ದೇಶದ ಸಂಸದೀಯ ಇತಿಹಾಸದಲ್ಲೇ ಕಂಡುಕೇಳರಿಯದ ಸಂಗತಿ : ಪ್ರಧಾನಿ ಮೋದಿ ಮೇಲೆ ಹಲ್ಲೆಗೆ ಯತ್ನ?

Published : Feb 06, 2026, 05:32 AM IST
Narendra Modi

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಬುಧವಾರ ಲೋಕಸಭೆಯೊಳಗೆ ದೈಹಿಕವಾಗಿ ಹಲ್ಲೆ ನಡೆಸಲು ಕಾಂಗ್ರೆಸ್‌ ಸದಸ್ಯರು ಯೋಜಿಸಿದ್ದರು. ಜೊತೆಗೆ ಈ ಕೃತ್ಯ ಮುಚ್ಚಿಡುವ ಸಲುವಾಗಿಯೇ ಮಹಿಳಾ ಸಂಸದೆಯರನ್ನು ಮೋದಿ ಕೂರುವ ಸ್ಥಳದ ಸುತ್ತಲೂ ಸುತ್ತುವರೆದು ನಿಲ್ಲಿಸುವ ಯೋಜನೆ ರೂಪಿಸಲಾಗಿತ್ತು ಎಂದು ಗಂಭೀರ ಆರೋಪ

 ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಬುಧವಾರ ಲೋಕಸಭೆಯೊಳಗೆ ದೈಹಿಕವಾಗಿ ಹಲ್ಲೆ ನಡೆಸಲು ಕಾಂಗ್ರೆಸ್‌ ಸದಸ್ಯರು ಯೋಜಿಸಿದ್ದರು. ಜೊತೆಗೆ ಈ ಕೃತ್ಯ ಮುಚ್ಚಿಡುವ ಸಲುವಾಗಿಯೇ ಮಹಿಳಾ ಸಂಸದೆಯರನ್ನು ಮೋದಿ ಕೂರುವ ಸ್ಥಳದ ಸುತ್ತಲೂ ಸುತ್ತುವರೆದು ನಿಲ್ಲಿಸುವ ಯೋಜನೆ ರೂಪಿಸಲಾಗಿತ್ತು ಎಂದು ಗಂಭೀರ ಆರೋಪವೊಂದು ಕೇಳಿಬಂದಿದೆ. ಮೂಲಗಳನ್ನು ಉಲ್ಲೇಖಿಸಿ ಎಎನ್‌ಐ ಸುದ್ದಿ ಸಂಸ್ಥೆ ಇಂಥದ್ದೊಂದು ವರದಿ ಪ್ರಕಟಿಸಿದೆ.

ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಬುಧವಾರ ಸಂಜೆ 5 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಲೋಕಸಭೆಯಲ್ಲಿ ಮಾತನಾಡಬೇಕಿತ್ತು. ಆದರೆ ಇದಕ್ಕೂ ಮುನ್ನ ವಿಪಕ್ಷದ ಮಹಿಳಾ ಸದಸ್ಯರು ಪ್ರಧಾನಿ ಕೂರುವ ಸ್ಥಳದತ್ತ ಧಾವಿಸಿ ಇಡೀ ಪ್ರದೇಶವನ್ನು ಸುತ್ತುವರೆದು, ಬಿಜೆಪಿಯ ಪುರುಷ ಸದಸ್ಯರ ಜೊತೆ ವಾಕ್ಸಮರಕ್ಕೆ ಇಳಿದಿದ್ದರು. ಈ ವೇಳೆ ಬಿಜೆಪಿಯ ಮಹಿಳಾ ಸಂಸದರು ಕೂಡಾ ಅತ್ತ ಧಾವಿಸಿದ್ದರು. ಈ ವೇಳೆ ಭಾರೀ ಗದ್ದಲ ಉಂಟಾದ ಕಾರಣ ಪ್ರಧಾನಿ ಮೋದಿ ಭಾಷಣ ರದ್ದುಪಡಿಸಿ, ಕಲಾಪವನ್ನೂ ಮುಂದೂಡಲಾಗಿತ್ತು. ಈ ಮೂಲಕ ಪ್ರಧಾನಿ ಭಾಷಣ ಇಲ್ಲದೆಯೇ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯವನ್ನು ಅಂಗೀಕರಿಸಲಾಗಿತ್ತು.

