ಬಿಡುಗಡೆ ಮಾಡಿದರೆ ಗೊತ್ತಾಗುತ್ತದೆ ಎಂದು ತಿರುಗೇಟು ನೀಡಿದರು.
ಬಿಜೆಪಿಯವರಿಗೆ ಯಾವುದೇ ವಿಷಯಗಳು ಸಿಗದಿದ್ದಾಗ ಈ ರೀತಿ ಟೀಕೆ ಮಾಡುತ್ತಾರೆ. ನಮ್ಮ ಮುಖ್ಯಮಂತ್ರಿ ಕಡಿಮೆ ಖರ್ಚಿನಲ್ಲಿ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಬಗ್ಗೆ ಇವರು ಹೇಳಿದರೆ ಜನ ಕೇಳೋದಕ್ಕೆ ತಯಾರಿಲ್ಲ ಎಂದರು.ಮುಖ್ಯಮಂತ್ರಿಗಳು 7 ಸ್ಟಾರ್ ಹೋಟೆಲ್‌ನಲ್ಲಿ ಮಲಗಿಲ್ಲ. ಕರ್ನಾಟಕ ಭವನದಲ್ಲೆ ಉಳಿದುಕೊಂಡಿದ್ದರು. ಚುನಾವಣೆ ಹತ್ತಿರ ಬಂದಿದೆ ಎಂದು ಬಿಜೆಪಿಯವರು ಮಾತನಾಡುತ್ತಿದ್ದಾರೆ. ಅವರು ಮಾತನಾಡಲಿ. ಬಿಜೆಪಿಯವರಿಗೆ ರಾಷ್ಟ್ರೀಯ ನಾಯಕರು ಟಾಸ್ಕ್ ಕೊಟ್ಟಿದ್ದಾರೆ ಅವರ ಕಷ್ಟ ಅವರಿಗೆ ಪಾಪ ಎಂದು ಲೇವಡಿ ಮಾಡಿದರು.
ಯಾರಿಗೆ ಯಾರು ಅನಿವಾರ್ಯ ಗೊತ್ತಿಲ್ಲ:ಜೆಡಿಎಸ್ ನಾಯಕರಿಂದ ಮೋದಿ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿ, ಜೆಡಿಎಸ್ ಹತ್ತಿರ ಪಾಪ ಮೋದಿ ಹೇಗೆ ನಿಂತಿದ್ದಾರೆ ನೋಡಿ. ಅವರ ಕಷ್ಟ ಅವರಿಗೆ ಬಿಡಿ. ಕುಮಾರಸ್ವಾಮಿ ಅವರು ಬಹಳ ಖುಷಿಯಾಗಿದ್ದಾರೆ ಅದನ್ನ ನಾನು ನೋಡಿದ್ದೇನೆ ಎಂದರು.
ಪ್ರಧಾನಿ ಮೋದಿಗೆ ಇವರು ಅನಿವಾರ್ಯನೋ, ಜೆಡಿಎಸ್‌ನವರಿಗೆ ಮೋದಿ ಅನಿವಾರ್ಯನೋ ಚುನಾವಣಾ ಫಲಿತಾಂಶ ಬಂದ ಮೇಲೆ ಗೊತ್ತಾಗುತ್ತದೆ. ಚುನಾವಣೆ ವೇಳೆ ನಾವು ನೂರು ದಾಟುತ್ತೇವೆ ಅಂತ ಹೇಳಿದ್ದೇವು. ಜನರು ನಮ್ಮ ಕೈ ಹಿಡಿದಿದ್ದಾರೆ. ಆದರೆ, 123 ಅಂತ ಕುಮಾರಸ್ವಾಮಿ ಹೇಳಿದ್ದರು, ಏನಾಯ್ತು ಎಂದು ಪ್ರಶ್ನಿಸಿದರು.ಕೇಂದ್ರ ಲೋಕಸಭಾ ಮತ್ತು ರಾಜ್ಯಸಭೆಯ ಸಂಸದರ ಸರಣಿ ಅಮಾನತು ಮಾಡಿರುವುದನ್ನು ನಾವು ಖಂಡಿಸಿದ್ದೇವೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಅಮಾನತು ಮಾಡಿರುವುದು ಸರಿಯಲ್ಲ. ಇದು ಆಗಬಾರದಿತ್ತು, ಮೋದಿ ಅವರು ಈ ವಿಚಾರಕ್ಕೆ ಕೈ ಹಾಕಬಾರದಿತ್ತು. ಆದರು ಅವರ ಉದ್ಘಟತನ ತೋರುತ್ತದೆ. ಕಿಡಿಕಾರಿದರು.