ಅನಿರೀಕ್ಷಿತ ಕೃತ್ಯಕ್ಕೆ ಸಂಚು ನಡೆದಿತ್ತು: ಸ್ಪೀಕರ್‌ ಬಾಂಬ್‌ 

ನವದೆಹಲಿ: ಕಾಂಗ್ರೆಸ್‌ನ ಕೆಲ ಸದಸ್ಯರು ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆಯೊಳಗೆ ಕೂರುವ ಸ್ಥಳವನ್ನು ಸುತ್ತುವರೆದು ‘ಅನಿರೀಕ್ಷಿತ ಕೃತ್ಯ’ಕ್ಕೆ ಸಜ್ಜಾಗಿದ್ದ ಕುರಿತು ಖಚಿತ ಮಾಹಿತಿ ಸಿಕ್ಕಿದೆ ಎಂದು ಲೋಕಸಭೆಯ ಸ್ಪೀಕರ್‌ ಓಂ ಬಿರ್ಲಾ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಬುಧವಾರ ಲೋಕಸಭೆಯಲ್ಲಿ ವಿಪಕ್ಷದ ಮಹಿಳಾ ಸದಸ್ಯರು ಪ್ರಧಾನಿ ಕೂರುವ ಸ್ಥಳವನ್ನು ಸುತ್ತುವರೆದ ಮತ್ತು ಆ ಬಳಿಕ ಅನಿವಾರ್ಯವಾಗಿ ಮೋದಿ ಭಾಷಣ ರದ್ದುಪಡಿಸಿ ಕಲಾಪವನ್ನೇ ಮುಂದೂಡಿದ ಘಟನೆ ಬಗ್ಗೆ ಸ್ಪೀಕರ್‌ ಈ ಬಿರ್ಲಾ ಗುರುವಾರ ಪ್ರತಿಕ್ರಿಯೆ ನೀಡಿದ್ದಾರೆ.

‘ಬುಧವಾರ ಲೋಕಸಭೆಯಲ್ಲಿ ನಡೆದ ಘಟನೆ ಸಂಸತ್ತಿನ ಇತಿಹಾಸದಲ್ಲೇ ಒಂದು ಕಪ್ಪುಚುಕ್ಕೆ. ರಾಜಕೀಯ ಭಿನ್ನಾಭಿಪ್ರಾಯಗಳನ್ನು ಸದನದೊಳಗೆ ತಂದ ಘಟನೆ ಹಿಂದೆಂದೂ ನಡೆದಿರಲಿಲ್ಲ. ಬುಧವಾರ ಸದನದ ನಾಯಕರು ರಾಷ್ಟ್ರಪತಿಗಳ ವಂದನಾ ನಿರ್ಣಯದ ಮೇಲೆ ಮಾತನಾಡುವ ವೇಳೆ ಕಾಂಗ್ರೆಸ್‌ನ ಕೆಲ ಸದಸ್ಯರು ಪ್ರಧಾನಿ ಕುಳಿತುಕೊಳ್ಳುವ ಸ್ಥಳಕ್ಕೆ ಧಾವಿಸಿ ‘ಅನಿರೀಕ್ಷಿತ ಕೃತ್ಯಕ್ಕೆ’ ಸಜ್ಜಾಗಿದ್ದರು ಎಂಬುದಕ್ಕೆ ನನ್ನ ಬಳಿ ಖಚಿತ ಮಾಹಿತಿ ಇದೆ. ಒಂದು ವೇಳೆ ಅಂಥ ಘಟನೆ ಏನಾದರೂ ನಡೆದಿದ್ದೇ ಆದಲ್ಲಿ, ದೇಶದ ಪ್ರಜಾಪ್ರಭುತ್ವದ ಸಂಪ್ರದಾಯ ಚೂರುಚೂರಾಗಿ ಹೋಗುತ್ತಿತ್ತು. ಅಂಥ ಬೆಳವಣಿಗೆಯನ್ನು ತಪ್ಪಿಸಲೆಂದೇ ನಾನು ಪ್ರಧಾನಿಗೆ ಸದನಕ್ಕೆ ಆಗಮಿಸದಂತೆ ಸಲಹೆ ನೀಡಿದೆ. ಸ್ಪೀಕರ್‌ ಆಗಿ ಸದನದ ಘನತೆ ಎತ್ತಿಹಿಡಿಯುವುದು ನನ್ನ ಕರ್ತವ್ಯವಾಗಿತ್ತು’ ಎಂದು ಹೇಳಿದ್ದಾರೆ.

ಜೊತೆಗೆ ತಮ್ಮ ಸಲಹೆಯನ್ನು ಒಪ್ಪಿಕೊಂಡು ಸದನದಲ್ಲಿ ಅಹಿತಕರ ಘಟನೆ ನಡೆಯದಂತ ತಡೆದು ಸದನದ ಘನತೆ ಎತ್ತಿಹಿಡಿಯಲು ಸಹಕರಿಸಿದ್ದಕ್ಕೆ ಪ್ರಧಾನಿಗೆ ಅಭಿನಂದನೆಯನ್ನೂ ಸಲ್ಲಿಸಿದ್ದಾರೆ.

ಮೋದಿ ಮೇಲೆ ಹಲ್ಲೆ ಯತ್ನ ಶುದ್ಧಸುಳ್ಳು : ಪ್ರಿಯಾಂಕಾ ಗಾಂಧಿ

ನವದೆಹಲಿ: ಕಾಂಗ್ರೆಸ್‌ ಸದಸ್ಯರು ಬುಧವಾರ ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ‘ಅನಿರೀಕ್ಷಿತ ಕೃತ್ಯ’ಕ್ಕೆ ಸಂಚು ರೂಪಿಸಿದ್ದರು ಎಂಬ ಲೋಕಸಭೆಯ ಸ್ಪೀಕರ್‌ ಓಂ ಬಿರ್ಲಾ ಹೇಳಿಕೆಯನ್ನು ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಸ್ಪಷ್ಟವಾಗಿ ಅಲ್ಲಗಳೆದಿದ್ದಾರೆ. ಇದೊಂದು ಸುಳ್ಳು. ನಮ್ಮ ಪ್ರಶ್ನೆಗೆ ಉತ್ತರ ನೀಡಲಾಗದ ಕಾರಣ ಮೋದಿಯವರು ಸ್ಪೀಕರ್‌ ಹಿಂದೆ ಅಡಗಿದ್ದಾರೆಂದು ಆರೋಪಿಸಿದ್ದಾರೆ.

ಈ ಬಗ್ಗೆ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿರುವ ಪ್ರಿಯಾಂಕಾ, ‘ಸರ್ಕಾರವೇ ಇಂತಹ ಸುಳ್ಳನ್ನು ಸ್ಪೀಕರ್‌ ಬಾಯಿಂದ ಹೇಳಿಸುತ್ತಿದೆ. ಏಕೆಂದರೆ ಅಸಲಿಗೆ ಮೋದಿಯವರಿಗೆ ಸದನಕ್ಕೆ ಬರಲು ಧೈರ್ಯವೇ ಇರಲಿಲ್ಲ. ಪ್ರಧಾನಿ ಮೇಲೆ ಹಲ್ಲೆ ಆರೋಪ ಪೂರ್ಣ ಸುಳ್ಳು. ಪ್ರಧಾನಿ ಮೇಲೆ ಯಾರೂ ಕೈ ಎತ್ತುವ ಪ್ರಶ್ನೆಯೇ ಇಲ್ಲ ಮತ್ತು ಅವರಿಗೆ ಘಾಸಿ ಮಾಡುವ ಪ್ರಶ್ನೆಯೇ ಉದ್ಭವಿಸಿದು. ಅಂಥ ಯಾವುದೇ ಉದ್ದೇಶವೇ ಇಲ್ಲದಿದ್ದಾಗ ಯಾರಾದರೂ ಇಂಥ ಉದ್ದೇಶದ ಬಗ್ಗೆ ಮಾತನಾಡುವುದು ತಪ್ಪು’ ಎಂದು ಕಿಡಿಕಾರಿದರು.

ಕಾಂಗ್ರೆಸ್‌ ವಿರುದ್ಧ ರಾಜ್ಯಸಭೇಲಿ ಮೋದಿ ಅಬ್ಬರ 

ಮೊಹಬ್ಬತ್ ಕಿ ದುಕಾನ್ (ಪ್ರೀತಿಯ ಅಂಗಡಿ) ಬಗ್ಗೆ ಮಾತನಾಡುವವರು ಮೋದಿಯ ಸಮಾಧಿ ತೋಡುತ್ತೇವೆ ಎಂಬ ಘೋಷಣೆ ಕೂಗುತ್ತಿದ್ದಾರೆ. ಅವರು ಎಂದಿಗೂ ನನ್ನ ಸಮಾಧಿ ಅಗೆಯಲು ಸಾಧ್ಯವಿಲ್ಲ.

ಪ್ರತಿನಿತ್ಯ 2 ಕೇಜಿ ಬೈಗುಳ ತಿಂತೇನೆ

ನನ್ನಂತಹ ಬಡವ ಪ್ರಧಾನಿ ಆಗಿರುವುದನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗದೆ ಕಾಂಗ್ರೆಸ್ಸಿಗರು ನನ್ನನ್ನು ಪ್ರತಿದಿನ ನಿಂದಿಸುತ್ತಾರೆ. ನಾನು ಪ್ರತಿದಿನ 2 ಕೆ.ಜಿ. ಬೈಗುಳ ತಿನ್ನುತ್ತೇನೆ. ಅದೇ ನನ್ನ ಆರೋಗ್ಯದ ಗುಟ್ಟು.

ಖರ್ಗೆ ಅವರು ಕುಳಿತೇ ಘೋಷಣೆಗಳ ಕೂಗಲಿ

ಸಭಾಪತಿಗಳೇ, ಖರ್ಗೆಯವರ ವಯಸ್ಸನ್ನು ಪರಿಗಣಿಸಿ, ಅವರು ಆರಾಮಾಗಿ ಕುಳಿತು ಘೋಷಣೆಗಳನ್ನು ಕೂಗಲು ಅನುಮತಿಸಬೇಕೆಂದು ನಾನು ನಿಮ್ಮನ್ನು ಒತ್ತಾಯಿಸುತ್ತೇನೆ. ಅವರ ಹಿಂದೆ ಯುವಕರಿದ್ದಾರೆ.

ತಮ್ಮದೇ ಸ್ಟಾರ್ಟಪ್‌ ಅನ್ನೇ ಕಾಂಗ್ರೆಸ್‌ ಎತ್ತಿಲ್ಲ

ಕಾಂಗ್ರೆಸ್‌ ಎಂದಿಗೂ ಸ್ಟಾರ್ಟಪ್‌ ಸಂಸ್ಕೃತಿ ಉತ್ತೇಜಿಸಲೇ ಇಲ್ಲ. ತಮ್ಮದೇ ಮನೆಯ ಸ್ಟಾರ್ಟಪ್‌ ಅನ್ನೇ (ರಾಹುಲ್‌) ಅವರು ಮೇಲೆತ್ತಲು ಆಗದಂತಹ ದುಸ್ಥಿತಿಯಲ್ಲಿದ್ದಾರೆ!

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಉಚಿತ ಕೊಡುಗೆ ಪ್ರಶ್ನಿಸಿದ್ದ ಅರ್ಜಿ ಮಾರ್ಚಲ್ಲಿ ವಿಚಾರಣೆ : ಸುಪ್ರೀಂ
ಮಹಿಳಾ ಮಂಡಲ ಮುತ್ತಿಗೆಯಿಂದ ಪ್ರಧಾನಿ ಮೋದಿ ಮಾತಿಗೆ ಬ್ರೇಕ್‌