ಕೇಂದ್ರದಿಂದ ಶೀಘ್ರ ಬರ ಪರಿಹಾರ ಹಣ ಬರಲಿದೆ:ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ರಾಜ್ಯದ ಸಚಿವರು ಪ್ರಧಾನಿ ಸೇರಿದಂತೆ ಕೇಂದ್ರದ ಗೃಹ ಸಚಿವರು, ಸಂಬಂಧಪಟ್ಟ ಇಲಾಖೆ ಸಚಿವರಿಗೆ ವಾಸ್ತವ ಸ್ಥಿತಿ ಮನವರಿಕೆ ಮಾಡಿದ್ದೇವೆ. ಸಮಿತಿ ಮುಖ್ಯಸ್ಥರಾಗಿರುವ ಅಮಿತ್ ಶಾ ನಮ್ಮ ಮನವಿಗೆ ಉತ್ತಮವಾಗಿ ಸ್ಪಂದಿಸಿದ್ದಾರೆ. ಆದಷ್ಟು ಬೇಗ ಬರ ಪರಿಹಾರದ ಹಣ ಬಿಡುಗಡೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೇಂದ್ರದಿಂದ ಹಣ ಬಿಡುಗಡೆ ವಿಳಂಬವಾಗಿದ್ದರಿಂದ ರಾಜ್ಯ ಸರ್ಕಾರ ರಾಜ್ಯದ ರೈತರ ಪ್ರತಿ ಹೆಕ್ಟೇರ್‌ಗೆ 2 ಸಾವಿರ ಬರ ಪರಿಹಾರ ನೀಡಲು ಘೋಷಣೆ ಮಾಡಲಾಯಿತು. ಉಳಿದಂತೆ ಕೇಂದ್ರದಿಂದ ಹಣ ಬಂದ ಕೂಡಲೇ ರೈತರ ಅಕೌಂಟ್ ಗೆ ತಲುಪಲಿದೆ ಎಂದರು.ಚಳವಳಿ ಕೈ ಬಿಡುವಂತೆ ಮನವಿ ಮಾಡಿದ್ದೇವೆ:ರೈತರು ಯಾವ ವಿಚಾರವಾಗಿ ಧರಣಿ ಮುಂದುವರೆಸಿದ್ದಾರೋ ಗೊತ್ತಿಲ್ಲ. ಕಾವೇರಿ ಚಳವಳಿ ಸ್ಥಳಕ್ಕೆ ಮುಖ್ಯಮಂತ್ರಿಗಳು ಸೇರಿದಂತೆ ನಾನು, ಜಿಲ್ಲಾ ಮಟ್ಟದ ಅಧಿಕಾರಿಗಳು ರೈತರ ಮನವಿ ಆಲಿಸಿ ಚಳವಳಿ ಕೈ ಬಿಡುವಂತೆ ಮನವಿ ಮಾಡಿದ್ದೇವೆ. ಆದರೂ ಧರಣಿ ಮುಂದುವರೆಸಿದ್ದಾರೆ ಎಂದರು.
ಎರಡು ತಿಂಗಳಿಂದ ತಮಿಳುನಾಡಿಗೆ ನೀರು ಬಿಡುತ್ತಿಲ್ಲ. ಅಣೆಕಟ್ಟೆಯಲ್ಲಿ ನೀರು ಇಲ್ಲದಿರುವಾಗ ತಮಿಳುನಾಡಿಗೆ ನೀರು ಬಿಡುಲು ಹೇಗೆ ಸಾಧ್ಯ. ಎರಡು ತಿಂಗಳಿಂದ ತಮಿಳುನಾಡಿಗೆ ಒಂದು ಹನಿ ನೀರು ಬಿಟ್ಟಿಲ್ಲ. ಧರಣಿ ಕೈ ಬಿಡುವಂತೆ , ನಮ್ಮ ಜೊತೆ ಚರ್ಚೆ ನಡೆಸುವಂತೆ ಕೋರಿದ್ದೇವೆ. ಹೋರಾಟಗಾರರು ಮಾತ್ರ ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಜಿಲ್ಲೆಯಲ್ಲಿ 13 ಕಡೆ ಭತ್ತ ಖರೀದಿ ಕೇಂದ್ರ:ಜಿಲ್ಲೆಯ ಎಲ್ಲೆಡೆ ಭತ್ತ ಕಟಾವು ನಡೆಯುತ್ತಿದೆ. ದಲ್ಲಾಳಿಗಳು ರೈತರ ಜಮೀನಿನಲ್ಲೇ ಭತ್ತ ಖರೀದಿಸುತ್ತಿದ್ದಾರೆ. ರೈತರಿಗೆ ಲಾಭವಾದರೆ ನಮ್ಮ ಅಭ್ಯಂತರವಿಲ್ಲ. ಈಗಾಗಲೇ ಜಿಲ್ಲೆಯಲ್ಲಿ 13 ಕಡೆ ಭತ್ತ ಖರೀದಿ ಕೇಂದ್ರ ತೆರೆಯಲಾಗಿದೆ. ಬಯೋಮೆಟ್ರಿಕ್ ನಲ್ಲಿ ತಾಂತ್ರಿಕ ಸಮಸ್ಯೆಯಿಂದ ಕೆಲವೆಡೆ ವಿಳಂಬವಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆ ಎಂದರು.